ಯಾವ ಕಮರ್ಶಿಯಲ್ ಸಿನಿಮಾಗಳಿಗೂ ಕಡಿಮೆಯಿಲ್ಲದಂತೆ ನಿರೀಕ್ಷೆಯ ತರಂಗಗಳನ್ನೆಬ್ಬಿಸಿದ್ದ ಚಿತ್ರ (pinki elli) `ಪಿಂಕಿ ಎಲ್ಲಿ’. ಪೃಥ್ವಿ ಕೋಣನೂರು (prithvi konanur)  ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ವಿಶ್ವಾದ್ಯಂತ ಹೆಸರು ಮಾಡಿದೆ. ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಸಾಮಾನ್ಯವಾಗಿ ಇಂಥಾ ಸಿನಿಮಾಗಳು ಪ್ರೇಕ್ಷಕರ ಪಾಲಿಗೆ ಮರೀಚಿಕೆಯಾಗುಳಿಯುತ್ತವೆ. ಆದರೆ, ಪಿಂಕಿ ಎಲ್ಲಿ ಚಿತ್ರವೀಗ ಸಿನಿಮಾ ಮಂದಿರಗಳಲ್ಲಿಯೂ ಬಿಡುಗಡೆಗೊಂಡಿದೆ. ಹಾಗೆ ಪ್ರೀತಿಯಿಂದ ಬಂದ ನೋಡಿದ್ದ ಪ್ರತಿಯೊಬ್ಬರ ನರನಾಡಿಗಳಿಗಿಳಿದು ಪಿಂಕಿ (pinki)  ಕಾಡಿದ್ದಾಳೆ. ಅಬ್ಬರವಿಲ್ಲದೆಯೇ ಆದ್ರ್ರಗೊಳಿಸುವ ಈ ಸಿನಿಮಾದ ಗುಣವನ್ನು ಪ್ರೇಕ್ಷಕರೆಲ್ಲ ಮೆಚ್ಚಿಕೊಂಡಿದ್ದಾರೆ.

ಇಲ್ಲಿ ಹಿನ್ನೆಲೆ ಸಂಗೀತದ ಆರ್ಭಟವಿಲ್ಲ, ಪಾತ್ರಗಳೂ ಕೂಡಾ ಸಹಜತೆಯ ಗೆರೆ ದಾಟಿ ವರ್ತಿಸುವುದಿಲ್ಲ, ಯಾವ ನಾಟಕೀಯತೆಗೂ ಇಲ್ಲಿ ಆಸ್ಪದವಿಲ್ಲ… ಹೀಗಿದ್ದರೂ ಒಂದು ಭರ್ಜರಿ ಸಸ್ಪೆನ್ಸ್ ಥ್ರಿಲ್ಲರ್ ಸೀನಿಮಾವನ್ನು ನಿವಾಳಿಸಿ ಎಸೆಯುವಂಥಾ ಅನುಭೂತಿಯೊಂದನ್ನು ಈ ಚಿತ್ರ ಮುಫತ್ತಾಗಿ ಕೊಟ್ಟು ಬಿಡುತ್ತದೆ. ಇಲ್ಲಿ ಪಾತ್ರವಾಗಿರೋ ಪ್ರತೀ ಜೀವಗಳ ಏರಿಳಿತಗಳೂ ಎದೆಗೆ ನಾಟುತ್ತವೆ. ಅಲ್ಲಿನ ವಿಷಾದ, ಕಣ್ಣಂಚು ದಾಟದ ದುಃಖ, ಭಾವಗಳೆಲ್ಲವೂ ಅನಾಯಾಸವಾಗಿ ನೋಡುಗರನ್ನು ದಾಟಿಕೊಳ್ಳುತ್ತದೆ. ಅಷ್ಟೊಂದು ಸಮರ್ಥವಾಗಿ ದೃಷ್ಯ ಕಟ್ಟುವಲ್ಲಿ ನಿರ್ದೇಶಕ ಪೃಥ್ವಿ ಕೋಣನೂರು (pruthvi konanur) ಗೆದ್ದಿದಾರೆ.

ಬೆಂಗಳೂರಿನಂಥಾ ಮಹಾ ನಗರಗಳಲ್ಲಿನ ಬದುಕಿನ ಕ್ರಮವೇ ಬೇರೆ. ಮೇಲುನೋಟಕ್ಕೆ ಥಳುಕು ಬಳುಕುಗಳನ್ನಿಟ್ಟುಕೊಂಡಿರುವ ಇಂಥಾ ನಗರಗಳ ಗರ್ಭದಲ್ಲಿ ಘಾಸಿಗೊಂಡ ಬದುಕುಗಳು ಸಾಕಷ್ಟು ಅಸಂಖ್ಯೆಯಲ್ಲಿದ್ದಾವೆ. ಒಂದು ಕಾಲದಲ್ಲಿ ನಡೆದಿದ್ದಂಥಾ ಎಳೆಯನ್ನೇ ಇಟ್ಟುಕೊಂಡು ನಿರ್ದೇಶಕರಿಲ್ಲಿ ದೃಷ್ಯ ಕಟ್ಟಿದ್ದಾರೆ. ಮುರಿದು ಬಿದ್ದ ಸಂಸಾರ, ಗಂಡನಿಂದ ದೂರವಾಗಿ ಪುಟ್ಟ ಮಗುವಿನೊಂದಿಗೆ ಬದುಕು ಕಟ್ಟಿಕೊಳ್ಳಬಯಸೋ ಹೆಣ್ಣು ಮಗಳು. ಆ ಕೆಲಸದ ಅನಿವಾರ್ಯತೆಯಿಂದ ಹಸುಗೂಸು ಪಿಂಕಿಯನ್ನು ಕೆಲಸದಾಕೆಗೆ ಒಪ್ಪಿದಾಗ ನಡೆಯೋ ದಿಗ್ಭ್ರಮೆ ಮೂಡಿಸೋ ಘಟನಾವಳಿಗಳೇ ಇಡೀ ಸಿನಿಮಾದ ಸಾರ.

ಹೆತ್ತವರ ಮುನಿಸಿಗೆ ಸಿಕ್ಕ ಲೋಕವರಿಯದ ಕೂಸು ಭಿಕ್ಷಾಟನೆಗೆ ಬಳಕೆಯಾಗುತ್ತದೆ. ಅಲ್ಲಿಂದ ಅದು ಹೇಗೋ ನಾಪತ್ತೆಯಾದ ಆ ಮ ಗು ಮತ್ತೆ ಹೆತ್ತವರ ಮಡಿಲು ಸೇರುತ್ತಾ ಎಂಬ ಕುತೂಹಲಕ್ಕೆ ಈ ಸಿನಿಮಾದ ತುಂಬಾ ರೋಚಕ ಉತ್ತರ ಸಿಗುತ್ತದೆ. ಅದನ್ನು ಸಿನಿಮಾ ಮಂದಿರಗಳಲ್ಲಿ ನೋಡಿದರೇನೇ ಚೆಂದ. ಇಲ್ಲಿ ಪರಿಸ್ಥಿತಿ ಅನಿವಾರ್ಯತೆಗೆ ಸಿಕ್ಕು ಘಟಿಸುವ ಘಟನಾವಳಿಗಳನ್ನು ನಿರ್ದೇಶಕರು ಕ್ರೈಂ ಎಂಬಂತೆ ವಿಜೃಂಭಿಸಿಲ್ಲ. ಅಂಥಾ ಅತಿಶಯಗಳು ಚಿತ್ರದುದ್ದಕ್ಕೂ ಎಲ್ಲಿಯೂ ಕಾಣ ಸಿಗುವುದಿಲ್ಲ. ಅದೇ ಒದಿಡೀ ಸಿನಿಮಾದ ಹೆಚ್ಚುಗಾರಿಕೆ ಮತ್ತು ಗೆಲುವಿಗೆ ಕಾರಣ. ಮಗುವನ್ನು ಭಿಕ್ಷಾಟನೆಗೆ ಬಿಟ್ಟ ಮನೆಗೆಲಸದ ಹಂಗಸಿನ ಹಿಂದಿರುವ ಅನಿವಾರ್ಯತೆ, ಆ ಕೂಸು ಅಚಾನಕ್ಕಾಗಿ ಮಡಿಲಿಗೆ ಬಿದ್ದಾಗ ಅದನ್ನು ತನ್ನದೇ ಎಂಬಂತೆ ಬೆಳೆಸುವ ಉಮೇದು ಪ್ರದರ್ಶಿಸೋ ಕಸ ಗುಡಿಸೋ ಮಹಿಳೆಯ ತುಮುಲ… ಇಂಥಾ ಅದೆಷ್ಟೋ ಸೂಕ್ಷ್ಮಗನ್ನು ಕಣ್ಣಿಗೆ ಕಟ್ಟುವಂತೆ, ಎದೆಗೆ ಮುಟ್ಟುವಂತರೆ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ.

ಇನ್ನುಳಿದಂತೆ, ಇಲ್ಲಿನ ಪಾತ್ರಗಳನ್ನು ನಿರ್ವಹಿಸಿದವರೆಲ್ಲರೂ ಒಬ್ಬರಿಗೊಬ್ಬರು ಮಿಇಲೆಂಬಂತೆ ಕಾಣಿಸಕೊಂಡಿದ್ದಾರೆ. ನಟನೆಯ ಗಂಧ ಗಾಳಿ ಇಲ್ಲದಿದ್ದರೂ ಆ ಪಾತ್ರಗಳಿಗೆ ಜೀವ ತುಂಬಿದ ಮಹಿಳೆಯರು ಮತ್ತು ಮಗುವನ್ನು ಕಳೆದುಕೊಂಡ ತಾಯಿಯಾಗಿ ಕಾಣಿಸಿಕೊಂಡಿರುವ ಅಕ್ಷತಾ ಪಾಂಡವಪುರ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವ ಗುಣಗಳನ್ನು ಹೊಂದಿರುವ ಪಿಂಕಿ ಎಲ್ಲಿ ಒಂದು ಅಪರೂಪದ ಚಿತ್ರ. ಅದನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ನೋಡುವ ಮೂಲಕ ಪ್ರೀತ್ಸಾಹಿಸಿದರೆ ಇಂಥಾ ಭಿನ್ನ ಪ್ರಯೋಗಗಳಿಗೆ ಅನುವು ಮಾಡಿ ಕೊಟ್ಟಂತಾಗುತ್ತದೆ. ಇಂಥಾದ್ದೊಂದು ಉತ್ಸಾಹವೀಗ ಪ್ರೇಕ್ಷಕರನ್ನು ಆವರಿಸಿಕೊಂಡಂತಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!