ಸೂರ್ಯ ನಟಿಸಿರುವ ಬಹು ನಿರೀಕ್ಷಿತ ಚಿತ್ರ ಕಂಗುವ. ಪ್ಯಾನಿಂಡಿಯಾ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದ ಈ ಚಿತ್ರ ಅದೇಕೋ ಪ್ರತೀ ಹೆಜ್ಜೆಯಲ್ಲಿಯೂ ಮುಗ್ಗರಿಸುತ್ತಿದೆ. ಸದಾ ಹೊಸತನದ ಪಾತ್ರಗಳಿಗೆ ಹಾತೊರೆಯೋ ಅಪರೂಪದ ನಟ ಸೂರ್ಯ. ಆತ ಕಂಗುವಾ ಚಿತ್ರದಲ್ಲಿ ನಿರ್ವಹಿಸಿರೋ ಪಾತ್ರದ ಒಂದಷ್ಟು ಚಹರೆಗಳು ಜಾಹೀರಾಗುತ್ತಲೇ, ಅಭಿಮಾನದಾಚೆಗೂ ಪ್ರೇಕ್ಷಕರು ಥ್ರಿಲ್ ಆಗಿದ್ದದ್ದು ನಿಜ. ಇದೀಗ ಬಿಡುಗಡೆಯ ಹೊಸ್ತಿಲಲ್ಲಿ ಕಂಗುವ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಆದರೆ, ಈ ಟ್ರೈಲರ್ ಪ್ರೇಕ್ಷಕರಲ್ಲಿದ್ದ ಗಾಢ ನಿರೀಕ್ಷೆಯ ನೆತ್ತಿಗೆ ಅಕ್ಷರಶಃ ತಣ್ಣೀರೆರಚಿದೆ. ಅಷ್ಟಕ್ಕೂ ಕಂಗುವ ಬಗ್ಗೆ ಹಬ್ಬಿಕೊಂಡಿರುವ ನಿರೀಕ್ಷೆ ಸಣ್ಣ ಮಟ್ಟದ್ದೇನಲ್ಲ. ಆದರೆ, ಅದರ ಹತ್ತಿರಕ್ಕೂ ಸುಳಿಯದಂತೆ ಈ ಟ್ರೈಲರ್ ಮೂಡಿ ಬಂದಿದೆ ಎಂಬಂಥಾ ಅಭಿಪ್ರಾಯಗಳು ವ್ಯಾಪಕವಾಗಿ ಹಬ್ಬಿಕೊಳ್ಳಲಾರಂಭಿಸಿವೆ.

ಈ ಹಿಂದೆಯೂ ಕಂಗುವಾದ ಒಂದು ಟ್ರೈಲರ್ ಬಿಡುಗಡೆಗೊಂಡಿತ್ತು. ಅದರಲ್ಲಿದ್ದ ಒಂದಷ್ಟು ದೃಷ್ಯಗಳ ಬಗ್ಗೆ ಖುದ್ದು ಸೂರ್ಯನನ್ನು ಆರಾಧಿಸುವ ಮಂದಿಗೇ ಸಮಾಧಾನವಾಗಿರಲಿಲ್ಲ. ಇಂಥಾ ಒಂದಷ್ಟು ವಿಚಾರಗಳಿಂದ ಒಂದಿಡೀ ಚಿತ್ರವನ್ನು ಅಳೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅಸಲೀ ಕಸುವಿನ ಕಂಟೆಂಟು ಎದುರಾಗಬಹುದೆಂಬಂಥಾ ನಿರೀಕ್ಷೆ ಮೂಡಿಕೊಂಡಿತ್ತು. ಚಿತ್ರತಂಡ ಎಲ್ಲವನ್ನೂ ಲಘುವಾಗಿ ಪರಿಗಣಿಸಿತೋ, ಯಾವ ಹಂತದಲ್ಲಿ ಮುಗ್ಗರಿಸಿತೋ ಗೊತ್ತಿಲ್ಲ; ಟ್ರೈಲರ್ ಅಂತೂ ಪೇಲವವಾಗಿ ಮೂಡಿ ಬಂದಿದೆ. ಈ ಹಿಂದಿನ ಟ್ರೈಲರಿನಲ್ಲಿ ಯಾವ ಅಂಶಗಳು ಜನರಿಗೆ ಇಷ್ಟವಾಗಿರಲಿಲ್ಲವೋ, ಅದನ್ನೇ ಮತ್ತೆ ಮೆತ್ತಿಕೊಂಡಂಥಾ ಸದರಿ ಟ್ರೈಲರ್ ಕಂಡು ಸೂರ್ಯಾಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ಮೊದಲ ಟ್ರೈಲರ್ ಗೆ ಹೋಲಿಸಿದರೆ, ಈ ಟ್ರೈಲರಿನಲ್ಲಿ ಒಂದಷ್ಟು ವಿವರಣೆಗಳಿದ್ದಾವೆ. ಆದರೆ, ಹಳೇಯ ತಪ್ಪುಗಳು ಪುನರಾವರ್ತನೆಯಾಗಿ ಬೆರಗೆಲ್ಲವೂ ಅದರಲ್ಲಿ ಕೊಚ್ಚಿ ಹೋದಂತಿದೆ. ಇದರಲ್ಲಿರುವ ಬಹು ಪಾಲು ದೃಷ್ಯಗಳು ಹಿಂದಿನ ಟ್ರೈಲರ್ ಮತ್ತು ಹಾಡುಗಳಲ್ಲಿ ನೋಡಿರುವಂಥಾದ್ದೇ. ಚಿತ್ರತಂಡ ಯಾಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಂಡಿದೆ ಎಂಬ ಸಿಟ್ಟು ನೋಡುಗರಲ್ಲಿ ಪಡಿಮೂಡಿಕೊಂಡಿದೆ. ಈ ಕಾರಣದಿಂದಲೇ ನೆಟ್ಟಿಗರು ದೊಡ್ಡ ಮಟ್ಟದಲ್ಲಿಯೇ ನೆಗೆಟಿವ್ ಟ್ರೋಲುಗಳನ್ನು ಇಟ್ಟಾಡಿಸಲಾರಂಭಿಸಿದ್ದಾರೆ. ಅಮರನ್ ಥರದ ಚಿತ್ರವೀಗ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದೆ. ಅದರ ಪ್ರದರ್ಶನದ ಭರಾಟೆಯ ನಡುವೆಯೇ ಬಿಡುಗಡೆಗೊಂಡು, ನೆಲೆ ಕಂಡುಕೊಳ್ಳುವ ದರ್ದು ಇದೆ. ಆದರೆ ಟ್ರೈಲರ್ ವೀಕ್ಷಿಸಿದ ಯಾರಿಗೂ ಕಂಗುವಾ ಸವಾಲುಗಳನ್ನು ದಾಟಿಕೊಳ್ಳಬಹುದೆಂಬ ನಂಬಿಕೆ ಮಾತ್ರ ಉಳಿದಿಲ್ಲ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!