ನೆಲದ ಘಮಲಿನ ಕಥೆಗಳತ್ತ ಇದೀಗ ಚಿತ್ರರಂಗದ ದೃಷ್ಟಿ ಹೊರಳಿಕೊಂಡಿದೆ. ಆಧುನಿಕ ಜಗತ್ತು ಹೊಸಕುತ್ತಾ ಸಾಗುತ್ತಿರುವ ಕೆಲ ನೆಲಮೂಲದ ಸಂಸ್ಕøತಿಯನ್ನು ಮರ್ಶಿಯಲ್ ಚೌಕಟ್ಟಿನಲ್ಲಿ ಕಟ್ಟಿ ಕೊಡುವ ಕ್ರಿಯಾಶೀಲ ಪ್ರಯತ್ನಕ್ಕೆ ಕನ್ನಡ ಚಿತ್ರರಂಗ ಒಡ್ಡಿಕೊಳ್ಳುತ್ತಿದೆ. ಅದರ ಭಾಗವಾಗಿ ಮೂಡಿ ಬಂದು, ಇದೀಗ ನಾನಾ ರೀತಿಯಲ್ಲಿ ಸದ್ದು ಮಾಡುತ್ತಿರುವ ಚಿತ್ರ (kerebete movie) ಕೆರೆಬೇಟೆ. ತಿಂಗಳುಗಳ ಹಿಂದೆ ಬಿಡುಗಡೆಗೊಂಡಿದ್ದ ಕೆರೆಬೇಟೆಯ ಟೀಸರ್ ಪ್ರೇಕ್ಷಕರೆಲ್ಲರಿಗೆ ಕೌತುಕದ ಜ್ವರವೇರಿಸಿ ಬಿಟ್ಟಿತ್ತು. ಹಾಗೊಂದು ಸಮ್ಮೋಹಕ ಪ್ರತಿಕ್ರಿಯೆ ಪಡೆದ ಖುಷಿಯಲ್ಲಿರೋ ಚಿತ್ರತಂಡವೀಗ ಮಹತ್ವದ ವಿಚಾರವೊಂದನ್ನು ಜಾಹೀರು ಮಾಡಿದೆ. ಅದರನ್ವಯ ಹೇಳೋದಾದರೆ, (kerebete movie trailer) ಕೆರೆಬೇಟೆಯ ಟ್ರೈಲರ್ (kiccha sudeep) ಕಿಚ್ಚಾ ಸುದೀಪ್ ಕಡೆಯಿಂದ ಬಿಡುಗಡೆಗೊಳ್ಳಲಿದೆ!

ಒಂದೊಳ್ಳೆ ಪ್ರಯತ್ನಕ್ಕೆ ಸದಾ ಜೊತೆಯಾಗುತ್ತಾ ಬಂದವರು ಸುದೀಪ್. ಹೇಳಿಕೇಳಿ ಕೆರೆಬೇಟೆ ಚಿತ್ರ ಭಿನ್ನ ಕಂಟೆಂಟಿನ ಕುರುಹುಗಳ ಮೂಲಕ ಭಾರೀ ಸದ್ದು ಮಾಡುತ್ತಿದೆ. ಆ ಸಿನಿಮಾದ ಟ್ರೈಲರ್ ಲಾಂಚ್ ಮಾಡಲು ಅವರು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಇದೇ ಫೆಬ್ರವರಿ 20 ಸಂಜೆ 7 ಗಂಟೆಗೆ ಸುದೀಪ್ ಕೆರೆಬೇಟೆ ಟ್ರೈಲರ್ ಅನ್ನು ಅನಾವರಣಗೊಳಿಸಲಿದ್ದಾರೆ. ಇದು ಈಗಾಗಲೇ ಗೆಲುವಿನ ಮುನ್ಸೂಚನೆ ಸಿಕ್ಕ ಖುಷಿಯಲ್ಲಿರುವ ಚಿತ್ರತಂಡಕ್ಕೆ ಮತ್ತಷ್ಟು ಹುಮ್ಮಸ್ಸು ಬಂದಂತಾಗಿದೆ. ಈ ಹಿಂದೆ ಟೀಸರ್ ನೋಡಿದವರೆಲ್ಲ, ಟ್ರೈಲರ್‍ಗಾಗಿ ಕಾದು ಕೂತಿದ್ದರು. ಕೆರೆಬೇಟೆಯ ಅಸಲೀ ಸ್ವರೂಪವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದರು. ಅದು ಕೈಗೂಡುವ ಕ್ಷಣವೀಗ ಹತ್ತಿರಾಗಿದೆ!

ಈ ಹಿಂದೆ ಜೋಕಾಲಿ, ರಾಜಹಂಸ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದವರು ಗೌರಿಶಂಕರ್. ಅದಾದ ಬಳಿಕ ಒಂದಷ್ಟು ಕಾಲ ಮರೆಗೆ ಸರಿದಿದ್ದ ಅವರೀಗ ಕೆರೆಬೇಟೆಯ ಹೀರೋ ಆಗಿ ಮರಳಿದ್ದಾರೆ. ನಾನಾ ಛಾಯೆಗಳನ್ನು ಹೊಂದಿರೋ ಆ ಪಾತ್ರದ ಒಂದಷ್ಟು ಝಲಕ್ಕುಗಳು ಈಗಾಗಲೇ ಜಾಹೀರಾಗಿವೆ. ಅಂದಹಾಗೆ ಜೈಶಂಕರ್ ಪಟೇಲ್ ಮತ್ತು ಗೌರಿಶಂಕರ್ ಜನಮನ ಸಿನಿಮಾ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗ್ಗೆ ಹತ್ತಾರು ವರ್ಷಗಳಿಂದ ನಾನಾ ನಿರ್ದೇಶಕರೊಂದಿಗೆ ಕೆಲಸ ಮಾಡಿ ಪಳಗಿಕೊಂಡಿರುವ ಗುರುಶಿವ ಹಿತೈಶಿ ಕೆರೆಬೇಟೆಯ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ಅವರು ನೆಲಮೂಲದ ಕಥೆಯನ್ನು ಆರಿಸಿಕೊಂಡಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಕೆವಲ ಕನ್ನಡ ಚಿತ್ರರಂಗದ ಹರಿವಿನ ದೃಷ್ಟಿಯಲ್ಲಿ ಮಾತ್ರವಲ್ಲ; ಆಯಾ ಭಾಗದ ಆಚರಣೆ, ಸಂಸ್ಕøತಿಗಳ ಉಳಿವಿನ ದೃಷ್ಟಿಯಿಂದಲೂ ಕೆರೆಬೇಟೆ ಚಿತ್ರ ಪ್ರಧಾನವಾಗಿ ಪರಿಗಣಿಸಲ್ಪಡುತ್ತದೆ.

ಮಲೆನಾಡಿನ ಗರ್ಭದಲ್ಲಿ ಹಲವಾರು ಚೆಂದದ ಸಂಸ್ಕøತಿ, ಆಚರಣೆಗಳಿದ್ದಾವೆ. ಅದೆಲ್ಲವಕ್ಕೂ ಕಾಡಿನೊಡಲ ಆದ್ರ್ರ ಛಾಯೆಯಿದೆ. ಅದೆಷ್ಟೋ ತಲೆಮಾರುಗಳ ಜೀವನಕ್ರಮವನ್ನು ರೂಪಿಸಿದ ಘನವಾದ ಐತಿಹ್ಯವಿದೆ. ಅದರಲ್ಲಿ ಬಹುಪಾಲು ಈಗಿನ ಪೀಳಿಗೆಗೆ ಅಪರಿಚಿತ. ಅದೇ ರೀತಿ ಸುತ್ತಲ ಹತ್ತೂರುಗಳನ್ನೂ ಬಳಸಿಕೊಂಡು ನಡೆಯುತ್ತಿದ್ದ ಕೆರೆಬೇಟೆ ಹಾಗೆ ನೇಪಥ್ಯದಂಚಿನಲ್ಲಿರುವ ಆಚರಣೆಗಳಲ್ಲೊಂದು. ಅದನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸಿ, ಒಂದು ಚೆಂದದ ಪ್ರೇಮಕಥೆ, ಮಾಸ್, ಭಾವುಕತೆಗಳೆಲ್ಲವನ್ನೂ ಬೆರೆಸಿ ಈ ಚಿತ್ರವನ್ನು ರೂಪಿಸಲಾಗಿದೆಯಂತೆ.

ಈಗ ಜಾಹೀರುಗೊಂಡಿರುವ ಒಂದಷ್ಟು ವಿವರಗಳು, ಟೀಸರ್ ಮುಂತಾದವುಗಳ ಮೂಲಕ ಕೆರೆಬೇಟೆ ಭಿನ್ನ ಕಥಾನಕ ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಬಹುಶಃ ಕಾಂತಾರದ ನಂತರದಲ್ಲಿ ಅದರಂಥಾದ್ದೇ ಕಮಾಲ್ ಮಾಡೋ ಮಣ್ಣಿನ ಕಥೆಯಾಗಿ ಕೆರೆಬೇಟೆ ದಾಖಲಾಗುವ ಲಕ್ಷಣಗಳೂ ಗೋಚರಿಸುತ್ತಿವೆ. ಪ್ರತಿಭಾನ್ವಿತರ ತಂಡ, ಗಾಢವಾದ ಸಿನಿಮಾ ಕನಸುಗಳ ನಡುವೆ ರೂಪುಗೊಂಡಿರುವ ಕೆರೆಬೇಟೆ ಮಾರ್ಚ್ 15ರಂದು ತೆರೆಗಾಣಲಿದೆ. ಬಿಡುಗಡೆಯ ಹೊಸ್ತಿಲಿನಲ್ಲಿ ಕಿಚ್ಚನ ಕಡೆಯಿಂದ ಅನಾವರಣಗೊಳ್ಳಲಿರೋ ಟ್ರೈಲರ್‍ನತ್ತ ಪ್ರೇಕ್ಷಕರ ಚಿತ್ತ ಕೀಲಿಸಿಕೊಂಡಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!