ಚಿತ್ರರಂಗದ ಮಟ್ಟಿಗೆ ಅಲ್ಲಿನ ಝಗಮಗದಷ್ಟು, ಬಣ್ಣಗಳಷ್ಟು ಸಂಬಂಧಗಳು ಗಾಢವಾಗಿರೋದು ಅಪರೂಪ. ಆ ಲೋಕದಲ್ಲೊಂದು ಪ್ರೀತಿ ಚಿಗುರಿಕೊಂಡು, ಮದುವೆಯ ಹಂತ ತಲುಪಿತೆಂದರೆ ಸಾಕು; ಅದು ಮುರಿದು ಬೀಳುವ ಮುನ್ಸೂಚನೆಯೂ ಒಟ್ಟೊಟ್ಟಿಗೇ ಕಾಣಿಸಲಾರಂಭಿಸುತ್ತೆ. ಯಾಕೆಂದರೆ, ಅಲ್ಲಿ ಬಂಧವೆಂಬುದು ಗಾಢವಾಗಿ ಮನಸಿಗಂಟಿಕೊಂಡಿರುವುದಿಲ್ಲ. ಪ್ರತಿಷ್ಠೆ, ದುಗ್ಗಾಣಿಯ ಅಬ್ಬರದ ನಡುವೆ ಸಂವೇದನೆಗಳೇ ನಡ ಮುರಿದುಕೊಂಡು ಬೀಳುತ್ತವೆ. ಈ ಮಾತಿಗೆ ಸೂಕ್ತ ಉದಾಹರಣೆಗಳು ಇತ್ತೀನ ದಿನಗಳಲ್ಲಿ ತೆಲುಗು ಚಿತ್ರರಂಗದಲ್ಲಿ ವ್ಯಾಪಕವಾಗಿ ಸಿಗಲಾರಂಭಿಸಿವೆ. ಅದರ ಭಾಗವಾಗಿಯೇ (megha star chiranjeevi)  ಮೆಘಾ ಸ್ಟಾರ್ ಚಿರಂಜೀವಿ ಫ್ಯಾಮಿಲಿಗೆ ಮತ್ತೊಂದು ಆಘಾತ ಎದುರಾಗಿದೆ!

ಹಾಗೆ ನೋಡಿದರೆ, ಇದು ಆ ಕುಟುಂಬದ ಪಾಲಿಗೆ ಹೊಸಾ ಶಾಕ್ ಏನಲ್ಲ. ಇದು ಇಲ್ಲಿಗೇ ಬಂದು ನಿಲ್ಲುತ್ತದೆ ಎಂಬಂಥಾ ಸ್ಪಷ್ಟ ಸುಳಿವು ಈಗೊಂದಷ್ಟು ದಿನಗಳಿಂದ ಸಿಗಲಾರಂಭಿಸಿತ್ತು. ಈಗ್ಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ನಿಹಾರಿಕಾ ಕೊನಿಡೇಲಾ, ತನ್ನ ಸಂಸಾರ ಹಳಿ ತಪ್ಪುತ್ತಿರೋದರ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ರವಾನಿಸಲಾರಂಭಿಸಿದ್ದಳು. ಅಂದಹಾಗೆ, ಈ ನಿಹಾರಿಕಾ ಮೆಘಾಸ್ಟಾರ್ ಚಿರಂಜೀವಿಯ ಸಹೋದರ ಕಂ ನಟ ನಾಗ ಬಾಬು ಮಗಳು. ಈಗೆ 2020ರಲ್ಲಿ ಗುಂಟೂರಿನ ಪ್ರತಿಷ್ಟಿತ ಮನೆತನದ ಚೈತನ್ಯ ಜೊನ್ನಲಗಡ್ಡ ಎಂಬಾತನೊಂದಿಗೆ ವೈಭವೋಪೇತವಾಗಿ ನಡೆದಿತ್ತು. ಅದೇನು ಕಿಸುರೋ ಗೊತ್ತಿಲ್ಲ; ಕೈಯ ಮೇಲಿನ ಮದರಂಗಿಯ ರಂಗು ಮಾಯುವ ಮುನ್ನವೇ ಈ ಸಂಸಾರದಲ್ಲಿ ಅಪಸ್ವರಗಳು ಏಳಲಾರಂಭಿಸಿದ್ದವು.

ಒಂದು ಮೂಲದ ಪ್ರಕಾರ, ಅದಾಗಲೇ ಒಂದಷ್ಟು ವಿಚ್ಛೇದನಗಳ ಮೂಲಕ ಪ್ರಹಾರ ಅನುಭವಿಸಿದ್ದ ಮೆಘಾ ಸ್ಟಾರ್ ಫ್ಯಾಮಿಲಿಯ ಹಿರೀಕರು ಈ ಬಗ್ಗೆ ಎಚ್ಚರ ವಹಿಸಿದ್ದರು. ರಾಜಿ ಸಂಧಾನ ನಡೆಸಿ, ತಿಳಿ ಹೇಳುವ ಮೂಲಕ ಮತ್ತೆ ನಿಹಾರಿಕಾಳ ಸಂಸಾರವನ್ನು ಹಳಿಗೆ ಮರಳಿಸಲು ಹರಸಾಹಸ ಪಟ್ಟಿದ್ದರು. ಇದೆಲ್ಲದರಿಂದಾಗಿ, ಒಂದೆರಡು ವರ್ಷಗಳ ಕಾಲ ಈ ಸಂಸಾರ ನೌಕೆ ವಾಲಾಡುತ್ತಲೇ ಪಯಣ ನಡೆಸಿತ್ತು. ಆದರೆ, ಗಂಡ ಹೆಂಡಿರ ನಡುವಿನ ಮನಸ್ಥಾಪಗಳು ಸುಪ್ರಬಾತದಂತೆ ಪ್ರತಿನಿತ್ಯವೂ ಮೊಳಗಲಾರಂಭಿಸಿದ್ದೇ, ನಿಹಾರಿಕಾ ಮತ್ತು ಚೈತನ್ಯ ಅತ್ಯಂತ ಪ್ರೌಢ ಮನಸ್ಥಿತಿಯಿಂದ ನಿರ್ಧಾರ ತಳೆದಿದ್ದಾರೆ. ಯಾವುದೇ ಗಲಾಟೆ, ಗದ್ದಲಗಳಿಗೆ ಎಡೆ ಮಾಡಿಕೊಡದಂತೆ ದೂರಾಗುವ ತೀರ್ಮಾನಕ್ಕೆ ಬಂದಿದ್ದಾರೆ.

ಈಗ್ಗೆ ವರ್ಷದ ಹಿಂದೆಯೇ ಇಬ್ಬರೂ ಸಮ್ಮತಿಯ ಮೇರೆಗೆ ವಿಚ್ಚೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದೀಗ ಊರ್ಜಿತಗೊಂಡಿದೆಯಂತೆ. ಈ ಮೂಲಕ ನಿಹಾರಿಕಾ ಮತ್ತು ಚೈತನ್ಯ ಅಧಿಕೃತವಾಗಿಯೇ ದೂರಾಗಿದ್ದಾರೆ. ಅಲ್ಲಿಗೆ ಮೆಘಾ ಸ್ಟಾರ್ ಕುಟುಂಬದ ಮತ್ತೊಂದು ಸಂಸಾರ ಪರ್ಮನೆಂಟಾಗಿಯೇ ಮಗುಚಿಕೊಂಡಿದೆ. ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಒಂದರ ಹಿಂದೊಂದರಂತೆ ಎರಡು ವಿಚ್ಚೇಧನ ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಮೂರನೇ ಮದುವೆಯಾಗಿದ್ದ ಪವನ್, ಆಕೆಗೂ ವಿಚ್ಚೇಧನ ಕೊಡುವ ತಯಾರಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಅಂತೂ ಈ ಮೂಲಕ ಬಣ್ಣಗಳ ಲೋಕದಲ್ಲಿ ಬಂಧಕ್ಕೆ ಆಯಸ್ಸು ಕಡಿಮೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!