ಯಾವ ಸೂಪರ್ ಸ್ಟಾರ್ ಆದರೂ ಕೂಡಾ ಆಯಾ ಕಾಲಮಾನಕ್ಕೆ ತಕ್ಕುದಾಗಿ ತನ್ನನ್ನು ತಾನು ಒಗ್ಗಿಸಿಕೊಳ್ಳದಿದ್ದರೆ, ಅಗತ್ಯಕ್ಕೆ ತಕ್ಕುದಾದ ರೂಪಾಂತರ ಹೊಂದದೇ ಹೋದರೆ ನೇಪಥ್ಯಕ್ಕೆ ಸರಿದು ಬಿಡಬೇಕಾಗುತ್ತದೆ. ಹಾಗೊಂದು ಸೂಕ್ಷ್ಮತೆ ಗೊತ್ತಿಲ್ಲದ ಅನೇಕ ನಟರು ಅರ್ಧ ದಾರಿಯಿಂದಲೇ ಮರೆಯಾದ ಅದೆಷ್ಟೋ ಉದಾಹರಣೆಗಳಿದ್ದಾವೆ. ಆದರೆ, ಒಂದು ಘಟ್ಟದಲ್ಲಿ ತನ್ನ ಸಿನಿಮಾವನ್ನು ತಾನೇ ನಿರ್ದೇಶನ ಮಾಡಿ ಗೆದ್ದು ತೋರಿಸ ಹೊರಡೋದಿದೆಯಲಗಲಾ? ಅದು ನಿಜಕ್ಕೂ ಸಾಹಸ. ಅಂಥಾದ್ದನ್ನು ಮೈಮೇಲೆಳೆದುಕೊಂಡು ಹೀರೋಗಳ ಸಂಖ್ಯೆ ತೀರಾ ಕಡಿಮೆ ಇದೆ. ಆ ಸಾಲಿನಲ್ಲಿ ಸೇರ್ಪಡೆಗೊಂಡು, ಗೆಲುವು ದಕ್ಕಿಸಿಕೊಂಡಿರುವವರು ದುನಿಯಾ ವಿಜಯ್. ಅವರೀಗ ಬೇರೊಬ್ಬರ ನಿರ್ದೇಶನದಲ್ಲಿ ಲ್ಯಾಂಡ್ ಲಾರ್ಡ್ ಆಗಿ ಅಬ್ಬರಿಸಲು ಅಣಿಗೊಂಡಿದ್ದಾರೆ.
ಇತ್ತೀಚೆಗಷ್ಟೇ ಲ್ಯಾಂಡ್ ಲಾರ್ಡ್ ಚಿತ್ರದ ಮೋಷನ್ ಪೋಸ್ಟರ್ ಒಂದು ಬಿಡುಗಡೆಗೊಂಡಿದೆ. ಆ ಮೂಲಕವೇ ದುನಿಯಾ ವಿಜಯ್ ಹೊಸಾ ಹೆಜ್ಜೆಯ ಸುತ್ತಾ ಅಭಿಮಾನದಾಚೆಗೂ ಸಕಾರಾತ್ಮಕ ವಾತಾವರಣ ಹಬ್ಬಿಕೊಂಡಿದೆ. ಅಷ್ಟಕ್ಕೂ ಲ್ಯಾಂಡ್ ಲಾರ್ಡ್ ಸಿನಿಮಾ ಘೋಶಣೆಯಾದ ಕ್ಷಣದಿಂದಲೇ ಆ ಬಗ್ಗೆ ಸಿನಿಮಾಸಕ್ತರಲ್ಲೊಂದು ಕುತೂಹಲ ಇದ್ದೇ ಇತ್ತು. ಯಾಕೆಂದರೆ, ಆಎರಂಭದಲ್ಲಿಯೇ ಒಂದೊಳ್ಳೆ ತಂಡ ಈ ಮೂಲಕ ಒಂದುಗೂಡಿರುವ ಸ್ಪಷ್ಟ ಸೂಚನೆ ಸಿಕ್ಕಿಬಿಟ್ಟಿತ್ತು. ದರ್ಶನ್ ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರ ಕಾಟೇರಕ್ಕೆ ಕಥೆ ಬರೆದಿದ್ದ ಜಡೇಶ್ ಕುಮಾರ್ ಹಂಪಿ ಈ ಸಿನಿಮಾ ನಿರ್ದೇಶನದ ಸಾರಥ್ಯ ವಹಿಸಿಕೊಂಡಿದ್ದಾರೆ. ಇದೂ ಕೂಡಾ ಲ್ಯಾಂಡ್ ಲಾರ್ಡ್ ಆಕರ್ಷಣೆಗಳಲ್ಲೊಂದಾಗಿ ದಾಖಲಾಗಿದೆ.
ನಾಯಕ ನಟನಾಗಿ ಆರಂಭದ ಚಿತ್ರದಲ್ಲಿಯೇ ಗೆದ್ದಿದ್ದವರು ದುನಿಯಾ ವಿಜಯ್. ಆದರೆ, ಆ ನಂತರದಲ್ಲಿ ಒಂದಷ್ಟು ಸೋಲುಗಳು ಎದುರುಗೊಂಡಿದ್ದವು. ಬರ ಬರುತ್ತಾ ಇನ್ನೇನು ವಿಜಯ್ ಜಮಾನ ಮುಗಿದೇ ಹೋಯ್ತೆಂಬಂಥಾ ಪರಿಸ್ಥಿತಿಯೂ ನಿರ್ಮಾಣಗೊಂಡಿತ್ತು. ಇಂಥಾ ಸಂದಿಗ್ಧ ಸ್ಥಿತಿಯಲ್ಲಿ ವಿಜಯ್ ನಿರ್ದೇಶನ ಮಾಡಲು ಮುಂದಾದಾಗ ಆ ಕ್ಷಣಕ್ಕದು ದುಸ್ಸಾಹಸವಾಗಿಯೇ ಕಂಡಿದ್ದರಲ್ಲಿ ಅಚ್ಚರಿಯೇನಿಲ್ಲ. ಹಾಗೆ ವಿಜಯ್ ನಿರ್ದೇಶನ ಮಾಡಿ ನಟಿಸಿದ್ದ ಸಲಗ ಮತ್ತು ಭೀಮ ಚಿತ್ರಗಳು ಹಿಟ್ ಆಗಿದ್ದವು. ಇದೀಗ ನಿರ್ದೇಶನದ ಜವಾಬ್ದಾರಿಯನ್ನು ವಿಜಯ್ ಜಡೇಶ್ ಕುಮಾರ್‌ಗೆ ವರ್ಗಾಯಿಸಿದ್ದಾರೆ. ಇದೂ ಕೂಡಾ ಪಕ್ಕಾ ಮಾಸ್ ಪ್ಯಾಕೇಜಿನಂತೆ ಮೂಡಿಬರುವ ನಂಬಿಕೆಯೂ ಗಟ್ಟಿಯಾಗಿದೆಡೇಶ್ ಕುಮಾರ್ ಹಂಪಿ ಇಲ್ಲಿಯೂ ಕೂಡಾ ನೆಲಮೂಲದ ಕಥೆಯನ್ನು ಕೈಗೆತ್ತಿಕೊಂಡು ಮತ್ತೆ ಮ್ಯಾಜಿಕ್ ಸೃಷ್ಟಿಸಲಿದ್ದಾರಾ? ಈ ಪ್ರಶ್ನೆಗೆ ಇಷ್ಟರಲ್ಲಿಯೇ ಉತ್ತರ ಸಿಗಲಿದೆ.