ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ಪ್ರಕ್ರಿಯೆ ಅನೂಚಾನವಾಗಿ ಮುಂದುವರೆದಿದೆ. ಹೀಗೆ ಆಗಮಿಸೋ ಹೊಸಬರ ತಂಡಗಳು ಕಾಲಿಟ್ಟಲ್ಲೆಲ್ಲ ಗೆಲುವು ದಕ್ಕುತ್ತದೆಂದೇನೂ ಇಲ್ಲ. ಆದರೆ, ಹೊಸಬರ ಆಗಮನವಾದಾಗ ಹೊಸತೇನೋ ಛಳುಕು ಮೂಡಿಕೊಂಡೀತೆಂಬ ನಿರೀಕ್ಷೆಯೊಂದು ಕನ್ನಡದ ಪ್ರೇಕ್ಷಕರಲ್ಲಿರೋದು ಸುಳ್ಳಲ್ಲ. ಇಂಥಾದ್ದೊಂದು ವಾತಾವರಣದಲ್ಲೀಗ ಮತ್ತೊಂದು ಹೊಸಬರ ತಂಡ ಹಚ್ಚೆ (hacche kannada movie) ಎಂಬ ಸಿನಿಮಾವನ್ನು ರೂಪಿಸಿದೆ. ಒಂದು ಹಾಡಿನ ಬಿಡುಗಡೆಯ ನೆಪದಲ್ಲಿ ಮಾಧ್ಯಮದವರನ್ನು ಮುಖಾಮುಖಿಯಾಗಿದೆ. ಈ ದಿಸೆಯಲ್ಲಿ ಒಟ್ಟಾರೆ ಸಿನಿಮಾ ಬಗೆಗಿನ ಒಂದಷ್ಟು ಸೂಕ್ಷ್ಮ ಸಂಗತಿಗಳನ್ನು ಪ್ರೇಕ್ಷಕರಿಗೆ ತಲುಪಿಸಿದೆ.
ಹಚ್ಚೆ ಎಂಬುದು ತೀರಾ ಪರಿಚಿತ ಪದ. ಅದರೊಂದಿಗೆ ಪ್ರೇಮದ ನವಿರು ಭಾವಗಳೂ ಕೂಡಾ ಮಿಳಿತವಾಗಿವೆ. ಹಾಗಂತ ಇದನ್ನೊಂದು ಪ್ರೇಮ ಕಥಾನಕ ಅಂತ ಷರಾ ಬರೆಯುವಂತಿಲ್ಲ. ಯಾಕೆಂದರೆ, ಇದು ಯಾವ ಜಾನರಿಗೂ ಒಳಪಡದ ವಿಶಿಷ್ಟ ಗುಣ ಹೊಂದಿರುವ ಚಿತ್ರ ಅಂತ ತಂಡವೇ ಹೇಳಿಕೊಂಡಿದೆ. ಹಾಗಾದರೆ, ಇಲ್ಲಿರೋದು ಯಾವ ಬಗೆಯ ಕಥೆ? ಅಂತೊಂದು ಕುತೂಹಲ ಸಹಜ. ಅದಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ (director yashodhara) ಯಶೋಧರ ಉತ್ತರದಂಥಾ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಅದರನ್ವಯ ಹೇಳೋದಾದರೆ, ಇಲ್ಲಿ ಪ್ರೇಮದ ಕೇಂದ್ರದಿಂದ ಸಾಗುವ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವಿದೆಯಂತೆ.
ಇದೀಗ ವಿಘ್ನೇಶ್ವರಾಯ ಅಂತೊಂದು ಹಾಡು ಬಿಡುಗಡೆಗೊಂಡಿದೆ. ಅದಕ್ಕೆ ಖುದ್ದು ನಿರ್ದೇಶಕರೇ ಸಾಹಿತ್ಯ ಬರೆದಿದ್ದಾರೆ. ವಿವೇಕ್ ಚಕ್ರವರ್ತಿ ಸಂಯೋಜನೆ ಮಾಡಿರುವ ಈ ಹಾಡಿಗೆ ಶಿವಂ ಧ್ವನಿಯಾಗಿದ್ದಾರೆ. ಈ ಹಾಡಿಗೀಗ ಉತ್ತಮ ಪ್ರತಿಕ್ರಿಯೆ ಸಿಗುತ್ತಿರೋದರಿಂದ ಚಿತ್ರತಂಡ ಖುಷಿಗೊಂಡಿದೆ. ಹಚ್ಚೆ ಎಂಬ ಹೆಸರನ್ನು ಅದೇಕೆ ಇಡಲಾಗಿದೆ ಅನ್ನೋದಕ್ಕೆ ಸಿನಿಮಾದ ಮೂಲಕವೇ ಉತ್ತರ ಸಿಗಲಿದೆಯಂತೆ. ಸದರಿ ಹಾಡಿನ ಬಿಡುಗಡೆಯ ಮೂಲಕವೇ ಪ್ರಚಾರ ಕಾರ್ಯಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಅಭಿಮನ್ಯು ಈ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆದ್ಯಪ್ರಿಯಾ ಹಾಗೂ ಅನುಪ್ರೇಮ ನಾಯಕಿಯರಾಗಿ ನಟಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಹಚ್ಚೆಯ ಬಿಡುಗಡೆ ದಿನ ಆಂಕ ಘೋಶಣೆಯಾಗಲಿದೆ.