ನಮನ ಸಿನಿಮಾಸ್ (janaman cinemas) ಬ್ಯಾನರಿನಡಿಯಲ್ಲಿ ಜೈಶಂಕರ್ ನಿರ್ಮಾಣ ಮಾಡಿರುವ, ಗೌರಿಶಂಕರ್ (gowsrishankar) ನಾಯಕನಾಗಿ ನಟಿಸಿರುವ ಕೆರೆಬೇಟೆ ಚಿತ್ರ ಈ ವಾರ ಬಿಡುಗಡೆಗೊಳ್ಳಲಿದೆ. ಬಿಡುಗಡೆಯ ಈ ಕಡೇಯ ಘಳಿಗೆಗಳಲ್ಲಿ ಪ್ರೇಕ್ಷಕರ ವರ್ಗದಲ್ಲಿ ಪಡಿಮೂಡಿಕೊಂಡಿರುವ ಕುತೂಹಲವೇ ಗೆಲುವಿನ ಮುನ್ಸೂಚನೆಯಂತೆ ಭಾಸವಾಗುತ್ತಿದೆ. ಯಾವತ್ತಿಗೂ ಎಲ್ಲ ದಿಕ್ಕಿನಿಂದಲೂ ಪ್ರತಿಭಾನ್ವಿತರ ಸಂಗಮವಾದರೆ ಮಾತ್ರವೇ ಒಂದು ಅದ್ಭುತ ಗೆಲುವು ಎದುರುಗೊಳ್ಳಲು ಸಾಧ್ಯವಾಗುತ್ತೆ. ಕೆರೆಬೇಟೆಯ ವಿಚಾರದಲ್ಲಿ ಅಂಥಾದ್ದೊಂದು ತಾಂತ್ರಿಕ ವರ್ಗ, ನಿರ್ದೇಶನ ವಿಭಾಗ ಮತ್ತು ಕಲಾವಿದರ ಬಳಗ ಒಟ್ಟುಗೂಡಿದೆ. ನಿರ್ದೇಶಕ ರಾಜ್ ಗುರು ಎಲ್ಲಿಯೂ ರಾಜಿ ಮಾಡಿಕೊಳ್ಳದೆ, ಆಯಾ ಪಾತ್ರಕ್ಕೊಪ್ಪುವ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಹೊಸಬರಿಗೂ ತರಬೇತಿ ಕೊಟ್ಟು ಅವಕಾಶ ಕಲ್ಪಿಸಿದ್ದಾರೆ.

ಕೆರೆಬೇಟೆಯ ಮೂಲಕ ಒಂದಷ್ಟು ಸ್ಥಳೀಯರಿಗೂ ನಟನೆಯ ಅವಕಾಶ ಮಾಡಿಕೊಡಲಾಗಿದೆ. ಅದರ ಜೊತೆಗೇ ಪ್ರಧಾನ ಪಾತ್ರಗಳನ್ನು ನುರಿತ ಪ್ರತಿಭಾನ್ವಿತ ಕಲಾವಿದರು ನಿರ್ವಹಿಸಿದ್ದಾರೆ. ಯಾವ ಪಾತ್ರಕ್ಕಾದರೂ ಜೀವ ತುಂಬಿ ನಟಿಸುವ ಕಸುವಿನ ಕಲಾವಿದ ಗೋಪಾಲಕೃಷ್ಣ ದೇಶಪಾಂಡೆ ಇಲ್ಲಿ ನಾಯಕಿಯ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಒಂದಿಡೀ ಕಥೆಯಲ್ಲಿ ಪ್ರಾಧಾನ್ಯತೆ ಇರುವ, ಅಪ್ಪಟ ಮಲೆನಾಡಿನ ಗುಣ ಲಕ್ಷಣಗಳನ್ನು ಹೊಂದಿರುವ ಆ ಪಾತ್ರವನ್ನವರು ಅನುಭವಿಸಿ ನಟಿಸಿದ್ದಾರಂತೆ. ಮುದ್ದಿನಿಂದ ಮುಚ್ಚಟೆ ಮಾಡಿ ಸಾಕಿದ ಮಗಳ ಬದುಕು ತಲ್ಲಣಿಸಿದಾಗ, ಮರುಗುವ ಅಪ್ಪನಾಗಿ, ಆ ಒಳತೋಟಿಗಳನ್ನೆಲ್ಲ ಮನಮುಟ್ಟುವಂತೆ ಕಟ್ಟಿಕೊಡುವ ಪಾತ್ರವದು.

ಹೀಗೆ ಕೆರೆಬೇಟೆಯ ಭಾಗವಾಗಿರುವ (gopal deshpande) ಗೋಪಾಲ ದೇಶಪಾಂಡೆ ಪಾಲಿಗೆ ಮಲೆನಾಡಿನ ಬಗ್ಗೆ ಅದೆಂಥಾದ್ದೋ ಸೆಳೆತ. ಅದರ ಗರ್ಭದಲ್ಲಿರುವ ಜೀವಂತ ಕಥಾನಕಗಳು, ಬದುಕಿನ ಕ್ರಮಗಳ ಬಗ್ಗೆ ಎಲ್ಲಿಲ್ಲದ ಬೆರಗು. ಸಾಧ್ಯವಾದರೆ ಮುಂದೆಂದಾದರೂ ಆ ಭಾಗದ ಕಥೆಯಲ್ಲಿ ಪಾತ್ರವಾಗಬೇಕೆಂಬ ಹಂಬಲ ಅವರೊಳಗಿತ್ತಂತೆ. ಅದು ಕೆರೆಬೇಟೆಯ ಮೂಲಕ ತಂತಾನೇ ಸಾಕಾರಗೊಂಡಿದೆ. ಈ ಚಿತ್ರದಲ್ಲಿ ಮಲೆನಾಡಿನ ಪಾತ್ರವನ್ನೇ ಜೀವಿಸುವಂಥಾ ಸದಾವಕಾಶ ಸಿಕ್ಕಿರುವುದು ಅವರನ್ನು ಥ್ರಿಲ್ ಆಗಿಸಿದೆ. ಒಟ್ಟಾರೆ ಸಿನಿಮಾ ಮೂಡಿ ಬಂದಿರುವ ರೀತಿ, ಗೌರಿಶಂಕರ್ ಸೇರಿದಂತೆ ಕಲಾವಿದರ ನಟನೆ, ನಿರ್ದೇಶಕರು, ತಾಂತ್ರಿಕ ವರ್ಗದವರ ಕಸುಬುದಾರಿಕೆಗಳ ಬಗ್ಗೆ ಅವರೊಳಗೊಂದು ಮೆಚ್ಚುಗೆ ಇದೆ. ಈ ಸಿನಿಮಾವನ್ನು ಜನ ಗೆಲ್ಲಿಸುತ್ತಾರೆಂಬ ನಂಬಿಕೆಯೂ ಇದೆ.
ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!