ಗುಳ್ಟು ನವೀನ್ (naveen shankar) ಥರದ ಪ್ರತಿಭಾನ್ವಿತ ಕಲಾವಿದನ ನಾಯಕತ್ವ, ಈ ನೆಲದ ರೈತಾಪಿ ವರ್ಗವನ್ನೇ ಕೇಂದ್ರವಾಗಿರಿಸಿಕೊಂಡ ಕಥೆಯ ಮುನ್ಸೂಚನೆ ಮತ್ತು ಅದೆಲ್ಲವಕ್ಕೂ ಇದ್ದಂತಿದ್ದ ಕಮರ್ಶಿಯಲ್ ಸ್ಪರ್ಶದ ಲಕ್ಷಣ… ಇವಿಷ್ಟು ಅಂಶಗಳೊಂದಿಗೆ ಬಹಳಷ್ಟು ನಿರೀಕ್ಷೆ ಮೂಡಿಸಿದ್ದ ಚಿತ್ರ (kshetrapati movie) ಕ್ಷೇತ್ರಪತಿ. ಶ್ರೀಕಾಂತ್ (srikanth) ನಿರ್ದೇಶನದ್ಲಿ ಮೂಡಿ ಬಂದಿರುವ ಈ ಸಿನಿಮಾವೀಗ ಬಿಡುಗಡೆಗೊಂಡಿದೆ. ಎಲ್ಲವೂ ಇದ್ದು ಏನೇನೋ ಕೊರತೆಯೆನ್ನಿಸುವ, ಒಂದೊಳ್ಳೆ ಸಿನಿಮಾವಾಗಿ ನೆಲೆ ನಿಲ್ಲಬಹುದಾಗಿದ್ದ ಸಿನಿಮಾವೊಂದು ಅನ್ಯಾಯವಾಗಿ ಸೊರಗಿದಂಥಾ ವಿಷಣ್ಣ ಭಾವವೊಂದು ನೋಡುಗರನ್ನು ಆವರಿಸಿಕೊಂಡು ಬಿಟ್ಟಿದೆ!

ಈ ಹಿಂದೆಯೂ ರೈತರನ್ನು ಕೇಂದ್ರವಾಗಿಟ್ಟುಕೊಂಡ ಒಂದಷ್ಟು ಸಿನಿಮಾಗಳು ತೆರೆಗಂಡಿವೆ. ಆದರೆ, ಕ್ಷೇತ್ರಪತಿ ಚಿತ್ರದಲ್ಲಿ ರೈತಾಪಿ ವರ್ಗದ ತವಕ ತಲ್ಲಣಗಳಿಗೆ ಪರಿಣಾಮಕಾರಿಯಾಗಿ ಕನ್ನಡಿ ಹಿಡಿದಿರಬಹುದೆಂಬ ಗಾಢ ನಂಬುಗೆಯೊಂದು ಪ್ರೇಕ್ಷಕ ವಲಯದಲ್ಲಿ ಬೇರಿಳಿಸಿಕೊಂಡಿತ್ತು. ಆದರೆ, ನವೀನ್ ಶಂಕರ್ ಥರದ ಶಕ್ತ ಕಲಾವಿದನ ಸಾಥ್ ಇದ್ದರೂ ಕೂಡಾ ಇಲ್ಲಿ ಕಥೆಯೇ ಅಶಕ್ತವಾದಂತೆ ಕಾಣಿಸುತ್ತದೆ. ರೈತಾಪಿ ವರ್ಗದ ಅಸಲೀ ಸಮಸ್ಯೆಯಗಳನ್ನು ನಿರ್ದೇಶಕರು ಅರ್ಥ ಮಾಡಿಕೊಂಡಿರುವ ರೀತಿ, ಅದರಾಳದ ಸಣ್ಣ ಸಣ್ಣ ವಿಚಾರಗಳನ್ನೂ ಕಲೆ ಹಾಕಿರುವಪರಿಗಳೆಲ್ಲವೂ ಮಚ್ಚುವಂಥಾದ್ದೇ. ಆದರೆ, ಒಂದಿಡೀ ಸಿನಿಮಾವನ್ನು ಗೊಂದಲವಿಲ್ಲದಂತೆ ಕಟ್ಟಿಕೊಡುವಲ್ಲಿ ಮಾತ್ರ ನಿರ್ದೇಶಕರು ಸೋತ ಹಾಗಿದೆ.

ಕ್ಷೇತ್ರಪತಿಯ ಕಥೆ ಉತ್ತರ ಕರ್ನಾಟಕದ ಸಣ್ಣ ಹಳ್ಳಿಯೊಂದರಲ್ಲಿ ಘಟಿಸುತ್ತದೆ. ಅಲ್ಲಿನ ರೈತನ ಮಗನಾದ ಬಸವ ಇಂಜಿಇಯರಿಂಗ್ ವಿದ್ಯಾರ್ಥಿ. ಬೆಂಗಳೂರಿನಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ರೈತನಾದ ಅಪ್ಪ ಆತ್ಮಹತ್ಯೆ ಮಾಡಿಕೊಂಡ ಬರ ಸಿಡಿಲಿನಂಥಾ ಸುದ್ದಿ ಬಂದಪ್ಪಳಿಸುತ್ತೆ. ಸಾಹುಕಾರನೊಬ್ಬನ ಬಳಿ ಸಾಲ ಇಸಿದುಕೊಂಡಿದ್ದ ಅಪ್ಪನನ್ನು ಆತ ಹೇಗೆಲ್ಲ ಕಾಡಿಸಿದ್ದ ಎಂಬುದರ ಸತ್ಯ ದರ್ಶನವೂ ಬಸವನಿಗಾಗುತ್ತೆ. ನಂತರದಲ್ಲಿ ಸಾಹುಕಾರನಿಗೆ ಎದುರಾಗಿ ಆ ಹಳ್ಳಿಯಲ್ಲೇ ಇದ್ದು ಕೃಷಿಯನ್ನೇ ನೆಚ್ಚಿ ಬದುಕುವ ಬಸವನ ತೀರ್ಮಾನದ ಕೇಂದ್ರದಿಂದ ಅಸಲೀ ಕಥೆ ಬಿಚ್ಚಿಕೊಳ್ಳುತ್ತೆ.

ಮೊದಲಾರ್ಧದಲ್ಲಿ ಒಂದಿಡೀ ಕಥಾನಕ ಕುತೂಹಲ ಉಳಿಸಿಕೊಂಡು ಸಾಗುತ್ತದೆ. ಅಲ್ಲೆದುರಾಗುವ ಒಂದಷ್ಟು ಕೊರತೆಗಳೂ ಕೂಡಾ ಸಹ್ಯವೆನಿಸುತ್ತದೆ. ಆದರೆ, ದ್ವಿತಿಯಾರ್ಧದ ಕಥೆ ಮಾತ್ರ ಅಕ್ಷರಶಃ ಸೂತ್ರ ಹರಿದ ಗಾಳಿಪಟ. ಸ್ಕ್ರೀನ್ ಪ್ಲೇ ಪಟ್ಟಂಪೂರ ಡಲ್ಲು ಹೊಡೆದಿದೆ. ಸೆಕೆಂಡ್ ಹಾಫ್‍ನಲ್ಲಿ ಖುದ್ದು ನಿರ್ದೇಶಕರೇ ದಿಕ್ಕೆಟ್ಟು ಅಸಹಾಯಕರಾದಂತೆ ಭಾಸವಾಗುತ್ತೆ. ಅದರ ಫಲಲವಾಗಿಯೇ ಕಥೆಯ ಬಿಗಿತ ಸಡಿಲಗೊಂಡು, ಪಾತ್ರಗಳು ಪೇಲವವಾಗುತ್ತವೆ. ಮೊದಲಾರ್ಧದಲ್ಲಿ ಮುಕ್ಕರಿದು ಅಬ್ಬರಿಸಿದ್ದ ವಿಲನ್ನುಗಳಂತೂ ದ್ವಿತಿಯಾರ್ಧದಲ್ಲಿ ಸೊರಗಿ ಸುಣ್ಣವಾದಂತೆ ಕಾಣಿಸುತ್ತಾರೆ. ಬಹುಶಃ ದ್ವಿತಿಯಾಧವೂ ಮೊದಲ ಬಿಇಸುಪು ಹೊಂದಿರುವಂತೆ ನೋಡಿಕೊಂಡಿದ್ದರೆ ಒಳ್ಳೆ ಕಂಟೆಂಟು ಹೊಂದಿರೋ ಚಿತ್ರವಾಗಿ ಕ್ಷೇತ್ರಪತಿ ದಾಖಲಾಗುತ್ತಿತ್ತೇನೋ.

ರೈತರ ಸಮಸ್ಯೆಗಳನ್ನಿಟ್ಟುಕೊಂಡು ಸಿನಿಮಾ ಮಾಡುವಾಗ ಸಾವಿರ ಸವಾಲುಗಳು ಎದುರಾಗುತ್ತವೆ. ಅದಕ್ಕೆ ಸಂಪೂರ್ಣವಾಗಿ ಕಮರ್ಶಿಯಲ್ ಟಚ್ ಕೊಡುವ ಅವಕಾಶಗಳೂ ಇರುವುದಿಲ್ಲ. ಇಲ್ಲಿ ನಿರ್ದೇಶಕರು ಅದನ್ನು ಹೊಡೆದಾಟ ಬಡಿದಾಟಗಳಿಗೆ ಕಮರ್ಶಿಯಲ್ ಶೈಲಿಯ ಹಿನ್ನೆಲೆ ಧ್ವನಿ ನೀಡುವ ಮೂಲಕ ಸರಿದೂಗಿಸುವ ಸರ್ಕಸ್ಸು ನಡೆಸಿದ್ದಾರೆ. ಅದು ಅಭಾಸದಂತಷ್ಟೇ ಕಾಣಿಸುತ್ತದೆ. ಇದೆಲ್ಲದರಾಚೆಗೂ ಈ ದಿನಮಾನದಲ್ಲಿ ರೈತರ ಸಮಸ್ಯೆಗಳಿಗೆ ಕಣ್ಣಾದ ಚಿತ್ರವಾಗಿ ಕ್ಷೇತ್ರಪತಿ ಘನತೆ ಉಳಿಸಿಕೊಳ್ಳುತ್ತದೆ. ಇಲ್ಲಿ ರೈತರ ಸಮಸ್ಯೆಗಳನ್ನು ಮಾತ್ರ ಫೋಕಸ್ ಮಾಡಿಲ್ಲ; ಮಾರುಕಟ್ಟೆ ವ್ಯವಸ್ಥೆಯಲ್ಲಿನ ಬದಲಾವಣೆಯೂ ಸೇರಿದಂತೆ ಒಂದಷ್ಟು ಸೂಕ್ಷ್ಮ ಪರಿಹಾರವನ್ನೂ ಎತ್ತಿ ತೋರಿಸಲಾಗಿದೆ. ಅಷ್ಟೊಂದು ಆಳಕ್ಕಿಳಿದು ಯೋಚಿಸಿದ ನಿರ್ದೇಶಕರ ಕಸುವು, ಬರವಣಿಗೆಯಲ್ಲಿನ ಹಿಡಿತವೆಲ್ಲವೂ ಮೆಚ್ಚುವಂಥಾದ್ದೆ.

ಇಡೀ ಚಿತ್ರದಲ್ಲಿ ಕಥೆ ಬಡಕಲಾಗಿದ್ದರೂ ಕೂಡಾ ಬಸವನಾಗಿ ನಟಿಸಿರುವ ನವೀನ್ ಶಂಕರ್ ನಿಜವಾದ ಶಕ್ತಿಯಾಗಿ ಗೋಚರಿಸುತ್ತಾರೆ. ಪ್ರತೀ ಸೀನುಗಳನ್ನೂ ಆವಾಹಿಸಿಕೊಂಡು ನಟಿಸುವ ಮೂಲಕ ಕ್ಷೇತ್ರಪತಿಗೆ ಆವೇಗ ನೀಡುತ್ತಾರೆ. ಆದರೆ ಕಥೆಯೇ ಬಡವಾಗಿರೋದರಿಂದ ಅವರ ನಟನೆ, ಪ್ರತಿಭೆಯೆಲ್ಲವೂ ಅಲ್ಲಲ್ಲಿ ವ್ಯರ್ಥವಾದಂತೆ ಕಾಣಿಸುತ್ತದೆ. ಇನ್ನುಳಿದಂತೆ ಅರ್ಚನಾ ಜೋಯಿಸ್, ಅಚ್ಯತ್ ಕುಮಾರ್ ಮುಂತಾದವರ ನಟನೆ ಮನಸಲ್ಲುಳಿಯುವಂತಿದೆ. ವಿಲನ್ನುಗಳು ನಟನೆಯಲ್ಲಿ ಗಮನ ಸೆಳೆಯುವುದಿಲ್ಲ. ರಾಹುಲ್ ಐನಾಪುರ್ ನಟನೆ ಒಂದಷ್ಟು ಖದರ್ ಹೊಂದಿದೆ. ಶಿವಸಾಗರ್ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಸಂಗೀತ ಕೂಡಾ ಕ್ರೇತ್ರಪತಿಯ ಶಕ್ತಿಯ ಸಾಲಿನಲ್ಲಿ ದಾಖಲಾಗುತ್ತವೆ. ಇದೆಲ್ಲದರಾಚೆಗೂ ಕ್ಷೇತ್ರಪತಿ ಒಳ್ಳೆ ಉದ್ದೇಶದ ಚಿತ್ರವಾಗಿಯಷ್ಟೇ ದಾಖಲಾಗುತ್ತದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!