ನ್ನಡ ಚಿತ್ರರಂಗದ ಮಟ್ಟಿಗಿದು ಹೊಸತನ, ಪ್ರಯೋಗಾತ್ಮಕ ಗುಣಗಳು ಮೇಳೈಸಿರುವ ಸಮೃದ್ಧ ಕಾಲಮಾನ. ಅದರ ಭಾಗವಾಗಿಯೇ ಸೋಲು ಗೆಲುವುಗಳಾಚೆಗೆ ಒಂದಷ್ಟು ಪ್ರಯತ್ನಗಳು ಜರುಗುತ್ತಿವೆ. ಕನ್ನಡದ ಪ್ರೇಕ್ಷಕರಿಗೆ ಹೊಸಾ ಅನುಭೂತಿ ಕೊಡಮಾಡವ ಸಿನಿಮಾಗಳು ಒಂದರ ಹಿಂದೊಂದರಂತೆ ರೂಪುಗೊಳ್ಳುತ್ತಿವೆ. ಆ ಸಾಲಿಗೆ ಸಾರಾಸಗಟಾಗಿ ಸೇರ್ಪಡೆಗೊಳ್ಳುವ ಲಕ್ಷಣಗಳನ್ನು ಹೊಂದಿರುವ ಚಿತ್ರ (nasab) `ನಸಾಬ್’. ಶಿಜ (shija) ನಿರ್ದೇಶನ ಮಾಡಿರುವ ಈ ಚಿತ್ರದ ಬಹುತೇಕ ಚಿತ್ರೀಕರಣವೀಗ ಮುಗಿದಿದೆ. ಹಾಗೆ ಸದ್ದೇ ಇಲ್ಲದೆ ಎಲ್ಲವನ್ನೂ ಸಮಾಪ್ತಿಗೊಳಿಸಿಕೊಂಡಿರುವ ಈ ಸಿನಿಮಾದ ಶಿರ್ಷಿಕೆ ಅನಾವರಣ ಕಾರ್ಯಕ್ರಮ ಧಾರ್ಮಿಕ ಗುರುಗಳು, ನಾನಾ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಅರ್ಥವತ್ತಾಗಿ ನೆರವೇರಿದೆ.

ನಸಾಬ್ (nasab) ಅಂತೊಂದು ಪದ ಕಿವಿ ಸೋಕುತ್ತಲೇ ಮಾಸ್ ಫೀಲೊಂದು ಗರಿಗೆದರಿಕೊಳ್ಳುತ್ತೆ. ಹಾಗಾದರೆ, ಇದು ಯಾವ ಬಗೆಯ ಚಿತ್ರ? ಅದರ ಕಥೆಯ ಅಸಲೀ ಆಂತರ್ಯ ಎಂಥಾದ್ದು? ಹೀಗೆ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೆ ಚಿತ್ರತಂಡ ಉತ್ತರ ಕೊಡುವ ಪ್ರಯತ್ನವನ್ನೂ ಮಾಡಿದೆ. ಅದರನ್ವಯ ಹೇಳೋದಾದರೆ, ನಸಾಬ್ ಎಬುದು ಉತ್ತರ ಕರ್ನಾಟಕದ ಮೂಲೆಯೊಂದರ ಲಂಬಾಣಿ ತಾಂಡವೊಂದನ್ನು ಕೇಂದ್ರವಾಗಿರಿಸಿಕೊಂಡಿರುವ ಕಥಾನಕ. ಬಂಜಾರ ತಾಂಡವೊಂದರ ಹುಡುಗನೊಬ್ಬ ತನಗೆ ಕವುಚಿಕೊಂಡ ಎಲ್ಲ ಮಬ್ಬುಗಳನ್ನು ಮೀರಿಕೊಂಡು, ಅಕ್ಷರವನ್ನು ಧ್ಯಾನಿಸಿ ಹೊರಡುವ ಕಥೆ ಇಲ್ಲಿದೆಯಂತೆ.

ಕೆ. ಕಿಶೋರ್ ಕುಮಾರ್

ಅಂದಹಾಗೆ, ಇದು ಎಂಭತೈದರ ಕಾಲಮಾನದಲ್ಲಿ ಘಟಿಸೋ ಕಥನ. ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಆಪ್ತ ಸಹಾಯಕರಾದ ಕೆ. ಕಿಶೋರ್ ಕುಮಾರ್ ಅವರ ಜೀವನಾಧಾರಿತ ಕಥೆ `ನಸಾಬ್’. ಕಿಶೋರ್ ಕುಮಾರ್ ಜೀವನ ಕಥನವೊಂದು ಈ ಹಿಂದೆಯೇ ಪುಸ್ತಕ ರೂಪ ಪಡೆದುಕೊಂಡಿತ್ತು. ನಿರ್ದೇಶಕ ಶಿಜ ಅದಕ್ಕೆ ದೃಷ್ಯರೂಪ ಕೊಟ್ಟಿದ್ದಾರೆ. ಕಿಶೋರ್ ಕುಮಾರ್ ಅವರ ಮಡದಿ ಕೆ. ಸುಜಾತ ಕೀರ್ತಿ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕಥೆ, ಸಂಭಾಷಣೆ ಮತ್ತು ಸಂಗೀತ ನಿರ್ದೇಶನವನ್ನು ರಾಗಂ ನಿರ್ವಹಿಸಿದ್ದಾರೆ.

ಕೆ. ಸುಜಾತ, ನಿರ್ಮಾಪಕಿ

ನಸಾಬ್ ಅಂದರೆ ಪರಮೋಚ್ಛ ನಾಯಕ ಎಂಬ ಅರ್ಥವಿದೆಯಂತೆ. ಅದಕ್ಕೂ ಇಲ್ಲಿನ ಕಥೆಗೂ ಅವಿನಾಭಾವ ನಂಟಿದೆ. ಎಂಭತ್ತರ ದಶಕದಲ್ಲಿ ಬಡತನವೂ ಸೇರಿದಂತೆ, ಸಖಲ ಸಮಸ್ಯೆಗಳ ಕೂಪದಂತಿದ್ದ ಬಂಜಾರ ತಾಂಡಾದಿಂದ ಎದ್ದು ನಿಲ್ಲುವ ಕಿಶೋರ್ ಕುಮಾರ್ ಪಾತ್ರವನ್ನು ಕೀರ್ತಿ ಕುಮಾರ್ ನಿರ್ವಹಿಸಿದ್ದಾನೆ. ನಾಯಕಿಯಾಗಿ ಅಮೃತಾ ನಟಿಸಿದ್ದಾರೆ. ಮುಂಬೈ ಹುಡುಗಿ ಶಫಾನಿ ಸಿಂಗ್ ಮುಖ್ಯ ಪಾತ್ರೊಂದಕ್ಕೆ ಜೀವ ತುಂಬಿದ್ದಾಳೆ. ಇನ್ನುಳಿದಂತೆ ಘಟಾನುಘಟಿ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಪದ್ಮಜಾ ರಾವ್ ಮತ್ತು ವಿಜಯ್ ಕಾಶಿ ತಂದೆ ತಾಯಿಯ ಪಾತ್ರಗಳಿಗೆ ಜೀವ ತುಂಬಿದ್ದರೆ, ಜಯಶ್ರೀ, ಉದಯ ಟೀವಿ ಪ್ರಕಾಶ್, ಹೇಮಂತ್ ಮುಂತಾದವರ ತಾರಾಗಣವಿದೆ. ಮಹಮದ್ ಹಸೀಬ್ ಛಾಯಾಗ್ರಹಣ, ಆರ್ಯನ್ ನೃತ್ಯ ನಿರ್ದೇಶನ, ಧ್ರುವ, ನಂದಿ ಶಿವಮೊಗ್ಗ, ಹರ್ಷ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಗುಣವರ್ಧನ್ ಗೌಡ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಅಮೀನಗಡ, ಪಟ್ಟದಕಲ್ಲು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ರಾಗಂ

ವಿಶೇಷವೆಂದರೆ, ಹಿರಿಯ ನಟಿ, ರಂಗಭೂಮಿ ಕಲಾವಿದೆ ಬಿ ಜಯಶ್ರೀಯವರು ನಸಾಬ್ ಮೂಲಕ ಬಹುಕಾಲದ ನಂತರ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದ್ದಾರೆ. ಇನ್ನುಳಿದಂತೆ, ಇದೊಂದು ಜೀವನಾಧಾರಿತ ಕಥನ ಎಂದಾಕ್ಷಣ ಸಿದ್ಧ ಸೂತ್ರಗಳ ಭೂಮಿಕೆಯಲ್ಲಿ ಈ ಸಿನಿಮಾವನ್ನು ಅಳೆಯುವಂತಿಲ್ಲ. ಯಾಕೆಂದರೆ, ಬಡತನದ ಬೇಗೆಯಲ್ಲಿ ಬೇಯುವ ಲಂಬಾಣಿ ತಾಂಡಾದ ಹುಡುಗನೊಬ್ಬ ಅಕ್ಷರಗಳಿಗೆ ತೆರೆದುಕೊಂಡು, ಅಂದುಕೊಂಡಿದ್ದನ್ನು ಸಾಧಿಸೋ ಈ ಕಥೆಯಲ್ಲಿ ಒಂದು ವಿಶಿಷ್ಟ ಸಾಮಾಜಿಕ ಬದುಕು ಹಾದು ಹೋಗಲಿದೆ. ಮಾಸ್ ಅಂಶಗಳನ್ನೂ ಸೇರಿಸಿಕೊಂಡು, ಕಮರ್ಶಿಯಲ್ ಧಾಟಿಯಲ್ಲಿಯೇ ನಿರ್ದೇಶಕರು ನಸಾಬ್ ಅನ್ನು ರೂಪಿಸಿದ್ದಾರಂತೆ.

ನಿರ್ದೇಶಕ ಶಿಜ

ಈ ಮೂಲಕ ಶಿವು ಜಮಖಂಡಿ ಮತ್ತೊಂದು ಆಯಾಮದತ್ತ ಹೊರಳಿಕೊಂಡಿದ್ದಾರೆ. ತಮ್ಮ ಹೆಸರನ್ನು `ಶಿಜ’ ಎಂಬುದಾಗಿ ಬದಲಿಸಿಕೊಂಡು ಅದೃಷ್ಟ ಪರೀಕ್ಷೆಗಿಳಿದಿರುವ ಶಿವು ಚಿತ್ರರಂಗಕ್ಕೆ ಹೊಬರೇನಲ್ಲ. ಅವರು ಈ ಹಿಂದೆ ವಿಜಯ ರಾಘವೇಂದ್ರ ನಾಯಕನಾಗಿ ನಟಸಿದ್ದ `ನನ್ನ ನಿನ್ನ ಪ್ರೇಮ ಕಥೆ’ ಅಂತೊಂದು ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದಾದ ನಂತರ ಗುಲಾಲ್ ಡಾಟ್ ಕಾಮ್ ಎಂಬ ಕಾಮಿಡಿ ಚಿತ್ರವೊಂದನ್ನು ನಿರ್ದೇಶಿಸಿದ್ದರು. ಅದರ ಮುಖ್ಯ ಭೂಮಿಕೆಯಲ್ಲಿ ತಬಲಾ ನಾಣಿ ನಟಿಸಿದ್ದರು. ಅದಾದ ನಂತರ ಒಂದು ಗ್ಯಾಪಿನ ಬಳಿಕ ಶಿವು ಜಮಖಂಡಿ `ನಸಾಬ್’ ಎಂಬ ಭಿನ್ನ ಕಥಾನಕದ ಬೆಂಬಿದ್ದು, ಅದಕ್ಕೆ ದೃಷ್ಯರೂಪ ನೀಡಿದ್ದಾರೆ. ಇದೀಗ ಅದರ ಶೀರ್ಷಿಕೆ ಬಿಡುಗಡೆಯಾಗಿದೆಯಷ್ಟೆ. ಮಿಕ್ಕುಳಿದ ಮತ್ತೊಂದಷ್ಟು ಆಸಕ್ತಿದಾಯಕ ವಿಚಾರಗಳು ಸದ್ಯದಲ್ಲಿಯೇ ಜಾಹೀರಾಗಲಿವೆ…

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!