ಲ್ಲ ಪ್ರಚಾರ, ಹೈಪುಗಳಾಚೆಗೆ ಗಟ್ಟಿ ಕಂಟೆಂಟಿನ ಚೆಂದದ ಸಿನಿಮಾಗಳ ಧ್ಯಾನ ಪ್ರೇಕ್ಷಕರ ವಲಯದಲ್ಲಿ ಸದಾ ಚಾಲ್ತಿಯಲ್ಲಿರುತ್ತೆ. ಯಾವುದೋ ಸಿನಿಮಾದ ಒಂದು ಸಣ್ಣ ತುಣುಕು, ಹಾಡು, ಟ್ರೈಲರ್ ಮೂಲಕ ಅಂಥಾ ಧ್ಯಾನವೊಂದು ಪುಳಕಗೊಳ್ಳೋದಿದೆ. ಹಾಗೆ ಒಂದು ಸಿನಿಮಾ ತಾನೇ ತಾನಾಗಿ ಸೆಳೆದುಕೊಳ್ಳೋದಿದೆಯಲ್ಲಾ? ಅದು ಅಪರೂಪದ ಪಲ್ಲಟ. ಇದೀಗ ಬಿಡುಗಡೆಗೊಂಡಿರುವ (inamdar movie tariler)  ಇನಾಮ್ದಾರ್ ಚಿತ್ರದ ಟ್ರೈಲರ್ ಕೂಡಾ ಅದೇ ಧಾಟಿಯ ಥ್ರಿಲ್ ಮೂಡಿಸಿದೆ. ಸಾಮಾನ್ಯವಾಗಿ, ನೆಲದ ನಂಟಿನ ಕಥನಗಳು ಪ್ರೇಕ್ಷಕರನ್ನು ಸದಾ ಕಾಡುತ್ತವೆ. ಅದರಲ್ಲಿಯೂ ದಟ್ಟ ಕಾಡಿನ ಗರ್ಭದಿಂದ ಮಿಸುಕಾಡುವ ಕಥೆಗಳೆಂದರೆ ಒಂದು ಮುಟಿಗೆ ಹೆಚ್ಚೇ ಕುತೂಹಲವಿರುತ್ತೆ. ಸದ್ಯದ ಮಟ್ಟಿದೆ (inamdar trailer) ಇನಾಮ್ದಾರ್ ಚಿತ್ರದ ಟ್ರೈಲರ್ ಎಲ್ಲ ವರ್ಗದ ಪ್ರೇಕ್ಷಕರೊಳಗೂ ಭರವಸೆಯೊಂದನ್ನು ಪ್ರತಿಷ್ಟಾಪಿಸುವಲ್ಲಿ ಗೆಲುವು ಕಂಡಿದೆ!

ಹಾಗೆ ನೋಡಿದರೆ, ಈಗೊಂದಷ್ಟು ಕಾಲದಿಂದಲೂ ಇನಾಮ್ದಾರ್ ಚಿತ್ರ ಹಂತ ಹಂತವಾಗಿ ಪ್ರೇಕ್ಷಕರನ್ನು ತಾಕುತ್ತಾ ಬಂದಿದೆ. ಅದಕ್ಕೆ ಕಾರಣ ಬೇರೇನಲ್ಲ; ಭಿನ್ನ ಕಥಾನಕದ ಸುಳಿವಷ್ಟೇ. ಸಿನಿಮಾ ಮನೋರಂಜನೆಯಾಚೆಗೆ ಸಂಚಲನ ಸೃಷ್ಟಿಸೋದು, ಸಿನಿಮಾ ಪರಿಧಿಯಾಚೆಗೂ ಸದ್ದು ಮಾಡೋದು ಅಪರೂಪ. ಇನಾಮ್ದಾರ್ ಟ್ರೈಲರ್ ಬಿಡುಗಡೆಗೊಂಡ ನಂತರ ಅಂಥಾದ್ದೊಂದು ವಿರಳ ವಿದ್ಯಮಾನವೂ ಚಾಲೂ ಆದಂತಿದೆ. ಯಾಕೆಂದರೆ, ಸದರಿ ಚಿತ್ರದ ಆಂತರ್ಯ, ಟ್ರೈಲರ್ ಬಿಡುಗಡೆಯ ವೇದಿಕೆಯಲ್ಲಿ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಮುಂತಾದವರು ಮಾತಾಡಿರುವ ರೀತಿಗಳೆಲ್ಲ ರಾಜಕೀಯ ವ್ಯಾಪ್ತಿಯಲ್ಲಿಯೂ ಚರ್ಚೆ ಹುಟ್ಟು ಹಾಕಿದೆ. ಆ ಭೂಮಿಕೆಯಲ್ಲೀಗ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಒಂದಷ್ಟು ವಾಗ್ವಾದಗಳೂ ನಡೆಯುತ್ತಿವೆ. ಅಷ್ಟರ ಮಟ್ಟಿಗೆ ಇನಾಮ್ದಾರ್ ಟ್ರೈಲರ್ ಸಾಮಾಜಿಕ ಪರಿಧಿಯಲ್ಲಿಯೂ ಗಿರಕಿ ಹೊಡೆಯಲಾರಂಭಿಸಿದೆ.

ಈ ಟ್ರೈಲರ್ ಮೂಲಕ ಒಂದಿಡೀ ಕಥಾನಕದ ಬಗ್ಗೆ ಒಂದಷ್ಟು ಸುಳಿವುಗಳು ಸಿಕ್ಕಿವೆ. ಉತ್ತರ ಕರ್ನಾಟಕದಲ್ಲಿ ಛತ್ರಪತಿ ಶಿವಾಜಿಯನ್ನು ಆರಾಧಿಸುವ ಇನಾಮ್ದಾರ್ ಕುಟುಂಬ ಹಾಗೂ ಶಿವನನ್ನೇ ಉಸಿರಾಗಿಸಿಕೊಂಡಿರುವ ಕಡಲ ತೀರದ ಜನಾಂಗದ ಕಥನ ಇಲ್ಲಿದೆ. ಈ ಎರಡು ಪಂಥಗಳ ಬುಡಕಟ್ಟು ಜನಾಂಗದ ನಡುವೆ ನಡೆಯೋ ಸಂಘರ್ಷದ ಕಥೆಯೇ ಇನಾಮ್ದಾರ್ ಜೀವಾಳವಾಗಿರುವಂಥಾ ಕುರುಹುಗಳಿದ್ದಾವೆ. ಇಂಥಾ ಕಥೆಗಳನ್ನು ಕೇವಲ ಕಲ್ಪನೆಯ ಬೊಗಸೆಯಲ್ಲಿಟ್ಟು ರೂಪಿಸಲಾಗೋದಿಲ್ಲ. ಹಾಗಂತ ಕೇವಲ ವಾಸ್ತವಿಕ ನೆಲೆಗಟ್ಟಿನಲ್ಲಷ್ಟೇ ದಿಟ್ಟಿಸಲೂ ಸಾಧ್ಯವಿಲ್ಲ. ಅದೆರಡನ್ನೂ ಸಿನಿಮಾ ಚೌಕಟ್ಟಿಗೆ ಒಗ್ಗಿಸಿಕೊಂಡು, ಬೇಕಾದಂತೆ ಪಳಗಿಸಿಕೊಳ್ಳೋದೇ ನಿರ್ದೇಶನದ ಸವಾಲು. ಟ್ರೈಲರ್ ಅನ್ನು ಆಧರಿಸಿ ಹೇಳೋದಾದರೆ, ಸಂದೇಶ್ ಶೆಟ್ಟಿ ಅದನ್ನು ಸೂಕ್ತವಾಗಿ ಸಂಭಾಳಿಸಿದಂತೆ ಕಾಣಿಸುತ್ತೆ. ಅವರೇ ಹೇಳಿಕೊಂಡಿರುವ ಪ್ರಕಾರ, ಈ ಚಿತ್ರದ ಕಥೆಗಾಗಿ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಸಾಹಿತಿ ಸರಜೂ ಕಾಟ್ಕರ್ ಬರೆದಿರುವ ಶಿವಾಜಿ ಬಗೆಗಿನ ಪುಸ್ತಕ ಕೂಡಾ ನಿರ್ದೇಶಕರ ಪಾಲಿಗೆ ಆಕರ ಗ್ರಂಥವಾಗಿದೆ. ಒಂದು ವೇಳೆ ಟ್ರೈಲರ್ ನಲ್ಲಿರುವಂಥಾ ಬಿಸುಪು, ಆವೇಗ ಒಂದಿಡೀ ಚಿತ್ರದಲ್ಲಿ ಮಿಳಿತಗೊಂಡಿದ್ದರೆ, ಇನಾಮ್ದಾರ್ ಜನಮಾನಸವನ್ನು ಸಲೀಸಾಗಿ ಮುಟ್ಟಬಹುದೇನೋ…

ವಿಶೇಷವೆಂದರೆ, ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ ನಿರ್ದೇಶನದ ಜೊತೆಗೆ, ಪ್ರಧಾನ ಪಾತ್ರವೊಂದರಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆ ಪಾತ್ರದ ಚಹರೆಯೂ ಟ್ರೈಲರ್ ನಲ್ಲಿ ಮಿಂಚಿದೆ. ಒಟ್ಟಾರೆಯಾಗಿ, ಇನಾಮ್ದಾರ್ ಟ್ರೈಲರ್ ಇದೀಗ ನಾನಾ ಬಗೆಯಲ್ಲಿ ಚರ್ಚೆ ಹುಟ್ಟು ಹಾಕಿದೆ. ಕುತೂಹಲವನ್ನೂ ಮೂಡಿಸಿದೆ. ಅದು ಸದರಿ ಚಿತ್ರದ ಪಾಲಿಗೆ ಧನಾತ್ಮಕ ವಾತಾವರಣ ಸೃಷ್ಟಿಸುತ್ತೆ ಎನ್ನಲಡ್ಡಿಯಿಲ್ಲ. ಪ್ರಧಾನವಾಗಿ, ಕೇವಲ ಕಥೆ, ಪಾತ್ರವರ್ಗ ಮಾತ್ರವಲ್ಲದೇ ಮೇಕಿಂಗ್ ವಿಚಾರದಲ್ಲಿಯೂ ಈ ಟ್ರೈಲರ್ ಒಂದಷ್ಟು ಗಮನ ಸೆಳೆಯುತ್ತೆ. ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರು ಮನಸಾರೆ ಈ ಸಿನಿಮಾವನ್ನು ನಿರ್ಮಾಣ ಮಾಡಿರುವ ಕುರುಹುಗಳೂ ನಿಖರವಾಗಿ ಕಾಣಿಸುತ್ತವೆ.

ಸದ್ಯದ ಮಟ್ಟಿಗೆ ಚಿತ್ರತಂಡ ಒಂದಷ್ಟು ವಿಚಾರಗಳನ್ನು ಮಾತ್ರವೇ ಜಾಹೀರು ಮಾಡಿದೆ. ಟ್ರೈಲರ್ ವಿಚಾರಕ್ಕೆ ಬಂದರೆ, ಅಲ್ಲಿಯೂ ಕೂಡಾ ಬಹು ಜಾಣ್ಮೆಯಿಂದಲೇ ಕುತೂಹಲವನ್ನು ಕಾಪಿಟ್ಟುಕೊಳ್ಳಲಾಗಿದೆ. ಇನ್ನೊಂದಷ್ಟು ಬೆರಗುಗಳು ಬಹುಶಃ ಚಿತ್ರಮಂದಿರದಲ್ಲಷ್ಟೇ ತೆರೆದುಕೊಳ್ಳಬೇಕಿದೆ. ಅಂದಹಾಗೆ, ಇದೊಂದು ಸಂಕೀರ್ಣವಾದ ಕಥೆಯೆಂಬುದರ ಮುನ್ಸೂಚನೆ ಈ ಟ್ರೈಲರ್ ನಲ್ಲಿದೆ. ಅದಕ್ಕೆ ತಕ್ಕುದಾದ ದೊಡ್ಡ ಕ್ಯಾನ್ವಾಸಿನ ತುಂಬೆಲ್ಲ ಥರ ಥರದ ಪಾತ್ರಗಳು ತುಂಬಿಕೊಂಡಿವೆ. ಅವುಗಳನ್ನು ಪ್ರತಿಭಾನ್ವಿತ ಕಲಾವಿದರೇ ನಿಭಾಯಿಸಿದ್ದಾರೆ. ಅವಿನಾಶ್, ಥ್ರಿಲ್ಲರ್ ಮಂಜು, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಎಂ.ಕೆ ಮಠ, ಚಿರಶ್ರೀ ಅಂಚನ್, ಎಸ್ತರ್ ನರೋನ್ಹಾ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಟ್ರೈಲರ್ ಮೂಲಕ ಕೌತುಕದ ಕಂದೀಲು ಹಚ್ಚಿರುವ ಇನಾಮ್ದಾರಿದೇ ತಿಂಗಳ ೨೭ರಂದು ತೆರೆಗಾಣಲಿದೆ…

About The Author