ಬಾಹುಬಲಿಯಂಥ ಸೂಪರ್ ಹಿಟ್ ಸಿನಿಮಾ ಕೊಟ್ಟ ನಂತರವೂ ಅದೆಕೋ ಪ್ರಭಾಸ್ ಸೋಲಿನ ಪಾಲಿಗೆ ಆತ್ಮೀಯ ಡಾರ್ಲಿಂಗ್ ಆಗಿ ಬದಲಾಗಿದ್ದಾನೆ. ಕಲ್ಕಿ ಚಿತ್ರದ ಮೂಲಕ ಒಂದು ಮಟ್ಟದ ಗೆಲುವು ಪ್ರಭಾಸ್ಗೆ ದಕ್ಕಿತ್ತು. ಆದರೆ, ಆ ಸಿನಿಮಾದ ಜೊತೆ ಜೊತೆಗೇ ಮಾಡಿಕೊಂಡ ಯಡವಟ್ಟಿನಿಂದ ಹುಟ್ಟಿದ್ದ ರಾಜಾಸಾಬ್ ಮೂಲಕ ಬಾಹುಬಲಿಯ ವೃತಗ್ತಿ ಬದುಕು ಮತ್ತಷ್ಟು ಪಾತಾಳಕ್ಕಿಳಿದಿದೆ. ಇಷ್ಟೆಲ್ಲ ಸೋಲು ಸುತ್ತಿಕೊಂಡರೂ ಈತನ ಸಿನಿಮಾಕ್ಕೆ ಕಾಸು ಹೂಡಿದವರಿಗೇನೂ ನಷ್ಟವಿಲ್ಲ ಎಂಬಂಥಾ ವಾತಾವರಣವಂತೂ ಮುಂದುವರೆದಿದೆ. ಈ ಕಾರಣದಿಂದಲೇ ಪ್ರಭಾಸ್ ಕೈಲಿ ಒಂದಷ್ಟು ಸಿನಿಮಾಗಳಿದ್ದಾವೆ. ಈ ಸಾಲಿನಲ್ಲಿರೋ ಫೌಜಿ ಸೇರಿದಂತೆ ಯಾವುದಾದರೂ ಬರಖತ್ತಾಗಬಹುದಾದ ಸರಕಿದೆಯಾ ಅಂತ ಹುಡುಕಿದರೆ ತೊಡರಿಕೊಳ್ಳೋದು ನಿರಾಸೆ ಮಾತ್ರ!
ಇಂಥಾ ಸ್ಥಿತಿಯಲ್ಲಿ ಆಶಾದಾಯಕ ವಾತಾವರಣವೇ ಕಾಣದೆ ಕಂಗಾಲಾಗಿರುವ ಪ್ರಭಾಸ್ ಅಭಿಮಾನಿಗಳೆಲ್ಲ ಖುಷಿಗೊಳ್ಳುವಂಥಾದ್ದೊಂದು ಸುದ್ದಿ ಇದೀಗ ಹಬ್ಬಿಕೊಂಡಿದೆ. ಅದರನ್ವಯ ಹೇಳೋದಾದರೆ ಪ್ರಬಾಸ್ ಪುಷ್ಪಾ ಖ್ಯಾತಿಯ ಸುಕುಮಾರ್ ನಿರ್ದೆಶನದ ಸಿನಿಮಾದಲ್ಲಿ ನಟಿಸಲಿದ್ದಾನೆ. ಹೀಗೊಂದು ಸುದ್ದಿ ತೆಲುಗು ಚಿತ್ರರಂಗದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪುಷ್ಪಾ ಸರಣಿಯ ಮೂಲಕ ಪ್ಯಾನಿಂಡಿಯಾ ಮಟ್ಟದಲ್ಲಿ ಹೆಸರು ಮಾಡಿರುವವರು ಸುಕುಮಾರ್. ತನ್ನದೇ ಆದೊಂದು ಸಿನಿಮಾ ಕ್ರಾಫ್ಟ್ ರೂಢಿಸಿಕೊಂಡಿರುವ ಸುಕುಮಾರ್ಗೆ ಕಥೆಯೊಂದನ್ನು ಹೇಗೆಲ್ಲ ಪರಿಣಾಮಕಾರಿಯಾಗಿ ದೃಷ್ಯಕ್ಕೆ ಒಗ್ಗಿಸಬೇಕೆಂಬ ಪಟ್ಟುಗಳು ಕರಗತವಾಗಿವೆ. ಈಗಂತೂ ಸ್ಟಾರ್ ನಟರೇ ಸುಕುಮಾರ್ ಸಾರಥ್ಯದಲ್ಲಿ ಸಿನಿಮಾ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಕ್ಷಣಕ್ಕು ಪುಷ್ಪಾ ಗುಂಗಿನಲ್ಲಿರೋ ಸುಕುಮಾರ್ ಪ್ರಭಾಸ್ಗಾಗಿ ಕಥೆಯೊಂದನ್ನು ಸಿದ್ಧಪಡಿಸಿದ್ದಾರೆ.
ಅದನ್ನು ಇತ್ತೀಚೆಗಷ್ಟೇ ಪ್ರಭಾಸ್ಗೂ ಹೇಳಿದ್ದಾರೆ. ಸಾಮಾನ್ಯವಾಗಿ ಕಾಲ್ಶೀಟನ್ನು ಕರ್ಚೀಫಿಗಿಂತಲೂ ಕಡೆಯಾಗಿ ಹಂಚೋ ಬುದ್ಧಿಯ ಪ್ರಭಾಸ್ ಕಥೆ ಮುಂತಾದವುಗಳ ಬಗ್ಗೆ ಆಳವಾಗಿ ತಲೆ ಕೆಡಿಸಿಕೊಳ್ಳುವ ಆಸಾಮಿಯಲ್ಲ. ಆದರೆ ಸದ್ಯದ ಮಟ್ಟಿಗೆ ಸೋಲುಗಳಿಂದ ಕಂಗಾಲಾಗಿರೋ ಪ್ರಭಾಸ್ ಈ ಕಥೆ ಕೇಳಿ ಥ್ರಿಲ್ ಆಗಿದ್ದಾನೆ. ಈ ಮೂಲಕ ಅಧಿಕೃತವಾಗಿಯೇ ಸದರಿ ಪ್ರಾಜೆಕ್ಟಿಗೆ ಚಾಲನೆ ಸಿಕ್ಕಿದೆ. ಆದರೆ, ಈ ಸಿನಿಮಾ ಶುರುವಾಗೋದು ೨೦೨೮ಕ್ಕೆ. ಅಲ್ಲಿವರೆಗೆ ಪ್ರಭಾಸ್ ಒಪ್ಪಿಕೊಂಡಿರೋ ಸಿನಿಮಾಗಳನ್ನು ಮುಗಿಸಿಕೊಳ್ಳೋದಿದೆ. ಸುಕುಮಾರ್ ಕೂಡಾ ಅಲ್ಲು ಅರ್ಜುನ್ ಆಟ್ಲಿ ನಿರ್ದೇಸನದ ಸಿನಿಮಾ ಮುಗಿಸಿದಾಕ್ಷಣ ಪುಷ್ಪಾ೩ ಆರಂಭಿಸಲು ತಯಾರಾಗುತ್ತಿದ್ದಾರೆ. ಬಹುಶಃ ಬಾಹುಬಲಿಯನ್ನು ಸೋಲಿನ ಶೂಲದಿಂದ ಪಾರು ಮಾಡೋ ಸಾಧ್ಯತೆಗಳಿರೋದು ಸುಕುಮಾರ್ ನಿರ್ದೇಶನದ ಚಿತ್ರಕ್ಕೆ ಮಾತ್ರವೇ ಅನ್ನಿಸಲಾರಂಭಿಸಿದೆ!
keywords: prabhas, sukumar, director, bahubali, pushpa

