ಕನ್ನಡ ಚಿತ್ರರಂಗ ಕಂಡ ಹೊಸ ತಲೆಮಾರಿನ ಪ್ರತಿಭಾನ್ವಿತ ನಟರ ಸಾಲಿನಲ್ಲಿ ಡಾಲಿ ಧನಂಜಯ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಒಂದು ಗೆಲುವು ದಕ್ಕಿಸಿಕೊಳ್ಳುವುದಕ್ಕೆ ಅದೆಷ್ಟು ಸರ್ಕಸ್ಸು ನಡೆಸಬೇಕು, ಅದೆಂತೆಂಥಾ ನಿರಾಸೆ, ನೋವುಗಳನ್ನು ಅನುಭವಿಸಬೇಕೆಂಬುದಕ್ಕೂ ಕೂಡಾ ಡಾಲಿಯ ವೃತ್ತಿ ಬದುಕು ಉದಾಹರಣೆಯಂತಿದೆ. ಅದೆಷ್ಟೋ ವರ್ಷಗಳ ಕಾಲ ಅಂಡಲೆದು, ಒಂದಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರೂ ಕೂಡಾ ಧನಂಜಯ್‌ಗೆ ದೊಡ್ಡ ಮಟ್ಟದಲ್ಲಿ ಗೆಲುವು ಸಿಕ್ಕಿದ್ದು ಟಗರು ಚಿತ್ರದ ವಿಲನ್ ಪಾತ್ರದ ಮೂಲಕ. ಆ ನಂತರದಲ್ಲಿ ಡಾಲಿ ಅಂಥಾದ್ದೇ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆಂಬ ನಿರೀಕ್ಷೆಯನ್ನ ಧನಂಜಯ್ ಅಕ್ಷರಶಃ ಸುಳ್ಳಾಗಿಸಿದ್ದಾರೆ.
ಎಂಥಾ ಪಾತ್ರಗಳನ್ನಾದರೂ ಮಾಡಬಲ್ಲ ಕಸುವಿದ್ದರೂ ಕೂಡಾ, ಈಗಿನ ಜಮಾನದಲ್ಲಿ ಬೇಕಿರೋದು ಕಮರ್ಶಿಯಲ್ ಸಿನಿಮಾಗಳಲ್ಲಿನ ಗೆಲುವು. ಈ ಕಾರಣದಿಂದಲೇ ಅನೇಕ ನಟರು ಬೇರ್‍ಯಾವ ಬಗೆಯ ಪಾತ್ರಗಳು, ಸಿನಿಮಾಗಳತ್ತಲೂ ಲಕ್ಷ್ಯ ವಹಿಸೋದಿಲ್ಲ. ಆದರೆ, ಧನಂಜಯ್ ಮಾತ್ರ ಅಚ್ಚರಿದಾಯಕ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅದರ ಭಾಗವಾಗಿಯೇ ಈಗ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಟೀಶರ ವಿರುದ್ಧ ಸಿಡಿದೆದ್ದಿದ್ದ ಬೇಡ ಸಮುದಾಯದ ನಾಯಕನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಅವರು ನಟಿಸುತ್ತಿರೋ ಐತಿಹಾಸಿಕ ಹಲಗಲಿ ಚಿತ್ರದ ಫಸ್ಟ್ ಲುಕ್ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.
ಸ್ವಾತಂತ್ರೋತ್ತರ ಭಾರತದಲ್ಲಿ ಇಲ್ಲಿನ ನಾನಾ ಭಾಗಗಳ ವೀರರು ಬ್ರಟೀಶ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದಿದ್ದರು. ಅಂಥಾ ನೂರಾರು ಸಂಗ್ರಾಮಗಳ ಒಟ್ಟು ಮೊತ್ತವಾಗಿಯೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅದರಲ್ಲಿ ನಮ್ಮ ನೆಲವಾದ ಹಲಗಲಿಯ ಹೋರಾಟವೂ ಪ್ರಧಾನವಾಗಿ ಸೇರಿಕೊಳ್ಳುತ್ತದೆ. ಇಂಥಾ ವೀರಸೇನಾನಿಗಳ ಕಥೆಯನ್ನು ಸುಕೇಶ್ ಡಿ.ಕೆ ನಿರ್ದೇಶನ ಮಾಡಲಿದ್ದಾರೆ. ಒಂದೊಳ್ಳೆ ತಂಡವೇ ಇಲ್ಲಿ ಜಮಾವಣೆಗೊಂಡಿದೆ. ನಮ್ಮ ನೆಲದಲ್ಲಿ ಘಟಿಸಿದ್ದ ಹಲಗಲಿಯ ಬೇಡರ ಹೋರಾಟದ ಕಥನವನ್ನು ಅದ್ದೂರಿಯಾಗಿ ಮರುಸೃಷ್ಟಿಸಲಾಗುತ್ತಿದೆ. ಈ ಮೂಲಕ ದೇಶಪ್ರೇಮದ ತಂರಂಗಗಳನ್ನು ಹಬ್ಬಿಸಲಿರುವ ಹಲಗಲಿಯ ಮತ್ತೊಂದಷ್ಟು ವಿಚಾರಗಳು ಇಷ್ಟರಲ್ಲಿಯೇ ಜಾಹೀರಾಗಲಿವೆ.