ವ್ಯಕ್ತಿತ್ವದಲ್ಲೊಂದು ಪ್ರಾಮಾಣಿಕತೆ, ಮಾತು, ವರ್ತನೆಗಳಲ್ಲಿ ಘನತೆ ಗೌರವಗಳಿಲ್ಲದಿದ್ದರೆ ಅಂಥಾ ವ್ಯಕ್ತಿಯ ಅವಸಾನಕ್ಕೆ ಬೇರೆ ಕಾರಣಗಳೇ ಬೇಕಾಗುವುದಿಲ್ಲ. ಅದರಲ್ಲಿಯೂ ಸಿನಿಮಾದಂಥಾ ಸಾರ್ವಜನಿಕ ಬದುಕಿನಲ್ಲಿರುವವರಂತೂ ಇಂಥಾದ್ದನ್ನೆಲ್ಲ ಬಲು ಎಚ್ಚರಿಕೆಯಿಂದ ಪರಿಪಾಲಿಸಬೇಕಾಗುತ್ತದೆ. ಈಗಂತೂ ತಂತ್ರಜ್ಞಾನ ಮನುಷ್ಯನ ನರನಾಡಿಗಳನ್ನೂ ಆವರಿಸಿಕೊಂಡಿರುವ ದಿನಮಾನ. ಇಂಥಾ ಘಳಿಗೆಯಲ್ಲಿ ಖಾಸಗಿತನವೆಂಬುದೇ ಬಯಲಲ್ಲಿ ನಿಂತಂಥಾ ಪರಿಸ್ಥಿತಿ ಇದೆ. ಈ ಹೊತ್ತಿನಲ್ಲಿ ಹರುಕುಬಾಯಿ ಹರಿಯಬಿಟ್ಟರೆ ಏನಾದೀತೆಂಬುದಕ್ಕೆ ದರ್ಶನ್ ಬಗ್ಗೆ ಮಾತಾಡಿ ತಗುಲಿಕೊಂಡಿದ್ದ ನವರಸನಾಯಕನಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ಆದರೆ, ಹಠಾತ್ತನೆ ಸಿಕ್ಕ ಖ್ಯಾತಿ, ಕ್ಷಣಿಕ ಗೆಲುವಿನ ಭ್ರಮೆ ಕಣ್ಣೆದುರ ಎಚ್ಚರಿಕೆಯತ್ತ ಕಡೆಗಣ್ಣಲ್ಲಿಯೂ ನೋಡದಂತೆ ಮಾಡಿ ಬಿಡುತ್ತವೆ. ಅಂಥಾದ್ದೊಂದು ಹಂತ ತಲುಪಿಕೊಂಡಿದ್ದ ಮಡೇನೂರು ಮನುಗೀಗ ಅಷ್ಟ ದಿಕ್ಕುಗಳಿಂದಲೂ ಕಂಟಕಗಳು ಅಮರಿಕೊಳ್ಳುತ್ತಿದ್ದಾವೆ!

ಕಾಮಿಡಿ ಕಿಲಾಡಿಗಳು ಶೋ ವಿನ್ನರ್ ಆಗಿದ್ದ ಮಡೇನೂರು ಮನು ಕಷ್ಟದಿಂದಲೇ ಮೇಲೆದ್ದು ಬಂದಿದ್ದ. ಒಂದಷ್ಟು ಪ್ರಯತ್ನ ಪಟ್ಟು ಕುಲದಲ್ಲಿ ಕೀಳ್ಯಾವುದೋ ಅಂತೊಂದು ಸಿನಿಮಾದಲ್ಲಿ ನಾಯಕನಾಗಿದ್ದ. ಈ ವಾರ ಬಿಡುಗಡೆಗೊಂಡಿರೋ ಆ ಸಿನಿಮಾ ಪ್ರೇಕ್ಷಕರಿಲ್ಲದೆ ಭಣಗುಡುತ್ತಿದೆ. ಬಹುಶಃ ಮದೇನೂರನ ಕಾಮಪುರಾಣ ಬಯಲಾಗದಿದ್ದಿದ್ದರೂ ಇದಕ್ಕಿಂತ ಭಿನ್ನವಾದ ವಾತಾವರಣ ಇರುತ್ತಿರಲಿಲ್ಲ. ಆದರೆ, ಮುಂದೊಂದಷ್ಟು ಪ್ರಯತ್ನ ಪಟ್ಟಿದ್ದರೆ, ನಾಯಕನಾಗಿಯಲ್ಲದಿದ್ದರೂ ಬೇರೆ ಪಾತ್ರಗಳಲ್ಲಿಯಾದರೂ ಮಿಂಚೋ ಅವಕಾಶ ವಿಪುಲವಾಗಿತ್ತು. ಅದೆಲ್ಲವನ್ನೂ ಮಡೇನೂರು ಮನು ಕೈಯಾರೆ ಹಾಳುಗೆಡವಿಕೊಂಡಿದ್ದಾನೆ. ಇಷ್ಟೂ ವರ್ಷಗಳ ಪ್ರಯತ್ನದ ಫಲವನ್ನು ಹರುಕುಬಾಯಿ ಮತ್ತು ಲೂಸು ಲಂಗೋಟಿಯ ದೆಸೆಯಿಂದ ಕಳೆದುಕೊಂಡಿದ್ದಾನೆ.

ಮನು ಅದ್ಯಾರೋ ಮಿಂಚು ಎಂಬಾಕೆಯೊಂದಿನ ಅಫೇರಿನ ಮೂಲಕವೇ ಜೈಲುವಾಸ ಅನುಭವಿಸುತ್ತಿದ್ದಾನೆ. ಅಷ್ಟೇ ಆಗಿದ್ದರೆ ಒಂದಷ್ಟು ದಿನದ ಜೈಲುವಾಸದ ನಂತರ ಮರಳಿ ಹೇಗೋ ಬಣ್ಣ ಹಚ್ಚಬಹುದಿತ್ತು. ಆದರೀಗ ಆತನ ವ್ಯಕ್ತಿತ್ವದ ಬಣ್ಣವೇ ಬಯಲಾಗಿ ಬಿಟ್ಟಿದೆ. ಯಾಕೆಂದರೆ, ಆತ ಎಣ್ಣೆ ಏಟಲ್ಲಿ ದರ್ಶನ್, ಶಿವರಾಜ್ ಕುಮಾರ್, ಧ್ರುವ ಸರ್ಜಾ ಮುಂತಾದವರ ಬಗ್ಗೆ ಆಡಿರುವ ಮಾತುಗಳೀಗ ವೈರಲ್ ಆಗಿ ಬಿಟ್ಟಿವೆ. ಅವರೆಲ್ಲರನ್ನು ಸೈಡ್ ಲೈನ್ ಮಾಡಿ ತಾನೇ ಮೆರೆಯೋದಾಗಿ ಹೇಳಿಕೊಂಡಿರುವ ಮನು ಮಾತುಗಳ ವಿರುದ್ಧ ಸಿನಿಮಾಸಕ್ತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ವಿಚಾರದಲ್ಲಿ ಕ್ಯಾಮೆಯಿಲ್ಲದೆ ಕೂತಿದ್ದ ವಾಣಿಜ್ಯ ಮಂಡಳಿಯ ಮಂದಿ ಆಕ್ಟೀವ್ ಆಗಿದ್ದಾರೆ. ಮನುವನ್ನು ಚಿತ್ರರಂಗದಿಂದ ಬ್ಯಾನ್ ಮಾಡುವ ಕಸರತ್ತೊಂದು ಒಳಗೊಳಗೇ ನಡೆಯುತ್ತಿರುವಂತಿದೆ.

ಅಷ್ಟಕ್ಕೂ ಈ ಬ್ಯಾನ್ ಅನ್ನೋದೇ ಒಂದು ಭಾನಗಡಿ. ಯಾಕೆಂದರೆ, ಘಟಾನುಘಟಿ ನಟ ನಟಿಯರು ಎಂಥೆಂಥಾದ್ದೋ ರಂಖಲು ಮಾಡಿಕೊಂಡಾಗ ವಾಣಿಜ್ಯ ಮಂಡಳಿ ಬೆನ್ನ ಹುರಿಯೇ ನೆಟ್ಟಗಿಲ್ಲದಂತೆ ನಡೆದುಕೊಳ್ಳುತ್ತದೆ. ಸಿನಿಮಾ ರಂಗದ ಹಲವಾರು ಸಂಕಷ್ಟದ ವಿಚಾರದಲ್ಲಿಯೂ ಅದರದ್ದು ಅಂಥಾದ್ದೇ ಸ್ಥಿತಿ. ಹಾಗಿರುವಾಗಿ ಇವನ್ಯಾರೋ ಮಡೇನೂರು ಮನುವನ್ನು ಬ್ಯಾನ್ ಮಾಡಿ ಮೀಸೆ ತಿರುವಿಕೊಂಡರೆ ಜನರ ಪಾಲಿಗದು ಕಾಮಿಡಿಕಯಾಗಿಯಷ್ಟೇ ಕಾಣಿಸುತ್ತದೆ. ಯಾಕೆಂದರೆ, ಸದ್ಯದ ಮಟ್ಟಿಗೆ ಸಿನಿಮಾ ಮತ್ತು ಕಿರುತೆರೆ ಮಂದಿ ಇಂಣಣಥಾ ವಿವಾದಗಳನ್ನೇ ಸರಕಾಗಿಸಿಕೊಂಡಿದ್ದಾರೆ. ಇಂಥಾ ರಂಖಲುಗಳಿಗೆಲ್ಲ ಬ್ಯಾನ್ ಮಾಡೋದೇ ಆಗಿದ್ದರೆ, ಸಿನಿಮಾ ರಂಗವೀಗ ಅರ್ಧ ಖಾಲಿಯಾಗಿರುತ್ತಿತ್ತೇನೋ…

ಹಾಗಂತ ಈ ಮಡೇನೂರಿನ ಮನುವನ್ನು ಕ್ಷಮಿಸುವಂತಿಲ್ಲ. ಹಾಗೆ ನೋಡಿದರೆ, ಈತ ಪ್ರಸಿದ್ಧಿ ಪಡೆದಿದ್ದೇ ಹಾಸ್ಯದ ಮೂಲಕ. ಆತನನ್ನು ನಾಯಕ ನಟನನ್ನಾಗಿ ನೋಡುವ ಇರಾದೆ ಯಾರೊಬ್ಬರಿಗೂ ಇಲ್ಲ. ಅಷ್ಟಕ್ಕೂ ನಾಯತಕನಾಗಿ ಮೆರೆಯಬೇಕೆಂದುಕೊಂಡಿದ್ದು ಆತನ ಭ್ರಮೆಯ ಕಾರಣದಿಂದಷ್ಟೆ. ಹಾಗಿರುವಾಗ, ಈ ಆಸಾಮಿ ದರ್ಶನ್, ಶಿವಣ್, ಧ್ರುವನಿಗೆ ತನ್ನನ್ನು ತಾನು ಹೋಲಿಸಿಕೊಂಡು ಮಾತಾಡೋದೇ ಕಾಮಿಡಿಯ ಪರಾಕಾಷ್ಠೆ. ಈಗ ಒಬ್ಬ ಮನುವಿನ ನಿಜ ಬಣ್ಣ ಬಯಲಾಗಿದೆ. ಇಂಥಾ ತಿಮಿರಿನ ಹುಳುಗಳು ಕಿರುತೆರೆ, ಹಿರಿತೆರೆಗಳ ಸಂದಿಗೊಂದಿಗಳಲ್ಲಿ ಮಿಜಿಗುಡುತ್ತಿದ್ದಾವೆ. ಇವುಗಳಿಗೆ ಬಾಯಿಯ ಮೇಲಾಗಲಿ, ಕಚ್ಚೆಯ ಮೇಲಾಗಲಿ ಹಿಡಿತವಿಲ್ಲ. ಸಿಕ್ಕ ಪ್ರಸಿದ್ಧಿಯಯಲ್ಲಿ ಶಕ್ತಿ ಮೀರಿ ಮಜಾ ಉಡಾಯಿಸಿ, ಸಿಕ್ಕಷ್ಟು ಕಾಸು ಗೋರಿಕೊಂಡು ಹೋಗೋದಷ್ಟೇ ಇಂಥವುಗಳ ಇದ್ದೇಶ. ಇದೆಲ್ಲದರಾಚೆಗೆ, ಹಳ್ಳಿಯಿಂದ ಬಂದು ಒಂದಷ್ಟು ಭರವಸೆ ಮೂಡಿಸಿದ್ದ ಮಡೇನೂರು ಮನು ಕಾಮ, ವಿವಾದಗಳ ಕೊಚ್ಚೆಯಲ್ಲಿ ಕಳೆದು ಹೋಗಿರೋದು ನಿಜಕ್ಕೂ ವಿಷಾಧದ ವಿಚಾರ!

About The Author