ಭಾರತೀಯ ಚಿತ್ರರಂಗದಲ್ಲಿ ರಿಯಲ್ ಪ್ರೇಮ (real love strory of bollywood) ಕಥೆಗಳಿಗೇನೂ ಕೊರತೆಯಿಲ್ಲ. ಆದರೆ, ಎಲ್ಲ ಅಡೆತಡೆಗಳನ್ನು ದಾಟಿಕೊಂಡು, ಜನುಮಪೂರ್ತಿ ಜೊತೆಯಾದವುಗಳ ಸಂಖ್ಯೆ ಕಡಿಮೆ. ಅಲ್ಲೇನಿದ್ದರೂ ಅರ್ಧ ದಾರಿಯಲ್ಲೇ ನೆಗೆದುಬಿದ್ದ ದುರಂತಗಾಥೆಗಳದ್ದೇ ಕಾರುಬಾರು. ಕೈ ಚಾಚಿದರೆ ಆಯಾಚಿತವಾಗಿ ತಬ್ಬಿಕೊಳ್ಳುವ ಸಂಬಂಧ, ಅರೆಗತ್ತಲಲ್ಲಿ ಬಿಸಿಯೇರಿ ಥಂಡಾ ಹೊಡೆಯೋ ಭಾವನೆಗಳ ಜಗತ್ತಿನಲ್ಲಿ ನಿಷ್ಕಾಮ ಪ್ರೀತಿ ಮೊಳೆತುಕೊಳ್ಳೋದೇ ಅಪರೂಪ. ವಿಷಾದವೆಂದರೆ, ಊರಗಲ ಹಬ್ಬಿಕೊಂಡು ಸುದ್ದಿಯಾಗಿದ್ದ ಸೆಲೆಬ್ರಿಟಿಗಳ ಪ್ರೇಮ ವೃತ್ತಾಂತಗಳು ಕೂಡಾ ದುರಂತದಲ್ಲಿಯೇ ಸಮಾಪ್ತಿಯಾಗಿವೆ. ಅಂಥಾ ಹತಭಾಗ್ಯ ಪ್ರೇಮ ಕಥೆಗಳ ಸಾಲಿನಲ್ಲಿ (salman khan-ishwarya rai love story) ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಹೆಸರುಗಳೂ ಸೇರಿಕೊಂಡಿವೆ.

ವಯಸ್ಸು ಐವತ್ತರ ಗಡಿ ದಾಟಿ, ಅರವತ್ತರತ್ತ ಮಗುಚಿಕೊಳ್ಳುತ್ತಿದ್ದರೂ ಏಕಾಂಗಿಯಾಗಿ ಉಳಿದುಕೊಂಡಿರುವಾತ ಸಲ್ಮಾನ್ ಖಾನ್. ಬ್ಯಾಡ್ ಬಾಯ್ ಅಂತಲೇ ಕುಖ್ಯಾತನಾಗಿರೋ ಸಲ್ಮಾನನ ರಂಖಲುಗಳ ವೃತ್ತಾಂತ ಸಾಕಷ್ಟಿದೆ. ಒಂದರ ಹಿಂದೊಂದರಂತಗೆ ವಿವಾದ, ಜೊತೆಯಲ್ಲಿ ನಟಿಸಿದ ನಟಿಯರಿಗೆ ಅಂಟಿಕೊಂಡು ಬಿಡುವ ಖಯಾಲಿ… ಈತನ ಹೆಸರಿನ ಹಿಂದೆ ಹೆಟ್ಟಿಕೊಂಡಿರೋ ಬ್ಯಾಡ್ ಬಾಯ್ ಎಂಬ ಬಿರುದಿಗೆ ನಾನಾ ಗರಿಗಳಿವೆ. ಅದೆಲ್ಲದರಲ್ಲಿ, ಈ ಕ್ಷಣಕ್ಕೂ ಸಲ್ಮಾನನನ್ನು ಬಹುವಾಗಿ ಕಾಡುತ್ತಿರೋದು ಐಶ್ವರ್ಯಾ ರೈ ಜೊತೆಗಿನ ಪ್ರೇಮ ಪುರಾಣವೊಂದೇ. ಅದು ಸಲ್ಮಾನ್ ಖಾನ್ ನನ್ನು ಆ ಪರಿಯಾಗಿ ಚುಚ್ಚುತ್ತಿರೋದಕ್ಕೆ ಕಾರಣವೂ ಇಲ್ಲದಿಲ್ಲ. ಯಾಕೆಂದರೆ, ಪ್ರಾಮಾಣಿಕವಾಗಿ ಹಬ್ಬಿಕೊಂಡಿದ್ದ ಪ್ರೀತಿಯನ್ನು ಅನ್ಯಾಯವಾಗಿ ಹೊಸಕಿ ಹಾಕಿದ ಆರೋಪಿ ಸ್ಥಾನದಲ್ಲಿ ನಿಂತಿರುವವನು ಇದೇ ಸಲ್ಮಾನ್ ಖಾನ್!

ಒಂದು ಕಾಲದಲ್ಲಿ ಸಲ್ಮಾನ್ ಮತ್ತು ಐಶ್ವರ್ಯಾ ಜೋಡಿ ಸಿನಿಮಾ ಪ್ರೇಮಿಗಳನ್ನೆಲ್ಲ ಹುಚ್ಚೆಬ್ಬಿಸಿ ಬಿಟ್ಟಿತ್ತು. ತೊಂಬತ್ತರ ದಶಕದಲ್ಲಿ ಹಮ್ ದಿಲ್ ದೇ ಚುಕೇ ಸನಮ್ ಅಂತೊಂದು ಸಿನಿಮಾ ತೆರೆಗಂಡಿತ್ತಲ್ಲಾ? ಅದರಲ್ಲಿ ನಾಯಕ ನಾಯಕರಾಗಿ ನಟಿಸಿದ್ದದ್ದು ಸಲ್ಮಾನ್ ಮತ್ತು ಐಶ್ವರ್ಯಾ ಜೋಡಿ. ಹೇಳಿಕೇಳಿ ಅದು ಸಂಜಯ್ ಲೀಲಾ ಬನ್ಸಾಲಿ ಬ್ರ್ಯಾಂಡಿನ ಸಿನಿಮಾ. ಆ ಪ್ರೇಮ ಕಥನ ದೃಷ್ಯರೂಪ ಧರಿಸಿಕೊಳ್ಳುವ ಹೊತ್ತಿಗೆಲ್ಲ ಸಲ್ಮಾನ್ ಹಾಗೂ ಐಶ್ವರ್ಯಾ ಮಧ್ಯೆ ರಿಯಲ್ ಆಗಿಯೇ ಪ್ರೀತಿ ಮೊಳೆತುಕೊಂಡಿತ್ತು. ಪೇಜ್ ಥ್ರೀ ಗಾಸಿಪ್ಪುಗಳಿಗೆ ಆಹಗಾರವಾಗಿದ್ದ ಈ ಜೋಡಿ, ಬರಬರುತ್ತಾ ಸಾರ್ವಜನಿಕವಾಗಿಯೇ ಆ ರೂಮರ್ ಅನ್ನು ನಿಜವೆಂದು ಒಪ್ಪಿಕೊಂಡಿತ್ತು.

ಹಾಗೆ ಈ ಪ್ರೇಮ ಪ್ರಕರಣ ಜಾಹೀರಾದ ಆಸುಪಾಸಲ್ಲೇ ಸಲ್ಮಾನ್ ಖಾನ್ ಪಕ್ಕಾ ಸ್ಯಾಡಿಸ್ಟ್ ಅವತಾರವೆತ್ತಿ ಬಿಟ್ಟಿದ್ದ. ಅದರ ಪರಿಣಾಮ ಹೇಗಿತ್ತೆಂದರೆ, ಐಶ್ವರ್ಯಾ ರೈ ಸಲ್ಮಾನ ಪ್ರೀತಿಯ ಪಂಜರದಲ್ಲಿ ಬಂಧಿಯಾದ ಗಿಣಿಯಂತಾಗಿ ಬಿಟ್ಟಿದ್ದಳು. ಅಕ್ಷರಶಃ ಪರೋಡಿಯಂತೆ ಠೇಂಕರಿಸಲಾರಂಭಿಸಿದ್ದ ಸಲ್ಮಾನ್ ಸಣ್ಣ ಪುಟ್ಟ ವಿಚಾರಗಳಿಗೂ ಕಿರಿಕಿರಿ ಆರಂಭಿಸಿದ್ದ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!