ಪ್ಯಾನಿಂಡಿಯಾ ಸಿನಿಮಾಗಳ ಭರಾಟೆಯಲ್ಲಿ ಸಿದ್ಧಸೂತ್ರಗಳ ಅಬ್ಬರ ಅನೂಚಾನವಾಗಿ ಮುಂದುವರೆಯುತ್ತಿದೆ. ಹಾಗಾದರೆ, ಪ್ಯಾನಿಂಡಿಯಾ ಸಿನಿಮಾಗಳಿಂದ ಮಾತ್ರವೇ ಕನ್ನಡ ಚಿತ್ರರಂಗ ಬರಖತ್ತಾಗಲು ಸಾಧ್ಯವಾ ಅಂತೊಂದು ಪ್ರಶ್ನೆಗೆ ಉತ್ತರವಾಗಿ ನಿಲ್ಲೋದು ಪ್ರಯೋಗಾತ್ಮಕ, ಹೊಸಾ ಅಲೆ ಮತ್ತು ಸಮಾಜಮುಖಿ ಕಥಾ ಹಂದರದ ತುರ್ತು. ಸಹನೀಯ ಅಂಶವೆಂದರೆ, ಒಂದು ದಿಕ್ಕಿನಿಂದ ಒಂದು ಪ್ರಾಕಾರದ ಸಿನಿಮಾಗಳ ಗೌಜು ಜೋರಾಗಿರುವಾಗಲೇ, ಒಂದಷ್ಟು ಕ್ರಿಯಾಶೀಲ ಮನಸುಗಳು ಹೊಸತೇನನ್ನೋ ಸೃಷ್ಟಿಸುವ ಧ್ಯಾನಕ್ಕೆ ವಶವಾಗಿವೆ. ಅಂಥಾದ್ದೊಂದು ತುಡಿತದ ಮೂಲಕವೇ `ದಾರಿ ಯಾವುದಯ್ಯಾ ವೈಕುಂಠಕ್ಕೆ’ ಥರದ ಒಂದಷ್ಟು ಚೆಂದದ ಸಿನಿಮಾಗಳನ್ನು ಸೃಷ್ಟಿಸಿರುವವರು (director siddu poornachandra) ನಿರ್ದೇಶಕ ಸಿದ್ದು ಪೂರ್ಣಚಂದ್ರ. ಇದೀಗ ಅವರ ಸಾರಥ್ಯದಲ್ಲಿಯೇ `ಈ ಪಾದ ಪುಣ್ಯ ಪಾದ’ ಎಂಬ ಸಿನಿಮಾವೊಂದು ರೂಪುಗೊಂಡಿದೆ. ಅದರ ಮೊದಲ ಪೋಸ್ಟರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಬಿಡುಗಡೆಗೊಳಿಸಿದ್ದಾರೆ.

ಬಘೀರ ಚಿತ್ರದ ಗೆಲುವಿನ ಖುಷಿ ಹಾಗೂ ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ಶ್ರೀಮುರುಳಿ ಪ್ರೀತಿಯಿಂದ ಈ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ, ಈ ಪಾದ ಪುಣ್ಯ ಪಾದದ ಮೂಲಕ ನಾಯಕ ನಟನಾಗಿರೋ ಆಟೋ ನಾಗರಾಜ್ ಅವರಿಗೆ ಶುಭ ಕೋರಿದ್ದಾರೆ. ಸಿದ್ದು ಪೂರ್ಣಚಂದ್ರ ಅವರ ನಿರ್ದೇಶನದ ಕಸುವಿನ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಲೇ ಒಂದಿಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಒಟ್ಟಾರೆ ಸಿನಿಮಾ ಬಗ್ಗೆ ಭರವಸೆಯ ಮಾತುಗಳನ್ನಾಡಿರುವ ಶ್ರೀಮುರುಳಿ, ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಶ್ರೀಮುರುಳಿಯವರ ಸಕಾರಾತ್ಮಕ ಮಾತುಗಳು ಬಿಡುಗಡೆಯತ್ತ ಕಣ್ಣಿಟ್ಟು ನಿಂತಿರುವ ಚಿತ್ರತಂಡಕ್ಕೆ ಹೊಸಾ ಹುರುಪು ತುಂಬಿವೆ.

ಸಿದ್ದು ಪೂರ್ಣಚಂದ್ರ ಇದುವರೆಗೂ ಸಿದ್ಧಸೂತ್ರಗಳಾಚೆಯ ದೃಷ್ಯಕಾವ್ಯಗಳ ಮೂಲಕ ಗಮನ ಸೆಳೆದಿರುವವರು. ಈ ಕಾರಣದಿಂದಲೇ ಈ ಪಾದ ಪುಣ್ಯ ಪಾದ ಚಿತ್ರದ ಬಗ್ಗೆ ವ್ಯಾಪಕವಾಗಿ ಕುತೂಹಲ ಮೂಡಿಕೊಂಡಿದೆ. ಈಗ ಬಿಡುಗಡೆಗೊಂಡಿರುವ ಪೋಸ್ಟರಿನಲ್ಲಂತೂ ಸಕಾರಾತ್ಮಕ ಭಾವ ಜಿನುಗಿದಂತೆ ಭಾಸವಾಗುತ್ತಿದೆ. ಅಂದಹಾಗೆ, ಇದು ಆನೆಕಾಲು ರೂಗ ಪೀಡಿತ ವ್ಯಕ್ತಿಯೋರ್ವನ ಸುತ್ತಾ ಸುತ್ತುವ ಕಥೆ ಹೊಂದಿರುವ ಸಿನಿಮಾ. ಇಂಥಾದ್ದೆಲ್ಲ ಮಾಮೂಲು ಕಾಯಿಲೆಯಂತೆ ಕಂಡರೂ, ಅದಕ್ಕೀಡಾದ ವ್ಯಯಕ್ತಿಯ ಮನೋವ್ಯಾಕುಲಗಳು ಅಂದಾಜಿಗೆ ನಿಲುಕುವಂಥವಲ್ಲ. ವರ್ಷಗಟ್ಟಲೆ ಅಧ್ಯಯನ ನಡೆಸಿ ಸಿದ್ದು ಪೂರ್ಣಚಂದ್ರ ಈ ಕಥೆಯನ್ನು ಸಿದ್ಧಗೊಳಿಸಿದ್ದಾರೆ. ಇಂತಾ ಕಾಯಿಲೆಗೀಡಾದವರನ್ನು ಹೇಗೆಲ್ಲ ನೋಡಿಕೊಳ್ಳಬೇಕೆಂಬ ಸಂದೇಶದೊಂದಿಗೆ ಸದರಿ ಸಿನಿಮಾವನ್ನು ಸಮಾಜಮುಖಿಯಾಗಿ, ಎಲ್ಲ ವರ್ಗದ ಪ್ರೇಕ್ಷಕರಿಗೂ ಒಗ್ಗುವಂತೆ ಕಟ್ಟಿಕೊಟ್ಟಿರುವ ತುಂಬು ಖುಷಿ ನಿರ್ದೇಶಕರಲ್ಲಿದೆ.

ವಿಶೇಷವೆಂದರೆ, ಆಟೋ ನಾಗರಾಜ್ ಅತ್ಯಯಪರೂಪದ ಪಾತ್ರದ ಮೂಲಕ ಈ ಸಿನಿಮಾದ ನಾಯಕರಾಗಿದ್ದಾರೆ. ಇದುವರೆಗೂ 850ಕ್ಕೂ ಹೆಚ್ಚು ಸಿನಿಮಾಗಳ ಪ್ರಚಾರಕರ್ತರಾಗಿ ಕೆಲಸ ಮಾಡಿರುವ ಆಟೋ ನಾಗರಾಜ್ ಸಿನಿಮಾ ರಂಗದ ಮಂದಿಗೆಲ್ಲ ಅಚ್ಚುಮೆಚ್ಚಾಗಿರುವವರು. ನಟರು, ನಿರ್ದೇಶಕರು, ತಂತ್ರಜ್ಞರಿಗೆಲ್ಲ ಅತ್ಯಾಪ್ತರಾಗಿರುವವರು ಆಟೋ ನಾಗರಾಜ್. ಅಗಾಧ ಸಿನಿಮಾ ವ್ಯಾಮೋಹ ಹೊಂದಿರುವ ನಾಗರಾಜ್, ಓರ್ವ ನಟನಾಗಿ ಹಂತ ಹಂತವಾಗಿ ಸಾಗಿ ಬಂದಿದ್ದಾರೆ. ಸಾಮಾನ್ಯಯವಾಗಿ ಸಿದ್ದು ಪೂರ್ಣಚಂದ್ರ ನಿರ್ದೇಶನದ ಸಿನಿಮಾದಲ್ಲಿ ಪಾತ್ರವೊಂದು ಸಿಕ್ಕರೆ ಸಾಕೆಂಬ ಹಂಬಲ ಕಲಾವಿದರಲ್ಲಿದೆ. ಅಂಥಾದ್ದರಲ್ಲಿ ಸಿದ್ದು ಈ ಸಿನಿಮಾ ನಾಯಕನಾಗಿ ಆಟೋ ನಾಗರಾಜ್ ಅವರನ್ನೇ ಆಯ್ಕೆ ಮಾಡಿದ್ದಾರೆಂಬುದೇ ಎಲ್ಲವನ್ನೂ ಧ್ವನಿಸುತ್ತದೆ. ಇದರೊಂದಿಗೆ ನಟನಾಗಿ ಆಟೋ ನಾಗರಾಜ್ ಸಾರ್ಥಕ್ಯದ ಘಟ್ಟವೊಂದನ್ನು ತಲುಪಿಕೊಂಡಿದ್ದಾರೆ.

ರಶ್ಮಿ, ಚೈತ್ರ, ಪ್ರಮೀಳಾ ಸುಬ್ರಹ್ಮಣ್ಯ, ಮನೋಜ್, ಹರೀಶ್ ಕುಂದೂರು, ಬೇಬಿ ರಿದಿ, ಪವಿತ್ರ, ಬಾಲರಾಜ್ ವಾಡಿ, ರೋಹಿಣಿ, ಶಂಕರ್ ಭಟ್, ಪ್ರೀತಿ, ಮೀಸೆ ಮೂರ್ತಿ ಇನ್ನೂ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಅನಂತ ಆರ್ಯನ್ ರವರು ನೀಡಿದ್ದಾರೆ. ಕಲೆ ಬಸವರಾಜ್ ಆಚಾರ್, ವಸ್ತ್ರಲಂಕಾರ ನಾಗರತ್ನ ಕೆ ಎಚ್, ಶಬ್ಧವಿನ್ಯಾಸ ಶ್ರೀರಾಮ್, ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಕಲರಿಂಗ್ ಗಗನ್ ಆರ್, ಸಂಕಲನ ದೀಪು ಸಿ ಎಸ್ ನಿರ್ವಹಿಸಿದ್ದಾರೆ. ಈ ಚಿತ್ರ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ಪಡೆದಿದೆ. ಈ ಚಿತ್ರವು ಹಲವಾರು ಚಲನಚಿತ್ರೋತ್ಸವಗಳಿಗೆ ಸ್ಪರ್ಧಿಸಲು ರೆಡಿಯಾಗಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!