ಹೊಸಬರ ತಂಡವೊಂದು ಸೇರಿಕೊಂಡು ರೂಪಿಸಿದ್ದ ಚಿತ್ರ ಇಂಟರ್ವೆಲ್. ಹೊಸಬರ ಆರಂಭಿಕ ಹೆಜ್ಜೆಗಳಿಗೆ ಎದುರಾಗಬಹುದಾದ ಎಲ್ಲ ಎಡರುತೊಡರುಗಳನ್ನೂ ದಾಟಿಕೊಂಡಿರುವ ಚಿತ್ರತಂಡವೀಗ ಇಪ್ಪತೈದರ ಸಂಭ್ರಮವನ್ನು ಆಚರಿಸಿಕೊಂಡಿದೆ. ಭರತ್ ವರ್ಷ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಮೋಡಿ ಬಂದಿರುವ ರೀತಿ, ಅದರ ಒಟ್ಟಾರೆ ಕಥನವನ್ನು ಪ್ರೇಕ್ಷಕರ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಹೀಗೆ ಪ್ರೇಕ್ಷಕರಿಗೆ ಮೆಚ್ಚುಗೆಯಾದ ಸಿನಿಮಾಗಳು ಕೊಂಚ ತಡವಾಗಿಯಾದರೂ ಭರಪೂರ ಗೆಲುವು ದಾಖಲಿಸಿದ ಸಾಕಷ್ಟು ಉದಾಹರಣೆಗಳಿದ್ದಾವೆ. ಬಾಯಿಂದ ಬಾಯಿಗೆ ಹಬ್ಬಿಕೊಂಡ ಸದಭಿಪ್ರಾಯಗಳಿಂದಾಗಿ ಸಿನಿಮಾ ಮಂದಿರ ತುಂಬಿದ ನಿದರ್ಶನಗಳಿಗೂ ಕೊರತೆಯೇನಿಲ್ಲ. ಅಂಥಾದ್ದೊಂದು ಜಾದೂ ಇಂಟರ್ವೆಲ್ ಸಿನಿಮಾ ವಿಚಾರದಲ್ಲಿಯೂ ಸಾಧ್ಯವಾಗಿದೆ. ಈ ಸಿನಿಮಾದ ಕಥೆ ಚಿತ್ರಕಥೆ ಮತ್ತು ಸಂಭಾಷಣೆಯ ಹೊಣೆ ಹೊತ್ತುಕೊಂಡಿದ್ದ ಸುಕೇಶ್ ಪಾಲಿಗೆ ತಮ್ಮ ಶ್ರಮ, ಅಷ್ಟೂ ವರ್ಷಗಳ ತಯಾರಿಗಳೆಲ್ಲವೂ ಸಾರ್ಥಕ್ಯ ಕಂಡ ಖುಷಿ ಲಭಿಸಿದಂತಾಗಿದೆ.

ಮೂಲತಃ ಮಾಗಡಿಯ ಹೊಸಳ್ಳಿವರಾದ ಸುಕಿ ಪಾಲಿಗೆ ಒಂದು ಸಿನಿಮಾ ರೂಪಿಸಬೇಕೆಂಬುದು ಜೀವಮಾನದ ಕನಸು. ಬದುಕೆಂಬುದು ಆಯಾ ಕಾಲಘಟ್ಟದ ಸೆಳವಿಗೆ ಸಿಕ್ಕು ಚಲಿಸುತ್ತಿದ್ದರೂ ಕೂಡಾ ಸಿನಿಮಾ ಕನಸನ್ನು ಧ್ಯಾನದಂತೆ ಹಚ್ಚಿಕೊಂಡವರು ಸುಕಿ. ಪ್ರತೀ ಹೆಜ್ಜೆಯಲ್ಲಿಯೂ ಅದಕ್ಕಾಗಿ ತನ್ನನ್ನು ತಾನು ಅಣಿಗೊಳಿಸುತ್ತಾ, ಆಸುಪಾಸಿಲ್ಲಿ ಸುಳಿದಾಡುವ ಕಥಾ ಎಳೆಗಳ ಬಗ್ಗೆ ಕುತೂಹಲದ ಕಣ್ಣಿಡುತ್ತಾ ಸಾಗಿ ಬಂದಿದ್ದ ಸುಕೇಶ್ ಪೊಗದಸ್ತಾದೊಂದು ಕಥೆಯ ಮೂಲಕ ಈ ಸಿನಿಮಾವನ್ನು ಸೃಷ್ಟಿಸಿದ್ದಾರೆ. ನಿರ್ದೇಶಕರ ಭರತ್ ವರ್ಷರ ಜೊತೆಗೂಡಿ ಅದಕ್ಕೆ ಸರಿಕಟ್ಟಾಗಿಯೇ ಸಿನಿಮಾ ರೂಪ ಕೊಟ್ಟ ತೃಪ್ತಿ ಹೊಂದಿದ್ದಾರೆ. ಹೀಗೆ ಇಂಟರ್ವಲ್ ಚಿತ್ರದ ಮೂಲಕ ಬಹುಕಾಲದ ಕನಸೊಂದನ್ನು ನನಸಾಗಿಸಿಕೊಂಡಿರುವ ಸುಕಿ ದಶಕಗಳಿಂದಲೂ ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಾ ಬಂದಿರುವವರು. ಪ್ರತಿಷ್ಠಿತ ಈಸ್ಟ್ ವೆಸ್ಟ್ ಕಾಲೇಜು ಹಾಗೂ ಶ್ರೀ ವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದವರು ಸುಕಿ.

ಹೀಗೆ ಅಚ್ಚುಕಟ್ಟಾಗಿ ವೃತ್ತಿ ಜೀವನ ನಡೆಸುತ್ತಾ, ಅದರಲ್ಲಿಯೇ ನೆಲೆ ಕಂಡುಕೊಳ್ಳುವ ಅವಕಾಶಗಳು ಸುಕಿ ಅವರ ಮುಂದಿದ್ದವು. ಆದರೆ ಆರಂಭ ಕಾಲದಿಂದಲೂ ಸಿನಿಮಾ ಒಂದನ್ನು ರೂಪಿಸಬೇಕೆಂಬ ಕನಸು ಸುಕಿ ಅವರನ್ನು ಬಹುವಾಗಿ ಕಾಡಲಾರಂಭಿಸಿತ್ತು. ಅಂಥಾ ಆಕಾಂಕ್ಷೆಯ ಸೆಳವಿಗೆ ಸಿಕ್ಕವರಿಗೆ ಜೊತೆಯಾದದ್ದು ನಿರ್ದೆಶನದ ಕನಸು ಹೊತ್ತಿದ್ದ ಭರತ್ ವರ್ಷ. ಇಬ್ಬರೂ ಜೊತೆಗೂಡಿ, ವರ್ಷಗಟ್ಟಲೆ ಶ್ರಮ ವಿಸಿದ್ದ ಫಲವಾಗಿಯೇ ಇಂಟರ್‌ವೆಲ್ ಎಂಬ ಯುವ ಆವೇಗದ ಕಥನವೊಂದು ದೃಷ್ಯ ರೂಪ ಧರಿಸಿತ್ತು. ಕಡೆಗೂ ನಿರೀಕ್ಷೆಯಂತೆಯೇ ಆ ಒಂದಿಡೀ ಕಥನ ಪ್ರೇಕ್ಷಕರ ಪಾಲಿಗೆ ಪಥ್ಯವಾಗಿದೆ. ಹೀಗೆ ಗಟ್ಟಿ ಕಂಟೆಂಟಿನ ಬಲದಿಂದಲೇ ಚಿತ್ರತಂಡ ಎಲ್ಲ ಸವಾಲುಗಳನ್ನು ಮೀರಿಕೊಂಡಿದೆ. ಸದ್ಯದ ಮಟ್ಟಿಗೆ ಇಪ್ಪತೈದು ದಿನಗಳಾಚೆ ಇಂಟರ್ವೆಲ್ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

ಸತ್ಯ ಸೀರಿಯಲ್ಲಿನ ಬಾಲಾ ಎಂಬ ಪಾತ್ರದ ಮೂಲಕ ಪ್ರಸಿದ್ಧಿ ಪಡೆದುಕೊಂಡಿರುವವರು ಶಶಿರಾಜ್. ಅವರು ಈ ಸಿನಿಮಾದ ನಾಯನಾಗಿ ಚೆಂದದ ಪಾತ್ರವೊಂದರಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಸಜ್ಜಾಗಿದ್ದಾರೆ. ರಂಗಭೂಮಿ ಕಲಾವಿದ ಪ್ರಜ್ವಲ್ ಗೌಡ, ಸುಖಿ ಮತ್ತು ರಂಗನಾಥ್ ಶಿವಮೊಗ್ಗ ಮುಂತಾದವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಾಜ್ ಕಾಂತ್ ಛಾಯಾಗ್ರಹಣ, ಪ್ರಮೋದ್ ಮರವಂತೆ ಮತ್ತು ಸುಕಿ ಸಾಹಿತ್ಯ ಹಾಗೂ ಶಶಿಧರ್ ಸಂಕಲನ ಈ ಚಿತ್ರಕ್ಕಿದೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಸುಕಿ ನಿಭಾಯಿಸಿದ್ದಾರೆ. ಕಥೆ, ಪಾತ್ರವರ್ಗ, ನಿರೂಪಣೆ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ಕೂಡಾ ಇಂಟರ್ವೆಲ್ ಗೆ ಭರಪೂರ ಮೆಚ್ಚುಗೆ ಮೂಡಿಕೊಳ್ಳುತ್ತಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!