ಹೆಚ್ಚೇನೂ ಪ್ರಚಾರದ ಭರಾಟೆಯಿಲ್ಲ; ಅದಕ್ಕಾಗಿನ ಚಿತ್ರವಿಚಿತ್ರವಾದ ಸರ್ಕಸ್ಸುಗಳ ಹಾಜರಿಯೂ ಇಲ್ಲ… ಇದೆಲ್ಲದರಾಚೆಗೆ ಒಂದು ಸಿನಿಮಾ ತನ್ನ ಆಂತರ್ಯದ ಹೊಳಹುಗಳಿಂದ, ಚಿತ್ರತಂಡದ ಕ್ರಿಯೇಟಿವಿಟಿಯಿಂದಲೇ ಪ್ರೇಕ್ಷಕರನ್ನು ಸೆಳೆಯೋದಿದೆಯಲ್ಲಾ? ಅದು ಅತ್ಯಂತ ಆಪ್ಯಾಯಮಾನವಾದ ಪಲ್ಲಟ. ಹಾಗೊಂದು ಅಲೆ ಸೃಷ್ಟಿಸಿದ ಸಿನಿಮಾಗಳು ಹಂತ ಹಂತವಾಗಿ ಪ್ರೇಕ್ಷಕರನ್ನು ಆವರಿಸಿಕೊಂಡು, ಅಮೋಘವಾಗಿ ಗೆದ್ದ ಅನೇಕ ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲಿವೆ. ಆ ಸಾಲಿಗೆ ಸೇರ್ಪಡೆಗೊಳ್ಳಬಹುದಾದ ಎಲ್ಲ ಲಕ್ಷಣಗಳನ್ನೂ ಒಳಗೊಂಡಿರುವ ಚಿತ್ರ (kenda movie) `ಕೆಂಡ’. ಸಹದೇವ್ ಕೆಲವಡಿ (director sahadev kelavadi) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾವೀಗ ಬಿಡುಗಡೆಯ ಸಮೀಪದಲ್ಲಿರುವಾಗಲೇ ಒಂದಷ್ಟು ವಿಶೇಷತೆಗಳನ್ನು ಹೊಮ್ಮಿಸುತ್ತಿರುವುದು, ದಾಖಲೆಗಳಿಗೆ ಭಾಜನವಾಗಿರೋದು ನಿಜಕ್ಕೂ ವಿಶೇಷ!

ಈ ಹಿಂದೆ `ಗಂಟುಮೂಟೆ’ (gantumoote movie) ಅಂತೊಂದು ಭಿನ್ನ ಕಥಾನಕದ ಚಿತ್ರ ತೆರೆಗಂಡಿತ್ತು. ಅಪಾರ ಮೆಚ್ಚುಗೆಗೂ ಪಾತ್ರವಾಗಿತ್ತು. ಅದನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದವರು (director roopa rao) ರೂಪಾ ರಾವ್. ಆ ಸಿನಿಮಾವನ್ನು ಖುದ್ದು ರೂಪಾ ಅವರೇ ಸಹದೇವ್ ಕೆಲವಡಿ ಜೊತೆಗೂಡಿ ನಿರ್ಮಾಣ ಮಾಡಿದ್ದರು. ಲಾಗಾಯ್ತಿನಿಂದಲೂ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಗಣನೀಯವಾಗಿ ಕಡಿಮೆಯಿದೆ. ಒಂದೊಮ್ಮೆ ನಿರ್ದೇಶಕಿಯರ ಆಗಮನವಾದರೂ ಕೂಡಾ, ಕಾಲೂರಿ ನೆಲೆ ಕಂಡುಕೊಳ್ಳೋದು ತುಸು ತ್ರಾಸದಾಯಕ ಸಂಗತಿ. ಯಾಕೆಂದರೆ, ಚಿತ್ರರಂಗವೆಂಬುದು ಆರಂಭದಿಂದ ಇಲ್ಲಿಯವರೆಗೂ ಪುರುಷರ ಪಾರುಪಥ್ಯವೇ ನಿರ್ಣಾಯಕವಾಗಿರುವ ಕ್ಷೇತ್ರ. ಇಂಥಾದ್ದರ ನಡುವೆಯೂ ಗಂಟುಮೂಟೆಯ ಮೂಲಕ ರೂಪಾ ರಾವ್ ಭರವಸೆ ಮೂಡಿಸಿದ್ದರು.

ಅವರ ಮುಂದಿನ ಸಿನಿಮಾ ಯಾವುದೆಂಬ ಕುತೂಹಲವಿರುವಾಗಲೇ, ಅವರು ನಿರ್ಮಾಪಕಿಯಾಗಿ ಎಂಟ್ರಿ ಮಕೊಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದೀಗ ನಾನಾ ಸ್ವರೂಪಗಳಲ್ಲಿ ಚರ್ಚೆ ಹುಟ್ಟು ಹಾಕಿರೋ ಕೆಂಡ ಚಿತ್ರವನ್ನು ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ತಾನೇ ತಾನಾಗಿ ರೋಮಾಂಚಕ ದಾಖಲೆಯೊಂದು ರೂಪಾರ ಮುಡಿಗೇರಿದೆ. ಬಹುಶಃ ಕೇವಕಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ; ಒಂದಿಡೀ ಭಾರತೀಯ ಚಿತ್ರರಂಗದಲ್ಲಿಯೇ ಗ್ಯಾಂಗ್ ಸ್ಟರ್ ಸಿನಿಮಾವೊಂದನ್ನು ನಿರ್ಮಾಣ ಮಾಡಿರುವ ಮೊದಲ ನಿರ್ಮಾಪಕಿ ಎಂಬ ಹೆಗ್ಗಳಿಕೆಗೆ ರೂಪಾ ರಾವ್ ಪಾತ್ರರಾಗಿದ್ದಾರೆ. ಇದರೊಂದಿಗೆ ನಿರ್ದೇಶಕಿಯಾಗಿ ಮಾತ್ರವಲ್ಲದೇ, ನಿರ್ಮಾಪಕಿಯಾಗಿಯೂ ಅವರು ಗಮನ ಸೆಳೆದುಕೊಂಡಿದ್ದಾರೆ.

ಹಾಗೆ ನೋಡಿದರೆ, ಒಂದಷ್ಟು ಕಾಲದ ಸಾಂಗತ್ಯ, ಜೊತೆಯಾಗಿ ಕನಸೊಂದನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಅಚ್ಚುಕಟ್ಟಾದೊಂದು ತಂಡ ರೂಪುಗೊಳ್ಳುತ್ತೆ. ಒಂದೇ ಬಗೆಯ ಆಲೋಚನಾ ಕ್ರಮ, ಪೂರಕ ಚಟುವಟಿಕೆಗಳು ಸಿನಿಮಾ ರಂಗದಲ್ಲಿ ಎಂಥೆಂಥಾದ್ದೋ ಸಂಚಲನ ಸೃಷ್ಟಿಸಿದ ಉದಾಹರಣೆಗಳಿದ್ದಾವೆ. ಗಂಟುಮೂಟೆ ಚಿತ್ರದ ಭೂಮಿಕೆಯಲ್ಲಿ ಅಂಥಾದ್ದೊಂದು ಸಮರ್ಥವಾದ ತಂಡ ತಯಾರುಗೊಂಡಿದೆ. ಅದರ ಕ್ಯಾಪ್ಟನ್ನುಗಳಂತಿರುವವರು ರೂಪಾ ರಾವ್ ಮತ್ತು ಸಹದೇವ್ ಕೆಲವಡಿ. ಗಂಟುಮೂಟೆ ನಿರ್ಮಾಪಕರಾಗಿ, ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದ ಸಹದೇವ್ ಪಾಲಿಗೆ ನಿರ್ದೇಶಕರಾಗಬೇಕೆಂಬ ಕನಸಿತ್ತು. ಅದಕ್ಕಾಗಿ ಅವರು ತಯಾರು ಮಾಡಿಕೊಂಡಿದ್ದ ಕಥೆ ಒಂದೇ ಸಲಕ್ಕೆ ರೂಪಾ ಅವರಿಗೆ ಇಷ್ಟವಾಗಿತ್ತಂತೆ. ಅದಲ್ಲದೇ ಆ ಕಥೆಗೆ ಅದ್ಯಾವ ಪರಿಯಲ್ಲಿ ಸಹದೇವ್ ದೃಷ್ಯರೂಪ ಕೊಡಬಹುದೆಂಬಂಥಾ ಸ್ಪಷ್ಟ ಅಂದಾಜೂ ಅವರಲ್ಲಿತ್ತು. ಈ ಕಾರಣದಿಂದಲೇ ಕೆಂಡ ಚಿತ್ರಕ್ಕಾಗಿ ಅವರು ನಿರ್ಮಾಪಕಿಯ ಅವತಾರವೆತ್ತಿದ್ದಾರೆ.

ಹೀಗೆ ನಾನಾ ದಿಕ್ಕುಗಳಲ್ಲಿ ಕುತೂಹಲ ಮೂಡಿಸುತ್ತಿರುವ ಕೆಂಡದ ಅಂತಿಮ ಹಂತದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಇಷ್ಟರಲ್ಲಿಯೇ ಹೈ ವೋಲ್ಟೇಜ್ ಟೀಸರ್ ಅನ್ನು ಪ್ರೇಕ್ಷಕರ ಮುಂದಿಡುವ ತಯಾರಿಯೂ ಬಿರುಸಿನಿಂದ ನಡೆಯುತ್ತಿದೆ. ಇದೆಲ್ಲದರಾಚೆಗೆ ರೂಪಾ ರಾವ್ ಬಗ್ಗೆ ಒಂದಷ್ಟು ಪ್ರಶ್ನೆಗಳೂ ಮೂಡಿಕೊಳ್ಳುತ್ತವೆ. ಈ ದಿಸೆಯಲ್ಲಿ ಒಂದಷ್ಟು ವಿಚಾರಗಳನ್ನು ಖುದ್ದು ರೂಪಾ ರಾವ್ ಹಂಚಿಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ಯಾವತ್ತಿಗೂ ನಿರ್ದೇಶನವೇ ಅವರ ಪ್ರಧಾನ ಆದ್ಯತೆ. ತಮ್ಮೊಳಗಿನ ನಿರ್ದೇಶನದ ಕಸುವಿಗೆ ಸಾಣೆ ಹಿಡಿಯುವ ಕೆಲಸವನ್ನ ಅವರೆಂದೂ ನಿಲ್ಲಿಸೋದಿಲ್ಲ. ಅದರ ಭಾಗವಾಗಿ ಅವರು ಈಗಾಗಲೇ `ಆಸ್ಮಿನ್’ ಎಂಬ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಅದು ಶೀಘ್ರದಲ್ಲಿಯೇ ಓಟಿಟಿಯಲ್ಲಿ ಬಿಡುಗಡೆಗೊಳ್ಳಲಿದೆ.

ಓರ್ವ ನಿರ್ದೇಶಕಿಯಾಗಿ ಒಂದಷ್ಟು ಭಿನ್ನ ಅಭಿರುಚಿಗಳನ್ನು ಹೊಂದಿರುವವರು ರೂಪಾ ರಾವ್. ಮನುಷ್ಯನ ವರ್ತನೆಗಳು, ಮಾನಸಿಕ ಸ್ಥಿತ್ಯಂತರಗಳೆಲ್ಲವೂ ಅವರ ಆಸಕ್ತಿಯ ಮೂಲ. ಆ ಮೂಸೆಯಲ್ಲಿಯೇ ಭಿನ್ನವಾದ ಸಿನಿಮಾ ಕಥನಗಳನ್ನ ಸೃಷ್ಟಿಸಿ, ದೃಷ್ಯರೂಪ ಕೊಡಬೇಕೆಂಬುದು ಅವರ ಬಯಕೆ. ಆ ನಿಟ್ಟಿನಲ್ಲವರು ಒಂದು ಬಿಗ್ ಪ್ರಾಜೆಕ್ಟಿಗೆ ಅಣಿಗೊಳ್ಳುತ್ತಿದ್ದಾರೆ. ಸದ್ಯದ ಮಟ್ಟಿಗೆ ಅವರ ಗಮನವೆಲ್ಲ ಕೆಂಡದ ಮೇಲಿದೆ ಅನ್ನೋದು ನಿಜ. ಈ ಚಿತ್ರ ಬಿಡುಗಡೆಗೊಂಡ ಬೆನ್ನಲ್ಲಿಯೇ ಅವರು ನಿರ್ದೇಶಿಸಲಿರುವ ಸಿನಿಮಾ ಚಾಲೂ ಆಗಲಿದೆ. ಅಂದಹಾಗೆ, ಆ ಸಿನಿಮಾಕ್ಕಾಗಿ ಸ್ಟಾರ್ ನಟರೊಬ್ಬರೊಂದಿಗೆ ಮಾತುಕತೆಯೂ ಚಾಲ್ತಿಯಲ್ಲಿದೆ. ಮುಂದೆ ಸಿನಿಮಾ ಮಂದಿರಗಳಲ್ಲಿ ನಿಗಿನಿಗಿಸಲಿರುವ ಕೆಂಡದ ಕಾವಲ್ಲಿ, ಈಗ ನಿರ್ಮಾಪಕಿಯಾಗಿರುವ ರೂಪಾ ರಾವ್ ನಿರ್ದೇಶಕಿಯಾಗಿ ರೂಪಾಂತರಗೊಳ್ಳಲಿದ್ದಾರೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!