ಕಾಂತಾರ ಚಿತ್ರದ ಪ್ರಭೆಯಲ್ಲಿ ಮೊದಲ ಹೆಜ್ಜೆಯಲ್ಲಿಯೇ ಗೆಲುವು ದಕ್ಕಿಸಿಕೊಂಡಿದ್ದಾಕೆ ಸಪ್ತಮಿ ಗೌಡ. ಕನ್ನಡಕ್ಕೆ ಮಾತ್ರವೇ ಸೀಮಿತವಾಗಿ ತಯಾರಾಗಿದ್ದ ಕಾಂತಾರಾ ತಂತಾನೇ ಪ್ಯಾನಿಂಡಿಯಾ ಮಟ್ಟದಲ್ಲಿ ಗೆಲುವು ಕಂಡಿದ್ದೀಗ ಇತಿಹಾಸ. ಆರಂಭದಲ್ಲಿ ಕಾಂತಾರದ ಬಗ್ಗೆ ಹೇಳಿಕೊಳ್ಳುವಂಥಾ ನಿರೀಕ್ಷೆಗಳಿರಲಿಲ್ಲ. ಹಾಗಿದ್ದ ಮೇಲೆ ಸಪ್ತಮಿ ಗೌಡ ಆ ಚಿತ್ರದ ನಾಯಕಿಯಾದ ವಿಚಾರ ಸಂಚಲನ ಸೃಷ್ಟಿಸಲುಯ ಸಾಧ್ಯವೇ? ಆದರೆ, ಈ ಹುಡುಗಿಯ ಪಾಲಿಗೆ ಮೊದಲ ಚಿತ್ರವೇ ಯಾರೂ ಊಹಿಸಿರದಂಥಾ ನೇಮು ಫೇಮು ತಂದು ಕೊಟ್ಟಿದ್ದು ಸತ್ಯ. ಅದಾದ ಬಳಿಕ ಕಾಂತಾರದ ಸಮೀಪ ಸುಳಿಯಬಹುದಾದ ಮತ್ತೊಂದು ಗೆಲುವು ಸಪ್ತಮಿಗೆ ಸಿಕ್ಕಿಲ್ಲ. ಈ ನಡುವೆ ತೆಲುಗಿಗೆ ಹಾರಿ ನಾಯಕಿಯಾಗಿದ್ದ ಸಪ್ತಮಿ ಆರಂಭಿಕ ಹೆಜ್ಜೆಯಲ್ಲಿಯೇ ಅಕ್ಷರಶಃ ಮುಗ್ಗರಿಸಿದ್ದಾರೆ!
ತೆಲುಗಿನಲ್ಲಿ ನಿತಿನ್ ಜೊತೆ ತಮ್ಮುಡು ಅಂತೊಂದು ಚಿತ್ರದಲ್ಲಿ ನಾಯಕಿಯಾಗಿ ನಟಿಸೋ ಅವಕಾಶ ಸಪ್ತಮಿಗೆ ಒಲಿದು ಬಂದಿತ್ತು. ಇಂಥಾದ್ದೊಂದು ಸುದ್ದಿ ಹೊರ ಬಿದ್ದೇಟಿಗೆ, ರಶ್ಮಿಕಾ ಮಂದಣ್ಣಳಂತೆ ಕಾಂತಾರಾ ಹುಡುಗಿ ಕೂಡಾ ತೆಲುಗು ಚಿತ್ರರಂಗದಲ್ಲಿ ಮಿಂಚಬಹುದೆಂಬ ನಿರೀಕ್ಷೆಗಳಿದ್ದವು. ಖುದ್ದು ಸಪ್ತಮಿಗೂ ಕೂಡಾ ಅಂಥಾದ್ದೊಂದು ನಿರೀಕ್ಷೆ ಇದ್ದೇ ಇತ್ತು. ಯಾಕೆಂದರೆ, ಕಾಂತಾರ ಚಿತ್ರದಲ್ಲಿ ಡೀ ಗ್ಲಾಮ್ ಪಾತ್ರದ ಮೂಲಕವೇ ಸಪ್ತಮಿಗೆ ಗೆಲುವು ಒಲಿದಿತ್ತು. ತಮ್ಮುಡು ಚಿತ್ರದಲ್ಲಿಯೂ ಕೂಡಾ ಅಂಥಾದ್ದೇ ಪಾತ್ರ ಸಿಕ್ಕಿತ್ತು. ದಿಲ್ ರಾಜು ನಿರ್ಮಾಣ ಮ ಆಡಿದ್ದ ಈ ಸಿನಿಮಾವನ್ನು ವೇಣು ಶ್ರೀರಾಮ್ ನಿರ್ದೇಶನ ಮಾಡಿದ್ದರು. ಇಷ್ಟೆಲ್ಲ ಇದ್ದರೂ ಕೂಡಾ ತಮ್ಮುಡು ತೆಲುಗು ಪ್ರೇಕ್ಷಕರಿಗೆ ಹಿಡಿಸದೆ, ಬಿಡುಗಡೆಯಾಗಿ ವಾರದೊಪ್ಪತ್ತಿನಲ್ಲಿಯೇ ನೆಲ ತಡವಿದ್ದಾನೆ!
ಅಲ್ಲಿಗೆ ತೆಲುಗಿನಲ್ಲಿ ಆರಂಭದಲ್ಲಿಯೇ ಸಪ್ತಮಿಗೆ ಭಾರೀ ಹಿನ್ನಡೆ ಆದಂತಾಗಿದೆ. ಕಾಂತಾರಾದಂಥಾ ಬಿಗ್ ಹಿಟ್ ಮೂವಿಯ ನಂತರದಲ್ಲಿ ಆ ಗೆಲುವನ್ನು ಸಂಭಾಳಿಸಿಕೊಂಡು ಹೋಗೋದು ಕಲಾವಿದರ ಪಾಲಿಗೆ ಬಲು ಸವಾಲಿನ ಕೆಲಸ. ಆ ಹಿನ್ನೆಲೆಯಲ್ಲಿ ನೋಡೋದಾದರೆ, ಸಪ್ತಮಿಗೆ ಕನ್ನಡದಲ್ಲಿಯೇ ಒಂಷದರ ಹಿಂದೊಂದರಂತೆ ಸೋಲುಗಳು ಎದುರಾಗಿವೆ. ವ್ಯಾಕ್ಸಿನ್ ವಾರ್ ಅಂತೊಂದು ಚಿತ್ರದಲ್ಲಿ ಈಕೆ ನಟಿಸಿದ್ದರಾದರೂ, ಅದು ಬರಖತ್ತಾಗಲಿಲ್ಲ. ಯುವ ಚಿತ್ರದಲ್ಲಿ ನಾಯಕಿಯಾಗಿದ್ದ ಸಪ್ತಮಿಗೆ ನಿರಾಸೆ ಮಾತ್ರವೇ ಸಿಕ್ಕಿತ್ತು. ಯುವನೊಂದಿಗಿನ ಅಫೇರಿನ ವಿಚಾರದಲ್ಲಿ ವಿವಾದವೆದ್ದಿತ್ತೇ ಹೊರತು, ಆ ಸಿನಿಮಾ ಗೆಲುವಿನ ದಡ ಸೇರಲಿಲ್ಲ. ಗೆದ್ದರೆ ತೆಲುಗಲ್ಲಾದರೂ ಚಾಲ್ತಿಯಲ್ಲಿರುವ ಇರಾದೆಯಿಟ್ಟುಕೊಂಡಿದ್ದ ಸಪ್ತಮಿಗೀಗ ತಮ್ಮುಡು ಸೋಲಿನ ಆಘಾತ ಎದುರಾಗಿದೆ!