ಕನ್ನಡದ ಕೀರ್ತಿ ಪತಾಕೆ ಪ್ಯಾನಿಂಡಿಯಾ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿರುವ ನಿರ್ಮಾಣ ಸಂಸ್ಥೆ (hombale films) ಹೊಂಬಾಳೆ ಫಿಲಂಸ್. ಪಕ್ಕಾ ಕಮರ್ಶಿಯಲ್ ಸಿನಿಮಾಗಳನ್ನು ನಿರ್ಮಾಣ ಮಾಡೋದರ ಜೊತೆ ಜೊತೆಗೇ ಹೊಸಾ ಬಗೆಯ ಸಾಹಸಗಳಿಗೆ, ಪ್ರಯೋಗಗಳಿಗೂ ಹೊಂಬಾಳೆಯ ಕಡೆಯಿಂದ ಉತ್ತೇಜನ ಸಿಗುತ್ತಾ ಬಂದಿದೆ. ಅದರ ಭಾಗವಾಗಿಯೇ ಕ್ಲೀಮ್ ಪ್ರೊಡಕ್ಷನ್ (kleem production) ನಿರ್ಮಾಣ ಮಾಡಿರುವ, ಹೊಂಬಾಳೆ ಫಿಲಂಸ್ ಪ್ರಸ್ತುತಪಡಿಸಿರುವ `ಮಹಾವತಾರ್ ನರಸಿಂಹ’ (mahavatar narasimha movie) ಸಿನಿಮಾ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಇದೀಗ ಈ ಆನಿಮೇಟೆಡ್ ಸಿನಿಮಾದ (animated movie) ಟ್ರೈಲರ್ ವಾರದ ಹಿಂದೆ ಬಿಡುಗಡೆಗೊಂಡು ಪ್ಯಾನಿಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೇ ಪ್ರಭೆಯಲ್ಲಿ ಮಹಾವತಾರ್ ನರಸಿಂಹ ಚಿತ್ರ ಜುಲೈ 25ರಂದು ದೇಶಾದ್ಯಂತ ತೆರೆಗಾಣುತ್ತಿದೆ.
ನಮ್ಮದು ಪುರಾಣ ಕಥೆಗಳೊಂದಿಗೆ ಬದುಕನ್ನು ಹೊಸೆದುಕೊಂಡಂತಿರುವ ಜೀವನಕ್ರಮ. ಅಂಥಾ ಪುರಾಣ ಕಥೆಗಳಲ್ಲಿಯೇ ದೈವೀಕ ಅನುಭೂತಿ ಪಡೆದುಕೊಳ್ಳುವ ಮನಃಸ್ಥಿತಿ ನಮ್ಮ ನಡುವೆ ಚಾಲ್ತಿಯಲ್ಲಿದೆ. ಲೆಕ್ಕವಿಡಲಾಗದಷ್ಟು ಸಂಕೀರ್ಣವಾಗಿರುವ ಇಂಥಾ ಕಥನಗಳಲ್ಲಿ (bhaktha prahlada) ಭಕ್ತ ಪ್ರಹ್ಲಾದನ ಕಥೆ ಜನಜನಿತ. ಪ್ರಹ್ಲಾದನ ನಂಬಿಕೆಯ ವಿರುದ್ಧ ದಿಕ್ಕಿನಲ್ಲಿ ಬದುಕುವ, ಅಹಮ್ಮಿಕೆಯಿಂದ ಠೇಂಕರಿಸುವ (hiranyakashipu) ಹಿರಣ್ಯಕಶಿಪುವಿನ ಸಂಹಾರಕ್ಕೆಂದೇ ವಿಷ್ಣು ಉಗ್ರ ನರಸಿಂಹನ ಅವತಾರದಲ್ಲಿ ಭುವಿಗಿಳಿಯೋ ಕಥೆ ಚಿರಪರಿಚಿತ. ಅದನ್ನು ಅದ್ಭುತ ತಾಂತ್ರಿಕತೆಯ ಮೂಲಕ, ಒಟ್ಟಾರೆ ಸನ್ನಿವೇಶಗಳನ್ನು ಬೇರೆಯದ್ದೇ ತೆರನಾದ ಅನುಭವ ನೀಡುವಂತೆ ಈ ಸಿನಿಮಾ ಮೂಲಕ ಕಟ್ಟಿಕೊಡಲಾಗಿದೆ. ಅದರ ಒಂದಷ್ಟು ಸುಳಿವುಗಳು ಟ್ರೈಲರ್‌ನೊಂದಿಗೆ ಜಾಹೀರಾಗಿವೆ.
ಮಹಾವತಾರ ನರಸಿಂಹ ಚಿತ್ರವನ್ನು (director ashwin kumar) ಅಶ್ವಿನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಶಿಲ್ಪಾ ಧವನ್ (shilpa dhavan) ನಿರ್ಮಾಪಕಿಯಾಗಿ ಸಾಥ್ ಕೊಟ್ಟಿದ್ದಾರೆ. ಆನಿಮೇಟೆಡ್ ಸಿನಿಮಾವಾದ್ದರಿಂದಾಗಿ ತಾಂತ್ರಿಕವಾಗಿ ನಾನಾ ಸವಾಲುಗಳೆದುರಾಗೋದು ಸಹಜ. ಆ ಹಾದಿಯನ್ನು ದಾಟಿಕೊಂಡು ಅಂದುಕೊಂಡಂತೆಯೇ ಈ ಸಿನಿಮಾವನ್ನು ಕಟ್ಟಿ ನಿಟ್ಟಿಸಿದ್ದರ ಹಿಂದಿರೋ ಪರಿಶ್ರಮಗಳ ಬಗ್ಗೆ ಖುದ್ದು ನಿರ್ದೇಶಕರು ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ಈ ಸಿನಿಮಾದ ಆರಂಭಿಕ ಆವೃತ್ತಿ ರೂಪುಗೊಂಡಿದ್ದರ ಹಿಂದೆ ಐದು ವರ್ಷಗಳ ನಿರಂತರವಾದ ಪರಿಶ್ರಮವಿದೆ. ಪ್ರತೀ ದೃಷ್ಯಗಳೂ ಕೂಡಾ ನೋಡುಗರ ಆತ್ಮಕ್ಕೇ ತಾಕುವಂತೆ ರೂಪಿಸಿರುವ ತೃಪ್ತ ಭಾವ ಸಿನಿಮಾ ತಂಡದಲ್ಲಿದೆ.
ಹಾಗಂತ, ಇದೊಂದು ಸಿನಿಮಾ ಬಿಡುಗಡೆಯಾದ ಬಳಿಕ ಆ ದೈವೀಕ ಭಾವ ಕೊನೆಯಾಗೋದಿಲ್ಲ. ಮುದೊಂದಷ್ಟು ವರ್ಷಗಳವರೆಗೂ ಅದರ ತರಂಗಗಳು ನಿರಂತರವಾಗಿ ಪ್ರೇಕ್ಷಕರನ್ನು ಪರವಶಗೊಳಿಸಲಿವೆ. ಭಗವಾನ್ ವಿಷ್ಣುವಿನ ದಶಾವತಾರದ ಕಂತುಗಳು ಬೇರೆ ಬೇರೆಯಾಗಿ ಮುಂದಿನ ದಶಕದವರೆಗೂ ಬಿಡುಗಡೆಗೊಳ್ಳಲಿದ್ದಾವೆ. ಇದೀಗ ಬಿಡುಗಡೆಗೆ ತಯಾರಾಗಿರುವ ಮಹಾವತಾರ್ ನರಸಿಂಹ ಆ ಸರಣಿಯ ಮೊದಲ ಕಂತು. ಮಹಾವತಾರ್ ಪರಶುರಾಮ ೨೦೨೭ಕ್ಕೆ ತರೆಗಾಣಲಿದೆ. ಆ ಬಳಿಕ ಒಂದೊಂದು ವರ್ಷಗಳ ಅಂತರದಂತೆ ಕ್ರಮವಾಗಿ ಮಹಾವತಾರ್ ರಘುನಂದನ, ಮಹಾವತಾರ್ ಧ್ವಾಕಧೀಶ್, ಮಹಾವತಾರ್ ಗೋಕುಲನಂದ, ಮಹಾವತಾರ್ ಕಲ್ಕಿ ಭಾಗ೧ ಹಾಗೂ ಮಹಾವತಾರ್ ಕಲ್ಕಿ ಭಾಗ೨ ಚಿತ್ರಗಳು ಬಿಡುಗಡೆಗೊಳ್ಳಲಿವೆ.