ಕನ್ನಡದ ಬುರ್ನಾಸು ಬಿಗ್‌ಬಾಸ್ ಶೋನಿಂದ ಹುಟ್ಟಿಕೊಂಡ ಮಳ್ಳು ಸೆಲೆಬ್ರಿಟಿಗಳ ಸಾಲಿನಲ್ಲಿ ಅಗ್ರಗಣ್ಯ ಆಸಾಮಿ ಪ್ರಥಮ್. ತನ್ನ ಹೆಸರಿಗೆ ತಾನೇ ಒಳ್ಳೆ ಹುಡುಗನೆಂಬ ಬಿರುದು ಹೆಟ್ಟಿಕೊಂಡಿರುವ ಈತ ಇದುವರೆಗೂ ಮಾಡಿಕೊಂಡ ಎಡವಟ್ಟುಗಳಿಗೇನೂ ಕೊರತೆಯಿಲ್ಲ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಖಬರೂ ಇಲ್ಲದ ಪ್ರಥಮ್ ಇದೀಗ ಮತ್ತೊಂದು ಮಹಾ ವಿವಾದದ ಕೇಂದ್ರಬಿಂದುವಾಗಿದ್ದಾನೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ತಗುಲಿಕೊಂಡಾಗಿನಿಂದಲೂ ಈತ ದಾಸನ ಅಭಿಮಾನಿ ಪಡೆಯ ಕೆಂಗಣ್ಣಿಗೆ ಗುರಿಯಾಗಿದ್ದ. ದರ್ಶನ್ ಮಾಡಿದ್ದೆಲ್ಲವೂ ಸರಿ ಎಂಬ ಅತಿರೇಕದ ಕೆಲ ಅಭಿಮಾನಿಗಳು ಆ ಕಾಲದಿಂದಲೂ ಪ್ರಥಮನ ವಿರುದ್ಧ ಕೆಂಡ ಕಾರುತ್ತಾ ಬಂದಿದ್ದರು. ಇತ್ತೀಚಿನ ದಿನಗಳಲ್ಲಿ ಪ್ರಥಮನೆಡೆಗಿನ ದರ್ಶನ್ ಅಭಿಮಾನಿಗಳ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿತ್ತು. ಇದೀಗ ಅವಿವೇಕಿ ಪ್ರಥಮ್ ಅದರ ಮೇಲೆ ಅಂಡು ಊರಿ ಕುಂಯ್ಯೋ ಅನ್ನಲಾರಂಭಿಸಿದ್ದಾನೆ!
ಅಷ್ಟಕ್ಕೂ ಈ ಪ್ರಥಮ್ ಅದೆಂಥಾ ಗಂಭೀರ ವಿಚಾರದ ಬಗ್‌ಗೆ ಮಾತಾಡಿದರೂ ಅದನ್ನು ಯಾರೂ ಗಣನೆಗೆ ತೆಗೆದುಕೊಳ್ಳಲಾರದಂಥಾ ವಾತಾವರಣವಿದೆ. ಕನಿಷ್ಟ ಓರ್ವ ಮನುಷ್ಯ ಕಾಪಿಟ್ಟುಕೊಳ್ಳಬೇಕಾದ ವ್ಯಕ್ತಿಗತ ಘನತೆ ಗೌರವಗಳನ್ನು ಈತ ಅದ್ಯಾವತ್ತೋ ಮಣ್ಣುಪಾಲು ಮಾಡಿಕೊಂಡಿದ್ದಾನೆ. ಇಂಥವನು ಅದ್ಯಾವುದೋ ಸಿನಿಮಾ ಅಂತೆಲ್ಲ ಹಂತ ಹಂತಗವಾಗಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಾ ಬಂದಿದ್ದಾನೆ. ಹೇಗಾದರೂ ಸರಿ; ಸದಾ ಚಾಲ್ತಿಯಲ್ಲಿರಬೇಕೆಂಬ ಸೋಶಿಯಲ್ ಮೀಡಿಯಾ ಜಮಾನದ ಫಾರ್ಮುಲಾವನ್ನೀತ ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬಂದಿದ್ದಾನೆ. ಇಂಥಾ ಪ್ರಥಮನನ್ನು ಅದ್ಯಾವುದೋ ರೌಡಿ ಪಡೆ ಎತ್ತಾಕಿಕೊಂಡು ಹೋಗಿ ಅವಾಜು ಬಿಟ್ಟ ಹೊಸಾ ಕಥೆಯೊಂದನ್ನು ಲಾಯರ್ ಜಗದೀಶ್ ಜಾಹೀರು ಮಾಡುತ್ತಲೇ ಜನ ಸಹಜವಾಗಿಯೇ ಅವಾಕ್ಕಾಗಿ ಬಿಟ್ಟಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ತಗುಲಿಕೊಂಡಾಗ ಆತನ ಅಭಿಮಾನಿಗಳ ಆವುಟ ಮೇರೆ ಮೀರಿತ್ತಲ್ಲಾ? ಆ ಘಳಿಗೆಯಲ್ಲಿ ಪ್ರಥಮ್ ಆಡಿದ್ದ ಕೆಲ ಮಾತುಗಳು ಸರಿ ಅನ್ನಿಸಿದ್ದಿದೆ. ಆ ಹೊತ್ತಿನಲ್ಲಿಯೇ ಪುಂಡಾಭಿಮಾನಿಗಳ ಕಡೆಯಿಂದ ಪ್ರಥಮ್‌ಗೆ ಒಂದಷ್ಟು ಪ್ರತಿರೋಧಗಳು ವ್ಯಕ್ತವಾಗಿದ್ದವು. ಇದಕ್ಕೆ ಸರಿಯಾಗಿ ಲಾಯರ್ ಜಗದೀಶ್ ಜಾಹೀರು ಮಾಡಿದ ಆಡಿಯೋದಲ್ಲಿ ದರ್ಶನ್ ಬಗ್ಗೆ ಮಾತಾಡಿದ್ದರ ವಿರುದ್ಧವೇ ಪ್ರಥಮ್ ಎದೆಗೆ ರೌಡಿ ಪಟಾಲಮ್ಮು ಡ್ರ್ಯಾಗರ್ ಇಟ್ಟಿತ್ತೆಂಬ ವಿಚಾರ ಬಯಲಾಗಿತ್ತು. ಪುಣ್ಯಾತ್ಮ ಪ್ರಥಮ ಅಂಥಾ ಅರ್ಥ ಬರುವಂತೆ ಒಟ್ಟಾರೆ ಘಟನೆಯನ್ನು ಪಳಗಿಸಿಕೊಂಡಿದ್ದ. ದರ್ಶನ್ ಪಾಳೆಯ ಈ ಮಟ್ಟಕ್ಕೂ ಇಳಿದು ಬಿಟ್ಟಿತಾ? ಓರ್ವ ನಟನನ್ನು ವಿಮರ್ಶೆಗೊಳಪಡಿಸಿದರೆ ರೌಡಿಗಳ ಮೂಲಕ ಧಮಕಿ ಹಾಕಿಸುವ ವಾತಾವರಣ ಸೃಷ್ಟಿಯಾಗಿ ಬಿಟ್ಟಿತಾ? ಇಂಥಾದ್ದೊಂದು ಕಾಳಜಿಯಿಂದಲೇ ಲಾಯರ್ ಜಗದೀಶ್ ಆಡಿಯೋ ಬಿಡುಗಡೆ ಮಾಡಿದೇಟಿಗೆ, ಒಂದಷ್ಟು ಸಂಘಟನೆಗಳ ಮಂದಿಯೂ ಬೆಂಬಲಕ್ಕೆ ನಿಂತಿದ್ದರು.
ಒಂದು ಹಂತದಲ್ಲಿ ಖುದ್ದು ಜಗದೀಶ್ ಈ ಬಗ್ಗೆ ಪೊಲೀಸರಿಗೆ ದೂರು ಕೊಡುವ ಸಲಹೆ ನೀಡಿದ್ದರೂ ಒಳ್ಳೆ ಹುಡುಗ ಅದೇನೇನೋ ಕಥೆ ಹೊಡೆದಿದ್ದ. ಕಡೆಗೂ ಪ್ರಥಮ್ ಈ ಘಟನೆಯ ಸಂಬಂಧವಾಗಿ ದೂರು ದಾಖಲಿಸಿದ್ದಾನೆ. ಹಾಗೆ ದೂರು ಕೊಟ್ಟಾದ ನಂತರ ಈ ಬಗೆಗಿನ ತನಿಖೆಗೆ ಅನುವು ಮಾಡಿಕೊಟ್ಟು ಬಾಯಿ ಮುಚ್ಚಿಕೊಂಡಿದ್ದರೆ ಪ್ರಥಮನ ಮಾನ ಅಷ್ಟರ ಮಟ್ಟಿಗಾದರೂ ಉಳಿಯುತ್ತಿತ್ತು. ದೂರಿನ ನಂತರದಲ್ಲಿ ಈ ಫಟಿಂಗ ಆಸಾಮಿ ನಡೆಸುತ್ತಿರುವ ಹರತಾಳಗಳು, ಆತನ ಓತಾಪ್ರೋತ ಮಾತುಗಳನ್ನು ಕಂಡು ಆಸುಪಾಸಿನವರೇ ಹೌಹಾರಿದ್ದಾರೆ. ಇತ್ತ ಲಾಯರ್ ಜಗದೀಶ್ ಕೂಡಾ ಪ್ರಥಮನಿಗೆ ಮಹಾಮಂಗಳಾರತಿ ಮಾಡಿ ತನ್ನ ಬೆಂಬಲವಿಲ್ಲ ಅಂದರೆ, ಕೆಲ ಸಂಘಟನೆಗಳವರೂ ಕೂಡಾ ಒಳ್ಳೆ ಹುಡುಗನಿಗೆ ತಮ್ಮದೇ ರೀತಿಯಲ್ಲಿ ಕ್ಯಾಕರಿಸಿ ಉಗಿದದ್ದೂ ಆಗಿದೆ. ಇದೀಗ ತಾನೇ ಸೃಷ್ಟಿಸಿದ ಚಕ್ರವ್ಯೂಹದಲ್ಲಿ ಏಕಾಂಗಿಯಾಗುಳಿದಿರೋ ಪ್ರಥಮ ಅಕ್ಷರಶಃ ಕಂಗಾಲಾಗಿ ಬಿಟ್ಟಿದ್ದಾನೆ!
ನಿಜ, ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನ ಭೂಮಿಕೆಯಲ್ಲಿ ನಡೆದುಕೊಂಡ ರೀತಿಯನ್ನು, ಆತನ ಕಡೆಯಿಂದಾಗಿರೋ ಕೃತ್ಯವನ್ನು ಆತನ ಕೆಲ ತಲೆಮಾಸಿದ ಅಭಿಮಾನಿಗಳನ್ನು ಹೊರತಾಗಿ ಬೇರ್‍ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆ ಭೂಮಿಕೆಯಲ್ಲಿ ಬಹುತೇಕರು ದರ್ಶನ್‌ನನ್ನು ವಿರೋಧಿಸಿದ್ದಾರೆ. ಈ ಕ್ಷಣಕ್ಕೂ ದರ್ಶನ್ ತನ್ನ ಅಭಿಮಾನಿ ಪಡೆಯನ್ನು ಗೂಂಡಾಗಳಂತೆ ರೂಪಿಸಿರುವ, ಅಂಥಾ ಭಂಡ ಅಭಿಮಾನಿಗಳು ಅದೆಂಥಾ ವಿಕೃತಿ ಮೆರೆದರೂ ತೆಪ್ಪಗಿರುವ ಗುಣಗಳ ಬಗ್ಗೆ ಪ್ರಜ್ಞಾವಂತರೊಳಗೊಂದು ಆಕ್ರೋಶವಿದೆ. ಹಾಗಂತ, ಈ ನೆಲೆಯಲ್ಲಿ ದರ್ಶನ್‌ನನ್ನು ವಿರೋಧಿಸುವ ಭರದಲ್ಲಿ ತೀರಾ ಕೀಳು ಮಟ್ಟಕ್ಕಿಳಿಯೋದೂ ಕೂಡಾ ಅಸಹ್ಯವೇ. ಒಳ್ಳೆ ಹುಡುಗ ಪ್ರಥಮ್ ಥೇಟು ಅಂಥಾ ಅಸಹ್ಯದ ಕೊಚ್ಚೆಗಿಳಿದಿದ್ದಾನೆ. ಇದೇ ಭೂಮಿಕೆಯಲ್ಲಿ ಸಿಂಪಥಿ ಗಿಟ್ಟಿಸಿಕೊಳ್ಳುವ ನೌಟಂಕಿ ನಾಟಕಗಳನ್ನೂ ಯಥೇಚ್ಛವಾಗಿ ಪ್ರದರ್ಶಿಸುತ್ತಿದ್ದಾನೆ.
ಹಾಗಾದರೆ, ಪ್ರಥಮ್ ಎದೆಗೆ ಡ್ರ್ಯಾಗರ್ ಇಟ್ಟ ಪ್ರಕರಣ ಕೂಡಾ ಆತ ಹೇಳುತ್ತಿರುವಂತೆ ನಡೆದಿರಲಿಕ್ಕಿಲ್ಲ ಅಂತೊಂದು ಅನುಮಾನ ಸಹಜವಾಗಿಯೇ ಕಾಡುತ್ತದೆ. ಈ ದಿಕ್ಕಿನಲ್ಲಿ ತಲಾಶಿಗಿಳಿದರೆ ಮತ್ತೊಂದು ಮಜವಾದ ವಾಸ್ತವ ಎದುರಾಗುತ್ತೆ. ಆವತ್ತು ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ತೆರಳಿದ್ದ ಪ್ರಥಮ್ ಲೇಡಿ ಡಾನ್ ಅಂತ ಕರೆಸಿಕೊಳ್ಳುವ ಯಶಸ್ವಿನಿ ಅಂಡ್ ಟೀಮನ್ನು ಮುಖಾಮುಖಿಯಾಗಿದ್ದಾನೆ. ಅಷ್ಟಕ್ಕೂ ಈ ಯಶಸ್ವಿನಿ ಪ್ರಥಮನಿಗೆ ಹೊಸಾ ಪರಿಚಯವೇನಲ್ಲ. ಆಕೆಯ ಪಟಾಲಮ್ಮಿನಲ್ಲಿರುವ ದಾಸ ಎಂಬಾತನೂ ಸೇರಿದಂತೆ ಒಂದಷ್ಟು ಮಂದಿ ಪ್ರಥಮ್‌ಗೆ ಪರಿಚಿತರೇ. ಹಾಗೆ ನೋಡಿದರೆ, ರಾಜಕಾರಣಿಗಳಿಂದ ಮೊದಲ್ಗೊಂಡು, ರೌಡಿಗಳ ವರೆಗೆ ಎಲ್ಲರನ್ನೂ ಪರಿಚಯ ಮಾಡಿಕೊಂಡು ಸೆಲ್ಫಿ ತೆಗೆದುಕೊಳ್ಳೋದರಲ್ಲಿ ಪ್ರಥಮ್ ನಿಸ್ಸೀಮ. ಇಂತಿಪ್ಪ ಪ್ರಥಮ್ ಆವತ್ತು ಯಶಸ್ವಿನಿಯೊಂದಿಗೆ ಲೋಕಾಭಿರಾಮವಾಗಿ ಹರಟುತ್ತಿದ್ದ. ಈ ಹಂತದಲ್ಲಿ ಯಶಸ್ವಿನಿ ತನ್ನೆದುರು ನಿಂತ ಎಲಿಮೆಂಟೊಂದನ್ನು ಪ್ರಥಮ್‌ಗೆ ಪರಿಚಯಿಸಿದ್ದಾಳೆ.
ಆತನನ್ನು ಬೇಕರಿ ರಘು ಅಂತ ಯಶಸ್ವಿನಿ ಪರಿಚಯಿಸುತ್ತಲೇ, ಸುಮ್ಮನೆ ಕೈ ಕುಲುಕಿ ಎದ್ದು ಬಂದಿದ್ದರೆ ಇಷ್ಟೆಲ್ಲ ಡ್ರಾಮಾ ನಡೆಯುತ್ತಲೇ ಇರಲಿಲ್ಲ. ಹೇಳಿಕೇಳಿ ಪ್ರಥಮನದ್ದು ಹರುಕುಬಾಯಿ. ಬೇಕರಿ ರಘು ಓರ್ವ ಕುಖ್ಯಾತ ರೌಡಿ ಶೀಟರ್ ಅಂತ ಅರಿವಿರದಷ್ಟು ಮುಗ್ಧನಂತೂ ಖಂಡಿತಾ ಅಲ್ಲ. ಆದರೂ ಯಶಸ್ವಿನಿ ಆತನನ್ನು ಪರಿಚಯಿಸುತ್ತಲೇ, `ಬೇಕರಿ ರಘು ಅಂತೀರಿ, ಬನ್ನು ಪಪ್ಸು, ಚಿಪ್ಸು ಏನೂ ತಂದಿಲ್ವಾ’ ಅಂತ ನಾಲಗೆ ಹರಿಯಬಿಟ್ಟಿದ್ದಾನೆ. ಇದರಿಂದ ಸುತ್ತಲಿದ್ದ ಹುಡುಗರೆದುರು ಪಾತಕಿ ಬೇಕರಿ ರಘುಗೆ ಸಹಜವಾಗಿಯೇ ಅವಮಾನವಾದಂತಾಗಿದೆ. ಆತ ಸಿಟ್ಟಿನಿಂದ ಕುದ್ದು ಹೋದವನೇ ಪ್ರಥಮನ ಕಾಲರು ಹಿಡಿದು `ಬೇಕರಿ ಐಟಮ್ಸ್ ಬೇಕಾ ನಿಂಗೆ ತರಿಸ್ತೀನಿರು ಮಗನೇ’ ಅಂದವನೇ ಹುಡುಗರಿಗೆ ಸನ್ನೆ ಮಾಡಿದ್ದಾನೆ. ಕಣ್ಣು ಮಿಟುಕಿಸೋದರೊಳಗೆ ತನ್ನೆದೆಗೆ ರಘು ಹಿರಿದಿದ್ದ ಡ್ರ್ಯಾಗರ್ ಕಂಡು ಫಟಿಂಗ ಪ್ರಥಮ ಸುಸ್ಸೂ ಮಾಡಿಕೊಳ್ಳುವ ಹಂತ ತಲುಪಿಬಿಟ್ಟಿದ್ದಾನೆ. ಅಂದಹಾಗೆ, ಇಷ್ಟೆಲ್ಲ ಆಗುವಾಗ ಯಶಸ್ವಿನಿ ಪಾಳೆಯದ ಹುಡುಗ ದಾಸ ಕೂಡಾ ಸ್ಥಳದಲ್ಲಿದ್ದ!

ಹೀಗೆ ತನ್ನ ಹುಡುಗರೆದುರು ಕಿಂಡಲ್ಲು ಮಾಡಿದ ಪ್ರಥಮನ ಮೇಲೆ ರಘು ಅದ್ಯಾವ ಪರಿ ಕೋಪಗೊಂಡಿದ್ದನೆಂದರೆ, ಡ್ರ್ಯಾಗರ್ ಎದೆಗೆ ಹಿಡಿದು ಬೈದಾಡಿದ್ದಾನೆ. ಅದೇ ಭರದಲ್ಲಿ ತನ್ನ ಬಾಸ್ ದರ್ಶನ್ ಬಗ್ಗೆ ಬಾಯಿಗೆ ಬಂದಂತೆ ಮಾತಾಡ್ತೀಯಾ ಅಂತೆಲ್ಲ ಆವಾಜು ಬಿಟ್ಟಿದ್ದಾನೆ. ಇದೇ ಸಂದರ್ಭದಲ್ಲಿ ತನ್ನ ಮೊಬೈಲು ಹೊರತೆಗೆದ ಬೇಕರಿ ರಘು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಜೊತೆಗಿದ್ದ ತನ್ನ ಫೋಟೋಗಳನ್ನೂ ಪ್ರಥಮ್‌ಗೆ ತೋರಿಸಿದ್ದಾನೆ. ಇಲ್ಲಿ ಗಮನಿಸಲೇ ಬೇಕಾದ ಸಂಗತಿಯೆಂದರೆ, ಪ್ರಥಮ್ ಹೀಗೊಂದು ಯಡವಟ್ಟು ಮಾಡಿಕೊಳ್ಳದೇ ಇದ್ದಿದ್ದರೆ, ಈ ಹಕ್ಯಾಟವೇ ನಡೆಯುತ್ತಿರಲಿಲ್ಲ. ದರ್ಶನ್ ಹೆಸರಿನ ಪ್ರಸ್ತಾಪವೂ ಬರುತ್ತಿರಲಿಲ್ಲ. ಒಂದು ಹಂತದಲ್ಲಿ ಖುದ್ದು ದರ್ಶನ್ ತನ್ನ ವಿರುದ್ಧ ಮಾತಾಡಿದ ಕಾರಣಕ್ಕೆ ರೌಡಿ ಪಡೆ ಬಿಟ್ಟು ಆವಾಜು ಹಾಕಿಸಿದ್ದಾನೆಂದು ಬಿಂಬಿಸುವ ಪ್ರಯತ್ನವನ್ನು ಪ್ರಥಮ್ ನಡೆಸಿದ್ದ. ಆದರಿದು ಅವನ ಹರುಕುಬಾಯಿಯ ಪ್ರವರದಿಂದಾದ ಸ್ವಯಂಕೃತಾಪರಾಧವಾಗಿಯಷ್ಟೇ ಕಾಣಿಸುತ್ತದೆ.
ಹೀಗೆ ಪ್ರಥಮ್ ಹುಚ್ಚುತನದಿಂದ ಜುಟ್ಟು ಕೆದರಿಕೊಂಡ ಬೇಕರಿ ರಘು ಇತ್ತೀಚಿನ ವರ್ಷಗಳಲ್ಲಿ ಚಾಲ್ತಿಯಲ್ಲಿರುವ ನಟೋರಿಯಸ್ ರೌಡಿ. ಆರಂಭದಲ್ಲಿ ಸ್ಲಂ ಭರತನ ಬೆಟಾಲಿಯನ್ನಿನೊಂದಿಗೆ ರಘು ಗುರುತಿಸಿಕೊಂಡಿದ್ದ. ಉತ್ತರ ಭಾರತ ಮೂಲದ ಲೈವ್ ಬ್ಯಾಂಡ್ ಹುಡುಗಿಯರ ಮೋಹಕ್ಕೆ ಬಿದ್ದಿದ್ದ ಈತ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ಆ ಹಂತದಲ್ಲಿ ಅನಾಥ ಶಿಶುವಿನಂತಾಗಿದ್ದ ರಘು, ಒಂದಷ್ಟು ಸಮಯ ಅಂಡಲೆದವನು ಸೀದಾ ಹೋಗಿ ಲ್ಯಾಂಡ್ ಆಗಿದ್ದು ಮತ್ತೋರ್ವ ನಟೋರಿಯಸ್ ರೌಡಿ ಸೈಕಲ್ ರವಿಯ ಸಮ್ಮುಖದಲ್ಲಿ. ಈ ಸೈಕಲ್ಲು ಆರಂಭ ಕಾಲದಿಂದಲೂ ದರ್ಶನ್ ಪಾಳೆಯದಲ್ಲಿ ರೌಂಡು ಹೊಡೆಯುತ್ತಿದೆ. ಕೆಲ ಪಾರ್ಟಿಗಳಲ್ಲಿ ದಾಸನ ಜೊತೆಗಿರುತ್ತಿದ್ದ ಗುಳಿಗೆನ್ನೆಗೆ ಲೊಚಕ್ಕನೆ ಮುತ್ತಿಟ್ಟು ಸವಾಲಿ ನಡೆಸೋ ಖಯಾಲಿಯೂ ಸೈಕಲ್ಲಿಗಿದೆ ಅನ್ನುವವರಿದ್ದಾರೆ. ದರ್ಶನ್ ಅಭಿಮಾನಿ ಸಂಘಗಳ ಬೆನ್ನಿಗೆ ನಿಂತಿರೋದು ಇದೇ ಸೈಕಲ್ಲು!

ಇಂಥಾ ಸೈಕಲ್ ರವಿ ಪಾಳೆಯದಲ್ಲಿದ್ದ ಬೇಕರಿ ರಘುವಿಗೂ ಕೂಡಾ ದರ್ಶನ್ ಕ್ರೇಜ್ ಇದ್ದೇ ಇತ್ತು. ಈ ನಡುವೆ ದರ್ಶನ್ ಏಕಾಏಕಿ ಎಡವಟ್ಟು ಮಾಡಿಕೊಂಡು ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಪಾಲಾಗಿದ್ದ. ಆ ಹೊತ್ತಿಗೆಲ್ಲ ಸಿದ್ದಾಪುರ ಮಹೇಶನ ಹತ್ಯೆ ಕೇಸಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದ. ನೋಡ ನೋಡುತ್ತಲೇ ದರ್ಶನ್ ಮತ್ತು ನಾಗನ ನಡುವೆ ಮೊಳೆತುಕೊಂಡಿದ್ದ ಸ್ನೇಹ, ಹೊರಗಿದ್ದ ಸೈಕಲ್ ರವಿಗೆ ಕರುಬು ಮೂಡಿಸಿತ್ತು. ಈ ಕಾರಣದಿಂದಲೇ ಸೈಕಲ್ ರವಿ ತನ್ನ ಶಿಷ್ಯ ಬೇಕರಿ ರಘುವನ್ನು ದಾಸನಿಗೆ ಜೈಲೊಳಗೆ ಉಪಚಾರ ಮಾಡುವುದಕ್ಕೆಂದೇ ಅಂದರ್ ಮಾಡಿಸಿದ್ದ. ಹೀಗೆ ದಾಸನ ದೇಖಾರೇಖಿ ನೋಡಿಕೊಳ್ಳುತ್ತಿದ್ದ ರಘು ಆ ಸಂದರ್ಭದಲ್ಲಿಯೇ ದರ್ಶನ್ ಜೊತೆ ಒಂದಷ್ಟು ಫೋಟೋಗಳನ್ನೂ ತೆಗೆಸಿಕೊಂಡಿದ್ದ. ಇಂಥಾ ರಘು ಮೊನ್ನೆ ದಿನ ಪ್ರಥಮ್ ಗೆ ಆವಾಜು ಬಿಟ್ಟಿರೋದರ ಹಿಂದೆ ದರ್ಶನ್ ಪಾತ್ರವಿಲ್ಲ ಅನ್ನೋದು ಮೇಲುನೋಟಕ್ಕೇ ಅರ್ಥವಾಗುತ್ತೆ.
ಮಾಜೀ ರೌಡಿ ಶೀಟರ್ ಯಶಸ್ವಿನಿ ಇತ್ತೀಚಿನ ದಿನಗಳಲ್ಲಿ ಒಂದಷ್ಟು ಬದಲಾದಂತೆ ಕಾಣಿಸಿಕೊಂಡಿದ್ದಳು. ನಟಿಯಾಗಿಯೂ ರೂಪಾಂತರಗೊಂಡಿದ್ದ ಆಕೆ ಸೂರಿ ಅಣ್ಣ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದಾಳೆ. ತಮಿಳಿನಲ್ಲೂ ಒಂದು ಸಿನಿಮಾದಲ್ಲಿ ನಟಿಸಿದ್ದಾಳೆ. ಇಂಥಾ ಯಶಸ್ವಿನಿಯ ಪಾಳೆಯದಲ್ಲಿ ಪ್ರಥಮನಂಥಾದ್ದೇ ಪ್ರಚಾರದ ಹುಚ್ಚು ಹೊಂದಿರುವ ಬುಲೆಟ್ ರಕ್ಷಕ್ ಕೂಡಾ ಆಗಾಗ ಕಾಣಿಸಿಕೊಳ್ಳುತ್ತಿದ್ದ. ಆದರೆ, ಬೇಕರಿ ರಘು ಪ್ರಕರಣದಲ್ಲಿ ಆತ ಮೂಕ ಪ್ರೇಕ್ಷಕನಾಗಿದ್ದ. ಈ ಮರಿ ಬುಲೆಟ್ ಇದೆಯಲ್ಲಾ? ಇದೂ ಕೂಡಾ ತಲೆತಿರುಕ ಆಸಾಮಿಯೇ. ಈಗಾಗಲೇ ನೂರಾರು ಸಿನಿಮಾಗಳಲ್ಲಿ ನಟಿಸಿದ ನಟರಿಗೂ ಇಲ್ಲದ ತಿಮಿರು, ಆಟಿಟ್ಯೂಡ್ ಈ ಎಳಸು ಕುನ್ನಿಗಿದೆ. ಅದ್ಯಾವುದೋ ಭರ್ಜರಿ ಬ್ಯಾಚುಲರ್ ಎಂಬ ಹಡಬೆ ಶೋ ಮೂಲಕ ಈತನ ಹುಚ್ಚು ಮತ್ತಷ್ಟು ಕೆದರಿಕೊಂಡಿದೆ. ಖುದ್ದು ರವಿಚಂದ್ರನ್ ಜಡ್ಜ್ ಆಗಿದ್ದ, ನಿರಂಜನ್ ದೇಶಪಾಂಡೆ ನಿರೂಪಣೆ ಮಾಡಿದ್ದ ಈ ಶೋ ಹೈ ಫೈ ಹಾದರದ ಅಡ್ಡೆಯಂತಿದ್ದ ಬಗ್ಗೆ ಈ ಕ್ಷಣಕ್ಕೂ ಚರ್ಚೆಗಳಾಗುತ್ತಿವೆ.
ಈ ಪ್ರಥಮ್ ಮತ್ತು ರಕ್ಷಕ್ ಥರದ ಎಳಸು ಕುನ್ನಿಗಳು ಯಾವ ಕ್ಷಣದಲ್ಲಿಯಾದರೂ, ಯಾವ ರೂಪದಲ್ಲಾದರೂ ಸಮಾಜ ಕಂಟಕರಾಗಿ ಬಿಡುವ ಸಾಧ್ಯತೆಗಳಿದ್ದಾವೆ. ದುರಂತವೆಂದರೆ, ದರ್ಶನ್ ಅಭಿಮಾನಿಗಳಲ್ಲಿ ಕೆಲ ಮಂದಿಯೂ ಅದೇ ಸಾಲಿಗೆ ಸೇರಿಕೊಳ್ಳುತ್ತಾರೆ. ಪ್ರಥಮ್‌ಗೆ ಮೂದಲಿಸಿದಷ್ಟೇ ಸಲೀಸಾಗಿ ರಮ್ಯಾಳಂಥಾ ನಟಿಯರಿಗೂ ಪ್ರಹಾರ ನಡೆಸುತ್ತಾರೆ. ಸದ್ಯ ನಟಿ ರಮ್ಯಾ ತನ್ನ ವಿರುದ್ಧ ಕೆಟ್ಟಾಕೊಳಕು ಕಮೆಂಟು ಮಾಡಿದ ದರ್ಶನ್ ಅಭಿಮಾನಿಗಳ ವಿರುದ್ಧ ಕಾನೂನು ಸಮರಕ್ಕಿಳಿದಿದ್ದಾರೆ. ಗಮನೀಯ ಅಂಶವೆಂದರೆ, ಪ್ರಳಯಾಂತಕ ಪ್ರಥಮ್ ತಕ್ಷಣ ರಮ್ಯಾ ಸುತ್ತ ಹಬ್ಬಿಕೊಂಡಿದ್ದ ಬೆಂಬಲವನ್ನು ತನ್ನ ದಿಕ್ಕಿಗೆ ವರ್ಗಾಯಿಸಿಕೊಳ್ಳುವ ಆಟ ಕಟ್ಟಿದ್ದ. ಆದರೀಗ ಆತನ ಸುತ್ತಾ ಯಾರೆಂದರೆ ಯಾರೂ ಉಳಿದಿಲ್ಲ.
ಯಾರಾದರೂ ಹೇಗಿದ್ದೀಯಪ್ಪಾ ಪ್ರಥಮ್ ಅಂದರೆ, ಬೆಳಗೆದ್ದು ಹಲ್ಲುಜ್ಜಿ ಹೇತಿದ್ದರಿಂದ ಹಿಡಿದು, ಬೇಡದ ಪುರಾಣವನ್ನೆಲ್ಲ ಒದರೋ ಜಾಯಮಾನ ಪ್ರಥಮನದ್ದು. ಈ ಥರದ ಹುಚ್ಚು ಸಂತಾನಿಗರನ್ನು ಸೆಲೆಬ್ರಿಟಿಗಳಂತೆ ಬಿಂಬಿಸುವ ಟಿಆರ್‌ಪಿ ತೆವಲನ್ನು ಮಾಧ್ಯಮಗಳು ಬಿಡಬೇಕಿದೆ. ಅದೇ ಹೊತ್ತಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಹೆಸರಲ್ಲಿ ಪಿತಗುಡುತ್ತಿರುವ ವಿಕೃತರಿಗೆ ಕಾನೂನಿನ ಬಿಸಿ ಮುಟ್ಟಿಸಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಹೇಗೆ ಬೇಕೋ ಹಾಗೆ ವರ್ತಿಸಿದರೆ ಯಾರೂ ಕೇಳೋರಿಲ್ಲ ಎಂಬ ಸದರ ಇವರೆಲ್ಲರಿಗಿದ್ದಂತಿದೆ. ಬಹುಶಃ ಪ್ರಥಮ್ ತಲೆ ನೆಟ್ಟಗಿರುವವನಂತಗೆ ವರ್ತಿಸಿದ್ದರೆ, ಆ ದಿಸೆಯಲ್ಲಿ ಅವನದ್ದೂ ಒಂದು ಪ್ರಾಮಾಣಿಕ ಪ್ರಯತ್ನವಾಗಿ ದಾಖಲಾಗುತ್ತಿತ್ತು. ಆದರೀಗ ಆ ಸಾಲಿನಲ್ಲಿ ರಮ್ಯಾ ಮುಂಚೂಣಿಯಲ್ಲಿದ್ದಾರೆ. ಗೃಹ ಸಚಿವ ಪರಮೇಶ್ವರ್‌ಗೆ ಸಾಮಾನ್ಯವಾಗಿ ಇಂಥಾ ವಿದ್ಯಮಾನಗಳೆಲ್ಲ ಗಮನಕ್ಕೆ ಬರೋದಿಲ್ಲ. ಆದರೂ ತುಸು ಪುರಸೊತ್ತು ಮಾಡಿಕೊಂಡು, ಸಾಮಾಜಿಕ ಜಾಲತಾಣದ ಭಯಾನಕ ಪಲ್ಲಟದ ಬಗ್ಗೆ ಗಮನ ಹರಿಸಬೇಕಿದೆ. ಹಾಗಂತ ಈ ನೆಲದ ಜನಸಾಮಾನ್ಯರು ಆಶಿಸುತ್ತಿದ್ದಾರೆ!