ಭಾರತೀಯ ಚಿತ್ರರಂಗದಲ್ಲಿ ಲಾಗಾಯ್ತಿನಿಂದಲೂ ಪುಷಾಧಿಪತ್ಯದ್ದೇ ಪಾರುಪತ್ಯವಿದೆ. ಇದೆಲ್ಲದರ ನಡುವೆ, ಕರ್ಮಠ ನಂಬಿಕೆಗಳಿದ್ದ ದಿನಗಳಲ್ಲಿಯೇ ಒಂದಷ್ಟು ಮಹಿಳೆಯರು ಚಿತ್ರರಂಗದ ಭಾಗವಾಗಿ ಸಂಚಲನ ಸೃಷ್ಟಿಸಿದ್ದಿದೆ. ದುರಂತವೆಂದರೆ, ಜಗತ್ತು ಸಂಪೂರ್ಣ ಬದಲಾವಣೆಗೆ ಒಗ್ಗಿಕೊಂಡಿರುವ ಈ ದಿನಮಾನದಲ್ಲಿಯೂ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಆ ಸಾಲಿನಲ್ಲಿ ಬಹುಮುಖ್ಯವಾಗಿ ಗುರುತಿಸಿಕೊಳ್ಳುವವರು ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕಿ ಸುಧಾ ಕೊಂಗಾರ. ಈಗಾಗಲೇ ಹಲವಾರು ಭಿನ್ನ ಬಗೆಯ ಹಿಟ್ ಸಿನಿಮಾಗಳ ಮೂಲಕ ಗಮನ ಸೆಳೆದಿರೋ ಸುಧಾ ಪಾಲಿಗೆ ರಜನೀಕಾಂತ್ ಜೊತೆಗೊಂದು ಸಿನಿಮಾ ಮಾಡೋ ಕನಸಿತ್ತು. ಈ ಬಗ್ಗೆ ಈ ಹಿಂದೆಯೂ ಅನೇಕ ಬಾರಿ ಸುಧಾ ಮಾತಾಡಿದ್ದಿದೆ. ಈ ವರ್ಷದ ಆರಂಭದಲ್ಲಿಯೇ ಅಂಥಾ ಕನಸು ನನಸಾಗುವ ಕ್ಷಣಗಳು ಸನ್ನಿಹಿತವಾದಂತಿದೆ.
ಸುಧಾ ಕೊಂಗಾರಾ ಕಳೆದ ವರ್ಷವಿಡೀ ಪರಾಶಕ್ತಿ ಎಂಬ ಸಿನಿಮಾ ರೂಪಿಸುವಲ್ಲಿ ನಿರತರಾಗಿದ್ದರು. ಶಿವಕಾರ್ತಿಕೇಯನ್ ಮತ್ತು ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಆ ಸಿನಿಮಾ ಇದೇ ತಿಂಗಳ ಹತ್ತನೇ ತಾರೀಕಿನಂದು ಬಿಡುಗಡೆಗೊಳ್ಳಲಿದೆ. ಈ ಸಿನಿಮಾ ಸಂಬಂಧಿತ ಕಾರ್ಯಕ್ರಮದಲ್ಲಿಯೇ ಸುಧಾ ಕೊಂಗಾರಾ ತಮ್ಮ ಕನಸಿನ ಸಿನಿಮಾದ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ಇತ್ತೀಚಿನ ದಿನಗಳಲ್ಲಿ ರಜನೀಕಾಂತ್ ಕಾಣಿಸಿಕೊಳ್ಳುತ್ತಿರೋ ಕಥೆಗಳಿಗಿಂತಲೂ ಭಿನ್ನವಾದ ಕಥೆಯೊಂದನ್ನು ಅವರು ಈಗಾಗಲೇ ಸಿದ್ಧಪಡಿಸಿಕೊಂಡಿದ್ದಾರೆ. ಜೈಲರ್ ವರೆಗೂ ಕೂಡಾ ಅವರ ವಯಸ್ಸಿಗೆ ಅನುಗುಣವಾದ ಪಾತ್ರಗಳಲ್ಲಿಯೇ ರಜನಿ ಬ್ಯುಸಿಯಾಗಿದ್ದಾರೆ.\
ಆದರೆ, ಸುಧಾ ಕೊಂಗಾರ ರೊಮ್ಯಾಂಟಿಕ್ ಥ್ರಿಲ್ಲರ್ ಕಥನದ ಮೂಲಕ ರಜನಿಯನ್ನು ಮತ್ತೊಂದು ಮಜಲಿನಲ್ಲಿ ಪ್ರೇಕ್ಷಕರ ಮುಂದೆ ತರಲು ಯೋಜನೆ ಹಾಕಿಕೊಂಡಿದ್ದಾರಂತೆ, ಈ ಹಂತದಲ್ಲಿ ಇಂಥಾ ಕಥೆಗೆ ರಜನಿ ಒಪ್ಪಿಗೆ ಸೂಚಿಸುತ್ತಾರಾ ಅಂತೊಂದು ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಯಾಕೆಂದರೆ, ಓರ್ವ ನಟನಾಗಿ ಆಯಾ ಕಾಲಘಟ್ಟಕ್ಕೆ ಒಗ್ಗಿಕೊಳ್ಳುತ್ತಾ ಸಾಗಿ ಬಂದವರು ರಜನಿ. ವಯಸ್ಸಾದ ನಂತರವೂ ಎಳೇ ಹುಡುಗಿಯರ ಸೊಂಟ ತಬ್ಬುತ್ತಾ ಮರ ಸುತ್ತಿದರೆ ಉಳಿಗಾಲವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡವರ ಸಾಲಿನಲ್ಲಿ ರಜನಿ ಕೂಡಾ ಸೇರಿಕೊಳ್ಳುತ್ತಾರೆ. ಹಾಗಿರುವಾಗ, ಈ ಕಾಲಘಟ್ಟದಲ್ಲಿ ಮತ್ತೆ ರೊಮ್ಯಾಂಟಿಕ್ ಮೂಡಿಗೆ ರಜನಿ ಜಾರಬಹುದಾ ಅನ್ನೋದು ಅನುಮಾನ. ಸುಧಾಗೆ ಮಾತ್ರ ತಮ್ಮ ಕಥೆ ಕೇಳಿದರೆ ರಜನಿ ಅದನ್ನು ಖಂಡಿತಾ ಒಪ್ಪಿಕೊಳ್ಳುತ್ತಾರೆಂಬ ವಿಶ್ವಾಸವಿದ್ದಂತಿದೆ. ಸುಧಾರ ಕನಸಿನ ಭವಿಷ್ಯ ಸದ್ಯದಲ್ಲಿಯೇ ನಿರ್ಧಾರವಾಗುವ ಲಕ್ಷಣಗಳಿದ್ದಾವೆ!
keywords: sudha, kongara, rajinikanth, thalaivar, superstar, jailer2, rajini, next, movie

