ನ್ನಡದ ಹಾಸ್ಯ ನಟರ ಸಾಲಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು (komal kumar) ಕೋಮಲ್ ಕುಮಾರ್. ಅಣ್ಣ (actor jaggesh) ಜಗ್ಗೇಶ್ ನಾಯಕ ನಟನಾಗಿ ಮಿಂಚಿದರೆ, ತಮ್ಮ ಕೋಮಲ್ ಹಾಸ್ಯ ಪಾತ್ರಗಳ ಮೂಲಕ ತಮ್ಮದೇ ಆದ ಖದರ್ ಹೊಂದಿದ್ದರು. ಬೇರೆ ಬೇರೆ ನಟರ ಸಿನಿಮಾಗಳಲ್ಲಿ ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದವರು ಕೋಮಲ್. ತಮ್ಮದೇ ಶೈಲಿಯ ಡೀಲಾಗ್ ಡೆಲಿವರಿ, ವಿಶಿಷ್ಟ ಮ್ಯಾನರಿಸಂ ಮೂಲಕ ದೊಡ್ಡದೊಂದು ಅಭಿಮಾನಿ ಬಳಗವೂ ಈತನಿಗೆ ಸಿಕ್ಕಿತ್ತು. ಆದರೆ, ಕನ್ನಡದಲ್ಲಿ ಹೀಗೆ ಹಾಸ್ಯ ನಟರಾಗಿ ಮಿಂಚಿದವರಿಗೆ ಒಂದಷ್ಟು ಗಾವುದ ಕ್ರಮಿಸುತ್ತಲೇ ಏಕಾಏಕಿ ನಾಯಕನಾಗೋ ತಲುಬು ಹತ್ತಿಕೊಳ್ಳುತ್ತೆ. ಅದು ಬಹುತೇಕರ ಪಾಲಿಗೆ ಶಾಪವಾದದ್ದೂ ಇದೆ. ಅದೇ ರೀತಿ ಕೋಮಲ್ ಕುಮಾರ್ ಗೂ ಹಾಸ್ಯ ನಟನಾಗಿ ಉತ್ತುಂಗದಲ್ಲಿರುವಾಗಲೇ ನಾಯಕನಾಗೋ ಆಸೆ ಚಿಗುರಿಕೊಂಡಿತ್ತು. ಅದರ ಸಲುವಾಗಿ ಮಾಡಿದ ಸರ್ಕಸ್ಸುಗಳಿಂದಾಗಿ ಅವರ ವೃತ್ತಿಬದುಕಿನ ಅಮೂಲ್ಯವಾದ ಒಂದಷ್ಟು ವರ್ಷಗಳು ಅಕ್ಷರಶಃ ನಜ್ಜುಗುಜ್ಜಾಗಿ ಬಿಟ್ಟಿದ್ದವು!

ಹೀಗೆ ನಾಯ ನಟನಾಗಿ ಹಲವಾರು ಏರಿಳಿತಗಳನ್ನು, ನಷ್ಟಗಳನ್ನು ಕಂಡಿದ್ದ (komal kumar) ಕೋಮಲ್, ಒಂದು ಹಂತದಲ್ಲಿ ವೃತ್ತಿ ಬದುಕೇ ಮುಗಿದು ಹೋಯ್ತೆಂಬಂಥಾ ಹತಾಶೆಗೆ ಬಿದ್ದಂತಿದ್ದರು. ಇಂಥಾ ಸೋಲು ಗೆಲುವುಗಳು ಚಿತ್ರರಂಗದಲ್ಲಿ ಹೊಸತೇನೂ ಅಲ್ಲ. ಒಂದು ಘಟ್ಟದಲ್ಲಿ ತುಸು ಅಧೀರರಾದಂತೆ ಕಾಣಿಸಿದ್ದ ಕೋಮಲ್ ಪಾಲಿಗೀಗ ಅದೃಷ್ಟದ ಪರ್ವಕಾಲವೊಂದು ಕಣ್ತೆರೆದಂತೆ ಕಾಣಿಸುತ್ತಿದೆ. ಈ ವಾರ ಬಿಡುಗಡೆಗೊಳ್ಳಲಿರುವ ಯಲಾ ಕುನ್ನಿ ಎಂಬ ಚಿತ್ರದ ಸುತ್ತ ಹಬ್ಬಿಕೊಂಡಿರೋ ಪಾಸಿಟಿವ್ ವಾತಾವರಣ ಗೆಲುವೊಂದರ ಮುನ್ಸೂಚನೆಯಂತೆ ಕಾಣಿಸುತ್ತಿದೆ. ನಿಜ, ಕೋಮಲ್ ಓರ್ವ ಪ್ರತಿಭಾನ್ವಿತ ಕಲಾವಿದ. ಆದರೆ, ಅವರ ಆಯ್ಕೆಯಲ್ಲಿ ತುಸು ಯಡವಟ್ಟುಗಳಾದಂತಿದ್ದವು. ಆದರೀಗ ಯಲಾಕುನ್ನಿ ಅವರ ವೃತ್ತಿ ಬದುಕಿನ ಉತ್ಕೃಷ್ಟ ಆಯ್ಕೆಯಾಗುವ ಲಕ್ಷಣಗಳು ಸ್ಪಷ್ಟವಾಗಿಯೇ ಗೋಚರಿಸುತ್ತಿದ್ದಾವೆ.

ಇದು ಹಳ್ಳಿಯೊಂದರಲ್ಲಿ ಘಟಿಸುವ ವಿದ್ಯಮಾನಗಳ ಸುತ್ತ ನಡೆಯುವ ಸಿನಿಮಾವಂತೆ. ಕೋಮಲ್ ಇಲ್ಲಿ ಡಬಲ್ ರೋಲ್ ನಿರ್ವಹಿಸಿದ್ದಾರೆ. ತಂದೆಯ ಪಾತ್ರದಲ್ಲಿ ಕನ್ನಡ ಚಿತ್ರರಂಗ ಕಂಡ ಮಹಾನ್ ಕಲಾವಿದ ವಜ್ರಮುನಿಯ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಒಂದಷ್ಟು ಛಾಯೆಗಳು ಥೇಟು ವಜ್ರಮುನಿಯವರನ್ನೇ ಎರಕ ಹೊಯ್ದಂತೆ ಭಾಸವಾಗುತ್ತಿದೆ. ಅದರ ಬಗ್ಗೆ ಮೆಚ್ಚುಗೆ ಮೂಡಿಕೊಳ್ಳುತ್ತಲೇ, ನಿರೀಕ್ಷೆಗಳೂ ನಿಗಿನಿಗಿಸುತ್ತಿವೆ. ಈ ಸಿನಿಮಾ ಮೂಲಕ ಕೋಮಲ್ ವೃತ್ತಿ ಬದುಕಿಗೆ ಹೊಸಾ ಶಕ್ತಿ ಸಿಗಲಿದೆಯಾ? ಇದುವರೆಗೆ ಸಾಲು ಸಾಲಾಗಿ ಸಿಕ್ಕ ಸೋಲಿನ ಹೊಡೆತಗಳಿಂದ ಆತ ಚೇತರಿಸಿಕೊಳ್ಳುತ್ತಾರಾ? ಇಂಥಾ ನಾನಾ ಪ್ರಶ್ನೆಗಳಿಗೆ ಈ ವಾರವೇ ನಿಖರವಾದ ಉತ್ತರ ಸಿಗಲಿದೆ. ಕೋಮಲ್ ಸೋಲಿನ ಶೂಲಕ್ಕೆ ಸಿಕ್ಕಿದ್ದನ್ನು ಅಣ್ಣ ಜಗ್ಗಣ್ಣ ಆಗಾಗ ಜ್ಯೋತಿಷ್ಯದ ಭೂಮಿಕೆಯಲ್ಲಿ ವಿಶ್ಲೇಶಿಸೋದಿದೆ. ಗ್ರಹಗತಿ ಅದೂ ಇದೂ ಅಂತೆಲ್ಲ ಮಾತಾಡೋದಿದೆ. ಆದರೆ, ಸೋಲು ಸುತ್ತಿಕೊಂಡಿದ್ದರಲ್ಲಿ ಆಯ್ಕೆಗಳ ಪಾಲಿದೆಯೇ ಹೊರತು ಗ್ರಹಗತಿಗಳ ತಪ್ಪಿಲ್ಲ ಅಂತ ಕೋಮಲ್ ಆಪ್ತ ಬಳಗವೇ ಅಭಿಪ್ರಾಯ ಪಡುತ್ತಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!