ಬಾಲಿವುಡ್ ಮತ್ತು ಹಾಲಿವುಡ್ಡಿನ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವಾಕೆ ನಿಧಿ ಅಗರ್ವಾಲ್. ಈಗೊಂದು ದಶಕದಿಂದ ಸಿನಿಮಾ ರಂಗದಲ್ಲಿ ಸಕ್ರಿಯಳಾಗಿರುವ ನಿಧಿ ಉತ್ತರ ಭಾರತದ ಹುಡುಗಿಯಾದರೂ ಹುಟ್ಟಿ ಬೆಳೆದಿದ್ದು ಹೈದರಾಬಾದಿನಲ್ಲಿಯೇ. ಈ ಕಾರಣದಿಂದಲೇ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಈಕೆಗೆ ಹೇಳಿಕೊಳ್ಳುವಂಥಾ ಗೆಲುವು ಸಿಕ್ಕಿರಲಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ಒಂದಷ್ಟು ಚಾಲ್ತಿಯಲ್ಲಿದ್ದ ಈಕೆ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಚಿತ್ರದಲ್ಲಿ ನಟಿಸಿದ್ದಳು. ಇದೀಗ ಖಾಸಗೀ ಸಮಾರಂಭವೊಂದಕ್ಕೆ ಸರ್ಕಾರಿ ವಾಹನದಲ್ಲಿ ಎಂಟ್ರಿ ಕೊಡುವ ಮೂಲಕ ನಿಧಿ ನಾನಾ ದಿಕ್ಕುಗಳಿಂದ ಟೀಕೆಗಳನ್ನು ಎದುರಿಸುವಂತಾಗಿದೆ.
ಸರ್ಕಾರಿ ವಾಹನಗಳನ್ನು ಸರ್ಕಾರಿ ಅಧಿಕಾರಿಗಳೇ ಖಾಸಗಿ ಅನುಕೂಲಕ್ಕೆ ಬಳಸುವಂತಿಲ್ಲ. ಹಾಗಿರುವಾಗ ಅದ್ಯಾವುದೋ ಖಾಸಗಿ ಕಾರ್ಯಕ್ರಮಕ್ಕೆ ನಟಿಯೊಬ್ಬಳು ಸರ್ಕಾರಿ ವಾಹನದಲ್ಲಿ ಎಂಟ್ರಿ ಕೊಟ್ಟರೆ ಅದು ವಿವಾದವಾಗದಿರಲು ಸಾಧ್ಯವೇ? ಇತ್ತೀಚೆಗೆ ಮಳಿಗೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ನಿಧಿ ಅತಿಥಿಯಾಗಿ ಪಾಲ್ಗೊಂಡಿದ್ದಳು. ಹೇಳಿಕೇಳಿ ಇದು ಪಾಪರಾಜಿಗಳ ಜಮಾನ. ನಟಿಯರು ಸುಳಿದಾಡೋದನ್ನೇ ಕಾದು ಕೂರುವ ಇಂಥವರ ಪಾಲಿಗೆ ಅಂಥವರು ನಿಂತಿದ್ದು, ತಿರುಗಿದ್ದು, ಹಾಯ್ ಅಂದಿದ್ದು, ಕೆಲವೊಮ್ಮೆ ಥುಪುಕ್ಕನೆ ಉಗಿದದ್ದೂ ಕೂಡಾ ಕಂಟೆಂಟೇ. ಇದೇ ದೆಸೆಯಲ್ಲಿ ನಿಧಿ ಕಾರಿಂದ ಇಳಿಯೋ ದೃಶ್ಯ ಕೂಡಾ ನಾನಾ ಆಂಗಲ್ಲುಳ್ಲಿ ಸೆರೆಯಾಗಿತ್ತು.
ಅದು ಸರ್ಕಾರಿ ಕಾರೆಂಬ ಸುಳಿವು ಸಿಗುತ್ತಲೇ ಕೆಲ ನೆಟ್ಟಿಗರು ನಿಧಿ ಅಗರ್ವಾಲ್‌ಳನ್ನು ಟೀಕಿಸಿದ್ದರು. ಕಡೆಗೂ ಆ ಬಗ್ಗೆ ನಿಧಿ ಸಮಜಾಯಿಶಿ ಕೊಟ್ಟಿದ್ದಾಳೆ. ಆ ಮೂಲಕ ಮತ್ತೊಂದಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಾಳೆ. ತಾನು ಇಂಥಾದ್ದೇ ವಾಹನ ಬೇಕೆಂದು ಬೇಡಿಕೆ ಇಟ್ಟಿರಲಿಲ್ಲ. ಆದರೀಗ ಸರ್ಕಾರಿ ಅಧಿಕಾರಿಗಳೇ ನನಗೆ ಆ ವಾಹನ ಕಳಿಸಿದ್ದರೆಂದು ಸುದ್ದಿಯಾಗುತ್ತಿದೆ. ಆದರೆ ಆಯೋಜಕರೇ ಅದನ್ನು ಕಳಿಸಿದ್ದರೆಂದಿದ್ದಾಳೆ. ಆಯೋಜಕರು ಆಂಧ್ರ ಸರ್ಕಾರದ ಬೋರ್ಡ್ ಇರುವ ಕಾರನ್ನು ಹೇಗೆ ಕಳಿಸಲು ಸಾಧ್ಯ? ತನ್ನೊಂದಿಗೆ ನಟಿಸಿದ್ದಳೆಂಬ ಕಾರಣಕ್ಕೆ ಪವನ್ ಕಲ್ಯಾಣ್ ಈಕೆಯ ಬಗ್ಗೆ ಇಷ್ಟೊಂದು ಉದಾರಿಯಾದರಾ? ಅಧಿಕಾರಿಗಳಿಗೆ ಹೇಳಿ ನಿಧಿ ಸರ್ಕಾರಿ ವಾಹನದಲ್ಲಿ ಅಡ್ಡಾಡುವ ಅವಕಾಶ ಕಲ್ಪಿಸಿದರಾ? ಈ ಬಗ್ಗೆ ವಿಪಕ್ಷಗಳು ಪವನ್ ಕಲ್ಯಾಣ್ ಮೇಲೆ ಆರೋಪಗಳ ಸುರಿಮಳೆಗೈಯುತ್ತಿದ್ದಾವೆ!