ರ್ವ ಸಾಧಾರಣ ಹುಡುಗನಾಗಿ ಬಣ್ಣದ ಜಗತ್ತಿಗೆ ಅಡಿಯಿರಿಸಿ, ಹಂತ ಹಂತವಾಗಿ ಅಸಾಧಾರಣ ಸ್ವರೂಪದಲ್ಲಿ ಬೆಳೆದು ನಿಂತವರು (rocking star yash) ರಾಕಿಂಗ್ ಸ್ಟಾರ್ ಯಶ್. ಸಿಕ್ಕ ಅವಕಾಶಗಳನ್ನೆಲ್ಲ ಅಚ್ಚುಕಟ್ಟಾಗಿ ಮೆಟ್ಟಿಲಾಗಿಸಿಕೊಂಡು, ಇರುವ ಸೀಮಿತ ಪರಿಧಿಯಲ್ಲಿಯೇ ಎಲ್ಲೆ ಮೀರಿದ ಕನಸುಗಳನ್ನು ಸಾಕಿಕೊಂಡಂತೆ ಬೆಳೆದು ನಿಂತಿರುವವರು ಯಶ್. ಸೋಲಿನ ಪರ್ವವನ್ನ ದಾಟಿಕೊಳ್ಳೋದು ಮಾತ್ರವಲ್ಲ; ಸಿಕ್ಕ ಗೆಲುವನ್ನು ಆಸ್ಥೆಯಿಂದ ಸಂಭಾಳಿಸಿಕೊಂಡು ಹೋಗುವ ವಿಚಾರದಲ್ಲಿಯೂ ಕೂಡಾ ಯಶ್ ರೋಲ್ ಮಾಡೆಲ್ ಇದ್ದಂತೆ. ಇವಿಷ್ಟು ಅಭಿಮಾನದಾಚೆಗೂ ಯಶ್ ಸುತ್ತ ಹಬ್ಬಿಕೊಂಡಿರುವ ಪ್ರೀತಿಯ ಪ್ರಭಾವಳಿ. ಹೀಗೆ ಸಾಗಿ ಬಂದ ಅವರೀಗ ಪ್ಯಾನಿಂಡಿಯಾ ಸ್ಟಾರ್. ಇದೀಗ ಸಿನಿಮಾವೊಂದಕ್ಕಾಗಿ ಯಶ್ ಪಡೆದುಕೊಂಡಿರುವ ಸಂಭಾವನೆಯ ಅಗಾಧತೆ ಕಂಡು (bolywood) ಬಾಲಿವುಡ್ ಸ್ಟಾರುಗಳೇ ಕಂಗಾಲೆದ್ದು ಹೋಗಿದ್ದಾರೆ!

ದಕ್ಷಿಣ ಭಾರತೀಯ ಚಿತ್ರರಂಗದ ಪ್ಯಾನಿಂಡಿಯಾ ಲೆವೆಲ್ಲಿನ ನಾಯಕರ ಸಾಲಿಗೆ ಯಶ್ ಅದಾಗಲೇ ಸೇರ್ಪಡೆಗೊಂಡಿದ್ದಾರೆ. ಈ ಯಾದಿಯಲ್ಲಿ ಪ್ರಧಾನವಾಗಿ ಪ್ರಭಾಸ್, ರಾಮ್ ಚರಣ್ ಮತ್ತು ಯಶ್ ಹೆಸರು ದಾಖಲಾಗಿದೆ. ಹಾಗೆ ನೋಡಿದರೆ, ಯಶ್ ಹೆಸರಿಗಿರೋ ಕಿಮ್ಮತ್ತಿನ ಮುಂದೆ ಇದೀಗ ತೆಲುಗಿನ ಉಳಿದಿಬ್ಬರು ಹೀರೋಗಳೂ ಮಂಕಾಗುತ್ತಾರೆ. ಈ ಹೊತ್ತಿನಲ್ಲಿ ಯಶ್ ಮುಂದಿನ ಚಿತ್ರ ಟಾಕ್ಸಿಕ್ ಘೋಷಣೆಗೊಂಡಿದೆ. ಅದರ ಜೊತೆ ಜೊತೆಗೇ ನಿತೇಶ್ ತಿವಾರಿಯ ಪ್ರಸಿದ್ಧ ರಾಮಾಯಣ ಸರಣಿಯಲ್ಲಿ ಯಶ್ ರಾವಣನಾಗಲು ಒಪ್ಪಿಕೊಂಡಿದ್ದಾರೆ. ಇದೀಗ ಅದಕ್ಕಾಗಿ ಅವರು ಪಡೆದಿರುವ ಮೊತ್ತದ ವಿಚಾರ ಭಾರತೀಯ ಚಿತ್ರರಂಗದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ!

ಹಾಗಾದರೆ, ಯಶ್ ರಾವಣನಾಗಲು ಪಡೆದಿರೋ ಸಂಭಾವನೆ ಎಷ್ಟು? ಈ ಪ್ರಶ್ನೆಗೆ ಸಿಗುವ ಉತ್ತರ ಎಂಥವರೂ ಅವಾಕ್ಕಾಗುವಂತಿದೆ. ಒಂದು ಮೂಲದ ಪ್ರಕಾರ ಯಶ್ ಗೆ ಸಂದಾಯವಾಗಲಿರೋ ಕಾಸಿನ ಮೊತ್ತ ಭರ್ತಿ ನೂರಾ ಐವತ್ತು ಕೋಟಿ. ಈ ವಿಚಾರ ತಿಳಿದ ಬಹುತೇಕರು ಅದೃಷ್ಟ ಅಂದ್ರೆ ಇದು ಅಂತೆಲ್ಲ ಮಾತಾಡಲಾರಂಭಿಸಿದ್ದಾರೆ. ಆದರೆ, ಯಶ್ ಅದಕ್ಕೆ ಅರ್ಹನಾಗಿದ್ದರ ಹಿಂದೆ ಪರಿಶ್ರಮ, ಕರಾರುವಾಕ್ಕಾದ ಪ್ಲಾನಿಂಗ್, ಕಿಂಚಿತ್ತೂ ಮುಕ್ಕಾಗದಂಥಾ ದೂರದೃಷ್ಟಿಗಳಿವೆ ಅನ್ನೋದು ಸತ್ಯ. ಬಹುಶಃ ಅಂಥಾದ್ದೊಂದು ನಿಖರ ಮನಃಸ್ಥಿತಿ ಇಲ್ಲದೇ ಹೋಗಿದ್ದರೆ ಕೆಜಿಎಫ್ ನಂತರದಲ್ಲಿ ಆ ಗೆಲುವನ್ನು ಮುಂದುವರೆಸಲು ಸಾಧ್ಯವಾಗುತ್ತಿರಲಿಲ್ಲ. ಆ ಹಾದಿಯಲ್ಲಿ ಎಚ್ಚರದಿಂದ ಮುನ್ನಡೆದ ಫಲವಾಗಿಯೇ ಒಂದು ಪಾತ್ರಕ್ಕಾಗಿ ನೂರೈವತ್ತು ಕೋಟಿಗೆ ತೂಗುವ ಮಟ್ಟಕ್ಕೆ ಯಶ್ ಬೆಳೆದು ನಿಂತಿದ್ದಾರೆ!

ಈ ರಾಮಾಯಣ ಸರಣಿಯಲ್ಲಿ ಒಂದೊಂದು ಪಾತ್ರಕ್ಕೂ ಬೇರೆ ಬೇರೆ ನಟ ನಟಿಯರ ಹೆಸರುಗಳು ಕೇಳಿ ಬಂದಿದ್ದವು. ಅದರಲ್ಲಿಯೂ ನಾನಾ ಪಾತ್ರಗಳಿಗೆ ಯಶ್ ಹೆಸರು ಚಾಲ್ತಿಯಲ್ಲಿತ್ತು. ಕೆಲವರಂತೂ ಯಶ್ ಗೆ ಶ್ರೀರಾಮಚಂದ್ರನ ಪೋಶಾಕು ತೊಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವ ಮೂಲಕ ಸಂಣಭ್ರಮಿಸಿದ್ದರು. ಆದರೆ, ಯಶ್ ರಾವಣನಾಗಲು ಮನಸು ಮಾಡಿದ್ದಾರೆ. ಇನ್ನುಳಿದಂತೆ, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ ಸೀತೆಯಾಗಿ ನಟಿಸಲಿದ್ದಾರೆ. ಮತ್ತೊಂದಷ್ಟು ಪಾತ್ರಗಳಿಗೆ ಇಷ್ಟರಲ್ಲಿಯೇ ಕಲಾವಿದರ ಆಯ್ಕೆ ಸಮಾಪ್ತಿಗೊಳ್ಳಲಿದೆ. ಈ ರಾಮಾಯಣ ಸರಣಿಯ ಬಗ್ಗೆ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇರುತ್ತದೆ. ಆದರೆ, ರಾವಣನಾಗಿ ರಾಕಿ ಭಾಯ್ ಎಂಟ್ರಿ ಕೊಡಲಿರೋದು ನಿಕ್ಕಿಯಾಗುತ್ತಲೇ ಅಂಥಾ ಕುತೂಹಲಕ್ಕೆ ಮತ್ತಷ್ಟು ತೀವ್ರತೆ ಬಂದಂತಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!