ಪವನ್ ಕಲ್ಯಾಣ್ ನಟಿಸಿರುವ ಹರಿಹರ ವೀರಮಲ್ಲು ಚಿತ್ರ ಬಿಡುಗಡೆಗೊಂಡಿದೆಯಾದರೂ ನಿರೀಕ್ಷಿತ ಗೆಲುವು ಕಂಡಿದ್ದ. ತೆರೆಗಂಡು ತಿಂಗಳು ಕಳೆಯೋ ಹೊತ್ತಿಗೆಲ್ಲ ಆ ಸಿನಿಮಾ ಓಟಿಟಿಯಲ್ಲಿ ದರ್ಶನ ಕೊಟ್ಟಿದೆ. ಇಂಥಾ ಹಿನ್ನಡೆಯಾಚೆಗೂ ಇದೀಗ ಸಮಸ್ತ ಪವರ್ ಸ್ಟಾರ್ ಅಭಿಮಾನಿಗಳ ಚಿತ್ತ ಒಜಿಯತ್ತ ಹೊರಳಿಕೊಂಡಿದೆ. ಪವನ್ ಕಲ್ಯಾಣ್ ಈಗ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಒಂದುಯ ಹಂತದಲ್ಲಿ ಓಜಿ ಪವನ್ ವೃತ್ತಿ ಬದುಕಿನ ಕಡೇಯ ಸಿನಿಮಾ ಎಂದೂ ಗುಲ್ಲೆದ್ದಿತ್ತು. ಅದು ಸುಳ್ಳೆಂಬುದು ಜಾಹೀರಾದರೂ ಸಹ ಓಜಿಗೆ ಅಂಟಿಕೊಂಡಿದ್ದ ಅಭಿಮಾನಿಗಳ ಸೆಂಟಿಮೆಂಟು ಮತ್ತಷ್ಟು ತೀವ್ರಗೊಂಡಿದೆ. ಇದೇ ಹೊತ್ತಿನಲ್ಲಿ ಈ ಸಿನಿಮಾ ಭಾಗವಾಗಿರುವ ಕಲಾವಿದರ ಫಸ್ಟ್ ಲುಕ್ ಅನಾವರಣ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ.
ಪವನ್ ಕಲ್ಯಾಣ್ ನಾಯಕನಾಗಿ ನಟಿಸಿರೋ ಓಜಿ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಒಂದಷ್ಟು ಸದ್ದು ಮಾಡುತ್ತಿರುವ ಪ್ರಿಯಾಂಕಾ ಮೋಹನ್ ಕೂಡಾ ಪ್ರಧಾನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇದೀಗ ಆಕೆಯ ಫಸ್ಟ್ ಲುಕ್ ಪೋಸ್ಟರ್ ಒಂದು ಬಿಡುಗಡೆಗೊಂಡಿದೆ. ಅದರ ಬೆನ್ನಲ್ಲಿಯೇ ಪ್ರಿಯಾಂಕಾ ನಿರ್ವಹಿಸಿರುವ ಪಾತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಅದರನ್ವಯ ಹೇಳೋದಾದರೆ, ಪ್ರಿಯಾಂಕಾ ಮೋಹನ್‌ರ ವೃತ್ತಿ ಬದುಕು ಓಜಿ ಮೂಲಕ ಮತ್ತೊಂದು ಘಟ್ಟದತ್ತ ಹೊರಳಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿರುವಂತೆ ಭಾಸವಾಗುತ್ತದೆ.
ಪ್ರಿಯಾಂಕಾ ಮೋಹನ್ ಈ ಸಿನಿಮಾದಲ್ಲಿ ನಟಿಸಿತ್ತಿದ್ದಾರೆಂಬ ಸುದ್ದಿ ಆರಂಭದಲ್ಲಿಯೇ ಕೇಳಿ ಬಂದಿತ್ತು. ಆದರೆ ಅದರ ಸುತ್ತ ಹೇಳಿಕೊಳ್ಳುವಂಥಾ ಚರ್ಚೆಗಳೇನೂ ಆಗಿರಲಿಲ್ಲ. ಇಲ್ಲಿ ಪ್ರಿಯಾಂಕಾಗೆ ಅತ್ಯಂತ ಮಹತ್ವದ ಪಾತ್ರ ಸಿಕ್ಕಿದೆಯಂತೆ. ಆ ಪಾತ್ರದಿಂದಾಗಿ ರೋಮಾಂಚಕ ಟ್ವಿಸ್ಟುಗಳು ಸೃಷ್ಟಿಯಾಗುತ್ತವೆಂದೂ ಚಿತ್ರತಂಡ ಹೇಳಿಕೊಂಡಿದೆ. ವಿಶೇಷವೆಂದರೆ, ಹೀಗೆ ಓಜಿ ಮೂಲಕ ಸದ್ದು ಮಾಡುತ್ತಿರುವ ಪ್ರಿಯಾಂಕಾ ಮೋಹನ್ ಕನ್ನಡ ಸಿನಿಮಾ ಮೂಲಕವೇ ಪೂರ್ಣ ಪ್ರಮಾಣದ ನಾಯಕಿಯಾಗಿದ್ದವರು. ಒಂದು ಕಥೆ ಹೇಳ್ಲಾ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಆಕೆ ಗಮನ ಸೆಳೆದಿದ್ದರು. ಆ ನಂತರ ತಮಿಳು ತೆಲುಗಿನಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಪ್ರಿಯಾಂಕಾಗೆ ಓಜಿ ಮೂಲಕ ದೊಡ್ಡ ಬ್ರೇಕ್ ಸಿಗುವ ನಿರೀಕ್ಷೆಗಳೆದ್ದಿವೆ.