ಕನ್ನಡದ ಹುಡುಗಿ ರುಕ್ಮಿಣಿ ವಸಂತ್ ಕ್ರೇಜ್ ಇದೀಗ ಸಪ್ತಸಾಗರದಾಚೆಗೂ ಹಬ್ಬಿಕೊಂಡಿದೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದವರು ರುಕ್ಮಿಣಿ ವಸಂತ್. ಇತ್ತೀಚೆಗಷ್ಟೇ ತೆರೆಗಂಡಿದ್ದ ಕಾಂತಾರ ಚಾಪ್ಟರ್೧ ಮೂಲಕ ರುಕ್ಮಿಣಿಯ ವೃತ್ತಿ ಬದುಕು ಮತ್ತೊಂದು ಹಂತಕ್ಕೇರಿದೆ. ಕಾಂತಾರದಲ್ಲಿ ಅವಕಾಶ ಸಿಗುವುದಕ್ಕೂ ಮೊದಲೇ ಈಕೆ ಯಶ್ ಅಭಿನಯದ ಪ್ಯಾನಿಂಡಿಯಾ ಚಿತ್ರವಾದ ಟಾಕ್ಸಿಕ್‌ನಲ್ಲಿ ಅವಕಾಶ ಪಡೆದುಕೊಂಡಿರುವುದರ ಬಗ್ಗೆ ಸುದ್ದಿಯಾಗಿತ್ತು. ಒಂದು ಹಂತದಲ್ಲಿ ಅದು ಗಾಳಿ ಸುದ್ದಿಯಿರಬಹುದೆಂಬ ಗುಮಾನಿ ಕೂಡಾ ಕಾದಿತ್ತು. ಆದರೀಗ ರುಕ್ಮಿಣಿಯ ಟಾಕ್ಸಿಕ್ ಲುಕ್ ಒಂದನ್ನು ಖುದ್ದು ಯಶ್ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ!
ಟಾಕ್ಸಿಕ್ ಸಿನಿಮಾದ ವಿಚಾರದಲ್ಲಿ ಯಶ್ ಒಂದಷ್ಟು ಜವಾಬ್ದಾರಿಗಳನ್ನು ತಾವೇ ವಹಿಸಿಕೊಂಡಂತಿದೆ. ಹಂತ ಹಂತವಾಗಿ ಈ ಸಿನಿಮಾ ಭಾಗವಾದ ಕಲಾವಿದರ ಲುಕ್ಕುಗಳನ್ನು ಪಾತ್ರದ ಹೆಸರಿನ ಸಮೇತವಾಗಿ ಜಾಹೀರು ಮಾಡುತ್ತಿದ್ದಾರೆ. ಈಗಾಗಲೇ ನಯನತಾರಾ ಸೇರಿದಂತೆ ಒಂದಷ್ಟು ನಟ ನಟಿಯರ ಫಸ್ಟ್ ಲುಕ್ ಬಿಡುಗಡೆಗೊಂಡಿದೆ. ಇದೀಗ ಹೊಸಾ ವರ್ಷದ ಕೊಡುಗೆಯೆಂಬಂತೆ ಯಶ್, ಕನ್ನಡತಿ ರುಕ್ಮಿಣಿ ವಸಂತ್ ಅವರ ಪಾತ್ರ ಪರಿಚಯ ಮಾಡಿಸಿದ್ದಾರೆ. ಇದನ್ನು ಕಂಡು ಸಿನಿಮಾ ಪ್ರೇಮಿಗಳೆಲ್ಲ ಅಕ್ಷರಶಃ ಥ್ರಿಲ್ ಆಗಿದ್ದಾರೆ. ಕಾಂತಾರ ನಂತರದಲ್ಲಿ ಪ್ಯಾನಿಂಡಿಯಾ ಮಟ್ಟದಲ್ಲಿ ಕ್ರೇಜ್ ಹೊಂದಿರುವ ರುಕ್ಮಿಣಿ ಮೆಲಿಸಾ ಎಂಬ ಪಾತ್ರದ ಮೂಲಕ ಮತ್ತೆ ಸಂಚಲನ ಸೃಷ್ಟಿಸುವ ಎಲ್ಲ ಲಕ್ಷಣಗಳೂ ಢಾಳಾಗಿಯೇ ಗೋಚರಿಸಲಾರಂಭಿಸಿವೆ.
ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಸಾದಾಸೀದ ಹುಡುಗಿಯಾಗಿ ಕಾಣಿಸಿಕೊಂಡಿದ್ದ ರುಕ್ಮಿಣಿ, ಆ ನಂತರವೂ ಗ್ಲಾಮರ್ ಹಂಗಿಲ್ಲದ ಪಾತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಕಾಂತಾರ ಚಾಪ್ಟರ್೧ನಲ್ಲಂತೂ ಬೇರೆಯದ್ದೇ ಶೇಡಿನ ಪಾತ್ರ, ಕಾಸ್ಟೂಮಿನ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದರು. ಆದರೆ, ಇದೇ ಮೊದಲ ಬಾರಿ ರುಕ್ಮಿಣಿ ಟಾಕ್ಸಿಕ್‌ಗಾಗಿ ಗ್ಲಾಮರಸ್ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ. ಈಕೆಯ ಪಾತ್ರದ ಸುತ್ತ ಪ್ಯಾನಿಂಡಿಯಾ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ. ಈಗಾಗಲೇ ಯಶ್ ಅಭಿನಯದ ಟಾಕ್ಸಿಕ್ ಬಗ್ಗೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆಗಳು ಮೂಡಿಕೊಂಡಿವೆ. ಆ ಚಿತ್ರದ ಗೆಲುವಿನೊಂದಿಗೆ ರುಕ್ಮಿಣಿ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚೋದು ಗ್ಯಾರೆಂಟಿಎಂಬ ಮಾತುಗಳು ಸಿನಿಮಾಸಕ್ತರ ವಲಯದಲ್ಲಿ ಕೇಳಿ ಬರಲಾರಂಭಿಸಿವೆ.
keywords: rukmini vasanth, toxic movie, rukmini, toxic, yash, cinishodha,

