ಬ್ಬರಿಸಿ ಅಲೆಯೆಬ್ಬಿಸೋ ಸಿನಿಮಾಗಳ ಜೊತೆ ಜೊತೆಯಲ್ಲಿಯೇ, ತಣ್ಣಗೆ ತೆರೆ ಕಂಡು ಕಾಡುತ್ತಾ ಮನಸಿಗಳಿಯುವ ಸಿನಿಮಾಗಳ ಹಂಗಾಮವೊಂದು ಕನ್ನಡ ಚಿತ್ರರಂಗದಲ್ಲಿ (kannada filme industry) ಚಾಲ್ತಿಗೆ ಬಂದಿದೆ. ಅದ ಭಾಗವಾಗಿಯೇ ಇತ್ತೀಚೆಗೆ `ಪಿಂಕಿ ಎಲ್ಲಿ’ (pinki elli) ಚಿತ್ರ ತೆರೆಗಂಡಿತ್ತು. ಇದೀಗ ಆ ಸಿನಿಮಾ ನಿರ್ಮಾಣ ಮಾಡಿದ್ದ ಕೃಷ್ಣೇಗೌಡ (krishnegowda)  ಸ್ವತಃ ನಿರ್ಮಾಣ ಮಾಡಿ, ಬಹುಮುಖ್ಯ ಪಾತ್ರವೊಂದರಲ್ಲಿ ನಟಿಸಿರುವ `ನಾನು ಕುಸುಮ’ ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಕನ್ನಡದ ಖ್ಯಾತ ಕಥೆಗಾರರಾದ ಬೆಸಗರಹಳ್ಳಿ ರಾಮಣ್ಣನವರ (besagarahalli ramanna) ಸಣ್ಣ ಕಥೆಯನ್ನಾಧರಿಸಿ ತಯಾರುಗೊಂಡಿರುವ ನಾನು ಕುಸುಮ (naanu kusuma) ಇದೇ ಜೂನ್ 30ರಂದು ನಿಮ್ಮ ಮುಂದೆ ಬರಲಿದೆ.

ವಿಶಿಷ್ಟ ಕಥೆಗಳ ಸೃಷಿಯ ಮೂಲಕವೇ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರಾಗಿರುವವರು ಬೆಸಗರಹಳ್ಳಿ ರಾಮಣ್ಣ. ಅವರ ಕಥೆಗಳ ಮೇಲೆ ತಲೆಮಾರುಗಳಾಚೆಗೂ ಬೆರಗೊಂದು ಹಾಗೆಯೇ ಉಳಿದುಕೊಂಡಿದೆ ಎಂಬುದೇ ಅವರ ಸಾಹಿತ್ಯಕ್ಕಿರುವ ಶಕ್ತಿಗೊದು ನಿದರ್ಶನ. ಅವರದ್ದೊದು ಕಥೆಯನ್ನು ಓದಿ ಕಾಡಿಸಿಕೊಂಡಿದ್ದ ಕೃಷ್ಣೇಗೌಡರು, ಅದಕ್ಕೆ ಸಿನಿಮಾ ಚೌಕಟ್ಟು ಹಾಕೋ ದೃಢ ನಿರ್ಧಾರಕ್ಕೆ ಬಂದ ಫಲವಾಗಿಯೇ `ನಾನಮು ಕುಸುಮ’ ಚಿತ್ರ ರೂಪುಗೊಂಡಿದೆ. ಈಗಾಗಲೇ ಅನೇಕಾರು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಗೂ ಪಾತ್ರವಾಗಿರುವ ಈ ಚಿತ್ರ ವಾರದೊಪ್ಪತ್ತಿನಲ್ಲಿಯೇ ಸಿನಿಮಾ ಮಂದಿರಗಳಲ್ಲಿ ಪ್ರತ್ಯಕ್ಷವಾಗಲಿದೆ.

ಗ್ರೀಷ್ಮಾ ಶ್ರೀಧರ್, ಸನಾತನಿ ಜೋಶಿ, ಕಾವ್ಯಾ ಶ್ರೀಧರ್, ಸೌಮ್ಯ ಭಾಗವತ್, ಕೃಷ್ಣೇಗೌಡ, ಪ್ರತಿಭಾ ಸಂಶಿಮಠ, ವಿಜಯ್ ಮುಂತಾದವರು ಈ ಸಿನಿಮಾದ ಪಾತ್ರಗಳಾಗಿದ್ದಾರೆ. ಈ ಸಮಾಜದಲ್ಲಿ ಸರ್ವ ಕಾಲಕ್ಕೂ ಸಲ್ಲುವಂಥಾ ಕೆಲ ಕಾಯಿಲೆಗಳಿದ್ದಾವೆ. ಅದರಲ್ಲಿ ಹೆಣ್ಣು ಜೀವಗಳನ್ನು ನರಳಿಸುವ ಲೈಂಗಿಕ ದೌರ್ಜನ್ಯವೂ ಪ್ರಧಾನವಾಗಿ ಗುರುತಿಸಿಕೊಳ್ಳುತ್ತದೆ. ಸಮಾಜ ಎಷ್ಟೇ ಮುಂದುವರೆದರೂ, ಅದೆಷ್ಟೇ ಕಠಿಣವಾದ ಕಾನೂನುಗಳು ಬಂದರೂ ಹೆಂಗಳೆಯರ ನರಳಿಎ ಮಾತ್ರ ಇನ್ನೂ ನಿಂತಿಲ್ಲ. ಬಹುಶಃ ಅದು ಅಷ್ಟು ಸಲೀಸಾಗಿ ನಿಲ್ಲುವಂಥಾದ್ದೂ ಅಲ್ಲ. ಈ ಪಿಡುಗಿನ ಸಾರ ಹೊತ್ತ ಕಥಾನಕದೊಂದಿಗೆ ಅಣಿಗೊಂಡಿರುವ ಚಿತ್ರ ನಾನು ಕುಸುಮ!

ಈ ಚಿತ್ರ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಇತ್ತೀಚೆಗೆ ನಡೆದಿದ್ದ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇಂಡಿಯನ್ ಪನೋರಮಾ, ರಾಜಸ್ಥಾನ್ ಫಿಲಂ ಫೆಸ್ಟಿವಲ್, ಕೇರಳದ ತ್ರಿಶೂರ್ ಫಿಲಂ ಫೆಸ್ಟಿವಲ್‍ಗಳಲ್ಲಿಯೂ ಪ್ರದರ್ಶನಗೊಂಡಿದೆ. ಇದೂ ಸೇರಿದಂತೆ ಅನೇಕ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುವ ಮೂಲಕ ಅಪಾರವಾದ ಪ್ರಶಂಶೆಯನ್ನೂ ತನ್ನದಾಗಿಸಿಕೊಂಡಿದೆ. ಈ ಮೂಲಕ ಕನ್ನಡ ಚಿತ್ರರಂಗದ ಘನತೆಗೆ ಮತ್ತಷ್ಟು ಗರಿ ಮೂಡಿಸುವ ಕೆಲಸವನ್ನೂ ಮಾಡಿದೆ.

ಈ ಚಿತ್ರಕ್ಕಾಗಿ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿಂಕ್ ಸೌಂಡ್‍ನಲ್ಲಿಯೇ ಒಂದಿಡೀ ಚಿತ್ರವನ್ನು ದೃಷ್ಯೀಕರಿಸಿರುವುದು ಈ ಸಿನಿಮಾದ ಮತ್ತೊಂದು ವಿಶೇಷತೆ. ನಾವು ದಿನನಿತ್ಯ ಇಂಥಾ ಲೈಂಗಿಕ ದೌರ್ಜನ್ಯಗಳ ಸುದ್ದಿಗಳನ್ನು ನೋಡುತ್ತಿರುತ್ತೇವೆ. ಆದರೆ, ಹಾಗೆ ಸುದ್ದಿಯಾಗುವವೆಲ್ಲ ಮೇಲ್ ಸ್ಥರದ ಸಮಾಜದವುಗಳಷ್ಟೇ. ಅದೆಷ್ಟೋ ಲೈಂಗಿಕ ದೌರ್ಜನ್ಯಗಳ ಕರುಣ ಕಥೆಗಳು ಮುಖ್ಯ ವಾಹಿನಿಯನ್ನು ಸೋಕುವುದೇ ಇಲ್ಲ. ಅಂಥವುಗಳೆಲ್ಲ ಕಣ್ಣೀರಾಗಿ, ಜೀವ ಹಿಂಡುವ ನೋವಾಗಿ, ನಿಟ್ಟುಸಿರಾಗಿಯಷ್ಟೇ ಪರ್ಯಾವಸಾನ ಹೊಂದುತ್ತವೆ. ಆ ಥರದ್ದೊಂದು ಕಥೆ ನಾನು ಕುಸುಮ ಚಿತ್ರದಲ್ಲಿದೆ. ಈ ಮನ ಕಲಕುವ ಕಥೆ ಮನಸಿಗಿಳಿಯುವ ಘಳಿಗೆ ಸನ್ನಿಹಿತವಾಗಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!