ಕನ್ನಡದಲ್ಲೊಂದು ಸಿನಿಮಾದಲ್ಲಿ ನಟಿಸಿದ ನಂತರ ಸೀದಾ ತೆಲುಗಿಗೆ ಹಾರಿ, ಅಲ್ಲಿಯೇ ಯಶ ಕಂಡಿರುವಾಕೆ ರಶ್ಮಿಕಾ ಮಂದಣ್ಣ. ಒಂದರ ಹಿಂದೊಂದು ಹಿಟ್ ಸಿನಿಮಾಗಳಲ್ಲಿ ನಟಿಸಿದ ನಂತರದಲ್ಲಿ ಏಕಾಏಕಿ ರಶ್ಮಿಕಾಗೆ ಹಿನ್ನಡೆ ಉಂಟಾಗಿತ್ತು. ಇನ್ನೇನು ಆಕೆ ಪೂಜಾ ಹೆಗ್ಡೆ ಮುಂತಾದವರಂತೆ ವರ್ಷಗಟ್ಟಲೆ ವನವಾಸ ಅನುಭವಿಸಬೇಕಾಗುತ್ತೆ ಎಂಬಂಥಾ ವಾತಾವರಣವೂ ಸೃಷ್ಟಿಯಾಗಿ ಬಿಟ್ಟಿತ್ತು. ಒಂದಷ್ಟು ಟ್ರೋಲ್ ಮಂದಿ ರಶ್ಮಿಕಾಳ ಹಿನ್ನಡೆಯನ್ನ ಸಂಭ್ರಮಿಸಿದ್ದೂ ನಡೆದಿತ್ತು. ಆದರೆ, ಆ ಸಂಭ್ರಮ ಹೆಚ್ಚು ದಿನ ಉಳಿಯಲೇ ಇಲ್ಲ. ಯಾಕೆಂದರೆ, ಅತ್ಯಂತ ಕಡಿಮೆ ಕಾಲಾವಧಿಯಲ್ಲಿಯೇ ಆಕೆ ಮತ್ತೆ ಫಾರ್ಮಿಗೆ ಮರಳಿದ್ದಾಳೆ. ಇದೀಗ ಸತತ ಮೂರನೇ ಬಾರಿ ಅಲ್ಲು ಅರ್ಜುನ್‌ಗೆ ನಾಯಕಿಯಾಗೋ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದಾಳೆ!
ಅಲ್ಲು ಅರ್ಜುನ್ ಪುಷ್ಪ ಸರಣಿ ಸಿನಿಮಾಗಳ ಮೂಲಕ ಪ್ಯಾನಿಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಈ ಸರಣಿಯ ನಂತರದಲ್ಲಿ ಅಲ್ಲು ಮುಂದಿನ ನಡೆಯೇನೆಂಬ ಪ್ರಶ್ನೆಗೆ ಉತ್ತರವೂ ಸಿಕ್ಕಾಗಿದೆ. ತಮಿಳು ನಿರ್ದೇಶಕ ಅಟ್ಲಿ ಸಾರಥ್ಯದ ಸಿನಿಮಾಕ್ಕಾಗಿ ಇದೀಗ ಸರ್ವ ತಯಾರಿಯೂ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ ಈ ಚಿತ್ರದ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿರುವ ಸುದ್ದಿ ಜಾಹೀರಾಗಿದೆ. ಇದು ನಿಜಕ್ಕೂ ರಶ್ಮಿಕಾ ಪಾಲಿಗೆ ಲಭಿಸಿದ ಬಹುದೊಡ್ಡ ಅವಕಾಶ. ಭಾರೀ ಬಜೆಟ್ಟಿನಲ್ಲಿ ತಯಾರಾಗುತ್ತಿರೋ ಅಟ್ಲಿ ನಿರ್ದೇಶನದ ಚಿತ್ರದ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆಗಳಿದ್ದಾವೆ. ಇದರ ನಾಯಕಿಯಾಗಲು ಬಾಲಿವುಡ್ ನಟಿಯರೇ ತುದಿಗಾಲಲ್ಲಿ ನಿಂತಿದ್ದರು. ಅದಲ್ಲೊಂದಷ್ಟು ನಟಿಯರು ನಾನಾ ರೀತಿಗಳಲ್ಲಿ ಪ್ರಯತ್ನಿಸಿದ್ದರು. ಆದರೆ, ಆ ಸುವರ್ಣಾವಕಾಶ ಕೊಡಗಿನ ಹುಡುಗಿಗೆ ತಾನೇ ತಾನಾಗಿ ಒಲಿದು ಬಂದಿದೆ.
ಖುದ್ದು ಅಟ್ಲಿ ತನ್ನ ಚಿತ್ರದ ಪಾತ್ರಕ್ಕೆ ಸರಿ ಹೊಂದುವಂಥಾ ನಾಯಕಿಗಾಗಿ ಆರಂಭದಿಂದಲೂ ತಲಾಶು ನಡೆಸಿದ್ದರು. ಆದರೆ ಅಲ್ಲು ಅರ್ಜುನ್ ಪಾಲಿಗೆ ಲಕ್ಕಿ ಅನ್ನಿಸಿಕೊಂಡಿರುವ ರಶ್ಮಿಕಾ ನಾಯಕಿಯಾಗಬೇಕೆಂಬ ಇರಾದೆಯಿತ್ತು. ಯಾಕೆಂದರೆ, ಪುಷ್ಪ ಸರಣಿಯಲ್ಲಿ ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಕೆಮಿಸ್ಟ್ರಿಗೆ ಜಯ ಲಭಿಸಿತ್ತು. ಆ ಗೆಲುವಿನ ಪ್ರಭೆ ಹೊಸ ಸಿನಿಮಾಕ್ಕೂ ದಾಟಿಕೊಳ್ಳಲೆಂಬ ಬಯಕೆಯಿಂದಲೇ ಅಲ್ಲು ಅರ್ಜುನ್ ರಶ್ಮಿಕಾ ನಾಯಕಿಯಾಗಲೆಂದು ಬಯಸಿದ್ದರೆಂಬ ವಿಶ್ಲೇಷಣೆಗಳು ಹರಿದಾಡುತ್ತಿದ್ದಾವೆ. ಕಡೆಗೂ ಆ ಇಂಗಿತ ಈಡೇರಿದೆ. ರಶ್ಮಿಕಾಗೆ ಸಿಕ್ಕಿರೋ ಅವಕಾಶ ಕಂಡು ಬಾಲಿವುಡ್ ಸೇರಿದಂತೆ ನಾನಾ ಚಿತ್ರರಂಗಗಳ ನಟಿಯರು ಕರುಬಲಾರಂಭಿಸಿದ್ದಾರೆ. ಈ ಮೂಲಕ ಕಿರಿಕ್ ಹುಡುಗಿನ ಗೆಲುವಿನ ಓಟಕ್ಕೆ ಮತ್ತಷ್ಟು ಓಘ ಸಿಕ್ಕಂತಾಗಿದೆ!