ಬೀದಿನಾಯಿಗಳ ಹಾವಳಿ ನಮ್ಮ ರಾಜ್ಯದಲ್ಲಿಯೂ ಆಗಾಗ ಸುದ್ದಿಯಾಗೋದಿದೆ. ವ್ಯಘ್ರಗೊಂಡ ಬೀದಿ ಶ್ವಾನಗಳು ಯಾರದ್ದೋ ಮೇಲೆ ಮುಗಿಬಿದ್ದು ದಾಳಿ ನಡೆಸಿದಾಗ, ಅವುಗಳ ನಿಯಂತ್ರಣದ ಬಗ್ಗೆ, ಹತೋಟಿ ಕ್ರಮಗಳ ಬಗ್ಗೆ ಒಂದಷ್ಟು ಚರ್ಚೆಗಳು ನಡೆಯುತ್ತವೆ. ಕರ್ನಾಟಕದಲ್ಲಂತೂ ಬಿಬಿಎಂಪಿ ಮಂದಿ ಬೀದಿ ನಾಯಿಗಳಿಗೆ ಬಿರ್ಯಾನಿ ವ್ಯವಸ್ಥೆ ಮಾಡ ಹೊರಟಿದ್ದ ವಿಚಾರ ದೇಶವ್ಯಾಪಿ ಸುದ್ದಿಯಾಗಿತ್ತು. ಇದೀಗ ದೆಹಲಿಯ ಬೀದಿನಾಯಿಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವೊಂದು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸ್ವತಃ ಶ್ವಾನ ಪ್ರೇಮಿಯಾಗಿರುವ ಕಿಚ್ಚಾ ಸುದೀಪ್ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ!
ದೆಹಲಿಯಲ್ಲಿ ದಿನೇ ದಿನೆ ಹೆಚ್ಚಾಗುತ್ತಿದ್ದ ಬೀದಿ ನಾಯಿಗಳ ಉಪಟಳದ ಬಗ್ಗೆ ಸುಪ್ರೀಂ ಕೋರ್ಟ್ ಸುಮೋಟೋ ಪ್ರಕರಣ ದಾಖಲಿಸಿಕೊಂಡಿತ್ತು. ಈ ಬಗ್ಗೆ ಆದೇಶವೊಂದನ್ನು ನೀಡಿರುವ ಸುಪ್ರೀಂ ದೇಹಲಿಯಲ್ಲಿನ ನಾಯಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಅವುಗಳಿಗೆ ಬದುಕುವ ವಾತಾವರಣ ಕಲ್ಪಿಸುವಂತೆ ನಿರ್ದೇಶನ ನೀಡಿದೆ. ಈ ತೀರ್ಪನ್ನು ಗೌರವಿಸುತ್ತಲೇ ದೇಶಾದ್ಯಂತ ನಾನಾ ಮಂದಿ ತಂತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಸುದೀಪ್ ಸಾಮಾಜಿಕ ಜಾಲತಾಣದ ಮೂಲಕ ಒಂದು ವಿಚಾರ ಹಂಚಿಕೊಂಡಿದ್ದಾರೆ. ಸುಪ್ರೀಂ ಆದೇಶವನ್ನು ಪ್ರಶ್ನೆ ಮಾಡುತ್ತಿಲ್ಲ. ಆದರೆ ಅದರ ಪ್ರಕಾರ ನಡೆದುಕೊಂಡರೆ ಅವುಗಳ ಮೇಲೆ ಎಂಥಾ ಪರಿಣಾಮ ಬೀರುಜತ್ತದೆ ಅನ್ನೋದರ ಬಗ್ಗೆ ನಾವು ಆಲೋಚಿಸಬೇಕು ಅಂದಿದ್ದಾರೆ ಕಿಚ್ಚ.
ನಾವೆಲ್ಲ ಬೀದಿ ನಾಯಿರೋ ವಾತಾವರಣದಲ್ಲಿಯೇ ಬೆಳೆದವರು. ನಾವು ಬೀದಿ ನಾಯಿಗನ್ನು ದತ್ತು ತೆಗೆದುಕೊಳ್ಳುವುದರ ಮೂಲಕ ಆ ನಿಷ್ಠಾವಂತ ಮೂಕ ಜೀವಿಗಳಿಗೆ ಆಸರೆಯಾಗಬಹುದೆಂಬ ಸಲಹೆಯನ್ನು ಕಿಚ್ಚ ಕೊಟ್ಟಿದ್ದಾರೆ. ಇದಕ್ಕೆ ಬಹುತೇಕರು ಸಹಮತ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾದರೂ ಕೂಡಾ ಅವುಗಳನ್ನು ಪ್ರತ್ಯೇಕ ಸ್ಥಳದಲ್ಲಿರಿಸೋದು ಅಮಾನವೀಯ ಅಂತ ಪ್ರಾಣಿ ಪ್ರಿಯರು ಅಭಿಪ್ರಾಯ ಪಡುತ್ತಿದ್ದಾರೆ. ಶ್ವಾನಗಳು ಮನುಷ್ಯರೊಂದಿಗೇ ಬದುಕೋ ಜೀವಿಗಳು. ಅವುಗಳ ಉಪಟಳ ಹೆಚ್ಚಾದಾಗ ಮಾನವೀಯ ನೆಲೆಯಲ್ಲಿ ಕ್ರಮ ಕೈಗೊಳ್ಳೋದೇ ಸೂಕ್ತ ಎಂಬ ಅಭಿಪ್ರಾಯ ಬಹುತೇಕರದ್ದು. ಕಿಚ್ಚಾ ಕೂಡಾ ಆ ದಿಸೆಯಲ್ಲಿಯೇ ಅಭಿಪ್ರಾಯ ಹಂಚಿಕೊಂಡಿದ್ದಾರೆ.