ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು, ನಟಿಯರಾಗಿ ನೆಲೆಗೊಂಡವರ ದಂಡು ದೊಡ್ಡದಿದೆ. ಅದರಲ್ಲಿ ಕೆಲ ಮಂದಿ ಮಿಂಚಿ ಮರೆಯಾದರೆ, ಮತ್ತೆ ಕೆಲವರು ಪತ್ತೆಯೇ ಇಲ್ಲದಂತೆ ಗಾಯಬ್ ಆಗಿ ಬಿಟ್ಟಿದ್ದಾರೆ. ಅದೆಲ್ಲದರಾಚೆ ಮತ್ತೆ ಕೆಲ ನಟಿಯರು ಕನ್ನಡ ಚಿತ್ರರಂಗದಲ್ಲಿಯೇ ಕಾಲೂರಿ ನಿಂತು, ಇಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಕನ್ನಡತಿಯರೇ ಆಗಿ ಹೋಗಿದ್ದಾರೆ. ಅಂಥಾ ವಿರಳ ನಟಿಯರ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುವಾಕೆ (ragini dwivedi) ರಾಗಿಣಿ ದ್ವಿವೇದಿ. ಈಕೆಯನ್ನು ಲಂಬೂ ರಾಗಿಣಿ (raagini) ಅನ್ನುವವರೂ ಇದ್ದಾರೆ. ಇಂಥಾ ಹುಡುಗಿಗೆ ಕೊರೋನಾ ಕಾಲದಲ್ಲಿ ನಶೆಯ ಕಪ್ಪುಚುಕ್ಕೆ ಅಂಟಿಕೊಂಡಿತ್ತಲ್ಲಾ? ಆ ನಂತರ ತುಪ್ಪದ ಹುಡುಗಿಯ ಚಾರಿತ್ರ್ಯಕ್ಕೆ ನಶೆಯ ಕಪ್ಪುಚುಕ್ಕೆ ಮೆತ್ತಿಕೊಂಡು ಬಿಟ್ಟಿತ್ತು. ಅದಾದ ನಂತರ ಜೈಲುವಾಸ, ಅವಮಾನಗಳನ್ನೆಲ್ಲ ಅನುಭವಿಸಿದ್ದ ರಾಗಿಣಿಯ ಪಥವೀಗ ಬದಲಾಗಿದೆ. ಯಾಕೆಂದರೆ, ಅಮೋಘ ಗೆಲುವಿನ ಮೂಲಕವೇ ಎಲ್ಲದಕ್ಕೂ ಉತ್ತರಿಸುವ ದರ್ದೊಂದು ಸದ್ಯ ಆಕೆಯ ಮುಂದಿದೆ!

೨೦೦೯ರಲ್ಲಿ ವೀರಮದಕರಿ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸಿದ್ದಾಕೆ ರಾಗಿಣಿ ದ್ವಿವೇದಿ. ಆ ಕಾಲಕ್ಕೆ ಈ ಹುಡುಗಿಯನ್ನು ನೋಡಿದ ಕನ್ನಡದ ಪ್ರೇಕ್ಷಕರು ಥ್ರಿಲ್ ಆಗಿದ್ದದ್ದಂತೂ ಸತ್ಯ. ಆ ಬಳಿಕ ಪಡ್ಡೆ ಹುಡುಗರು ಅದ್ಯಾವ ಪರಿಯಾಗಿ ಫಿದಾ ಆಗಿದ್ದರೆಂದರೆ, ಊರತುಂಬೆಲ್ಲ ರಾಗಿಣಿಯ ಅಭಿಮಾನಿ ಸಂಘಗಳು ಹುಟ್ಟಿಕೊಂಡಿದ್ದವು. ಯಾವ ಕನ್ನಡದಲ್ಲಿ ನಾಯಕಿಯರು ಹೀರೋಗಳಿಗೆ ಸಮನಾಗಿ ಮೆರೆಯುವ ವಾತಾವರಣ ಸೃಷ್ಟಿಯಾಗೋದೇ ಕಡಿಮೆ. ಅಂಥಾದ್ದರಲ್ಲಿ ರಾಗಿಣಿಗೆ ಯಾವ ಹೀರೋಗೂ ಕಡಿಮೆ ಇಲ್ಲದಂಥಾ ಕ್ರೇಜ್ ಸೃಷ್ಟಿಯಾಗಿತ್ತು. ಇಂಥಾ ಹಠಾರತ್ ಯಶದಿಂದ ರಾಗಿಣಿ ಮೈಮರೆತಳಾ? ಖಾಸಗೀ ಬದುಕನ್ನು ಸ್ವೇಚ್ಛಾಚಾರದ ಕೈಗೊಪ್ಪಿಸಿದ್ದಳಾ? ಗೊತ್ತಿಲ್ಲ. ಆದರೆ, ಆಕೆಯ ಬಗ್ಗೆ ಒಂದಷ್ಟು ರೂಮರುಗಳು ಹಬ್ಬಿಕೊಂಡಿದ್ದವು. ಅವುಗಳಿಗೆಲ್ಲ ಕೊಬ್ಬರಿಯ ಫ್ಲೇವರ್ ಇದ್ದಂದ್ದಂತೂ ಸತ್ಯ!

ಹೀಗೆ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪುರಸ್ಕಾರ, ತಿರಸ್ಕಾರಗಳನ್ನೆಲ್ಲ ಕಂಡವಳು ರಾಗಿಣಿ ದ್ವಿವೇದಿ. ಇಕದೀಗ ಆಕೆ ಓರ್ವ ನಟಿಯಾಗಿ ಮೈ ಕೊಡವಿಕೊಂಡು ಮೇಲೆದ್ದಿದ್ದಾಳೆ. ಶೀಲ ಅಂತೊಂದು ಭಿನ್ನ ಕಥಾನಕದ ಕನ್ನಡದ ಚಿತ್ರದಲ್ಲಿ ಮನದುಂಬಿ ನಟಿಸಿರುವ ಮುನ್ಸೂಚನೆಗಳು ಕಾಣಿಸುತ್ತಿವೆ. ಒಟ್ಟಾರೆಯಾಗಿ ಮತ್ತೆ ತನ್ನ ವೃತ್ತಿಬದುಕನ್ನು ಉತ್ತುಂಗಕ್ಕೇರಿಸಬೇಕೆಂಬ ಉತ್ಕಟ ಆಕಾಂಕ್ಷೆ ಆಕೆಯ ಕಣ್ಣುಗಳಲ್ಲಿ ಫಳಗುಟ್ಟುತ್ತಿದೆ. ಇದೇ ಭರದಲ್ಲಿ ಆಕೆ ಕನ್ನಡ ಮಾತ್ರವಲ್ಲದೇ, ಬೇರೆ ಭಾಷೆಗಳಲ್ಲಿಯೂ ಹವಾ ಎಬ್ಬಿಸುವ ಸಂಕಲ್ಪದೊಂದಿಗೆ ಅಖಾಡಕ್ಕಿಳಿದಿದ್ದಾಳೆ. ಈ ಸಂಕಲ್ಪದ ಭಾಗವಾಗಿಯೇ ನಶೆ, ಧಾಡಸೀತನ, ಅನ್ಯಮನಸ್ಕ ಸ್ಥಿತಿಯನ್ನೆಲ್ಲ ಮೀರಿಕೊಂಡು ಮಲೆಯಾಳಂ ಮಂತ್ರ ಜಪಿಸಲಾರಂಭಿಸಿದ್ದಾಳೆ!

ರಾಗಿಣಿ ನಟಿಸಿದ್ದ ಶೀಲ ಚಿತ್ರ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ಅದರ ಜೊತೆಯಲ್ಲಿಯೇ ರಾಗಿಣಿ ಮಲೆಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಸುದ್ದಿ ಹೊರಬಂದಿತ್ತು. ಆಕೆ ಬಿಗ್ ಬಜೆಟ್ಟಿನ ಮಲೆಯಾಳಂ ಚಿತ್ರವೊಂದರ ಭಾಗವಗಿದ್ದಾಳೆ. ಅದರ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಮತ್ತೊಂದು ಪ್ಯಾನಿಂಡಿಯಾ ಚಿತ್ರದ ಭಾಗವಾಗುವ ಅವಕಾಶವೂ ಕೂಡಿ ಬಂದಿದೆ. ನಂದಕಿಶೋರ್ ನಿರ್ದೇಶನದಲ್ಲಿ ಮೂಡಿ ಬರಲಿರೋ ವೃಷಭ ಚಿತ್ರದಲ್ಲಿ ರಾಗಿಣಿ ಮಲೆಯಾಳದ ಮೋಹನ್ ಲಾಲ್‌ಗೆ ನಾಯಕಿಯಾಗಿದ್ದಾಳೆ. ಮಲೆಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ಈ ಚಿತ್ರ ರೂಪುಗೊಳ್ಳುತ್ತಿದೆ. ಸದ್ಯಕ್ಕೆ ಮೈಸೂರಿನಲ್ಲಿ ಇದರ ಚಿತ್ರೀಕರಣ ನಡೆಯುತ್ತಿದೆ.

ಇದೆಲ್ಲವೂ ರಾಗಿಣಿಯ ನಸೀಬು ಮತ್ತೊಮ್ಮೆ ಕುದುರಿಕೊಳ್ಳುವ ಲಕ್ಷಣಗಳಂತೆಯೇ ಕಾಣಿಸುತ್ತಿದೆ. ಮಧ್ಯಪ್ರದೇಶದಲ್ಲಿ ಹುಟ್ಟಿ ಬೆಳೆದು ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾಕೆ ರಾಗಿಣಿ. ಅಭಿಶೇಕ್ ಅಂಬರೀಶ್ ಮಾವ ಪ್ರಸಾದ್ ಬಿದ್ದಪ್ಪನ ಗರಡಿಯಲ್ಲಿ ಪಳಗಿಕೊಂಡಿದ್ದ ರಾಗಿಣಿ, ಆ ನಂತರದಲ್ಲಿ ನಟಿಯಾಗೋ ಕನಸು ಕಂಡಿದ್ದಳು. ಅದಕ್ಕೆ ವರವೆಂಬಂತೆ ಸಿಕ್ಕಿದ್ದದ್ದು ವೀರ ಮದಕರಿ ಚಿತ್ರದ ನಾಯಕಿಯಾಗೋ ಅವಕಾಶ. ಅದು ಆಕೆಯ ಪಾಲಿನ ಮೊದಲ ಚಿತ್ರವೂ ಹೌದು. ಹಾಗೆ ಬಂದ ರಾಗಿಣಿ ಇಲ್ಲೇ ನೆಲೆಯೂರಿದ್ದಾಳೆ. ಕನ್ನಡದ ಹುಡುಗಿಯೇ ಆಗಿ ಹೋಗಿದ್ದಾಳೆ. ಇದೀಗ ಭರ್ಜರಿಯಾಗಿ ರಾಗಿಣಿಯ ವೃತ್ತಿಬದುಕಿನ ಎರಡನೇ ಅಧ್ಯಾಯ ಶುರುವಾಗಿದೆ. ಕಳಂಕವೆಲ್ಲವೂ ಬಳಿದುಕೊಂಡು ಹೋಗುವಂತೆ ಗೆಲುವೆಂಬುದು ಈ ಹುಡುಗಿಯ ಕೈ ಹಿಡಿಯಬಹುದೇ?

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!