ಹೊಸ ವರ್ಷವೊಂದರ ಹೊಸ್ತಿಲು ದಾಟಿ ನಿಂತ ಬಳಿಕ ನಾನಾ ದಿಕ್ಕುಗಳತ್ತ ಜನ ಕಣ್ಣರಳಿಸುತ್ತಾರೆ. ಆದರೆ, ಸಿನಿಮಾ ಪ್ರೇಮಿಗಳ ಗಮನ ಮಾತ್ರ ಈ ವರ್ಷ ಅದ್ಯಾವ್ಯಾವ ಸಿನಿಮಾಗಳು ಎಂತೆಂಥಾ ಮೋಡಿ ಮಾಡಲಿವೆ ಅನ್ನೋದರತ್ತಲೇ ಪ್ರಧಾನವಾಗಿ ಗಮನ ಹರಿಸುತ್ತಾರೆ. ಅಂಥಾ ಪ್ರೀತಿ ಕನ್ನಡ ಚಿತ್ರರಂಗವನ್ನು ಕಾಲಾಂತರಗಳಿಂದಲೂ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾ ಬಂದಿದೆ. ಈ ಬಾರಿ ಮಾತ್ರ ಅಂಥಾ ನಿರೀಕ್ಷೆಯ ಮುಂದೆ ಅನೇಕ ಅಚ್ಚಿಗಳು ತೆರೆದುಕೊಳ್ಳಬಹುದಾದ ಸ್ಪಷ್ಟ ಸೂಚನೆಗಳಿದ್ದಾವೆ. ಅಂಥಾ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗಲು ಪ್ರೇರೇಪಣೆ ನೀಡಿದ ಸಿನಿಮಾಗಳ ಸಾಲಿನಲ್ಲಿ ಮೊದಲಿನದ್ದಾಗಿ ಗುರುತಿಸಿಕೊಳ್ಳುವ ಸಿನಿಮಾ (naguvina hugala mele movie) `ನಗುವಿನ ಹೂಗಳ ಮೇಲೆ’. ಇದೇ ವಾರ, 9ನೇ ತಾರೀಕಿನಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ಬಗ್ಗೆ ತಾನೇ ತಾನಾಗಿ ಹಬ್ಬಿಕೊಂಡಿರುವ ಕ್ರೇಜ್ ನಿಜಕ್ಕೂ ವಿಶೇಷವಾಗಿದೆ!

ಅದನ್ನು ಪ್ರೇಮ ಕಥನಗಳಿಗಿರುವ ಅಸಲೀ ತಾಕತ್ತು ಅಂದುಕೊಳ್ಳಲಡ್ಡಿಯಿಲ್ಲ. ಹಾಗಂತ ಅದೊಂದೇ ಕಾರಣ ಅಂದುಕೊಳ್ಳುವಂತೆಯೂ ಇಲ್ಲ. ಈಗಾಲೇ ಕೆಂಪಿರ್ವೆ ಮುಂತಾದ ಅನೇಕ ಭಿನ್ನ ಧಾಟಿಯ ಸಿನಿಮಾಗಳನ್ನು ನಿರ್ದೇಶಿಸಿರುವ ವೆಂಕಟ್ ಭಾರದ್ವಾಜ್ ಈ ಸಿನಿಮಾ ಸಾರಥಿಯಾಗಿರೋದೂ ಕೂಡಾ ಪ್ರಧಾನ ಕಾರಣ. ಯಾಕೆಂದರೆ, ಯಾವುದೇ ಕಥೆಗಾದರೂ ಪ್ರೇಕ್ಷಕರನ್ನು ಆಳವಾಗಿ ತಾಕುವಂತೆ ದೃಷ್ಯದ ಫ್ರೇಮು ತೊಡಿಸುವ ಕಸುವು ವೆಂಕಟ್ ಅವರಿಗಿದೆ. ಹೀಗಾಗಿಯೇ, ಸದರಿ ಪ್ರೇಮ ಕಥಾನಕ ಕೂಡಾ ಹೊಸತನದೊಂದಿಗೆ ಕಳೆಗಟ್ಟಿಕೊಂಡಿದೆ ಎಂಬ ನಂಬುಗೆ ಬಹುತೇಕರಲ್ಲಿದೆ. ಅದನ್ನು ತುಸುವೂ ಮುಕ್ಕಾಗಿಸದಂತೆ ಈ ಚಿತ್ರ ಮೂಡಿ ಬಂದಿದೆ ಎಂಬ ಗಾಢ ಭರವಸೆ ಚಿತ್ರತಂಡದಲ್ಲಿದೆ.

ಇದು ಎಲ್ಲ ವಯೋಮಾನದವರನ್ನೂ ಹಿಡಿದಿಟ್ಟುಕೊಳ್ಳಬಲ್ಲ ಕಥೆ ಹೊಂದಿರೋ ಸಿನಿಮಾ. ಹಾಗಂತ ಚಿತ್ರ ತಂಡ ಅಡಿಗಡಿಗೆ ಹೇಳುತ್ತಾ ಬಂದಿದೆ. ಈಗಾಗಲೇ ಅದಕ್ಕೆ ಪೂರಕವಾದ ಒಂದಷ್ಟು ವಿಚಾರಗಳು ಹಾಡು, ಟ್ರೈಲರ್ ಮೂಲಕ ಜಾಹೀರಾಗಿವೆ. ಕೇವಲ ಹಾಡುಗಳು, ಕಥೆ, ತಾಂತ್ರಿಕಥೆ ಮಾತ್ರವಲ್ಲ; ಒಟ್ಟಾರೆ ಸಿನಿಮಾ ದೃಷ್ಯರೂಪ ಧರಿಸಿದ್ದರ ಹಿಂದೆಯೂ ಕೂಡಾ ಒಂದಷ್ಟು ವಿಶೇಷತೆಗಳಿದ್ದಾವೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ಚಿತ್ರೀಕರಣದ ಹಂತದಲ್ಲಿಯಾದರೂ ಅದ್ದೂರಿ ಸೆಟ್ ಹಾಕೋದರತ್ತಲೇ ಪ್ರಧಾನವಾಗಿ ಗಮನ ಹರಿಸಲಾಗುತ್ತದೆ. ಹೆಚ್ಚು ವೆಚ್ಚದಲ್ಲಿ ಸೆಟ್ ನಿರ್ಮಾಣ ಮಾಡಿದಷ್ಟೂ ಅದ್ದೂರಿತನ ಹೆಚ್ಚುತ್ತದೆ ಅನ್ನೋದು ಮಾಮೂಲು ನಂಬಿಕೆ.

ಆದರೆ, ನಿರ್ದೇಶಕ ವೆಂಕಟ್ ಭಾರದ್ವಾಜ್ ದೃಷ್ಯಗಳನ್ನು ಕಳೆಗಟ್ಟಿಸೋದರ ಹಿಂದಿರುವ ಸಹಜ ಸೌಂದರ್ಯವನ್ನು ಸರಿಕಟ್ಟಾಗಿಯೇ ಗ್ರಹಿಸಿದ್ದಾರೆ. ಆದ್ದರಿಂದಲೇ ಒಂದಿಡೀ ಸಿನಿಮಾ ಚಿತ್ರೀಕರಣದ ತುಂಬಾ ಮಲೆನಾಡು ಸೇರಿದಂತೆ ನಾನಾ ಭಾಗಗಳ ಸಹಜ ಪ್ರಾಕೃತಿಕ ಸೌಂದರ್ಯ ಮೇಳೈಸಿದೆ. ಪ್ರೇಮವೆಂದರೇನೇ ಯಾವತ್ತಿಗೂ ಹಳತಾಗದ, ಯಾವ ಸಿಂಗಾರವೂ ಬೇಕಿಲ್ಲದ ಸಹಜಾನುಭೂತಿ. ಅದನ್ನು ಪ್ರಾಕೃತಿಕ ವೈಸಿರಿಯ ನಡುವ ಚಿತ್ರೀಕರಿಸುವ ಮೂಲಕ ಮತ್ತಷ್ಟು ತಾಜಾತನದಿಂದ ಕಟ್ಟಿಕೊಡುವ ನಿಟ್ಟಿನಲ್ಲಿ ಚಿತ್ರತಂಡ ಶ್ರಮ ವಹಿಸಿದೆಯಂತೆ. ಇದು ಒಟ್ಟಾರೆ ಸಿನಿಮಾದ ಪ್ರಧಾನ ಆಕರ್ಷಣೆ ಎಂಬುದು ಚಿತ್ರತಂಡದ ಅಭಿಪ್ರಾಯ.

ಈ ಚಿತ್ರವನ್ನು ತೆಲುಗಿನ ಪ್ರಸಿದ್ದ ನಿರ್ಮಾಪಕರಾದ ಕೆ.ಕೆ ರಾಧ ಮೋಹನ್ ನಿರ್ಮಾಣ ಮಾಡಿದ್ದಾರೆ. ಅಭಿದಾಸ್ ಹಾಗೂ ಶರಣ್ಯಾ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣವಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನದೊಂದಿಗೆ `ನಗುವಿನ ಅಲೆಗಳ ಮೇಲೆ? ಕಳೆಗಟ್ಟಿಕೊಂಡಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!