ಕನ್ನಡ ಚಿತ್ರರಂಗದಿಂದ ಸೀದಾ ತೆಲುಗೆ ಹಾರಿದ್ದ ರಶ್ಮಿಕಾ ಮಂದಣ್ಣ ಹಿಂತಿರುಗಿ ನೋಡದಂತೆ ಗೆಲುವು ಕಂಡಿದ್ದೀಗ ಇತಿಹಾಸ. ಆದರೆ, ಸಾಲು ಸಾಲು ಗೆಲುವುಗಳ ಬೆನ್ನಲ್ಲಿಯೇ ಒಂದಷ್ಟು ಸೋಲುಗಳೂ ಕೂಡಾ ಈಕೆಯನ್ನು ಎದುರುಗೊಳ್ಳುತ್ತಾ ಬಂದಿವೆ. ಒಂದು ಹಂತದಲ್ಲಿ ತೆಲುಗಿನಲ್ಲೀಕೆ ನೇಪಥ್ಯಕ್ಕೆ ಸರಿಯೋದು ಗ್ಯಾರೆಂಟಿ ಎಂಬಂಥಾ ವಾತಾವರಣವೂ ಸೃಷ್ಟಿಯಾಗಿತ್ತು. ಹೀಗೆ ಟ್ರೋಲುಗಳು ಹರಿದಾಡಿದಾಗೆಲ್ಲ ಈಕೆ ಅಚ್ಚರಿದಾಯಕವಾಗಿ ಪುಟಿದೆದ್ದು ಬಿಡೋದಿದೆ. ಈಗಲೂ ಕೂಡಾ ಅಂಥಾದ್ದೇ ಸೋಲು ಗೆಲುವುಗಳ ತೂಗುಯ್ಯಾಲೆಯಲ್ಲಿ ಜೀಕುತ್ತಿರುವಾಕೆ ರಶ್ಮಿಕಾ. ಆದರೆ, ಇಂಥಾ ಏಳುಬೀಳುಗಳಾಚೆಗೂ ಆಕೆ ಬಾಲಿವುಡ್ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾಳೆ. ಆ ಚಿತ್ರದ ದಿಕ್ಕಿಂದ ಹಾರರ್ ಸಂಗತಿಯೊಂದೀಗ ಜಾಹೀರಾಗಿದೆ!
ರಶ್ಮಿಕಾ ಬಾಲಿವುಡ್ ಸಿನಿಮಾ ಆರಂಭಿಕವಾಗಿ ಒಪ್ಪಿಕೊಂಡಾಗ ಅದರತ್ತ ಸಹಜವಾಗಿಯೇ ಒಂದಷ್ಟು ಕುತೂಹಲ ಮೂಡಿಕೊಂಡಿತ್ತು. ಆಕೆ ಶಾರೂಖ್ ಖಾನ್ ಜೊತೆ ನಟಿಸಿದ್ದ ಸಿಕಂದರ್ ಚಿತ್ರ ಕವುಚಿಕೊಳ್ಳುತ್ತಲೇ ರಶ್ಮಿಕಾ ಬಾಲಿವುಡ್ಡಿನಲ್ಲಿ ಗೋತಾ ಹೊಡೆದಳೆಂಬಂಥಾ ಕುಹಕದ ಮಾತುಗಳು ಕೇಳಿ ಬಂದಿದ್ದವು. ಅದರ ಬೆನ್ನಲ್ಲಿಯೇ ರಶ್ಮಿಕಾ ನಟಿಸಿದ್ದ ಚಾವಾ ಗೆಲುವು ಕಂಡಿತ್ತು. ಇದೀಗ ಆ ಗೆಲುವಿನ ಖುಷಿಯಲ್ಲಿಯೇ ಥಮಾ ಅಂತೊಂದು ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾಳೆ. ಇದೀಗ ಈ ಚಿತ್ರದಲ್ಲಿ ರಶ್ಮಿಕಾಳ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಂಡಿದೆ. ಅದರಲ್ಲಿ ಇದೇ ಮೊದಲ ಬಾರಿಗೆ ಹಾರರ್ ಲುಕ್ಕಿನಲ್ಲಿ ಕೊಡಗಿನ ಹುಡುಗಿ ಕಂಗೊಳಿಸಿದ್ದಾಳೆ.
ಆಯುಶ್ಮಾನು ಖುರಾನಾ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರ ದಂಡೇ ಇದೆ. ಚಿತ್ರ ತಂಡ ಹಂತ ಹಂತವಾಗಿ ಎಲ್ಲಾ ಕಲಾವಿದರ ಫಸ್ಟ್ ಲುಕ್ಕನ್ನು ಬಿಡುಗಡೆ ಮಾಡುತ್ತಾ ಸಾಗುತ್ತಿದೆ. ಇದೀಗ ರಶ್ಮಿಕಾಳ ಲುಕ್ಕು ಅನಾವರಣಗೊಂಡಿದೆ. ಇದೇ ತಿಂಗಳ ಹತ್ತೊಂಬತ್ತರಂದು ಥಾಮದ ಗ್ಲಿಂಪ್ಸ್ ಬಿಡುಗಡಸೆಗೆ ಮುಹೂರ್ತ ನಿಗಧಿಯಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಅದ್ದೂರಿಯಾಗಿ ತೆರೆಗಾಣಿಸಲು ಈಗಾಗಲೇ ತಯಾರಿ ಆರಂಭವಾಗಿದೆ. ಹಾರರ್ ಕಥೆಯನ್ನೊಳಗೊಂಡಿರೋ ಈ ಸಿನಿಮಾದಲ್ಲಿ ಯಥೇಚ್ಛವಾಗಿ ಹಾಸ್ಯಕ್ಕೂ ಒತ್ತು ಕೊಡಲಾಗಿದೆಯಂತೆ. ಅಂತೂ ಚಾವ ನಂತರ ಹಾರರ್ ಚಿತ್ರದ ಮೂಲಕ ರಶ್ಮಿಕಾಗೆ ಮತ್ತೊಂದು ಗೆಲುವು ದಕ್ಕೋ ನಿರೀಕ್ಷೆಗಳಿದ್ದಾವೆ.