ಪ್ರಚಾರದ ಅಬ್ಬರವಿಲ್ಲದೆ ತಣ್ಣಗೆ ತೆರೆಗಂಡಿರುವ ಸಿನಿಮಾ ಗ್ರೀನ್. ಒಂದಷ್ಟು ಮಂದಿಗೆ ದೀಪಾವಳಿಯ ಆಸುಪಾಸಲ್ಲಿ ಇಂಥಾದ್ದೊಂದು ಸಿನಿಮಾ ತೆರೆಗಂಡಿರುವ ವರ್ತಮಾನವೇ ತಲುಪಿಕೊಂಡಿರಲಿಕ್ಕಿಲ್ಲ. ಆದರೆ, ಆರಂಭಿಕವಾಗಿ ವಿಭಿನ್ನ ಪೋಸ್ಟರ್ ಮೂಲಕ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು. ಅದರ ಬೆನ್ನಲ್ಲಿಯೇ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರರ್ಶನ ಕಂಡು ಪ್ರಶಸ್ತಿ ಬಾಚಿಕೊಂಡ ಬಗ್ಗೆಯೂ ಸುದ್ದಿಗಳು ಹರಿದಾಡಿದ್ದವು. ಟೀಸರ್ ಬಿಡುಗಡೆಯಾದ ನಂತರವಂತೂ ಗ್ರೀನ್ ತಾನೇ ತಾನಾಗಿ ಸುದ್ದಿ ಕೇಂದ್ರಕ್ಕೆ ಬಂದು ನಿಂತಿತ್ತು. ಇದೊಂದು ಹಾರರ್ ಸಿನಿಮಾ ಇರಬಹುದಾ ಎಂಬ ಕುತೂಹಲ, ವಿಶೇಷವಾದದ್ದೇನೋ ಕಥೆಯಿರಬಹುದೆಂಬ ಚರ್ಚೆಗಳ ನಡುವೆ ಸದ್ದಿಲ್ಲದೆ ಈ ಸಿನಿಮಾ ತೆರೆಗಂಡಿದೆ.

ಒಂದು ಕಾಲದಲ್ಲಿ ಎಲ್ಲೋ ಗೋಡೆ ಮೇಲೆ ಅಂಟಿಸಿದ್ದ ಪೋಸ್ಟರ್ ಭಿನ್ನವಾಗಿದ್ದರೆ, ಟೈಟಲ್ಲು ವಿಶೇಷವಾಗಿದ್ದರೆ ಆಸುಪಾಸಿನ ಸಿನಿಮಾ ಮಂದಿರಕ್ಕೆ ನುಗ್ಗುವ ಪ್ರೇಕ್ಷಕ ವರ್ಗವೊಂದಿತ್ತು. ಈಗ ಓಟಿಟಿ, ಮೊಬೈಲ್ ಜಮಾನಾ ಚಾಲ್ತಿಯಲ್ಲಿದ್ದರೂ ಕೂಡಾ ಗ್ರೀನ್ ಮೂಲಕ ಅಂಥಾ ಪ್ರೇಕ್ಷಕ ವರ್ಗ ಅಲ್ಲಲ್ಲಿ ಪ್ರತ್ಯಕ್ಷವಾಗುತ್ತಿದೆ. ಹಾಗೊಂದು ಕುತೂಹಲದ ಸೆಳವಿಗೆ ಸಿಕ್ಕು ಸಿನಿಮಾ ಮಂದಿರ ತಲುಪಿದವರನ್ನು ಈ ಚಿತ್ರ ತನ್ನೊಳಗೆ ಎಳೆದುಕೊಂಡು, ತಾನೇ ಹೊರದಬ್ಬಿ, ಮತ್ತೆ ಸೆಳೆದುಕೊಳ್ಳುವ ಚಿತ್ರವಿಚಿತ್ರ ಅನುಭವಗಳನ್ನು ಕೊಡಮಾಡುತ್ತದೆ. ಅಲ್ಲಲ್ಲಿ ಬೇರ್ಯಾವುದೋ ಸಿನಿಮಾಗಳ ಛಾಯೆ ಇದ್ದರೂ ನಿರ್ದೇಶಕ ರಾಜ್ ವಿಜಯ್ ಭಿನ್ನವಾದ ಕಥನವನ್ನೇ ಆಯ್ದುಕೊಂಡಿದ್ದಾರೆ. ಆದರೆ, ಸಿನಿಮಾ ನೋಡಿ ಹೊರಬಂದ ಮೇಲೂ ಅತ್ತ ಪೂರ್ಣ ತೃಪ್ತಿಯೂ ಅಲ್ಲದ, ಇತ್ತ ಸಂಪೂರ್ಣವಾಗಿ ಅತೃಪ್ತವೂ ಅಲ್ಲದ ತ್ರಿಶಂಕು ಭಾವವೊಂದು ಮನೆತನಕವೂ ಹಿಂಬಾಲಿಸುತ್ತೆ!
ಪೊಲೀಸ್ ಅಧಿಕಾರಿಯೋರ್ವ ಸುಶೀಲಾ ಬೇಗ ಸಿಕ್ಬಿಡಮ್ಮ ಅನ್ನೋ ಸ್ವಗತದೊಂದಿಗೆ ಕಾರಿನಲ್ಲಿ ಕಾಡೊಂದನ್ನು ಪ್ರವೇಶಿಸುವ ಮೂಲಕ ಈ ಸಿನಿಮಾ ತೆರೆದುಕೊಳ್ಳುತ್ತದೆ. ಹಾಗೆ ಆ ಕಾರು ಗೊಂಡಾರಣ್ಯವನ್ನ ಪ್ರವೇಶಿಸೋ ದೃಷ್ಯವಿದೆಯಲ್ಲಾ? ಅದು ಇದರ ಸಿನಿಮಾಟೋಗ್ರಾಫರ್ ಯಾರು ಅಂತೊಂದು ಬೆರಗನ್ನ ನೋಡುಗರೊಳಗೆ ಮಿಸುಕಾಡುವಂತೆ ಮಾಡುತ್ತೆ. ಆ ನಂತರ ತೆರೆದುಕೊಳ್ಳೋದು ಚಿತ್ರವಿಚಿತ್ರ ಜಗತ್ತು. ಹಾಗೆ ಕಾಡೊಳಗೆ ಪ್ರವೇಶಿಸುವ ಜೀಪ್ ಕೆಟ್ಟು ನಿಂತಾಗ ಆ ಅಧಿಕಾರಿ ಕ್ಯಾನ್ ಹಿಡಿದು ನೀರನ್ನರಸುತ್ತಾ ಸುತ್ತಾಡಿ, ನೀರನ್ನು ತುಂಬಿ ತಂದು ಜೀಪಿಗೆ ಹಾಕಿ ಹೊರಟವನು ತನ್ನೊಂದಿಗೆ ತಾನೇ ಮಾತಾಡುವ ಮೂಲಕ ಆ ಕಾಡಿನ ನಿಗೂಢವನ್ನ, ಆತ ಅದರೊಳಗೆ ಹೊರಟಿರುವ ಉದ್ದೇಶದ ಸುಳಿವು ಬಿಟ್ಟು ಕೊಡುತ್ತಾನೆ.

ಅಲ್ಲಿಂದ ತುಸು ದೂರ ಹೊರಟವನಿಗೆ ಬುಡ್ಡಯ್ಯನ ಹೆಂಡದಂಗಡಿ ಸಿಗುತ್ತೆ. ಕುರುಡ ಬುಡ್ಡಯ್ಯನಿಗೆ ಓರ್ವ ಹೆರಂಗಸಿನ ಫೋಟೋ ತೋರಿಸಿ, ಅವರಿಬ್ಬರ ನಡುವೆ ಮಾತುಕತೆ ನಡೆಯುತ್ತಿರುವಾಗಲೇ ಮಗ್ಗುಲ ದಿಕ್ಕಿನಿಂದ ರಣಭೀಕರ ಘರ್ಜನೆಯೊಂದು ಕೇಳಿ ಬರುತ್ತೆ. ಆ ಭೀಕರ ಸದ್ದಿನಿಂದ ಹೆದರೋ ಆ ಅಧಿಕಾರಿ ಒಂದೇ ಸಮನೆ ಓಡಲು ಶುರುವಿಟ್ಟುಕೊಂಡಂತೆಯೇ, ಆ ಕಾಡಿನ ಮತ್ತೊಂದು ಪಾರ್ಶ್ವದ ಹೂ ಗಿಡಗಳ ನರ್ಸರಿಯ ಚಿತ್ರಣ ತೆರೆದುಕೊಳ್ಳುತ್ತೆ. ಅಲ್ಲೊಬ್ಬ ವಿಜ್ಞಾನಿಗಳ ಬಳಸೋ ಮಾಸ್ಕ್ ಧರಿಸಿದಾತ ಅದರ ಮಾಲಕನಂತೆ ಕಾಣಿಸುತ್ತಾನೆ. ಅಲ್ಲಿರುವ ವೀಲ್ ಚೇರಿನ ಆಸಾಮಿ ಯಾರು, ಆ ಕಾಡೊಳಗಿಂದ ಹೊರ ಹೋಗುವ ಧಾವಂತದೊಂದಿಗೆ ಬ ಡಬಡಿಸುವ ಗೋಪಾಲ್ ದೇಶಪಾಂಡೆಯ ಪಾತ್ರವೇನು? ಅದೇ ನರ್ಸರಿಯ ಒಡಲಲ್ಲಿರೋ ಮತ್ತೊಂದು ನರ್ಸರಿಯ ನಿಗೂಢವೇನು? ಅದೇ ನರ್ಸರಿ ವಾತಾವರಣದಲ್ಲಿರೋ ಮರದ ಬೇರುಗಳು ಹೆಣದ ರುಚಿ ಅಚಿಟಿಸಿಕೊಂಡಿದ್ದೇಕೆ? ಸಾವೇ ಇಲ್ಲದಂತೆ ಮಾಡಬಲ್ಲ ಹೂವಿನ ರಸದ ರಹಸ್ಯವೇನು? ಅಲ್ಲಿನ ಮರಗಳು ಹೇಗೆ ರಾತ್ರೋರಾತ್ರಿ ಒಂದು ಕಡೆಯಿಂದ ಮತ್ತೊಂದೆಡೆಗೆ ಚಲಿಸುತ್ತವೆ? ಅಲ್ಲಿ ನಡೆಯೋ ನಿಗೂಢ ಸಾವುಗಳ ಹಿಂದಿರೋ ಮರ್ಮವೇನೆಂಬುದು ಒಟ್ಟಾರೆ ಸಿನಿಮಾದ ಸಾರ.

ಕನ್ನಡದ ಮಟ್ಟಿಗೆ ಇಲ್ಲಿರೋದು ಭಿನ್ನ ಕಥೆ ಮತ್ತು ಅದಕ್ಕೆ ತಕ್ಕುದಾದ ನಿರೂಪಣೆ. ಇದು ಮಿಸ್ಟೀರಿಯಸ್ ಮೈಂಡ್ ಬ್ಲೆಂಡಿಂಗ್ ಥ್ರಿಲ್ಲರ್ ಜಾನರಿನ ಚಿತ್ರ. ಇದರ ವಿಶೇಷತೆಯೆಂದರೆ ಕಣ್ಣೆದುರೇ ಗೋಜಲಾಗಿ, ಸಿಕ್ಕು ಸಿಕ್ಕಾಗಿ ದೃಷ್ಯಗಳು ಸರಿಯುತ್ತವೆ. ಕಥೆ ಕೂಡಾ ಆ ಸಿಕ್ಕುಗಳ ಜೊತೆಗೇ ಸಾಗುತ್ತೆ. ಇಂಥಾ ಸಿನಿಮಾಗಳನ್ನು ನೋಡಿ ಅರಗಿಸಿಕೊಳ್ಳುವುದಕ್ಕೂ ಒಂದಷ್ಟು ವಿಶೇಷ ಗುಣಗಳೇ ಬೇಕಾಗುತ್ತವೆ. ಕಡೇ ತನಕವೂ ಕಣ್ಣೆದುರು ಏನಾಗುತ್ತಿದೆ, ಯಾವ ಪಾತ್ರದ ಚಹರೆಗಳೇನು, ಕಥೆ ಯಾವ ದಿಕ್ಕಿನತ್ತ ಚಲಿಸುತ್ತಿದೆ ಎಂಬ ಸುಳಿವೇ ಸಿಗುವುದಿಲ್ಲ. ಅಂಥಾ ಗೊಂದಲಗಳನ್ನೂ ಕೂಡಾ ನೋಡುಗರಿಗೆ ಅಸಹನೆ ಮೂಡದಂತೆ, ದೃಷ್ಯದಿಂದ ದೃಷ್ಯಕ್ಕೆ ಕುತೂಹಲ ತೀವ್ರಗೊಳ್ಳುವಂತೆ ಎಚ್ಚರ ವಹಿಸೋದು ಇಂತಾ ಸಿನಿಮಾಗಳ ನಿರ್ದೇಶನದ ದೊಡ್ಡ ಸವಾಲು. ದೃಷ್ಯಗಳು, ಕಥೆ ಅದೆಷ್ಟೇ ಸಿಕ್ಕುಗಟ್ಟಿದರೂ ಅದರ ಮೂಲ ಸೂತ್ರದ ಮೇಲೆ ನಿರ್ದೇಶಕನ ಹಿಡಿತ ತಪ್ಪುವಂತಿಲ್ಲ. ಒಂದು ವೇಳೆ ತಪ್ಪಿತೆಂದರೆ ಕ್ಲೈಮ್ಯಾಕ್ಸ್ ಅದೆಷ್ಟೇ ಅದ್ಭುತವಾಗಿದ್ದರೂ ಪ್ರೇಕ್ಷಕನಿಗೆ ತಾಕುವುದಿಲ್ಲ.

ಗ್ರೀನ್ ಚಿತ್ರದ ವಿಚಾದರಲ್ಲಿ ಹೇಳೋದಾದರೆ, ಎಲ್ಲವನ್ನೂ ರೋಚಕವಾಗಿಸುವ ಭರದರಲ್ಲಿ ಆ ಸೂತ್ರವೆಂಬುದು ನಿರ್ದೇಶಕರ ಕೈ ತಪ್ಪಿದಂತಿದೆ. ಇಲ್ಲಿ ಹೆಜ್ಜೆ ಹಜ್ಜೆಗೂ ಬೆರಗಾಗಿಸಬಲ್ಲ, ಬೆಚ್ಚಿ ಬೀಳಿಸುವ ಅಂಶಗಳಿದ್ದಾವೆ. ಕೆಲವೊಂದು ದೃಷ್ಯಗಳು ಹಾಲಿವುಡ್ ಸಿನಿಮಾವೊಂದರ ನೇರ ಪ್ರಭಾವದಿಂದ ಸೃಷ್ಟಿಯಾದಂತೆ ಭಾಸವಾಗುತ್ತದೆ. ಈ ಊಹಾತ್ಮಕ ವ್ಯೂಹಕ್ಕೆ ಸಿಕ್ಕ ಪ್ರೇಕ್ಷಕರ ಮೆದುಳು ಕ್ಲ್ಯಾಕ್ಸಿನ ಹೊತ್ತಿಗೆಲ್ಲ ಮರಗಟ್ಟಿದಂತಾಗುತ್ತದೆ. ಇದರ ದೆಸೆಯಿಂದಲೇ ರೋಮಾಂಚಕವಾಗಿರುವ ಕ್ಲೈಮ್ಯಾಕ್ಸಿನ ಅನುಭೂತಿಯನ್ನು ಎದುರುಗೊಳ್ಳುವ ಶಕ್ತಿಯನ್ನು ನೋಡುಗರು ಕಳೆದುಕೊಂಡಿರುತ್ತಾರೆ. ಮುಕ್ತಾಯದ ಹೊತ್ತಿಗೆಲ್ಲ ಮನುಷ್ಯರ ಹೆಣ ತಿನ್ನುವ ವಿಚಿತ್ರ ಮರ ಕಾಡುತ್ತೆ. ಅಷ್ಟರಲ್ಲಿ ಆ ನರಭಕ್ಷಕ ಮರದ ಕೊಂಬೆಯಲ್ಲಿ ನೇತುಬಿದ್ದಿರುವ ಬೊಂಬೆಗಳೆಲ್ಲ ನಮ್ಮದೇ ಹೆಣವೆಂಬಂತೆ ಭಾಸವಾಗಲಾರಂಭಿಸುತ್ತೆ. ಅಂಥಾ ವಿಕ್ಷಿಪ್ತ ಭಾವವೊಂದು ಸಿನಿಮಾ ಮಂದಿರದಿಂದ ಹೊರಬಿದ್ದು ಮನೆ ಸಿಕೊಳ್ಳವವರೆಗೂ ಹಿಂಬಾಲಿಸುತ್ತೆ!
