ಸಿನಿಮಾ ರಂಗದಲ್ಲಿ ಯಾರ ನಸೀಬು ಯಾವ ರೀತಿಯಲ್ಲಿ ಖುಲಾಯಿಸುತ್ತೆ, ಮತ್ಯಾರ ವೃತ್ತಿ ಬದುಕು ಹಠಾತ್ತನೆ ಪಾತಾಳಕ್ಕಿಳಿಯುತ್ತೆ ಅನ್ನೋದನ್ನು ಅಂದಾಜಿಸಲಾಗೋದಿಲ್ಲ. ಒಂದೇ ಒಂದು ಸಿನಿಮಾದಲ್ಲಿ ನಟಿಸಿ ಹತ್ತಾರು ಅವಕಾಶಗಳನ್ನು ಬಾಚಿಕೊಂಡವರೂ ಇಲ್ಲಿ ಕಾಣಿಸುತ್ತಾರೆ; ಅವಕಾಶಗಳ ಜಾತ್ರೆಯಲ್ಲಿ ನಿಂತಂತಿದ್ದವರು ಎಲ್ಲ ಮುಗಿದಾದ ನಂತರ ಶೆಡ್ಡು ಸೇರುವ ತೇರಿನಂತಾದವರ ಸಂಖ್ಯೆಗೇನೂ ಕೊರತೆಯಿಲ್ಲ. ಅಂಥಾದ್ದೊಂದು ಆಘಾತದಿಂದ ತತ್ತರಿಸಿ ಹೋಗಿದ್ದಾಕೆ ಮಂಗಳೂರು ಮೂಲದ ಹುಡುಗಿ (pooja hegde) ಪೂಜಾ ಹೆಗ್ಡೆ. ಒಂದು ಕಾಲದಲ್ಲಿ (rashmika mandanna) ರಶ್ಮಿಕಾ ಮಂದಣ್ಣಗಿಂತಲೂ ವೇಗವಾಗಿ ತೆಲುಗು ಚಿತ್ರರಂಗದಲ್ಲಿ ಬೆಳೆದು ನಿಂತಿದ್ದ ಪೂಜಾ, ವೃತ್ತಿ ಬದುಕಿನಲ್ಲಿ ಇಂಥಾ ಪಾತಾಳ ಕಾಣುತ್ತಾಳೆಂಬುದನ್ನು ಯಾರೆಂದರೆ ಯಾರೂ ಊಹಿಸಿರಲಿಕ್ಕಿಲ್ಲ!

ಸಿನಿಮಾ ಜಗತ್ತಿನ ಹವಾಮಾನ ಯಾರ ವಿಚಾರದಲ್ಲಿ ಹೇಗೆಲ್ಲ ಬದಲಾಗಬಹುದೆಂದು ಹೇಳಲು ಬರುವುದಿಲ್ಲ. ಒಂದರ ಹಿಂದೊಂದರಂತೆ ಅವಕಾಶಗಳು ಮುಗಿಬೀಳೋದನ್ನು ನೋಡಿ ನಂದೇ ಹವಾ ಎಂಬಂತೆ ಅಬ್ಬರಿಸಿದವರೆಲ್ಲ ಅಕ್ಷರಶಃ ಹವಾ ಇಳಿದು ಹೋದ ಬಲೂನಿನಂತೆ ಮುರುಟಿಕೊಂಡಿದ್ದಿದೆ. ಆದರೆ, ಈ ಹುಡುಗಿ ಪೂಜಾ ಅಂಥಾ ಯಾವುದೇ ಮೆರೆದಾಟವನ್ನೂ ನಡೆಸಿರಲಿಲ್ಲ. ಸಿಕ್ಕ ಅವಕಾಶವನ್ನೆಲ್ಲ ಬಳಸಿಕೊಂಡು ಯಶಸ್ಸಿನ ಏಣಿ ಹತ್ತಿ ನಕ್ಕಿದ್ದಳಷ್ಟೆ. ಅದೇನು ದುರಾದೃಷ್ಟ ಕವುಚಿಕೊಂಡಿತೋ ಗೊತ್ತಿಲ್ಲ; ಪೂಜಾಳ ಬೇಡಿಕೆ ಏಕಾಏಕಿ ಮಗುಚಿಕೊಂಡು ಬಿಟ್ಟಿತ್ತು. ಆ ನಂತರ ಮಂಗಳೂರು ಹುಡುಗಿಯ ಪಾಲಿಗೆ ಪಕ್ಕಾ ನಸೀಬುಗೇಡಿ ಪರ್ವವೊಂದು ಎದುರಾಗಿ ಬಿಟ್ಟಿತ್ತು.

ಗುಂಟೂರ್ ಖಾರಂನಂಥಾ ಬಿಗ್ ಬಜೆಟ್ ಚಿತ್ರಗಳೇ ಪೂಜಾ ಕೈ ತಪ್ಪಿ ಹೋಗಲಾರಂಭಿಸಿದ್ದವು. ಇಂಥಾ ಆಘಾತಗಳು ವರ್ಷವೊಂದರಲ್ಲೇ ಆಕೆಗೆ ಅನೇಕ ಬಾರಿ ಎದುರಾಗಿ ಬಿಟ್ಟಿತ್ತು. ಪರಿಸ್ಥಿತಿ ಎಲ್ಲಿಗೆ ಹೋಗಿ ಮುಟ್ಟಿತೆಂದರೆ, ಸರಿಕಟ್ಟಾದೊಂದು ಅವಕಾಶ ಸಿಕ್ಕಲೆಂಬಂತೆ ಪೂಜಾ ಕಾಯುವಂತಾಗಿತ್ತು. ಇಂಥಾ ಅನಿಶ್ಚಿತ ವಾತಾವರಣದಲ್ಲಿಯೇ ವರ್ಷಗಗಟ್ಟಲೆ ಕಾದಿದ್ದ ಪೂಜಾಗೆ ಇದೀಗ ತೆಲುಗಿನಲ್ಲಿ ಅವಕಾಶಕ್ಕಾಗಿ ಅರಸಿ ಪ್ರಯೋಜನವಿಲ್ಲ ಎಂಬ ಜ್ನಾನೋದಯವಾದಂತಿದೆ. ಅದರ ಫಲವಾಗಿಯೇ ಬಾಲಿವುಡ್ ನತ್ತ ಪ್ರಧಾನವಾಗಿ ಗಮನ ಹರಿಸಿದ್ದಾಳೆ.

ಸದ್ಯದ ಮಟ್ಟಿಗೆ ಪೂಜಾ ಮುಂದೆ ಬಾಲಿವುಡ್ಡಿನಲ್ಲಿ ಒಂದಷ್ಟು ಅವಕಾಶಗಳಿರುವಂತೆ ಕಾಣಿಸುತ್ತಿದೆ. ಮೊದಲನೆಯದ್ದಾಗಿ, ರೋಶನ್ ಆಂಡ್ರ್ಯೂಸ್ ನಿರ್ದೇಶನದ ಚಿತ್ರಕ್ಕಾಗಿನ ತಯಾರಿಯಲಲಿ ಪೂಜಾ ಬ್ಯುಸಿಯಾಗಿದ್ದಾಳೆ. ಈ ಸಿನಿಮಾದಲ್ಲಿ ಆಕೆ ಶಾಹಿದ್ ಕಪೂರ್ ಜೊತೆ ನಾಯಕಿಯಾಗಿ ನಟಿಸಲಿದ್ದಾಳೆ. ಕಾರ್ತಿಕ್ ಆರ್ಯನ್ ನಾಯಕನಾಗಿ ನಟಿಸಲಿರುವ, ಇನ್ನೂ ಶೀರ್ಷಿಕೆ ನಿಕ್ಕಿಯಾಗದ ಚಿತ್ರಕ್ಕೂ ಪೂಜಾ ನಾಯಕಿಯಾಗೋದು ಪಕ್ಕಾ. ಇನ್ನುಳಿದಂತೆ, ಮತ್ತೊಂದು ಚಿತ್ರದಲ್ಲಿ ಅಹಾನ್ ಶೆಟ್ಟಿಗೆ ನಾಯಕಿಯಹಾಗಿಯೂ ನಟಿಸಲು ಒಪ್ಪಿಕೊಂಡಿದ್ದಾಳೆ. ಇದುವರೆಗೂ ನಾನಾ ತೆರನಾದ ಪಾತ್ರಗಳಲ್ಲಿ, ಹಲವಾರು ಹಿಟ್ ಸಿನ ಇಮಾಗಳಲ್ಲಿ ನಟಿಸಿರುವಾಕೆ ಪೂಜಾ ಹೆಗ್ಡೆ. ಒಂದು ವನವಾಸದ ಬಳಿಕ ಆಕೆಯ ವೃತ್ತಿ ಬದುಕಿನಲ್ಲೀಗ ಸೆಕೆಂಡ್ ಇನ್ನಿಂಗ್ಸ್ ಶುರುವಾದಂತಿದೆ. ಅದರ ಪರಿಣಾಮ, ಫಲಿತಾಂಶಗಳೇನೆಂಬುದನ್ನು ಕಾಲವೇ ನಿರ್ಧರಿಸಲಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!