ಸಿನಿಮಾ ನಟ ನಟಿಯರು ರಾಜಕಾರಣಿಗಳಾಗಿ ರೂಪಾಂತರ ಹೊಂದೋದೇನೂ ಅಚ್ಚರಿಯ ವಿಚಾರವಲ್ಲ. ಕಳೆದ ತಲೆಮಾರಿನ ಒಂದಷ್ಟು ನಟ ನಟಿಯರು ಹೀಗೆ ರಾಜಕಾರಣಿಗಳಾಗಿ, ಜನಾನುರಾಗಿಯಾಗಿ ನಡೆದುಕೊಂಡ ಉದಾಹರಣೆಗಳಿದ್ದಾವೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಾಗೆ ರಾಜಕೀಯದತ್ತ ಯಾವ ನಟ ನಟಿಯರು ಮುಖ ಮಾಡಿದರೂ ಅಂಥವರಿಂದ ಮಹತ್ವದ ನಿರೀಕ್ಷೆ ಇಟದ್ಟುಕೊಳ್ಳುವಂಥಾ ವಾತಾವರಣ ಖಂಡಿತವಾಗಿಯೂ ಇಲ್ಲ. ಈ ನೆಲದ ಸಮಸ್ಯೆಗಳು, ಬಡತನಗಳ ಬಗ್ಗೆ ಅರಿವಿರದ, ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಈ ಹೈಫೈ ಮಂದಿಯಿಂದ ಅದೆಂಥಾ ನಿರೀಕ್ಷೆಯಿಟ್ಟುಕೊಳ್ಳಲು ಸಾಧ್ಯ? ಸದ್ಯದ ಮಟ್ಟಿಗೆ ಇಂಥಾದ್ದೊಂದು ಪ್ರವರವನ್ನು ಮತ್ತೆ ಇಲ್ಲಿ ಹರವಲು ಕಾರಣವಾಗಿರುವಾಕೆ ಬಿಜೆಪಿ ಸಂಸದೆ, ಬಾಲಿವುಡ್ ನಟಿ ಕಂಗನಾ ರಾಣೌತ್!
ಸಾಮಾನ್ಯವಾಗಿ ಆಳೋ ಸರ್ಕಾರಗಳು ಯಾವ ಪಕ್ಷದ್ದೇ ಇದ್ದರೂ, ಅವುಗಳ ತಪ್ಪುಗಳನ್ನು ಎತ್ತಿ ತೋರಿಸುತ್ತಾ, ವಿಮರ್ಶೆಗೊಡ್ಡೋದು ಪ್ರಜಾಪ್ರಭುತ್ವದ ಪ್ರಧಾನ ಅಂಶ. ಆ ನಿಟ್ಟಿನಲ್ಲಿ ನೋಡ ಹೋದರೆ ಭಾರತೀಯ ಚಿತ್ರರಂಗದ ಬಹುತೇಕ ಸೆಲೆಬ್ರಿಟಿಗಳು ಆಳೋ ಮಂದಿಗೆ ಬಕೀಟು ಹಿಡಿಯುತ್ತಾ, ಸಂದರ್ಭಾನುಸಾರ ಬೂಟು ನೆಕ್ಕುತ್ತಾ ಬದುಕುವವರೆಂಬುದು ಕಹಿ ವಾಸ್ತವ. ಇಂಥಾದ್ದರ ನಡುವೆ ಕೆಲ ನಟ ನಟಿಯರು ಆಳೋ ಮಂದಿಗೆ ಉಧೋ ಅನ್ನುತ್ತಾ, ಆ ಮೂಲಕವೇ ನಾನಾ ಥರದ ಫಾಯಿದೆ ಗಿಟ್ಟಿಸಿಕೊಳ್ಳುವವರ ಸಂಖ್ಯೆ ಅತಿಯಾಗಿದೆ. ಕಂಗನಾ ಕೂಡಾ ಥೇಟು ಅದೇ ರೀತಿ ನಡೆದುಕೊಂಡಿದ್ದರು. ಅದಕ್ಕೆ ಪ್ರತಿಫಲವಾಗಿ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟು ಸಿಕ್ಕು ಗೆಲುವೂ ಒಲಿದಿತ್ತು.
ಇದೆಲ್ಲ ಒತ್ತಟ್ಟಿಗಿರಲಿ, ಹಾಗೆ ಗೆದ್ದಾದ ಮೇಲೆ ಕಂಗನಾ ಓರ್ವ ಸಂಸದೆಯಾಗಿ ಹೇಗೆ ನಡೆದುಕೊಳ್ಳುತ್ತಿದ್ದಾರೆ? ತಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಜನರಿಗಾಗಿ ಮಿಡಿಯುತ್ತಿದ್ದಾರಾ ಅಂತ ನೋಡ ಹೋದರೆ, ಆಕೆ ಸಂಸತ್ತಿಗೆ ಧರಿಸಿ ಬರುವ ದುಬಾರಿ ಬಟ್ಟೆ, ಬ್ಯಾಗುಗಳ ಸುತ್ತಲಷ್ಟೇ ಚರ್ಚೆಗಳು ನಡೆಯುತ್ತಿವೆ. ಆಕೆಯ ಕೆಲಸ ಕಾರ್ಯಗಳು ಸದ್ದು ಮಾಡುತ್ತಿಲ್ಲ. ಹೇಳಿಕೇಳಿ ಪ್ರತೀ ಮಳೆಗಾಲದಲ್ಲಿಯೂ ಹಿಮಾಚಲ ಪ್ರದೇಶದಲ್ಲಿ ಪ್ರವಾಹ ತಲೆದೋರುತ್ತೆ. ಈಕೆ ಪ್ರತಿನಿಧಿಸುವ ಮಂಡಿ ಕ್ಷೇತ್ರಕ್ಕೂ ಅದರ ಬಿಸಿ ತಟ್ಟುತ್ತೆ. ಆದರೆ, ಅಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋದ ಬದುಕುಗಳನ್ನು ಸರಿಗಾಣಿಸುವ ಪ್ರಯತ್ನವನ್ನು ಈಕೆ ಮಾಡುತ್ತಿದ್ದಂತಿಲ್ಲ. ಮಂದಿ ಗ್ಲಾಮರಿಗೆ, ಸ್ಟಾರ್‌ಡಮ್ಮಿಗೆ ಬೆಲೆ ಕೊಟ್ಟು ಚುನಾವಣೆಯಲ್ಲಿ ಗೆಲ್ಲಿಸಿದರೆ ಇನ್ನೇನಾಗಲು ಸಾಧ್ಯ?