ಚಾರ್ಲಿಗೆ (charlie 777 movie) ಸಿಕ್ಕಿದ ಒಂದು ಮಟ್ಟದ ಗೆಲುವಿನ ನಂತರ (rakshith shetty) ರಕ್ಷಿತ್ ಶೆಟ್ಟಿ ನಟಿಸಿರುವ ಚಿತ್ರ `ಸಪ್ತ ಸಾಗರದಾಚೆ ಎಲ್ಲೋ’. (saptha sagaradache ello) ಗೋಪಾಲಕೃಷ್ಣ ಅಡಿಗರ (gopalakrishna adiga) ಕವಿತೆಯೊಂದರ ಸಾಲುಗಳೇ ಸಿನಿಮಾ ಶೀರ್ಷಿಕೆಯಾದದ್ದನ್ನು ಕಂಡು ಆರಂಭದಲ್ಲಿಯೇ ಪ್ರೇಕ್ಷಕರು ರೋಮಾಂಚಿತರಾಗಿದ್ದು ನಿಜ. ಯಾಕೆಂದರೆ, ಅಡಿಗರು ಬರೆದಿದ್ದ ಆ ಕವಿತೆ ಹಾಡಾಗಿ, ತಲೆಮಾರುಗಳನ್ನು ದಾಟಿಕೊಂಡು ಈ ಕ್ಷಣಕ್ಕೂ ಮಾಡುತ್ತಿರುವ ಮೋಡಿ ನಿಜಕ್ಕೂ ಅದ್ಭುತ. ಅಂಥಾದ್ದೊಂದು ಸಾಲುಗಳನ್ನು ಶೀರ್ಷಿಕೆಯಾಗಿಸುವ ಮೂಲಕವೇ ಈ ಸಿನಿಮಾ ಆರಂಭಿಕ ಯಶ ದಕ್ಕಿಸಿಕೊಂಡಿದೆ. ಹಾಗೆ ಶೀರ್ಷಿಕೆಯ ಮೂಲಕ ಚಿಗಿತುಕೊಂಡಿದ್ದ ನಿರೀಕ್ಷೆಗಳನ್ನೆಲ್ಲ ಮತ್ತಷ್ಟು ಹೊಳಪುಗಟ್ಟಿಸುವಂಥಾ ಟ್ರೈಲರ್ (saptha sagaradache ello movie tariler) ಇದೀಗ ಬಿಡುಗಡೆಗೊಂಡಿದೆ!

ಈ ಟ್ರೈಲರ್ ಮೂಲಕ ರಕ್ಷಿತ್ ಶೆಟ್ಟಿ ಪ್ರೇಮದ ನವಿರು ಭಾವಗಳ ಚುಂಗು ಹಿಡಿದು ಹೊರಟಿರುವುದು ಸ್ಪಷ್ಟವಾಗಿದೆ. ಪ್ರೇಮದ ಜೊತೆ ಜೊತೆಗೆ ಬೇರೆತ್ತಲೋ ಹಬ್ಬಿಕೊಂಡ, ಕಡಲಿನಷ್ಟೇ ನಿಗೂಢವಾದ ಕಥನವೊಂದು ಇಲ್ಲಿದೆ ಎಂಬುದೂ ಕೂಡಾ ಈ ಟ್ರೈಲರ್ ಮೂಲಕ ಮನದಟ್ಟಾಗಿದೆ. ನಾಯಕಿ ರುಕ್ಮಿಣಿ ವಸಂತ್ ಧ್ವನಿಯಿಂದಲೇ ಮಂದ್ರವಾಗಿ ತೆರೆದುಕೊಳ್ಳುವ ಕಥನ ನಾನಾ ಭಾವಗಳ ಕಡಲಾಗಿ ಭೋರ್ಗರೆಯುತ್ತದೆ. ಸುಂದರ ದೃಷ್ಯಗಳು, ಚರಣ್ ರಾಜ್ ಅವರ ಸಮ್ಮೋಹಕ ಹಿನ್ನೆಲೆ ಸಂಗೀತದ ಮೂಲಕ ಇಲ್ಲಿನ ದೃಷ್ಯಗಳು ನಾನಾ ದಿಕ್ಕಿನಲ್ಲಿ ಆಲೋಚನೆಗೆ ಹಚ್ಚುತ್ತವೆ. ಇಲ್ಲಿರೋದು ಪ್ರೇಮ ಕಥೆ ಎಂಬುದನ್ನು ಮನದಟ್ಟು ಮಾಡಿಸುತ್ತಲೇ, ಅದಕ್ಕೊಂದಷ್ಟು ತಿರುವುಗಳೂ ಕೂಡಾ ತಟಿಕೆ ಹಾಕಿಕೊಳ್ಳುತ್ತವೆ.

ಖುದ್ದು ರಕ್ಷಿತ್ ಶೆಟ್ಟಿ `ಮನು ಮತ್ತು ಪ್ರಿಯಾಳ ಪ್ರಪಂಚದ ಸಣ್ಣ ಪರಿಚಯವಿದು’ ಎಂಬರ್ಥದ ಒಕ್ಕಣೆಯೊಂದಿಗೆ ಈ ಟ್ರೈಲರ್ ಅನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಮನು ಮತ್ತು ಪ್ರಿಯಾಳ ಪ್ರೇಮ ಪ್ರಪಂಚ ಮಾತ್ರವಲ್ಲದೇ, ಮತ್ತೊಂದಷ್ಟು ಆಘಾತ, ಒಳಸುಳಿ, ತಿರುವಿಗಳನ್ನೂ ಪರಿಣಾಕಾರಿಯಾಗಿ ದಾಟಿಸಲಾಗಿದೆ. ಹೇಮಂತ್ ರಾವ್ ಗಟ್ಟಿ ಕಥೆಯೊಂದರ ಮೂಲಕ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ, ಇದರಲ್ಲಿ ಗಹನವಾದುದೇನೋ ಇದೆ ಎಂಬಷ್ಟರ ಮಟ್ಟಿಗೆ ಈ ಟ್ರೈಲರ್ ಪ್ರೇಕ್ಷಕರ ಮನಸಲ್ಲಿ ರಿಜಿಸ್ಟರ್ ಆಗುವಂತಿದೆ. ಅಷ್ಟರಮಟ್ಟಿಗೆ ಸಪ್ತ ಸಾಗರದಾಚೆ ಎಲ್ಲೋ ಟ್ರೈಲರ್ ಪರಿಣಾಮಕಾರಿ ಎನ್ನಿಸಿಕೊಂಡಿದೆ.

ಸಪ್ತ ಸಾಗರದಾಚೆ ಎಲ್ಲೋ ಚಿತ್ರವನ್ನು ರಕ್ಷಿತ್ ಶೆಟ್ಟಿ ಪರಂವಃ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಇದು ಎರಡು ಭಾಗಗಳಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ. ರಕ್ಷಿತ್ ಶೆಟ್ಟಿ ಒಂದು ಗೆಲುವಿನ ಮೂಲಕ ಮೈ ಕೊಡವಿಕೊಳ್ಳುವ ಅನಿವಾರ್ಯತೆಯ ಅಂಚಿನಲ್ಲಿದ್ದಾರೆ. ಅವನೇ ಶ್ರೀಮನ್ನಾರಾಯಣ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿದ್ದರೂ ಕೂಡಾ, ಅದೇಕೋ ನಿರೀಕ್ಷಿತ ಗೆಲುವು ಕಂಡಿರಲಿಲ್ಲ. 777 ಚಾರ್ಲಿ ಗೆಲುವು ರಕ್ಷಿತ್‍ರನ್ನು ಕೊಂಚ ನಿರಾಳವಾಗಿದೆ. ಸಪ್ತ ಸಾಗರದಾಚೆ ಎಲ್ಲೋ ಮೂಲಕ ದೊಡ್ಡ ಮಟ್ಟದಲ್ಲಿ ಗೆಲ್ಲುವ ಶಪಥದೊಂದಿಗೆ ರಕ್ಷಿತ್ ಅಖಾಡಕ್ಕಿಳಿದಂತಿದೆ. ಅಂಥಾದ್ದೊಂದು ಕಸುವು ಸದರಿ ಟ್ರೈಲರ್ ಮೂಲಕ ಕಾಣಿಸಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!