ಕ್ಷೇತ್ರ ಯಾವುದೇ ಆಗಿರಲಿ; ಅಡಿಗಡಿಗೆ ಆಘಾತವಾದಾಗಲೂ ಸಾವರಿಸಿಕೊಂಡು ಮುಂದುವರೆಯದಿದ್ದರೆ ಗೆಲುವು ದಕ್ಕುವುದಿಲ್ಲ. ಹಾಗೊಂದು ವೇಳೆ ವಾಮ ಮಾರ್ಗದಲ್ಲಿ ನುಸುಳಿ ದಕ್ಕಿಸಿಕೊಂಡರೂ ಅದರ ಆಯಸ್ಸು ಅಲ್ಪಕಾಲಿಕವಷ್ಟೆ. ಅಷ್ಟಕ್ಕೂ ಗೆಲುವೆಂಬುದು ಲೆಕ್ಕಕ್ಕಿಟ್ಟುಕೊಳ್ಳೋದು ಏಟು ಬಿದ್ದ ಮೇಲೂ ಎದ್ದು ನಿಂತು ಅವುಡುಗಚ್ಚಿ ಮುನ್ನಡೆಯೋರನ್ನಷ್ಟೆ. ಹುಡುಕಲು ನಿಂತರೆ ಸಿನಿಮಾ ರಂಗದಲ್ಲಿ ಹಾಗೆ ಏಳುಬೀಳಿನ ಹಾದಿಯಲ್ಲಿ ಮುಂದುವರೆದು ಕನಸು ನನಸಾಗಿಸಿಕೊಂಡ, ಗೆಲುವು ಕಂಡ ಸಾಕಷ್ಟು ಮಂದಿ ಕಾಣ ಸಿಗುತ್ತಾರೆ. ಇದೇ ಸೆಪ್ಟೆಂಬರ್ ೫ರಂದು ಬಿಡುಗಡೆಗೊಳ್ಳಲಿರುವ ಓಂ ಶಿವಂ ಚಿತ್ರದ ನಿರ್ದೇಶಕ ಅಲ್ವಿನ್ ಕೂಡಾ ಅದೇ ಸಾಲಿನಲ್ಲಿ ಸೇರಬಹುದಾದ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಹಲವಾರು ನಿರಾಸೆಗಳನ್ನು ನುಂಗಿಕೊಂಡೇ ಅಲ್ವಿನ್ ಒಂದು ಚೌಕಟ್ಟಿನಲ್ಲಿ ಚೆಂದದ ಚಿತ್ರವೊಂದನ್ನು ನಿರ್ದೇಶನ ಮಾಡಿರುವ ತೃಪ್ತ ಭಾವವನ್ನು ತನ್ನದಾಗಿಸಿಕೊಂಡಿದ್ದಾರೆ.
ಹಾಡೊಂದರ ಮೂಲಕ ಸದ್ದು ಮಾಡಿದ್ದ ಓಂ ಶಿವಂ ಚಿತ್ರ ಯಾವ ಗದ್ದಲವೂ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡಿತ್ತು. ಅದೇ ಹಾದಿಯಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಹಂತ ಹಂತವಾಗಿ ಪ್ರೇಕ್ಷಕರ ಮುಂದೆ ಒಂದಷ್ಟು ಬೆರಗಿನ ಅಂಶಗಳನ್ನು ಹರವಲು ಅಣಿಗೊಂಡಿದೆ. ಅಂದಹಾಗೆ, ನಿರ್ದೇಶಕ ಅಲ್ವಿನ್ ಕನ್ನಡ ಸಿನಿಮಾ ರಂಗಕ್ಕೆ ಹೊಸಬರೇನಲ್ಲ. ಆದರೆ, ಹೊಸಬರ ತಂಡ ಕಟ್ಟಿಕೊಂಡು ಅವರು ಈ ಸಿನಿಮಾವನ್ನು ರೂಪಿಸಿದ್ದಾರೆ. ಭಾರ್ಗವ್ ಕೃಷ್ಣ ಓಂ ಶಿವಂ ಮೂಲಕವೇ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕೃಷ್ಣ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹೊಸ ಹುಡುಗಿ ವಿರಾನಿಕಾ ಶೆಟ್ಟಿ ನಾಯಕಿಯಾಗಿ ಜೊತೆಯಾಗಿದ್ದಾರೆ.
ಹೀಗೆ ಒಂದಷ್ಟು ಸಕಾರಾತ್ಮಕ ವಾತಾವರಣದಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ಈ ಸಿನಿಮಾ ಅಲ್ವಿನ್ ಅವರ ಜೀವಮಾನದ ಕನಸು. ಇದರ ಗೆಲುವಿನಿಂದಲೇ ಈ ಹಾದಿಯಗುಂಟ ಕಂಡುಂಡ ಒಂದಷ್ಟು ನೋವು, ನಿರಾಸೆಗಳ ಗಾಯ ಮಾಯುವ ಗಾಢ ನಿರೀಕ್ಷೆ ಅಲ್ವಿನ್‌ಗಿದ್ದಂತಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ರಾಗಿಗುಡ್ಡದವರಾಗ ಅಲ್ವಿನ್ ಎಳವೆಯಿಂದಲೇ ರಂಗಭೂಮಿಯ ನಂಟು ಹೊಂದಿದ್ದವರು. ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಯಾಗಿದ್ದ ಅವರು ಮಧುಸೂಧನ್ ಘಾಟ್ ಮತ್ತು ಲವ ಜಿಯಾರ್ ಅವರಿಂದ ರಂಗ ತರಬೇತಿ ಪಡೆದುಕೊಂಡಿದ್ದರು. ಕಾಲೇಜು ದಿನಗಳಲ್ಲಿಯೇ ನಾಟಕ ರಚಿಸಿ, ನಿರ್ದೇಶನ ಮಾಡಿ ನಟಿಸುವ ಮೂಲಕ ಗಮನ ಸೆಳೆದುಕೊಂಡಿದ್ದವರು ಅಲ್ವಿನ್.
ಆ ನಂತರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಡೆಯಿಂದಲೂ ಸೇರಿದಂತೆ ಆರು ನೂರಕ್ಕೂ ಹೆಚ್ಚಿನ ಬೀದಿ ನಾಟಕಗಳಲ್ಲಿ ಅಲ್ವಿನ್ ನಟಿಸಿದ್ದರು. ಶಾಲಾ ಕಾಲೇಜು ದಿನಗಳಲ್ಲಿಯೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಈತ, ಪದವಿ ಪಡೆದುಕೊಂಡಾದ ನಂತರ ಒಂದೊಳ್ಳೆ ವೃತ್ತಿಯಲ್ಲಿ ಮುಂದುವರೆಯಬಹುದಾದ ವಿಪುಲ ಅವಕಾಶಗಳಿದ್ದವು. ಆದರೆ, ಆ ಕ್ಷಣದಲ್ಲಿ ಕೈಹಿಡಿದು ಸೆಳೆದುಕೊಂಡಿದ್ದು ಸಿನಿಮಾ ಕನಸು. ಅದರ ಸೆಳವಿಗೆ ಸಿಕ್ಕ ಅಲ್ವಿನ್ ಬ್ಯಾಗೇರಿಸಿಕೊಂಡು ಊರು ಬಿಟ್ಟು ಸೀದಾ ಗಾಂಧಿನಗರದ ಗಲ್ಲಿಗೆ ಬಂದು ನಿಂತಾಗಲೇ ಬದುಕಿನ ಮತ್ತೊಂದು ಮಗ್ಗುಲಿನ ವಾಸ್ತವದರ್ಶನವಾಗಲಾರಂಭಿಸಿತ್ತು. ಅವರ ಒಂದಷ್ಟು ರಾತ್ರಿಗಳು ಪಾರ್ಕುಗಳಲ್ಲಿ ಕಳೆದಿದ್ದವು. ಅದೆಷ್ಟೋ ಮುಂಜಾವುಗಳು ಸಾರ್ವಜನಿಕ ಶೌಚಾಲಯಗಳಲ್ಲಿ ತೆರೆದುಕೊಂಡಿದ್ದವು. ಮತ್ತೊಂದಷ್ಟು ವರ್ಷಗಳು ಯಾರದ್ದೋ ರೂಮುಗಳಲ್ಲಿ ಮುದುರಿಕೊಂಡಿದ್ದವು.
ಇಷ್ಟೆಲ್ಲ ಆಗುವ ಹೊತ್ತಿಗೆ ಅಲ್ವಿನ್ ಒಂದಷ್ಟು ಸೀರಿಯಲ್ಲಿಗಳಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ, ಸಾಕಷ್ಟು ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಾ ಪಳಗಿಕೊಂಡಿದ್ದರು. ಆ ಹಂತದಲ್ಲಿಯೇ ನಿರ್ದೇಶನವೇ ತನ್ನ ಭವಿಷ್ಯ ಎಂಬ ತೀರ್ಮಾನಕ್ಕೆ ಬಂದಿದ್ದ ಅಲ್ವಿನ್ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಅದರಲ್ಲೊಂದು ಬಿಡುಗಡೆಗೊಂಡರೆ, ಮತ್ತೊಂದು ಎಲ್ಲ ಚೆಂದಗಿದ್ದರೂ ಬಿಡುಗಡೆ ಭಾಗ್ಯ ಸಿಗದ ಆಘಾತ ಕಾಡಿತ್ತು. ಈಗಲೂ ಬುಡಕಟ್ಟು ಸಮುದಾಯದ ಹೆಣ್ಣು ಜೀವಗಳನ್ನು ಕಾಡುತ್ತಿರುವ ಅನಿಷ್ಠ ಪದ್ಧತಿಯೊಂದರ ಸುತ್ತಾ ಮತ್ತೊಂದು ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು. ಸಾಮಾನ್ಯವಾಗಿ ಓರ್ವ ನಿರ್ದೇಶಕನಾಗಿ ಸಿನಿಮಾಗಳಿಗೆ ಹಿನ್ನಡೆ ಉಂಟಾದರೆ ಅದರ ಸುತ್ತಾ ನಾನಾ ರೂಮರುಗಳೇಳುತ್ತವೆ. ವೃತ್ತಿ ಬದುಕಿಗೆ ಹೊಡೆತವೂ ಬೀಳುತ್ತದೆ. ಅಂಥಾ ಎಲ್ಲ ಆಘಾತ, ಅವಮಾನಗಳನ್ನು ದಾಟಿಕೊಂಡ ಅಲ್ವಿನ್ ಪಾಲಿಗೆ ವರವಾಗಿ ಸಿಕ್ಕ ಚಿತ್ರ ಓಂ ಶಿವಂ!
ಕೆ.ಎನ್ ಕೃಷ್ಣ ಅವರಿಗೆ ಅಲ್ವಿನ್ ಕಥೆ ಹೇಳಿದಾಗಲೇ ಅವರು ಖುಷಿಗೊಂಡಿದ್ದರಂತೆ. ಆ ಹಂತದಲ್ಲಿಯೇ ಕೃಷ್ಣರ ಪುತ್ರ ಭಾರ್ಗವ್ ಈ ಕಥೆಯ ನಾಯಕನ ಪಾತ್ರಕ್ಕೆ ಒಗ್ಗುತ್ತಾರೆಂದು ಅಲ್ವಿನ್‌ಗೆ ಅನ್ನಿಸಿತ್ತಂತೆ. ಅದಾಗಲೇ ಸರ್ವ ತಯಾರಿಗಳನ್ನು ಮುಗಿಸಿಕೊಂಡು ಒಂದೊಳ್ಳೆ ಅವಕಾಶಕ್ಕಾಗಿ ಕಾದಿದ್ದ ಭಾರ್ಗವ್‌ಗೂ ಈ ಕಥೆ ಇಷ್ಟವಾದದ್ದೇ ಓಂ ಶಿವಂಗೆ ವಿದ್ಯುಕ್ತ ಚಾಲನೆ ಸಿಕ್ಕಿತ್ತು. ಆರಂಭದಲ್ಲಿಯೇ ಚೌಕಟ್ಟು ಹಾಕಿಕೊಂಡು, ಆ ಪರಿಧಿಯಲ್ಲಿ ಹೊಸತನದ ಸಿನಿಮಾವೊಂದನ್ನು ಕಟ್ಟಿ ಕೊಟ್ಟಿರುವ ತೃಪ್ತಿ ಅಲ್ವಿನ್ ಅವರಲ್ಲಿದೆ. ಗಾಢ ಪ್ರೇಮದ ಸುತ್ತ ಹಬ್ಬಿಕೊಂಡಿರುವ ಡ್ರಗ್ಸ್ ಜಾಲ ಮುಂತಾದ ವಾಸ್ತವಿಕ ಅಂಶಗಳನ್ನು ಹೊಂದಿರುವ ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸಲಿದೆ ಎಂಬ ತುಂಬು ಭರವಸೆಯೂ ಅಲ್ವಿನ್‌ಗಿದೆ.
ಇದೇ ವರ ಮಹಾಲಕ್ಷ್ಮಿ ಹಬ್ಬದ ದಿನದಂದು ಈ ಸಿನಿಮಾದ ಹಾಡೊಂದು ಬಿಡುಗಡೆಯಾಗಲಿದೆ. ಇದೇ ತಿಂಗಳ ಇಪ್ಪತೈದರಂದು ಜಬರ್ದಸ್ತಾದ ಟ್ರೈಲರ್ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ. ಆ ಮೂಲಕ ಒಟ್ಟಾರೆ ಚಿತ್ರದ ಆಂತರ್ಯದ ಚಿತ್ರಣ ಪ್ರೇಕ್ಷಕರನ್ನು ದಾಟಿಕೊಳ್ಳಲಿದೆ. ಇದು ಹೊಸಬರ ಚಿತ್ರ. ಇದರ ಹಿಂದೆ ಅಪ್ಪಟ ಸಿನಿಮಾ ವ್ಯಾಮೋಹಿಗಳ ಪರಿಶ್ರಮವಿದೆ. ಖುದ್ದು ನಿರ್ದೇಶಕ ಅಲ್ವಿನ್ ಇದುವರೆಗೂ ಸಾಕಷ್ಟು ಎಡರು ತೊಡರುಗಳನ್ನು ದಾಟಿ ಬಂದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಒಂದು ಹಂತದಲ್ಲಿ ಸಿನಿಮಾ ರಂಗದ ಬಾಗಿಲು ಮುಚ್ಚಿದ ಸ್ಥಿತಿ ಎದುರಾದಾಗ, ಉಪನ್ಯಾಸಕರಾಗಿಯಾದರೂ ಬದುಕೋ ಅವಕಾಶ ಅವರ ಮುಂದಿತ್ತು. ಆದರೆ, ಅದರತ್ತ ಓಗೊಟ್ಟು ಸೇಫ್ ಝೋನಿನತ್ತ ವಾಲದಂತೆ ನೋಡಿಕೊಂಡಿದ್ದದ್ದು ಅವರೊಳಗೆ ಉತ್ಕಟವಾಗಿದ್ದ ಸಿನಿಮಾ ವ್ಯಾಮೋಹ. ಅಂಥಾ ದೃಢವಾದ ಹೆಜ್ಜೆಗಳ ಪ್ರತಿಫಲದಂತಿರುವ ಓಂ ಶಿವಂ ಚಿತ್ರ ತೆರೆಗಾಣಲು ತಿಂಗಳಷ್ಟೇ ಬಾಕಿ ಉಳಿದುಕೊಂಡಿದೆ.