ಅದೇಕೋ ನವರಸ ನಾಯಕ ಜಗ್ಗೇಶ್ ತಮ್ಮ ಕೋಮಲ್ ಕುಮಾರ್ ವೃತ್ತಿ ಬದುಕು ಹೊಯ್ದಾಟದಲ್ಲಿಯೇ ಮುಂದುವರೆದಿದೆ. ಕೋಮಲ್ ನಾಯಕನಾಗೋ ಆಸೆ ಚಿಗುರಿಸಿಕೊಂಡಾದ ನಂತರದ ಯಾನ ಕಂಡವರಿಗೆ, ಆತನನ್ನು ಆವರಿಸಿಕೊಂಡಿರುವ ಸೋಲಿನ ಪರ್ವದ ಹಿಂದಿರೋ ಅಸಲೀ ಕಾರಣ ನಿಖರವಾಗಿಯೇ ಗೊತ್ತಾಗುತ್ತದೆ. ದುರಂತವೆಂದರೆ, ಅದು ಸತತ ಸೋಲಿನ ಬಳಿಕವೂ ಗೊತ್ತಾಗದಿರೋದು ಕೋಮಲ್ಗೆ ಮಾತ್ರ. ತಮ್ಮನ ಗೆಲುವನ್ನು ಜ್ಯೋತಿಷ್ಯ, ಗ್ರಹಗತಿ, ರಾಹು ಕೇತು ಗಂಡಾಂತರಗಳ ಮೂಲಕ ವಿಶ್ಲೇಶಿಸುತ್ತಾ ಜಗ್ಗಣ್ಣ ಆಗಾಗ ಕಾಮಿಡಿ ಮಾಡುತ್ತಿರುತ್ತಾರೆ. ಆದರೆ, ತನಿಷ್ಕಾ ಕುಪ್ಪಂಡ ನಿರ್ಮಾಣ ಮಾಡಿದ್ದ ಕೋಣ ಎಂಬ ಚಿತ್ರವನ್ನು ನೋಡಿದ ಮಂದಿಗೆ ಮಾತ್ರ ಗಾಬರಿಯ ಜೊತೆಗೆ, ಕೋಮಲ್ ಯಾಕೆ ಇಂಥಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆಂಬ ಚೋದ್ಯವೂ ಕಾಡಿದೆ. ಕೋಣದ ಸೋಲನ್ನು ಮೀರುವ ಪ್ರಯತ್ನದಲ್ಲಿರುವಂತೆ ಕಾಣಿಸೋ ಕೋಮಲ್ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ!
ಕೋಮಲ್ ಕುಮಾರ್ ನಾಯಕನಾಗಿ ನಟಿಸಿರುವ ತೆನಾಲಿ ಡಿಎ ಎಲ್ಎಲ್ಬಿ ಎಂಬ ಚಿತ್ರವೀಗ ಅಧಿಕೃತವಾಗಿ ಘೋಷಣೆಯಾಗಿದೆ. ಸದರಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಇದೇ ಮೊದಲ ಬಾರಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೋಮಲ್, ಅಷ್ಟೇ ಭಿನ್ನವಾದ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ. ಈ ಪೋಸ್ಟರ್ ಧ್ವನಿಸುವಂಥಾದ್ದೇ ಭರಪೂರ ಹಾಸ್ಯ ಶೈಲಿಯಲ್ಲಿ ಒಟ್ಟಾರೆ ಸಿನಿಮಾ ಮುದ ನೀಡಲಿದೆ ಎಂಬಸುಳಿವಷ್ಟೇ ಚಿತ್ರತಂಡದ ಕಡೆಯಿಂದ ಜಾಹೀರಾಗಿದೆ. ಈ ಹಿಂದೆ ಮಾರೀಚಿ ಅಂತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದ ಸಿದ್ದ್ರುವ್ ತೆನಾಲಿಯ ಸಾರಥ್ಯ ವಹಿಸಿಕೊಂಡಿದ್ದಾರೆ.
Kona Movie Review: ಕಥೆಯ ಕಳೇಬರದ ಮೇಲೆ ಕಾಮಿಡಿ ಕಿಲಾಡಿಗಳ ಕಸರತ್ತು!
ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿದ್ದ ಮಾರೀಚಿ ಸಿನಿಮಾ ಒಂದಷ್ಟು ಜನ ಮೆಚ್ಚುಗೆ ಪಡೆದುಕೊಂಡಿತ್ತು. ಈ ನಿಟ್ಟಿನಲ್ಲಿ ಹೇಳೋದಾದರೆ ಅದೇ ಸಿದ್ದ್ರುವ್ ನಿರ್ದೇಶನದ ತೆನಾಲಿಯ ಬಗ್ಗೆ ಒಂದಷ್ಟು ನಿರೀಕ್ಷೆಗಳಿದ್ದಾವೆ. ಸದ್ಯದ ಮಟ್ಟಿಗೆ ಸದರಿ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಅದೂ ಕೂಡಾ ಅಂತಿಮ ಘಟ್ಟ ತಲುಪಿಕೊಂಡಿದೆ. ಇನ್ನೇನು ತಿಂಗಳೊಪ್ಪತ್ತಿನಲ್ಲಿಯೇ ಚಿತ್ರೀಕರಣ ಚಾಲೂ ಆಗಲಿದೆ. ತಾರಾಗಣದ ಆಯ್ಕೆ ಕಾರ್ಯವೂ ಸಾಗುತ್ತಿರೋದರಿಂದ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆ ಬಗೆಗಿನ ವಿಚಾರಗಳನ್ನುನ ಚಿತ್ರತಂಡ ಹಂಚಿಕೊಳ್ಳಲಿದೆ. ಈ ಬಾರಿಯಾದರೂ ಕೋಮಲ್ ಕುಮಾರ್ ಒಂದೊಳ್ಳೆ ಕಥೆಯನ್ನು ಒಪ್ಪಿಕೊಂಡಿರಬಹುದಾ? ಈ ಮೂಲಕ ಅವರು ಸೋಲಿನ ಪರ್ವವನ್ನು ದಾಟಿಕೊಳ್ಳಬಹುದೆಂಬ ಪ್ರಶ್ನೆ ಬಹುತೇಕರಲ್ಲಿದೆ. ಈ ಸಾರ್ತಿ ಕೋಮಲ್ಗೆ ಗೆಲುವಾಗಲೆಂಬುದು ಹಾರೈಕೆ…
keywords: komal, komalkumar, sandalwood, thenali

