ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ಉತ್ಕಟ ಆಕಾಂಕ್ಷೆ ಯಾವ್ಯಾವುದೋ ಮೂಲೆಯಲ್ಲಿದ್ದವರನ್ನೂ (gandhinagar) ಗಾಂಧಿನಗರದತ್ತ ಸೆಳೆಯುತ್ತದೆ. ಹೇಗೋ ಮಾಡಿ ಸಿನಿಮಾ ತಂಡಗಳನ್ನು ಸೇರಿಕೊಂಡರೂ, ಇಲ್ಲಿ ಅಂದುಕೊಂಡಿದ್ದನ್ನು ಅವುಡುಗಚ್ಚಿ ಸಾಧಿಸೋದು ಅಷ್ಟು ಸಲೀಸಿನ ಸಂಗತಿಯಲ್ಲ. ಕೆಲ ಮಂದಿ ಒಂದಷ್ಟು ದೂರ ಕ್ರಮಿಸಿ ಹೊರ ನಡೆಯುತ್ತಾರೆ. ಮತ್ತೆ ಕೆಲವರು ಏನೇ ಬಂದರೂ ಕಾಲೂರಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಸಿಕ್ಕ ಕೆಲಸವನ್ನು ಆಸ್ಥೆಯಿಂದ ಮಾಡುತ್ತಾ, ದೊಡ್ಡ ಕನಸಿಗೆ ಅಣಿಗೊಳ್ಳಲಾರಂಭಿಸುತ್ತಾರೆ. ಅಂಥಾದ್ದೇ ಹಾದಿಯಲ್ಲಿ ಸಾಗಿ ಬಂದಿರುವ ಸಂಗಮೇಶ್ ಪಾಟೀಲ್ (sangamesh patil) ಇದೀಗ `ಜೀವಸಖಿ’ (jeevasakhi) ಎಂಬ ಕಿರುಚಿತ್ರವೊಂದರ ಮೂಲಕ ತಮ್ಮನ್ನು ತಾವೇ ಪರೀಕ್ಷೆಗೊಡ್ಡಿಕೊಂಡಿದ್ದಾರೆ!

ಈಗಾಗಲೇ ಐದು ವರ್ಷಗಳ ಕಾಲ ಹಲವಾರು ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವವರು ಸಂಗಮೇಶ್ ಪಾಟೀಲ್. (sangamesh patil) ನಿರ್ದೇಶಕನಾಗಬೇಕೆಂಬ ಕನಸು ಹೊತ್ತು ಗದಗ ಜಿಲ್ಲೆಯ ನರಗುಂದದಿಂದ ಬೆಂಗಳೂರಿಗೆ ಬಂದಿದ್ದ ಸಂಗಮೇಶ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ. ಆದರೆ ಆ ಹೊತ್ತಿಗಾಗಲೇ ಸಿನಿಮಾ ಕನಸನ್ನು ಆಳವಾಗಿ ಹಚ್ಚಿಕೊಂಡಿದ್ದ ಆತ, ತನ್ನಿಷ್ಟದ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಹಾಗೆ ಒಂದಷ್ಟು ಕಲಿತುಕೊಂಡು ಗಿರ್ಕಿ, ಲೈಫ್ ಜೊತೆ ಒಂದ್ ಸೆಲ್ಫಿ, ಗಾಂಧಿಗಿರಿ ಮುಂತಾದ ಸಿನಿಮಾಗಳಿಗೆ ಕೆಲಸ ಮಾಡಿದ್ದ ಸಂಗಮೇಶ್, ಆ ನಂತರ ಸ್ವತಂತ್ರ ನಿರ್ದೇಶಕರಾಗ ಬಯಸಿದ್ದರು. ಅಂಥಾ ನಿರ್ಧಾರ ತಳೆದ ಬಳಿಕ ದೊಡ್ಡ ಸಿನಿಮಾ ಮಾಡುವ ಮುನ್ನ ಸಣ್ಣ ಪ್ರಮಾಣದಲ್ಲಿ ತನ್ನನ್ನು ತಾನೇ ಪರೀಕ್ಷೆಗೊಡ್ಡಿಕೊಳ್ಳುವ ಸಲುವಾಗಿ ನಿರ್ದೇಶಿಸಿರುವ ಕಿರುಚಿತ್ರ `ಜೀವಸಖಿ’.

ಇದು ಮೂವತೈದು ನಿಮಿಷಗಳ ಕಿರುಚಿತ್ರ. ಹೆಣ್ತನದ ಸೂಕ್ಷ್ಮ ಭಾವಗಳ ಕಥಾ ಹಂದರವಿರೋದರಿಂದಾಗಿ ಈ ಕಿರುಚಿತ್ರಕ್ಕೆ ಜೀವಸಖಿ ಎಂಬ ನಾಮಕರಣ ಮಾಡಲಾಗಿದೆಯಂತೆ. ಇದರ ನಾಯಕನ ಪಾತ್ರಕ್ಕೆ ಪಕ್ಕಾ ಹೊಂದುವವರಿಗಾಗಿ ವ್ಯಾಪಕವಾಗಿ ತಲಾಷು ನಡೆಸಿ, ಕಡೆಗೂ ರಂಗಭೂಮಿಯ ಪ್ರತಿಭೆ ಯುವರಾಜ್ ಪಾಟೀಲ್‍ನನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈತ ಮೈಸೂರಿನ ರಂಗಾಯಣದಲ್ಲಿ ಎರಡು ವರ್ಷಗಳ ನಟನಾ ತರಬೇತಿ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಸವಾಲಿನದ್ದಾದ ನಾಯಕಿಯ ಪಾತ್ರವನ್ನು ಸೌಂದರ್ಯ ಗೌಡ ನಿರ್ವಹಿಸಿದ್ದಾರೆ. ಈಗಾಗಲೇ ಹಲವಾರು ವೆಬ್ ಸೀರೀಸ್, ಧಾರಾವಾಹಿ, ಸಿನಿಮಾಗಳಲ್ಲಿ ಪಾತ್ರ ಮಾಡಿ ಅನುಭವ ಹೊಂದಿರುವ ಈ ಹುಡುಗಿಗೆ ಜೀವಸಖಿಯಿಂದ ಲಕ್ಕು ಕುದುರೋ ಲಕ್ಷಣಗಳಿದ್ದಾವೆ.

ಈಗಾಗಲೇ ಹಲವಾರು ತಂತ್ರಜ್ಞರು ತಮ್ಮ ಕೆಲಸದ ಭಾಗವಾಗಿ ಈ ಕಿರುಚಿತ್ರವನ್ನು ವೀಕ್ಷಿಸಿದ್ದಾರಂತೆ. ಅವರೆಲ್ಲರೂ ಅಚ್ಚರಿಯಿಂದ ನಾಯಕ ನಾಕಿಯ ಬಗ್ಗೆ ವಿಚಾರಿಸುತ್ತಿದ್ದಾರಂತೆ. ಯುವರಾಜ್ ಪಾಟೀಲ್ ಮತ್ತು ಸೌಂದರ್ಯ ಗೌಡ ಅಷ್ಟು ಚೆಂದಗೆ ನಟಿಸಿದ್ದಾರೆಂಬ ಮೆಚ್ಚುಗೆ, ಇಡೀ ಸಿನಿಮಾ ನೋಡುಗರ ಮನಗೆಲ್ಲುತ್ತದೆಂಬ ಭರವಸೆ ನಿರ್ದೇಶಕರಲ್ಲಿದೆ. ಇನ್ನುಳಿದಂತೆ ಈಗಾಗಲೇ ಕಿರುಚಿತ್ರ ನೋಡಿರುವ ತಂತ್ರಜ್ಞರು ನಿರ್ದೇಶಕ ಸಂಗಮೇಶ್ ಪಾಟೀಲ್ ಕಸುಬುದಾರಿಕೆಯನ್ನೂ ಮೆಚ್ಚಿಕೊಂಡಿದ್ದಾರೆ. ಈ ಕಿರುಚಿತ್ರದಿಂದಲೇ ಹೊಸಾ ಹಾದಿ ತೆರೆದುಕೊಳ್ಳುತ್ತದೆಂಬ ಭರವೆಯ ಮಾತುಗಳನ್ನೂ ಆಡಿದ್ದಾರೆ. ಈ ಮೂಲಕ ನಿರ್ದೇಶಕನಾಗಿ ನೆಲೆ ಕಂಡುಕೊಳ್ಳುವ ಹುರುಪಿನಲ್ಲಿರುವ ಸಂಗಮೇಶ್‍ಗೆ ಆರಂಭಿಕ ಗೆಲುವೊಂದು ಕೈ ಹಿಡಿದಂತಾಗಿದೆ.

ಇದೀಗ ಜೀವಸಖಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಸ್‍ಎಫ್‍ಎಕ್ಸ್, ಮ್ಯೂಸಿಕ್ ಕಾರ್ಯಗಳು ಭರದಿಂದ ಸಾಗುತ್ತಿವೆ. ಎಲ್ಲವೂ ಅಂದುಕೊಂಡಂತ ಆದರೆ ತಿಂಗಳೋಪ್ಪತ್ತಿನಲ್ಲಿಯೇ ಜೀವಸಖಿ ನಿಮ್ಮ ಮುಂದೆ ಬರಲಿದ್ದಾಳೆ. ಈ ಕಿರುಚಿತ್ರದ ಬಿಡುಗಡೆಗೂ ಕೂಡಾ ಈಗಾಗಲೇ ಭೂಮಿಕೆ ಸಿದ್ಧಗೊಂಡಿದೆ. ಒಂದು ಪ್ರಸಿದ್ಧ ಯೂ ಟ್ಯೂಬ್ ಚಾನೆಲ್ಲಿನಲ್ಲಿ ಜೀವಸಖಿ ಬಿಡುಗಡೆಗೊಳ್ಳಲಿದೆ. ಇದಾದ ನಂತರ ಸಂಗಮೇಶ್ ಪಾಟೀಲ್ ಒಂದು ಬಿಗ್ ಬಜೆಟ್ ಚಿತ್ರ ನಿರ್ದೇಶನ ಮಾಡಲಿದ್ದಾರಂತೆ. ಸುನೀಲ್ ಎಲ್ ಎಸ್ ಆರ್ ಸಂಕಲನ, ಜೀವನ್ ಎಸ್ ಛಾಯಾಗ್ರಹಣ ಮತ್ತು ಆತ್ಮಿಕ್ ರೈ ಸಂಗೀತ ನಿರ್ದೇಶನ, ಅಕ್ಷಯ್ ಬಿಂದುಸಾಗರ ಪ್ರಚಾರ ವಿನ್ಯಾಸ ಈ ಕಿರುಚಿತ್ರಕ್ಕಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!