ಯೋಗರಾಜ್ ಭಟ್ (director yogaraj bhat) ನಿರ್ದೇಶನದ ಗರಡಿ ದಿನಕ್ಕೊಂದೊಂದು ರೀತಿಯಲ್ಲಿ ಪ್ರೇಕ್ಷಕರ ನಡುವೆ ಗಿರಕಿ ಹೊಡೆಯುತ್ತಿದೆ. ಕಾಲಕ್ಕೆ ತಕ್ಕಂತೆ ಹೊಸಾ ಪೀಳಿಗೆಗೆ, ಟ್ರೆಂಡಿಗೆ ತಕ್ಕಂತೆ ಅಪ್ ಡೇಟಾಗೋದು ಯೋಗರಾಜ್ ಭಟ್ ಸ್ಪೆಷಾಲಿಟಿ. ಒಂದರ್ಥದಲ್ಲಿ ನಾನಾ ನಮೂನೆಯ ಟ್ರೆಂಡುಗಳನ್ನು ಸ್ವತಃ ಭಟ್ಟರೇ ಹುಟ್ಟು ಹಾಕಿದ್ದಿದೆ. (gardi movie) ಗರಡಿ ಚಿತ್ರ ಶುರುವಾದ ನಂತರವಂತೂ ಅವರು ತಮ್ಮ ಮಾಮೂಲಿ ಪಥದಿಂದ, ಬೇರ್ಯಾವುದೋ ದಿಕ್ಕಿನತ್ತ ಹೊರಳಿಕೊಂಡಿರುವ ಸ್ಪಷ್ಟ ಸೂಚನೆ ಸಿಕ್ಕಿ ಹೋಗಿತ್ತು. ಇದೀಗ ಗರಡಿಯ ಬಹು ನಿರೀಕ್ಷಿತ ಹಾಡು ಬಿಡುಗಡೆಗೊಂಡಿದೆ. ಈ ಮೂಲಕ ಯೋಗರಾಜ್ ಭಟ್, ಹರಿಕೃಷ್ಣ ಹಾಗೂ (singer vijay prakash) ವಿಜಯ ಪ್ರಕಾಶ್ ಜೋಡಿ ಅಕ್ಷರಶಃ ಮೋಡಿ ಮಾಡಿದೆ.

`ಅನಿಸಬಹುದು ನಿನಗೆ ಇದು ತುಂಬ ಸಣ್ಣ ವಿಷಯ, ಅರಿಯದೇನೆ ನಾನು ಆಗಿರುವೆ ನಿನ್ನ ಇನಿಯ’ ಎಂಬ ಭಾವುಕ ಸಾಲುಗಳಿರುವ ಈ ಹಾಡೀಗ ಮೆಲ್ಲದೆ ಪ್ರೇಕ್ಷಕರನ್ನು ತಾಕುತ್ತಿದೆ. ಹಾಡುಗಳ ವಿಚಾರದಲ್ಲಿ ಯೋಗರಾಜ್ ಭಟ್ಟರಿಗೊಂದು ಬೇರೆಯದ್ದೇ ತೆರನಾದ ಅಭಿರುಚಿ ಇದೆ. ತಾನು ಸೃಸ್ಟಿಸಿದ ಸಾಲುಗಳು ಕೇಳುಗರನ್ನು ಹೇಗೆಲ್ಲ ಕಾಡಬಹುದೆಂಬ ಸ್ಪಷ್ಟ ಅಂದಾಜೂ ಅವರಲ್ಲಿದೆ. ಸದ್ಯದ ಮಟ್ಟಿಗೆ ಈ ಜನರೇಷನ್ನಿನ ಹಳವಂಡಗಳಿಗೆ ಆ ಕ್ಷದ ಮದ್ದಾಗುವ, ಮಂದ್ರವಾಗಿ ಕಾಡುವ ಹಾಡುಗಳ ಸಂಖ್ಯೆ ಕಡಿಮೆ ಇದೆ. ಆ ಕೊರತೆಯನ್ನ ಗರಡಿಯ ಹಾಡು ನೀಗಿಸುವಂತಿದೆ. ಬಹುಶಃ ಇದು ಮೆಲ್ಲ ಮೆಲ್ಲಗೆ ಎದೆಗಿಳಿಯುತ್ತಾ, ಬಹು ಕಾಲ ಅಲ್ಲೇ ಉಳಿಯುವ ಛಾತಿ ಇರುವ ಹಾಡು. ಕೇಳಿಉದಾಕ್ಷಣ ಹುಚ್ಚೆಬ್ಬಿಸೋ ಹಾಡುಗಳಿಗೆ ಆಯಸ್ಸು ಕಡಿಮೆ. ಆದರೆ, ಸಾವಧಾನದಿಂದ ಎದೆಗಿಳಿದು ನರ ನಾಡಿಗಳಿಗೆ ಹಬ್ಬಿಕೊಳ್ಳುವ ಹಾಡಿವೆಯಲ್ಲಾ? ಅವು ತಲೆಮಾರುಗಳಾಚೆಗೂ ದಾಟಿಕೊಳ್ಳುತ್ತವೆ. ಭಟ್ಟರ ಹಾಡೂ ಕೂಡಾ ಅಂಥಾದ್ದೊದು ಮೋಡಿ ಮಾಡಬಹುದಾ ಎಂಬುದಕ್ಕೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ಈವತ್ತಿನ ಮಟ್ಟಿಗೆ ಹೇಳೋದಾದರೆ, ಪ್ರತೀ ಬಂಧಗಳಿಗೂ ಭಾವುಕ ಬಿಸುಪು ಕಡಿಮೆಯಾಗುತ್ತಿದೆ. ಅದರಲ್ಲಿಯೂ ಈ ದಿನಮಾನದಲ್ಲಿ ಮೂಡಿಕೊಳ್ಳುವ ಪ್ರೀತಿಯಂತೂ ಹುಟ್ಟಿದಷ್ಟೇ ವೇಗವಾಗಿ ಉಸಿರು ಚೆಲ್ಲುತ್ತವೆ. ಸೋಶಿಯಲ್ ಮೀಡಿಯಾದ ಸಂದಿಗೊಂದಿಗಳಲ್ಲಿ ಇಂಥಾ ರಾಶಿ ರಾಶಿ ಕಥೆಗಳಿವೆ. ಅಂಥಲ್ಲಿ ಯಾವ ಜೀವದೆಡೆಗೋ ಪ್ರೀತಿ ಮೂಡಿಕೊಂಡ ಪುಳಕಗಳಿರೋದಿಲ್ಲ; ವಿದಾಯದ ಆಧ್ರ್ರತೆಯೂ ಇರುವುದಿಲ್ಲ. ಇಂಥಾ ಆರೋಪದಾಚೆಗೂ ಪ್ರೀತಿ ಕೈ ತಪ್ಪಿ ಹೋದ ಯಾತನೆಯನ್ನು ಜೀವಕಂಟಿಸಿಕೊಂಡು ಬದುಕುವ ಪ್ರತಿಯೊಬ್ಬರಿಗೂ ಗರಡಿಯ ಹಾಡು ಆಪ್ಯಾಯವೆನಿಸುತ್ತೆ. ಈ ಗುಣದಿಂದಲೇ ಹಿಟ್ ಲಿಸ್ಟಿಗೆ ಸೇರಿಕೊಳ್ಳುವ ಎಲ್ಲ ಸಾಧ್ಯತೆಗಳೂ ಈ ಹಾಡಿಗಿದ್ದಂತಿದೆ.

ಹಾಗೆ ನೋಡಿದರೆ, ಹಾಡುಗಳ ವಿಚಾರದಲ್ಲಿ ಯೋಗರಾಜ್ ಭಟ್ ಮತ್ತು ಹರಿಕೃಷ್ಣ ಸ್ಯಾಂಡಲ್ ವುಡ್ಡಿನ ಪುರಾತನ ಯಶಸ್ವೀ ಜೋಡಿ. ಇಬ್ಬರು ಒಟ್ಟುಗೂಡಿದರೆ ಹಿಟ್ ಸಾಂಗುಗಳು ಖಾತರಿ ಎಂಬ ನಂಬಿಕೆಯೊಂದು ತಂ ತಾನೇ ಹಬ್ಬಿಕೊಂಡಿತ್ತು. ಆ ನಂತರ ಒಂದಷ್ಟು ಕಾಲ ಶುಷ್ಕ ವಾತಾವರಣ ಸೃಷ್ಟಿಯಾಗಿದ್ದದ್ದು ನಿಜ. ಆದರೀಗ ಯೋಗರಾಜ್ ಭಟ್ ಮತ್ತು ಹರಿಕೃಷ್ಣ ಮತ್ತೆ ಜೊತೆಗೂಡಿದ್ದಾರೆ. ವಿಜಯ ಪ್ರಕಾಶ್ ಕೂಡಾ ಸಾಥ್ ಕೊಟ್ಟಿದ್ದಾರೆ. ಇದರ ಫಲವೆಂಬಂತೆ ಒಡೆದ ಹೃದಯದ ಹಾಡು ಪ್ರೇಕ್ಷಕರತ್ತ ಮೆಲುವಾಗಿ ದಾಟಿಕೊಂಡಿದೆ. ಇದರೊಂದಿಗೆ ಬಿಡುಗಡೆಯ ಅಂಚಿನಲ್ಲಿರುವ ಗರಡಿಯ ಪ್ರಭೆ ಕೊಂಚ ಹೆಚ್ಚಾದಂತೆಯೂ ಭಾಸವಾಗುತ್ತಿದೆ.

ಈ ಕ್ಷಣಕ್ಕೂ ಗರಡಿ ಚಿತ್ರದ ಅಸಲೀ ಛಾಯೆ ಏನೆಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಯೋಗರಾಜ್ ಭಟ್ ಅತ್ಯಂತ ನಾಜೂಕಿನಿಂದಲೇ, ಅಂಥಾದ್ದೊಂದು ಕೌತುಕವನ್ನ ಕಾಪಿಟ್ಟುಕೊಂಡು ಬಂದಿದ್ದಾರೆ. ಗರಡಿ ಮೂಲಕ ಭಟ್ಟರು ಪಕ್ಕಾ ಮಾಸ್ ಮೂಡಿಗೆ ಜಾರಿದ್ದಾರೆಂಬುದು ಸ್ಪಷ್ಟವಿತ್ತು. ಆದರೀಗ ಈ ಹಾಡಿನ ಮೂಲಕ ಗರಡಿಯೊಳಗಿನ ಪ್ರೇಮ ಕಥೆಯ ಮಜಲೊಂದು ತಂತಾನೇ ತೆರೆದುಕೊಂಡಿದೆ. ಯೋಗರಾಜ್ ಭಟ್ ಓರ್ವ ನಿರ್ದೇಶಕರಾಗಿ ಅದೆಷ್ಟು ಜನರನ್ನು ಸೆಳೆದಿದ್ದಾರೋ, ಗೀತರಚನೆಕಾರರಾಗಿಯೂ ಅಂಥಾದ್ದೇ ಕಮಾಲು ಮಾಡಿರೋದು ನಿಜ. ಅದರಲ್ಲಿಯೂ ಮನಸಿಗೆ ಮುತ್ತಿಕ್ಕುವಂಥಾ ಹಾಡೊಂದು ಭಟ್ಟರ ಬತ್ತಳಿಕೆಯಿಂದ ಬರಲೆಂದು ಕಾಯುವವರ ಸಂಖ್ಯೆ ಬಹಳಷ್ಟಿದೆ. ಅಂಥವರನ್ನೆಲ್ಲ ಈ ಹಾಡು ಸಂತೃಪ್ತಗೊಳಿಸಿದೆ. ಇನ್ನೇನಿದ್ದರೂ ಗರಡಿಯ ಗಾರುಡಿ ಸಿನಿಮಾ ಮಂದಿರಗಳಲ್ಲಿ ಶುರುವಾಗೋದಷ್ಟೇ ಬಾಕಿ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!