ಟ್ರೈಲರ್ ಮೂಲಕ ಒಂದಷ್ಟು ಕುತೂಹಲ, ಮತ್ತೊಂದಷ್ಟು ಚರ್ಚೆ ಹುಟ್ಟು ಹಾಕಿದ್ದ ಚಿತ್ರ ಐ ಯಾಮ್ ಗಾಡ್. ಆ ಟ್ರೈಲರಿನಲ್ಲಿಯೇ ತೆಲುಗಿನ ಹಿಟ್ ಚಿತ್ರವಾದ ಅರ್ಜುನ್ ರೆಡ್ಡಿಯ ಪ್ರಭಾವ ಎದ್ದು ಕಂಡಿತ್ತು. ಇದೆಲ್ಲದರಾಚೆಗೆ ಟ್ರೈಲರ್ ಮೂಲಕ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದದ್ದು ಒಟ್ಟಾರೆ ಕಥೆಯಲ್ಲಿನ ಹೊಸತನ ಮತ್ತು ಚುರುಕುತನದ ಸುಳಿವು. ಕಾಲೇಜು ಕೇಂದ್ರಿತವಾದ ಕಥೆಯ ಹೊಳಹಿನ ಮೂಲಕವೂ ಮತ್ತೊಂದಷ್ಟು ಪ್ರೇಕ್ಷಕರು ಐ ಯಾಮ್ ಗಾಡ್ ಚಿತ್ರದತ್ತ ವಾಲಿಕೊಂಡಿದ್ದರು. ಇಂಥಾ ನಿರೀಕ್ಷೆಯಿಟ್ಟುಕೊಂಡ ನೋಡ ಹೋದ ಪ್ರೇಕ್ಷಕರಿಗೆ ಐ ಯಾಮ್ ಗಾಡ್ ಚಿತ್ರವಿಚಿತ್ರ ಭಾವಗಳನ್ನು ತುಂಬುವಂತಿದೆ. ಅತ್ಯಂತ ಲವಲವಿಕೆಯ ಕಥೆ, ಸಮ್ಮೋಹಕ ಟ್ವಿಸ್ಟುಗಳು ಸೇರಿದಂತೆ ಎಲ್ಲ ಇದ್ದೂ ಏನೋ ಕೊರತೆಯಾದಂಥಾ ಸಿಡಿಮಿಡಿಯೊಂದಿಗೆ ಪ್ರೇಕ್ಷಕರು ಚಿತ್ರಮಂದಿರಗಳಿಂದ ನಿರ್ಗಮಿಸುವಂತಾಗಿದೆ.


ರವಿ ಬಿ ಗೌಡ ಈ ಸಿನಿಮಾವನ್ನು ನಿರ್ದೇಶನ ಮಾಡಿ, ನಾಯಕನಾಗಿಯೂ ನಟಿಸಿದ್ದಾರೆ. ಹೀಗೆ ಎರಡೆರಡು ಜವಾಬ್ದಾರಿಗಳನ್ನು ನಿಭಾಯಿಸಿರುವ ರವಿ ಬಿ ಗೌಡ ಇಲ್ಲಿ ಪ್ರಧಾನವಾಗಿ ಹೀರೋಯಿಸಂ ಮೂಲಕ ಒಂದೇ ಏಟಿಗೆ ನೆಲೆ ನಿಲ್ಲುವ ಉತ್ಸಾಹ ತೋರಿದ್ದಾರೆ. ಇಲ್ಲಿನ ಕಥೆ ಟ್ರೈಲರ್ ಕಂಡು ಬಂದಿದ್ದವರನ್ನು ಥ್ರಿಲ್ ಆಗಿಸುವಂತೆ ತೆರೆದುಕೊಳ್ಳುತ್ತೆ. ಕಾಲೇಜಿನ ಕ್ಲಾಸ್ ರೂಮಿಗೆ ಚಿಲಕ ಹಾಕಿಕೊಂಡು, ಬಿಡುಬೀಸಾಗಿ ನಾಯಕ ನಾಯಕಿ ಕಿಸ್ ಮಾಡಿಕೊಳ್ಳೋ ದೃಷ್ಯದೊಂದಿಗೆ ಸಿನಿಮಾ ಶುರುವಾಗುತ್ತೆ. ಆ ಬಳಿಕ ಎಲ್ಲಿಯೂ ನಿಧಾನಗತಿ ಆವರಿಸಿದಂತೆ ನೋಡಿಕೊಂಡಿರೋ ನಿರ್ದೇಶಕ, ಇಂಟರ್ವಲ್‌ಗೂ ಮುಂಚಿನ ಮುಕ್ಕಾಲು ಭಾಗವನ್ನು ಹೀರೋ ಮತ್ತು ಹೀರೋಯಿನ್ನುಗಳ ವೈಲ್ಡ್ ಮನಃಸ್ಥಿತಿ ಅರ್ಥ ಮಾಡಿಸಲೆಂದೇ ಮೀಸಲಿಟ್ಟಿದ್ದಾರೆ.


ಆ ನಂತರ ನಾನಾ ಕೊಂಬೆ ಕೋವೆಗಳೊಂದಿಗೆ, ತಿರುವುಗಳೊಂದಿಗೆ ಚಲಿಸೋ ಕಥೆ ಇಂಟರ್ವೆಲ್ಲಿನ ಟ್ವಿಸ್ಟ್ ಒಂದರ ನಂತರ ಮತ್ತಷ್ಟು ಆವೇಗದಿಂದ ಮುಂದುವರೆಯುತ್ತೆ. ಇದೇ ಹೊತ್ತಿನಲ್ಲಿ ಸಾಲು ಸಾಲಾಗಿ ಮದುವೆಯಾದ ಮಹಿಳೆಯರನ್ನು ಕೊಲೆ ಮಾಡುತ್ತಾ ಸಾಗೋ ಸೈಕೋ ಕಿಲ್ಲರ್‌ನತ್ತ ಕಥೆ ಹೊರಳಿಕೊಳ್ಳುತ್ತೆ. ಆ ಸೈಕೋ ಕಿಲ್ಲರ್ ಯಾರು? ಅವನೇಕೆ ಮದುವೆಯಾದ ನಂತರ ಗಂಡ ಮತ್ತು ಮನೆ ಮಂದಿಯನ್ನು ಕಾಡಿಸುವ ಮಹಿಳೆಯರನ್ನು ಮಾತ್ರವೇ ಹುಡುಕಿ ಕೊಲ್ಲುತ್ತಾನೆ? ಇಂಥಾ ಪ್ರಶ್ನೆಗಳಿಗೆ ಸಿನಿಮಾ ಮಂದಿರದಲ್ಲಷ್ಟೇ ಉತ್ತರ ಹುಡುಕೋದೊಳಿತು. ಪ್ರಧಾನವಾಗಿ, ನಿರ್ದೇಶಕ ರವಿ ಬಿ ಗೌಡ ತಾನು ಈ ಸಿನಿಮಾ ಮೂಲಕವೇ ಥೇಟು ವಿಜಯ್ ದೇವರಕೊಂಡನಂತೆ ಮಿಂಚುವ ಆಸೆ ಹೊಂದಿದ್ದಂತಿದೆ. ಅದೇ ಭರದಲ್ಲಿ ಷದೃಷ್ಯ ಕಟ್ಟುತ್ತಾ ಸಾಗಿರುವ ರವಿ, ಹೀರೋಗಿರಿ, ಬಿಲ್ಡಪ್ಪಿನ ಭರಾಟೆಯಲ್ಲಿ ನಿರ್ದೇಶನದ ಕುಸುರಿಯನ್ನೇ ಆಯಕಟ್ಟಿನ ಜಾಗಗಳಲ್ಲಿ ಮರೆತು ಬಿಟ್ಟಿದ್ದಾರೆ. ಅದುವೇ ಈ ಸಿನಿಮಾವನ್ನು ಆವರೇಜಿನ ಮಟ್ಟ ಮುಟ್ಟಲೂ ಆಗದಂತೆ ತಡೆದು ಬಿಟ್ಟಿದೆ.


ಒಟ್ಟಾರೆ ಸಿನಿಮಾದುದ್ದಕ್ಕು ಅರ್ಜುನ್ ರೆಡ್ಡಿ ಛಾಠಯೆಯಿದೆ. ರವಿ ಉಪ್ಪಿ ಗರಡಿಯಲ್ಲಿ ಪಳಗಿದ್‌ದರಿಂದಾಗಿಯೇ ಉಪೇಂದ್ರರ ಎ ಸಿನಿಮಾದ ಛಾಯೆ ಡೈಲಾಗುಗಳಲ್ಲಿ, ರವಿಯ ನಟನೆಯಲ್ಲಿ ಕಾಣಿಸುತ್ತೆ. ರವಿ ಮೊದಲ ಸಿನಿಮಾದಲ್ಲಿಯೇ ನಾಯಕನಾಗಿ, ಅಭಿನಯದ ಮೂಲಕ ಗೆದ್ದಿದ್ದಾರೆ. ಆದರೆ ನಿರ್ದೇಶಕನಾಗಿ ಸೋತು ಬಿಟ್ಟಿದ್ದಾರೆ. ಇಡೀ ಕಥೆಯ ಮುಖ್ಯ ಬಿಂದುವಿಗೆ ತಲುಪೋದಕ್ಕೀತ ಭರ್ತಿ ಎರಡು ಗಂಟೆ ವ್ಯಯಿಸಿದ್ದಾರೆ. ಆದರೆ, ಒಂದಷ್ಟು ಕೊರತೆಗಳ ಮೂಲಕ ಅದು ವ್ಯರ್ಥವೆಂಬ ಭಾವ ಪ್ರೇಕ್ಷಕರನ್ನು ಮುತ್ತಿಕೊಳ್ಳುತ್ತೆ. ಇದರಾಚೆಗೆ ಈವತ್ತಿನ ಸಮಾಜದಲ್ಲಿ ಕೆಲ ಹೆಣ್ಣುಮಕ್ಕಳು ಕೌಟುಂಬಿಕ ದೌರ್ಜನ್ಯದ ಕಾನೂನನ್ನು ದುರ್ಭಳಕೆ ಮಾಡಿಕೊಳ್ಳೋದರ ವಿರುದ್ಧ ಸಮರ್ಥ ಸಂದೇಶ ದಾಟಿಸಿದ್ದಾರೆ. ಅಷ್ಟರ ಮಟ್ಟಿಗೆ ಈ ಚಿತ್ರ ಸಾರ್ಥಕ್ಯ ಕಂಡಿದೆ.


ಇನ್ನುಳಿದಂತೆ ಅಜನೀಶ್ ಲೋಕನಾಥ್ ಈ ಚಿತ್ರದ ಸಂಗೀತ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದಾರೆ. ಕಾಂತಾರ ಮೂಲಕ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿರುವವರು ಅಜನೀಶ್. ಆದರೆ, ಈ ಚಿತ್ರಕ್ಕೆ ಮಾತ್ರ ಅವರು ತೀರಾ ಬುರ್ನಾಸು ಸಂಗೀತ ಕೊಟ್ಟಿದ್ದಾರೆ. ಯಾವ ಹಾಡುಗಳೂ ಚೆಂದಗಿಲ್ಲ. ಹಿನ್ನೆಲೆ ಸಂಗೀತವೂ ಕಳಪೆ. ಒಂದು ಸಿನಿಮಾ ಒಪ್ಪಿಕೊಂಡ ಮೇಲೆ ಅದಕ್ಕೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಬೇಕೆಂಬ ವೃತ್ತಿ ಧರ್ಮವನ್ನೇ ಅಜನೀಶ್ ಮರೆತಂತಿದೆ. ಇನ್ನುಳಿದಂತೆ ರವಿ ಬಿ ಗೌಡ ಸೇರಿದಂತೆ, ನಾಯಕಿ ವಿಜೇತಾ ಫರೀಕ್, ರವಿಶಂಕರ್, ಅವಿನಾಶ್, ಅರುಣಾ ಬಾಲರಾಜ್ ಮುಂತಾದವರು ತಂತಮ್ಮ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ಆದರೆ, ನಿರ್ದೇಶಕನಾಗಿ ಒಂದೊಳ್ಳೆ ಕಥೆ ಕೈಗೆತ್ತಿಕೊಂಡಿದ್ದ ರವಿ ಅದರಲ್ಲಿ ಸೋತಿದ್ದಾರೆ. ಈ ಕಾರಣದಿಂದಲೇ ಒಂದು ಮಟ್ಟ ಮುಟ್ಟಬಹುದಾಗಿದ್ದ ಐ ಯಾಮ್ ಗಾಡ್ ಆ ಅವಕಾಶದಿಂದ ವಂಚಿತವಾಗಿದೆ!

About The Author