ಸಿನಿಮಾ ನಟರು ಹೆಚ್ಚಿನ ಸಂದರ್ಭಗಳಲ್ಲಿ ಸಾಮಾಜಿಕ ಸ್ಥಿತ್ಯಂತರಗಳಿಗೆ ಸ್ಪಂದಿಸೋದೇ ಇಲ್ಲ. ಸಾವಿರ ಕಷ್ಟ ಕೋಟಲೆಗಳ ನಡುವೆಯೂ ಪ್ರೀತಿಯಿಂದ ಕಾಸು ಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕರಿದ್ದಾರಲ್ಲಾ? ಅವರ ಬದುಕು ಕಂಗೆಟ್ಟು ನಿಂತಾಗ ನೆರವಿಗೆ ಧಾವಿಸುವ ಮನುಷ್ಯತ್ವವೂ ಬಹುತೇಕ ನಟರಿಗಿಲ್ಲ. ಇನ್ನು ರಾಜಕೀಯ ಕಿಸುರಿನಿಂದ ತಮ್ಮನ್ನು ಆರಾಧಿಸುವ ಜನರೇ ಕಂಗಾಲಾಗಿದ್ದರೂ ಈ ಮಂದಿ ತಮಗಿಷ್ಟ ಬಂದವರನ್ನು ಓಲೈಸುತ್ತಾ, ಬಕೀಟು ಹಿಡಿದು ನಿಂತಿರುತ್ತಾರೆ. ಒಂದು ಹಂತದಲ್ಲಿ ಇಂಥಾ ನಟರಿಗಿಂತ ತುಸು ಭಿನ್ನವಾಗಿ ಕಾಣಿಸಿದ್ದಾತ ಕಮಲ್ ಹಾಸನ್. ಬಿಡುಬೀಸಾಗಿ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಬಂದಿದ್ದ ಕಮಲ್ ಓರ್ವ ಅದ್ಭುತ ನಟ ಅನ್ನೋದರಲ್ಲಿಯೂ ಯಾವ ಸಂದೇಹವೂ ಇಲ್ಲ. ಆದರೆ, ಥಗ್ ಲೈಫ್ ಅನ್ನೋ ಸಿನಿಮಾದ ಭೂಮಿಕೆಯಲ್ಲಿ ಕಮಲ್ ಅಕ್ಷರಶಃ ಯಡವಟ್ಟು ಮಾಡಿಕೊಂಡಿದ್ದಾರೆ. ಈ ಮೂಲಕ ಹೈ ಕೋರ್ಟಿನಿಂದಲೂ ಆತನಿಗೆ ಸರಿಕಟ್ಟಾಗಿಯೇ ತಪರಾಕಿ ಬಿದ್ದಿದೆ!

ಸಿನಿಮಾ ನಟರು ಆಗಾಗ ಸಾರ್ವಜನಿಕ ಸಮಾರಂಭಗಳಲ್ಲಿ ಮಾತು, ವರ್ತನೆಗಳ ಮೂಲಕ ಅಚಾತುರ್ಯವೆಸಗೋದಿದೆ. ಆದರೆ, ಕಮಲ್ ಮಾತ್ರ ಇದುವರೆಗೂ ಅಂಥಾ ವಿಚಾರದಲ್ಲಿ ಎಚ್ಚರ ವಹಿಸಿದಂತಿದ್ದರು. ಆದರೆ, ಥಗ್ ಲೈಫ್ ಈವೆಂಟಿನಲ್ಲಿ ಮಾತ್ರ ಏಕಾಏಕಿ ಭಾಷಾ ತಜ್ಞನಂತೆ ಪೋಸು ಕೊಡಲು ಹೋಗಿ ಮಹಾ ಯಡವಟ್ಟು ಮಾಡಿಕೊಂಡಿದ್ದಾರೆ. ಕನ್ನಡ ಹುಟ್ಟಿದ್ದೇ ತಮಿಳಿನಿಂದ ಎಂಬಂತೆ ಮಾತಾಡುವ ಮೂಲಕ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಇದರಿಂದಾಗಿ ಸಹಜವಾಗಿಯೇ ಕನ್ನಡಿಗರು ಕೆರಳಿದ್ದಾರೆ. ಕಮಲ್ ಪ್ರೌಢಿಮೆ ಹೊಂದಿರೋ ನಟ. ಒಂದು ಮೆಲು ಮಾತಿನ ಮೂಲಕ, ಕ್ಷಮೆ ಕೇಳುವ ಮೂಲಕ ಈ ವಿವಾದಕ್ಕೆ ಇತಿಶ್ರೀ ಹಾಡುವ ವಿಪುಲ ಅವಕಾಶಗಳು ಅವರೆದುರಿಗಿದ್ದವು. ಆದರೆ, ಒಣ ಠೇಂಕಾರದಿಂದ ಕಡೆಗೂ ಕನ್ನಡಿಗರೆಲ್ಲರ ಪ್ರೀತ್ಯಾಧರಗಳನ್ನು ಶಾಶ್ವತವೆಂಬಂತೆ ಕಳೆದುಕೊಂಡಿದ್ದಾರೆ.

ಕ್ಷಮೆ ಕೇಳಲು ಅಹಂ ತೋರುತ್ತಿದ್ದ ಕಮಲ್ ಹೈಕೋರ್ಟ್ ಮೊರೆ ಹೋಗಿ ಅಲ್ಲಿಂದಲೂ ಛಡಿಯೇಟು ತಿಂದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೊಂದು ಲವ್ ಲೆಟರಿನಂಥಾದ್ದನ್ನು ಬರೆದು ತಿಪ್ಪೆ ಸಾರಿಸುವ ವ್ಯಯರ್ಥ ಪ್ರಯತ್ನ ನಡೆಸಿದ್ದಾರೆ. ಇದೆಲ್ಲದರಾಚೆಗೆ ಥಗ್ ಲೈಫ್ ಗೆ ಕರ್ನಾಟಕದಲ್ಲಿ ನಿಚ್ಚಳವಾಗಿಯೇ ದಿಡ್ಡಿ ಬಾಗಿಲು ಹಾಕಿದಂತಾಗಿದೆ. ಇದೀಗ ಕರ್ನಾಟಕದಲ್ಲಿ ಥಗ್ ಲೈಫ್ ಬಿಡುಗಡೆಯಾಗದಿದ್ದರೆ, ಎಷ್ಟೆಲ್ಲ ಲುಕ್ಸಾನು ಸಂಭವಿಸಬಹುದೆಂಬುದರ ಸುತ್ತ ಚರ್ಚೆಗಳು ಆರಂಭವಾಗಿವೆ. ಇಂಥಾ ಚರ್ಚೆಗಳ ಮರೆಯಲ್ಲಿಯೇ ತಮಿಳ್ ಇಂಡಸ್ಟ್ರಿಯ ಲೆಕ್ಕಾಚಾರಗಳು ಬೇರೆಯದ್ದೇ ದಿಕ್ಕಿನಲ್ಲಿ ಮುಸಿನಗುತ್ತಿರುವಂತೆಯೂ ಭಾಸವಾಗುತ್ತಿದೆ!

ಅಷ್ಟಕ್ಕೂ ಈ ಕಮಲ್ ಹಾಸನ್ ಎಷು ಒಳ್ಳೇ ನಟನೋ, ಸಿನಿಮಾ ಆಯ್ಕೆಯ ವಿಚಾರದಲ್ಲಿ ಅಷ್ಟೇ ಕೆಟ್ಟ ನಿರ್ಧಾರ ತಳೆಯುವ ಆಸಾಮಿ. ಒಂದು ವೇಳೆ ಆತನಿಗೆ ಕಥೆಯನ್ನು ಕೂಲಂಕಷವಾಗಿ ಪರಾಮರ್ಶೆ ನಡೆಸುವ ತಾಕತ್ತಿದ್ದಿದ್ದರೆ ಖಂಡಿತವಾಗಿಯೂ ಇಂಡಿಯನ್೨ ಎಂಬ ತೋಪು ಸಿನಿಮಾವನ್ನು ಒಪ್ಪಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ. ಥಗ್ ಲೈಫ್ ಕೂಡಾ ಅಂಥಾದ್ದೇ ಒಂದು ತೋಪು ಪುರಾಣ ಅನ್ನೋ ಸುಳಿವು ಖುದ್ದು ಕಮಲ್ ವೀರಾಭಿಮಾನಿಗಳಿಗೇ ಸಿಕ್ಕಿ ಹೋಗಿದೆ. ಅದರ ಟ್ರೈಲರ್ ಗೆ ಬಂದಿದ್ದ ಪ್ರತಿಕ್ರಿಯೆ ಕಂಡು ಕಮಲ್ ಸೇರಿದಂತೆ ಒಂದಿಡೀ ಚಿತ್ರತಂಡವೇ ಕಂಗಾಲಾಗಿ ಬಿಟ್ಟಿತ್ತು.

ಥಗ್ ಲೈಫ್ ಬರಖತ್ತಾಗೋದು ಕಷ್ಟ ಎಂದರಿತ ಚಿತ್ರತಂಡ ಭಾಷೆಯ ಬಾಂಬನ್ನು ಕಮಲ್ ಬಾಯಲ್ಲಿಟ್ಟು ಕರ್ನಾಟಕಕ್ಕೆ ಕಳಿಸಿತಾ? ತಮಿಳರ ಅಸ್ಮಿತೆಯನ್ನು ಕೆಣಕುವ ಮೂಲಕ ಥಗ್ ಲೈಫ್ ಅನ್ನು ಕಮರ್ಶಿಯಲ್ ಆಗಿ ಬಚಾವು ಮಾಡುವ ತಂತ್ರ ಹೂಡಿತಾ? ತಮಿಳರು ಹೇಳಿಕೇಳಿ ಅಸಾಧ್ಯ ಸಿನಿಮಾ ಪ್ರೇಮಿಗಳು. ಭಾಷಾಭಿಮಾನದಲ್ಲೂ ಅವರದ್ದು ಎತ್ತಿದ ಕೈ. ಹಾಗಿರುವಾಗ ಭಾಷೆಯ ವಿಚಾರ ಬಂದರೆ ಅವರು ಹಿಂದೆ ಸರಿಯೋದಿಲ್ಲ. ಈಗ ತಮಿಳುನಾಡಿನಲ್ಲಿ ಅಭಿಮಾನದಾಚೆಗೂ ಥಗ್ ಲೈಫ್ ಪರ ಅಲೆ ಎದ್ದಿದೆ. ಅದು ಕೆಟ್ಟದಾಗಿದ್ದರೂ ಗೆಲ್ಲಿಸಿ ಕರುನಾಡಿಗೆ ಸೆಡ್ಡು ಹೊಡೆಯಲು ತಮಿಳರು ಸಿದ್ಧರಾದಂತಿದೆ. ಒಟ್ಟಾರೆಯಾಗಿ ಕಮಲ್ ಹಾಸನ್ ಭಾಷೆಯ ಬೆಂಕಿ ಹಚ್ಚಿ ಹಳಸಲು ಸಿನಿಮಾ ಗೆಲ್ಲಿಸ ಹೊರಟಿರೋ ಲಕ್ಷಣಗಳೇ ಢಾಳಾಗಿ ಕಾಣಿಸಲಾರಂಭಿಸಿವೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!