ಟನೆ ಎಂಬುದು ಸಾಧಾರಣ ಸ್ಥಿತಿಯಲ್ಲಿದ್ದರೂ, ವಿಶ್ವವ್ಯಾಪಿ ಸ್ಟಾರ್ ಆಗಿ ಕಂಗೊಳಿಸುತ್ತಿರುವಾತ ಪ್ರಭಾಸ್. ತೆಲುಗು ಚಿತ್ರರಂಗದ ಪರಿಧಿಯಲ್ಲಿ ಸಣ್ಣಗೆ ಮಿಂಚುತ್ತಿದ್ದ ಪ್ರಭಾಸ್, ಬಾಹುಬಲಿ ಚಿತ್ರದ ಮೂಲಕ ವಿಶ್ವ ಮಟ್ಟಕ್ಕೆ ತಲುಪಿಕೊಂಡಿದ್ದೊಂದು ಅಚ್ಚರಿ. ಆದರೆ, ಅದ್ಯಾವುದೇ ಕ್ಷೇತ್ರದಲ್ಲಾಗಿದ್ದರೂ ಕೂಡಾ, ಇಂಥಾ ಮಹಾ ಗೆಲುವನ್ನ ಮುಂದುವರಿಸಿಕೊಂಡು ಹೋಗೋದು, ಸಂಭಾಳಿಸಿಕೊಳ್ಳೋದೊಂದು ಸವಾಲು. ದುರಂತವೆಂದರೆ, ಅಂಥಾ ಸವಾಲಿನ ಮುಂದೆ ಬಾಹುಬಲಿ ಅಸಹಾಯಕನಂತೆ ಮಂಡಿಯೂರಿ ಬಿಟ್ಟಿದ್ದಾನೆ. ಬಹುಶಃ ಅಷ್ಟು ದೊಡ್ಡ ಮಟ್ಟದಲ್ಲಿ ಕ್ರೇಜ್ ಇಲ್ಲದೇ ಹೋಗಿದ್ದರೆ, ಜಗದಗಲ ಫ್ಯಾನ್ ಬೇಸ್ ಇಲ್ಲದೇ ಹೋಗಿದ್ದರೆ ಇಷ್ಟು ಹೊತ್ತಿಗೆಲ್ಲ ಪ್ರಭಾಸ್ ಎದ್ದೇಳಲಾರದಂತೆ ಕುಸಿದು ಬಿಡುತ್ತಿದ್ದ.

ಹಾಗಾದರೆ, ಪ್ರಭಾಸ್ ನಂಥಾ ಸ್ಟಾರ್ ನಟನಿಗೆ ಯಾಕಿಂತಾ ಸ್ಥಿತಿ ಬಂತು? ಸಾಲು ಸಾಲು ಸೋಲುಗಳಿಗೆ ಅಸಲೀ ಕಾರಣವೇನು? ಹೀಗೆ ಹತ್ತಾರು ಪ್ರಶ್ನೆಗಳು ಮುತ್ತಿಕೊಳ್ಳೋದು ಸಹಜ. ಅದೆಲ್ಲದಕ್ಕೆ ಉತ್ತರವಾಗಿ ನಿಲ್ಲೋದು ಖುದ್ದು ಪ್ರಭಾಸ್ ಕಡೆಯಿಂದಾದ ಆಯ್ಕೆಯಲ್ಲಿನ ಯಡವಟ್ಟುಗಳು ಮಾತ್ರ. ಪ್ರಭಾಸ್ ಬಾಹುಬಲಿಯ ನಂತರದಲ್ಲಿ ಸಿನಿಮಾಗಳನ್ನು ಒಪ್ಪಿಕೊಳ್ಳುವಾಗಿ ಬಲು ಎಚ್ಚರದಿಂದ ಮುಂದಡಿ ಇಡಬೇಕಿತ್ತು. ಆದರೆ, ಅದ್ಯಾವುದೋ ಸ್ನೇಹ, ಮತ್ಯಾವುದೋ ಮುಲಾಜುಗಳಿಗೆ ಬಿದ್ದ ಪ್ರಭಾಸ್ ಕಾಲ್ ಶೀಟನ್ನು ಕಳ್ಳೇಪುರಿಯಂತೆ ಬಿಕರಿಗಿಟ್ಟು ಬಿಟ್ಟಿದ್ದ. ಬಾಹುಬಲಿಯಂಥಾ ದೊಡ್ಡ ಹಿಟ್ ನಂತರದಲ್ಲಿ ಪ್ರಭಾಸ್ ದಢಾರನೆ ಮಗುಚಿಕೊಂಡಿದ್ದರ ಹಿಂದಿರೋದು ಅದೇ ಮಾಯೆ.

ಈ ವಿಚಾರದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ನಿಜಕ್ಕೂ ಮಾಸ್ಟರ್. ಯಾಕೆಂದರೆ, ಕೆಜಿಎಫ್ ಗೆಲುವಿನ ನಂತರದಲ್ಲಿ ಮತ್ತೊಂದು ಸಿನಿಮಾ ಒಪ್ಪಿಕೊಳ್ಳಲು ಆತ ವರ್ಷಗಳನ್ನು ಪಣಕ್ಕಿಟ್ಟಿದ್ದಾರೆ. ಈ ಕ್ಷಣಕ್ಕೂ ಅದು ನಿಕ್ಕಿಯಾಗಿಲ್ಲ. ಒಂದು ಕಾಲದಲ್ಲಿ, ಆ ಕ್ಷಣದ ಅನಿವಾರ್ಯತೆಗೆ ಬಿದ್ದು ಒಪ್ಪಿಕೊಂಡಿದ್ದ ಸಿನಿಮಾಗಳನ್ನೆಲ್ಲ ಯಶ್ ನಾಜೂಕಾಗಿ ಕೈ ಬಿಟ್ಟಿದ್ದರು. ಒಂದು ವೇಳೆ ಯಶ್ ಯಾವುದೋ ಮುಲಾಜಿಗೆ ಬಿದ್ದು ಆವರೇಜ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದರೆ ಅವರಿಗೂ ಕೂಡಾ ಸೋಲೆದುರಾಗುತ್ತಿತ್ತೇನೋ. ಆದರೆ, ಪ್ರಭಾಸ್ ಹಾಗಲ್ಲ. ಆತನಿಗೆ ಇಂಥಾ ಯಾವ ಜಾಣ ನಡೆಗಳೂ ಗೊತ್ತಿಲ್ಲ. ಆದ್ದರಿಂದಲೇ ಆತ ಪದೇ ಪದೆ ತಾನೇ ತಾನಾಗಿ ಸೋಲಿನ ಕಮರಿಗೆ ಬೀಳುತ್ತಿದ್ದಾನೆ.

ಹಾಗೆ ನೋಡಿದರೆ, ಒಂದು ಸಿನಿಮಾವನ್ನು ಆರಂಭದಲ್ಲಿಯೇ ಜಡ್ಜ್ ಮಾಡೋ ವಿಧಾನವೇ ಪ್ರಭಾಸ್ ಗೆ ತಿಳಿದಂತಿಲ್ಲ. ಅದು ಇದ್ದಿದ್ದರೆ ಆದಿಪುರುಷ್ ಥರದ ಥರ್ಡ್ ಕ್ಲಾಸ್ ಚಿತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ. ತಮಾಶೆಯೆಂದರೆ, ಅಂಥಾ ಆದಿಪುರುಷ್ ಚಿತ್ರದ ಬಗ್ಗೆ ಪ್ರಭಾಸ್ ಭಾರೀ ಭ್ರಮೆಗಳನ್ನಿಟ್ಟುಕೊಂಡಿದ್ದ. ಆ ಸೆಳೆತಕ್ಕೆ ಸಿಕ್ಕು ಸಲಾರ್ ಚಿತ್ರವನ್ನೇ ಕಡೆಗಣಿಸಿದ್ದನೆಂಬ ಮಾತೂ ಇದೆ. ಒಂದು ಹಂತದಲ್ಲಿ ಪ್ರಶಾಂತ್ ನೀಲ್ ಅಂಕೆಗೂ ಸಿಗದಂತೆ ಪ್ರಭಾಸ್ ಆದಿ ಪುರುಷ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ. ಇದರಿಂದಾಗಿ ಸಲಾರ್ ಶೂಟಿಂಗ್ ಪದೇ ಪದೆ ಮುಂದಕ್ಕೆ ಹೋಗಿತ್ತು. ಯಾವಾಗ ಆದಿಪುರುಷ್ ಹೀನಾವಾಗಿ ಕವುಚಿಕೊಂಡಿತೋ, ಆಗಿನಿಂದ ಪ್ರಭಾಸ್‍ಗೆ ಸಲಾರೇ ಗತಿಯೆಂಬಂತಾಗಿದೆ.

ಆದರೀಗ ನಿರ್ದೇಶಕ ಪ್ರಶಾಂತ್ ನೀಲ್ ಗೇ ಆ ಸಿನಿಮಾ ಮೂಡಿ ಬಂದಿರೋ ಬಗ್ಗೆ ಸಂಪೂರ್ಣ ತೃಪ್ತಿ ಇದ್ದಂತಿಲ್ಲ. ಈ ವಿಚಾರ ಪ್ರಭಾಸ್ ನನ್ನು ಮತ್ತಷ್ಟು ಗಾಬರಿಗೀಡು ಮಾಡಿದೆ. ಒಂದು ಕಡೆಯಿಂದ ನಶೆಯ ನಂಟು, ಮತ್ತೊಂದು ಕಡೆಯಿಂದ ಸೋಲಿನ ಅವಮಾನ ಹಾಗೂ ಕಾಲಿಗಾದ ಗಾಯಗಳು ಬಾಹುಬಲಿಯ ಅಂತಃಸತ್ವವನ್ನೇ ಬಲಿ ಹಾಕಿದಂತಿದೆ. ಸದ್ಯದ ಮಟ್ಟಿಗೆ ಸತತ ಸೋಲುಗಳು, ಅಭಿಮಾನಿ ವರ್ಗಕ್ಕಾದ ನಿರಾಸೆ ಆತನನ್ನು ಅಧೀರನನ್ನಾಗಿಸಿದಂತಿದೆ. ದೇಹಕ್ಕಾದ ಗಾಯಕ್ಕಿಂತಲೂ ಮನಸಿಗಾದ ಗಾಯವೇ ಪ್ರಭಾಸ್ ನನ್ನು ಹೆಚ್ಚಾಗಿ ಬಾಧಿಸುತ್ತಿದೆ. ಸದ್ಯದ ಮಟ್ಟಿಗೆ ಪ್ರಭಾಸ್ ಮುಂದೆ ತಟುಕು ಭರವಸೆಯಂತೆ ಉಳಿದುಕೊಂಡಿರೋ ಸಿನಿಮಾ ಸಲಾರ್ ಮಾತ್ರ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!