Rakshitha Prem: ಕೊಳಕು ಸರಕುಗಳಿಂದ ಬೇಸತ್ತರಾ ಪ್ರೇಮ್ಸ್ ಮಡದಿ?

Rakshitha Prem: ಕೊಳಕು ಸರಕುಗಳಿಂದ ಬೇಸತ್ತರಾ ಪ್ರೇಮ್ಸ್ ಮಡದಿ?

ವರಸ ನಾಯಕ ಜಗ್ಗೇಶ್ ಸಾರಥ್ಯದಲ್ಲಿ ಕಾಮಿಡಿ ಕಿಲಾಡಿಗಳು ಸೀಜನ್೫ಗೆ ಚಾಲನೆ ಸಿಕ್ಕಿದೆ. ಕಲೇದ ಒಂದಷ್ಟು ಬಸೀಜನ್ನುಗಳ ಮೂಲಕ ಈ ಶೋನ ಘನತೆ ಗೌರವ ಮಣ್ಣುಪಾಲಾಗಿತ್ತು. ಈ ಕಾರಣದಿಂದಲೇ ಈ ಬಾರಿ ಸದರಿ ಕಾರ್ಯಕ್ರಮ ಶುರುವಾಗುತ್ತದೆಂಬ ಸಂಭ್ರಮ ಜಗ್ಗಣ್ಣನ ಸುತ್ತಮುತ್ತ ಮಾತ್ರವೇ ಚಾಲ್ತಿಯಲ್ಲಿದೆ. ಈ ಹೊಸಾ ಶೋನ ಪ್ರೋಮೋಗಳನ್ನು ನೋಡಿದಾಕ್ಷಣವೇ, ಅದು ಮೂಡಿಬರಬಹುದಾದ ಧಾಟಿಯ ಸ್ಪಷ್ಟ ಚಿತ್ರಣ ಸಿಕ್ಕಿದೆ. ಮತ್ತದೇ ಥರ್ಡ್‌ಗ್ರೇಡ್ ಸಂಭಾಷಣೆಗಳನ್ನು ನೆಚ್ಚಿಕೊಂಡೇ ಟಿಆರ್‌ಪಿ ಗುಂಜಿಕೊಳ್ಳುವ ಇರಾದೆಯೂ ಎದ್ದು ಕಾಣುತ್ತಿದೆ. ಇದೇ ಹೊತ್ತಿನಲ್ಲಿ ಜೀ ವಾಹಿನಿಯ ಆಸ್ಥಾನ ಜಡ್ಜ್ ಆಗಿದ್ದ ರಕ್ಷಿತಾ ಪ್ರೇಮ್ ಗಾಯಬ್ ಆಗಿರೋ ಬಗ್ಗೆ ನಾನಾ ಅಂತೆಕಂತೆಗಳು ಹಬ್ಬಿಕೊಂಡಿದ್ದವು. ಈ ಬಗ್ಗೆ ಖುದ್ದು ರಕ್ಷಿತಾ ಸಾಮಾಜಿಕ ಜಾಲತಾಣದ ಮೂಲಕ ಸ್ಪ;ಷ್ಟೀಕರಣ ನೀಡಿದ್ದಾರಾದರೂ, ಅದರಾಚೆ ಇರಬಹುದಾದ ಸತ್ಯಗಳ ಸುತ್ತ ಪ್ರೇಕ್ಷಕರ ಚರ್ಚೆ ಹರಳುಗಟ್ಟಿಕೊಂಡಿದೆ.


ಆರಂಭದ ದಿನಗಳಲ್ಲಿ ಈ ಶೋನ ಪ್ರಧಾನ ಆಕರ್ಷಣೆಯಾಗಿದ್ದದ್ದು ಜಡ್ಜುಗಳಾದ ಜಗ್ಗೇಶ್, ಯೋಗರಾಜ್ ಭಟ್ ಮತ್ತು ರಕ್ಷಿತಾ. ಮೊದಲೆರಡು ಶೋಗಳು ನಿಜಕ್ಕೂ ಸಹನೀಯವಾಗಿದ್ದವು. ಪ್ರೇಕ್ಷಕರು ಕಾದು ಕೂತು ನೋಡುವಂತೆ ಮಾಡುವಲ್ಲಿ ಯಶ ಕಂಡಿದ್ದವು. ನಂತರದ ದಿನಗಳಲ್ಲಿ ಜೀ ವಾಹಿನಿಯ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿಯೂ ರಕ್ಷಿತಾ ತೀರ್ಪುಗಾರ್ತಿಯಾಗಿ ಮಿಂಚಿದ್ದರು. ಆದರೆ, ಈ ಸೀಜನ್ನಿನ ಕಾಮಿಡಿ ಕಿಲಾಡಿಗಳು ಜಡ್ಜ್‌ಗಳ ಸಾಲಿನಲ್ಲಿ ರಕ್ಷಿತಾ ಜಾಗಕ್ಕೆ ತಾರಾ ಅನುರಾಧ ಬಂದಿದ್ದಾರೆ. ಈ ಪಲ್ಲಟದ ಸುತ್ತ ಒಂದಷ್ಟು ಅಂತೆಕಂತೆಗಳು ಹರಿದಾಡುತ್ತಲೇ ರಕ್ಷಿತಾ ಸ್ಪಷ್ಟೀಕರಣ ನೀಡಿದ್ದಾರೆ.


ಹೊಸಾ ಹರಿವಿಗೆ ಒಡ್ಡಿಕೊಳ್ಳಬೇಕಾದದ್ದು ಕಾಲದ ನಿಯಮವಾದ್ದರಿಂದ ತಾನೂ ಕೂಡಾ ಅಂಥಾ ಹೊಸತನಕ್ಕೆ ಒಡ್ಡಿಕೊಂಡಿರೋದಾಗಿ ಹೇಳಿಕೊಂಡಿರುವ ರಕ್ಷಿತಾ, ಕಾಮಿಡಿ ಕಿಲಾಡಿಗಳು ಮಾತ್ರವಲ್ಲದೇ, ಜೀ ವಾಹಿನಿಯ ಡ್ಯಾನ್ಸ್ ಶೋಗಳಿಂದಲೂ ಹಿಂದೆ ಸರಿದಿರೋದಾಗಿ ಸ್ಪಷ್ಟಪಡಿಸಿದ್ದಾರೆ. ಮೇಲು ನೋಟಕ್ಕೆ ಇದು ಹೌದೆನಿಸಿದರೂ, ಕಿರುತೆರೆ ಜಗತ್ತಿನಲ್ಲಿ ಮತ್ತೊಂದು ದಿಕ್ಕಿನ ಸುದ್ದಿಯೂ ಹರಿದಾಡುತ್ತಿದೆ. ಕೆಲ ಮುನಿಸುಜ, ವೈಮನಸ್ಯಗಳಿಂದಲೇ ರಕ್ಷಿತಾ ಈ ಶೋಗೆ ಗೈರಾಗಿದ್ದಾರೆಂದೂ ಹೇಳಲಾಗುತ್ತಿದೆ. ಈ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರನೊಂದಿಗೆ ಈ ಹಿಂದೆ ಯೋಗರಾಜ ಭಟ್ಟರೂ ಕಿತ್ತಾಡಿಕೊಂಡಿದ್ದರು. ಬೇರೆ ವಾಹಿನಿಗಳಲ್ಲಿಯೂ ಕಾಣಿಸಿಕೊಂಡಿದ್ದರು. ಆದರೆ ಭಟ್ಟರುಜ ಮುನಿಸು ಮರೆತು ಮತ್ತೆ ಬಂದು ಕುಕ್ಕರಿಕಸಿದ್ದಾರೆ. ರಕ್ಷಿತಾ ದೂರಾಗಿದ್ದಾರೆ. ಈಕೆ ಹಿಂದೆ ಸರಿದಿರೋದರ ಹಿಂದೆ ಕೊಳಕು ಡೈಲಾಗುಗಳನ್ನೇ ಕಾಮಿಡಿ ಅಂತ ತುರುಕುವ ಟಿಕಾರ್‌ಪಿ ಗಿಮಿಕ್ಕಿನ ಕಿಸುರಿದ್ದರೂ ಅಚ್ಚರಿಯೇನಿಲ್ಲ!

About The Author