ಕೆಜಿಎಫ್ ಸರಣಿ ಗೆಲುವಿನ ನಂತರದಲ್ಲಿ ರಾಕಿಂಗ್ ಸ್ಟಾರ್ ಯಶ್ ಇಂಟರ್‍ನ್ಯಾಷನಲ್ ಸ್ಟಾರ್ ಆಗಿ ಬಿಟ್ಟಿದ್ದಾರೆ. ಸದ್ಯಕ್ಕೀಗ ಅವರ ಮುಂದಿನ ನಡೆಯೇನೆಂಬುದರ ಸುತ್ತಾ ಸಿನಿಮಾ ಪ್ರೇಮಿಗಳ ಚರ್ಚೆಗಳು ಚಾಲ್ತಿಯಲ್ಲಿವೆ. ಒಂದು ಕಡೆಯಿಂದ ಯಶ್ ಕೆಜಿಎಫ್ ಮೂರನೇ ಭಾಗಕ್ಕೆ ತಯಾರಿ ನಡೆಸುತ್ತಿದ್ದಾರೆಂಬ ಸುದ್ದಿ ಕೇಳಿ ಬರುತ್ತಲೇ, ಮತ್ತೊಂದು ಕಡೆಯಿಂದ ಇನ್ನು ಆ ಸರಣಿ ಸಾಕು ಎಂಬಂಥಾ ಮಾತುಗಳೂ ಕೇಳಿ ಬರುತ್ತಿವೆ. ಆದರೂ ಕೂಡಾ ರಾಕಿ ಭಾಯ್‍ಗೆ ಡಾರ್ಕ್ ಶೇಡಿನ ನಶೆ ಇಳಿದಂತೆ ಕಾಣಿಸುತ್ತಿಲ್ಲ. ಹಾಗಂತ, ಯಶ್‍ಗೆ ಬೇರೆ ಅವಕಾಶಗಳ ಕೊರತೆ ಇದೆ ಅಂತಲೂ ಅಲ್ಲ. ಹೊಸಾ ಸಿನಿಮಾದ ವಿಚಾರದಲ್ಲಿ ಅದೆಂಥಾದ್ದೇ ಜಗ್ಗಾಟ ನಡೆದರೂ ಯಶ್ ಮೇಲೆರುವ ಕ್ರೇಜ್ ಮಾತ್ರ ಒಂದಿನಿತೂ ಕಡಿಮೆಯಾಗಿಲ್ಲ!


ಒಂದು ಕಾಲದಲ್ಲಿ ಪರಭಾಷೆಗಳಲ್ಲಿ ಪ್ರಸಿದ್ಧಿ ಪಡೆದ ನಟಿಯರನ್ನು ಕನ್ನಡಕ್ಕೆ ಕರೆತರುವ ಸರ್ಕಸ್ಸುಗಳಾಗುತ್ತಿದ್ದವು. ಆದರೆ, ಅಂಥಾ ನಟಯರನ್ನು ಕರೆತರೋದು ಹೆಚ್ಚಿನ ಸಂದರ್ಭದಲ್ಲಿ ಕನಸಿನ ಮಾತಾಗುತ್ತಿತ್ತು. ಆದರೀಗ ಅದೇ ಪರಭಾಷಾ ಚಿತ್ರರಂಗದ ನಂಬರ್ ಒನ್ ನಟಿಯರೆಲ್ಲ ಯಶ್‍ಗೆ ನಾಯಕಿಯಾಗಿ ಕನ್ನಡಕ್ಕೆ ಪಾದಾರ್ಪಣೆ ಮಾಡಲು ಪೈಪೋಟಿಗೆ ಬಿದ್ದು ಕಾಯಲಾರಂಭಿಸಿದ್ದಾರೆ. ಇದು ಒಂದರ್ಥದಲ್ಲಿ ರಾಕಿ ಭಾಯ್ ಕಡೆಯಿಂದ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಕೊಡುಗೆ ಎಂದರೂ ತಪ್ಪೇನಲ್ಲ. ಈ ಕ್ಷಣದಲ್ಲಿ ಹುಡುಕಿದರೂ ಯಶ್ ಜೊತೆ ತೆರೆ ಹಂಚಿಕೊಳ್ಳುವ ಕನಸು ಹೊಂದಿರುವ ಸ್ಟಾರ್ ನಟಿಯರು ದಂಡಿ ದಂಡಿಯಾಗಿ ಕಾಣ ಸಿಗುತ್ತಾರೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವಾಕೆ ಬಾಲಿವುಡ್ ಮಟ್ಟದಲ್ಲಿ ಮಿಂಚುತ್ತಿರುವ ಮಂಗಳೂರಿನ ಹುಡುಗಿ ಪೂಜಾ ಹೆಗ್ಡೆ!


ಮಂಗಳೂರಿನ ಹುಡುಗಿ ಪೂಜಾ ತೆಲುಗು ಚಿತ್ರರಂಗದಲ್ಲಿ ಸ್ಟಾರ್‍ಗಿರಿ ಪಡೆದುಕೊಂಡಿರುವ ನಟಿ. ಎಲ್ಲರೂ ಅವಾಕ್ಕಾಗುವಂತೆ ತೆಲುಗು ಚಿತ್ರಪ್ರೇಮಿಗಳನ್ನು ಆವರಿಸಿಕೊಂಡಿರುವ ಪೂಜಾ, ಇದೀಗ ಬಾಲಿವುಡ್ಡಿನಲ್ಲಿಯೂ ಹವಾ ಶುರುವಿಟ್ಟುಕೊಂಡಿದ್ದಾಳೆ. ಇಂಥಾ ಪೂಜಾ ಸಂಣದರ್ಶನವೊಂದರಲ್ಲಿ ತನ್ನ ಮನದಾಸೆಯನ್ನು ಹಂಚಿಕೊಂಡಿದ್ದಾಳೆ. ರಾಕಿಂಗ್ ಸ್ಟಾರ್ ಯಶ್ ಈಗ ಲೆಜೆಂಡ್ ನಟ. ಅವರೊಂದಿಗೆ ನಾಯಕಿಯಾಗಿ ನಟಿಸಲು ಕಾತರದಿಂದಿದ್ದೇನೆ ಎಂಬುದು ಪೂಜಾ ಮಾತಿನ ಸಾರಾಂಶ. ಕನ್ನಡದ ನೆಲೆಯ ನಟನೊಬ್ಬನ ಬಗ್ಗೆ ಈ ಪರಿಯಾಗಿ ಕ್ರೇಜ್ ಹಬ್ಬಿಕೊಂಡಿರುವುದಿದೆಯಲ್ಲಾ? ಅದು ನಿಜಕ್ಕೂ ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂಥಾ ಸಂಗತಿ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ!

About The Author