ಒಂದು ಯಶಸ್ವೀ ಸಿನಿಮಾದಲ್ಲಿ ಅಚಾನಕ್ಕಾಗಿ ಸಿಕ್ಕ ಅವಕಾಶದಿಂದ ಅದೆಷ್ಟೋ ಮಂದಿ ಉದ್ಧಾರವಾಗಿದ್ದಾರೆ. ನಟನ ನಟಿಯರಾಗಿ, ತಂತ್ರಜ್ಞರಾಗಿ ನೆಲೆ ಕಂಡುಕೊಂಡ ಅದೆಷ್ಟೋ ಉದಾಹರಣೆಗಳಿದ್ದಾವೆ. ಆದರೆ, ಮತ್ತೆ ಕೆಲವೊಂದಿಷ್ಟು ಮಂದಿ ಮಾತ್ರ ಹಠಾತ್ತನೆ ಸ್ವೇಚ್ಚಾಚಾರದತ್ತ ಹೊರಳಿಕೊಂಡು ಮಹಾ ದುರಂತಗಳನ್ನು ಮೈಮೇಲೆಳೆದುಕೊಳ್ಳೋದೂ ಇದೆ. ಅಮಿತಾಭ್ ಬಚ್ಚನ್ ನಟನೆಯ ಜುಂಡ್ ಚಿತ್ರದಲ್ಲಿ ನಟಿಸುವ ಮೂಲಕ ಪ್ರಖ್ಯಾತಿ ಗಳಿಸಿದ್ದ ಪ್ರಿಯಾಂಶು ಎಂಬ ಹುಡುಗನ ಬದುಕೂ ಕೂಡಾ ಅಂಥಾದ್ದೇ ದುರಂತ ಅಂತ್ಯ ಕಂಡಿದೆ. ಸಿಕ್ಕ ಖ್ಯಾತಿಯ ಪ್ರಭೆಯಲ್ಲಿ ಅಮಲೇರಿಸಿಕೊಂಡಿದ್ದ ಈ ಹುಡುಗ ಜೀವದ ಗೆಳೆಯನಿಂದಲೇ ಉಸಿರು ನಿಲ್ಲಿಸಿದ್ದಾನೆ!


ಪ್ರಿಯಾಂಶು ಬಾಬು ಸಿಂಗ್ ಛೇಟ್ರಿ ಅಂತಲೂ ಕರೆಸಿಕೊಳ್ಳುತ್ತಿದ್ದ. ಇತ್ತೀಚಿನ ದಿನಗಳಲ್ಲಿ ವಿಪರೀತ ಕುಡಿತದ ಚಟ ಅಂಟಿಸಿಕೊಂಡಿದ್ದ ಪ್ರಿಯಾಂಶು ತನ್ನ ಗೆಳೆಯ ಧ್ರುವ ಲಾಲ್ ಬಹದ್ದೂರ್ ಸಾಹು ಎಂಬಾತನೊಂದಿಗೆ ಗೆಳೆತನ ಹೊಂದಿದ್ದ. ಇವರಿಬ್ಬರೂ ಕೂಡಾ ನಾಗಪುರದ ಗಲ್ಲಿಗಳಲ್ಲಿ ಅಹೋರಾತ್ರಿ ನಶೆಯೇರಿಸಿಕೊಂಡು ತೂರಾಡುವ ತಲುಬು ಹತ್ತಿಸಿಕೊಂಡಿದ್ದರು. ತೀರಾ ಹಾದಿ ಬಿಟ್ಟಂತಿದ್ದ ಇವರಿಬ್ಬರೂ ಮನೆಗೆ ಹೋಗೋದೇ ಅಪರೂಪವೆಂಬಂತಾಗಿತ್ತು. ಇಂಥಾ ಪ್ರಿಯಾಂಶು ಮೊನ್ನೆ ದಿನ ಕೂಡಾ ಸಾಹು ಜೊತೆ ಪಾರ್ಟಿ ನಡೆಸಿದ್ದಾನೆ. ಮುಂಜಾನೆ ಹೊತ್ತಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ನಶೆಯಲ್ಲಿ ರೊಚ್ಚಿಗೆದ್ದ ಸಾಹು ಪ್ರಿಯಾಂಶುವನ್ನು ಹೊಡೆದು ಕೊಂದು ಹಾಕಿದ್ದಾನೆ!


ಈ ದುರಂತ ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ೨೦೨೨ರಲ್ಲಿ ನಾಗರಾಜ್ ಮಂಜುಳೆ ನಿರ್ದೇಶನ ಮಾಡಿದ್ದ ಜುಂಡ್ ಚಿತ್ರದಲ್ಲಿ ನಟಿಸುವ ಮೂಲಕ ಈ ಹುಡುಗ ಪ್ರಿಯಾಂಶು ಹೆಸರು ಮಾಡಿದ್ದ. ಈತನ ನಟನೆ ಮ ಎಚ್ಚುಗೆಗೆ ಪಾತ್ರವಾಗಿತ್ತು. ಆ ನಂತರ ಓದಿನತ್ತ ಪೋಶಕರ ಒತ್ತಾಸೆಯ ಮೇರೆಗೆ ವಾಲಿಕೊಂಡರೂ ಪ್ರಿಯಾಂಶು ಹಾದಿ ತಪ್ಪಿದ್ದ. ಬಹುಶಃ ಚೆಂದಗೆ ಓದು ಮುಗಿಸಿಕೊಂಡು ಮತ್ತೆ ನಟನೆಗಿಳಿದಿದ್ದರೂ ಅದ್ಭುತ ನಟನಾಗಿ ಕಂಗೊಳಿಸುವ ಅವಕಾಶ ಈತನ ಮುಂದಿತ್ತು. ಆದರೆ, ಎಳವೆಯಲ್ಲಿಯೇ ಕುಡಿತದ ಚಟ ಅಂಟಿಸಿಕೊಂಡು ದುರಂತ ಅಂತ್ಯ ಕಂಡಿದ್ದಾನೆ. ಸದ್ಯ ನಶೆಯಲ್ಲಿ ಎಳೆಯನ ನ್ನೇ ಭೀಕರವಾಗಿ ಕೊಂದ ಸಾಹು ಪೊಲೀಸರ ಅತಿಥಿಯಾಗಿದ್ದಾನೆ.

About The Author