ಸಿನಿಮಾಗಳಲ್ಲಿ ಅನ್ಯಾಯದ ವಿರುದ್ಧ ಎದೆ ಸೆಟೆಸಿ, ಸಿಕ್ಸ್ ಪ್ಯಾಕು ಪ್ರದರ್ಶಿಸುತ್ತಾ ಹೀರೋಗಳಾಗಿ ಮೆರೆಯುವವರಿಗೇನೂ ಬರವಿಲ್ಲ. ಇಂಥಾದ್ದರ ಮೂಲಕ ಭ್ರಮೆ ಬಿತ್ತುತ್ತಲೇ, ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಅನೇಕರಿಗೆ ಸಾಮಾಜಿಕ ಸ್ಥಿತ್ಯಂತರಗಳಿಗೆ ಸ್ಪಂದಿಸುವ ಕಾಳಜಿ ಇರೋದಿಲ್ಲ. ನೂರಾರು ಮಂದಿಯನ್ನು ಕೊಚ್ಚಿ ಬಿಸಾಡುವವರಿಗೆ ಒಬ್ಬನೇ ಒಬ್ಬ ಪ್ರಭಾವಿಯ ವಿರುದ್ಧ, ಸತ್ಯದ ಪರವಾಗಿ ಮಾತಾಡುವ ಗಂಡಸುತನವೂ ಮಾಯವಾಗಿ ಬಿಟ್ಟಿರುತ್ತದೆ. ಕನ್ನಡ ಚಿತ್ರರಂಗವೂ ಕೂಡಾ ಇಂಥಾದ್ದಕ್ಕೆ ಹೊರತಾಗಿಲ್ಲ. ಇಂಥಾ ವಾತಾವರಣದಲ್ಲಿದ್ದರೂ ಕೂಡಾ (dunia vijay)  ದುನಿಯಾ ವಿಜಯ್ ಇದೀಗ ಗಟ್ಟಿ ನಿಲುವೊಂದನ್ನು ತಳೆದಿದ್ದಾರೆ. ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೀಡಾಗಿ, ಭೀಕರವಾಗಿ ಕೊಲೆಯಾಗಿದ್ದ ಸೌಜನ್ಯಾ ಪರವಾಗಿ ಧ್ವನಿಯೆತ್ತಿದ್ದಾರೆ!

ಈಗ್ಗೆ ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದ ನೇತ್ರಾವತಿ ನದಿಯ ತಟದಲ್ಲಿ ಭೀಕರವಾಗಿ ಹತಳಾಗಿದ್ದ ಹುಡುಗಿ ಸೌಜನ್ಯ. ಅದ್ಯಾರೋ ಹಿಡಿದು ಕೊಟ್ಟಿದ್ದ ಸಂತೋಷ್ ರಾವ್ ಎಂಬಾತನನ್ನು ಈ ಪ್ರಕರಣದಲ್ಲಿ ಫಿಕ್ಸ್ ಮಾಡಲಾಗಿತ್ತು. ಇದೀಗ ಸಿಬಿಐ ಕೋರ್ಟ್ ಆತನನ್ನು ಖುಲಾಸೆಗೊಳಿಸಿದೆ. ಈ ನಿಟ್ಟಿನಲ್ಲಿ ನಿಜವಾದ ಅತ್ಯಾಚಾರಿಗಳು, ಹಂತಕರ್‍ಯಾರೆಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅದೀಗ ದೊಡ್ಡ ಮಟ್ಟದ ಹೋರಾಟವಾಗಿ ರೂಪುಗೊಂಡಿದೆ. ದಕ್ಷಿಣ ಕನ್ನಡ ಸೀಮೆಯಲ್ಲಿ ಹುಟ್ಟಿಕೊಂಡಿದ್ದ ಹೋರಾಟದ ಕಿಚ್ಚೀಗ ಗಟ್ಟವೇರಿ ಬಂದು, ಕರ್ನಾಟಕದ ತುಂಬೆಲ್ಲ ಹಬ್ಬಿಕೊಂಡಿದೆ. ಇಷ್ಟಾದರೂ ಜನರ ಕಾಸಿಂದ ಕೊಬ್ಬಿದ ಒಬ್ಬನೇ ಒಬ್ಬ ಹೀರೋ ಸೌಜನ್ಯ ವಿಚಾರದಲ್ಲಿ ತುಟಿಬಿಚ್ಚಿಲ್ಲ. ಇಂಥಾ ವಾತಾವರಣದಲ್ಲೀಗ ದುನಿಯಾ ವಿಜಯ್ ಸೌಜನ್ಯಪರವಾಗಿ ಸೋಶಿಯಲ್ ಮೀಡಿಯಾ ಮೂಲಕ ಮಿಡಿದಿದ್ದಾರೆ.

`ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ’ ಎಂಬ ನೇರ ನಿಷ್ಟುರವಾದ ನಿಲುವನ್ನು ವಿಜಯ್ ಪ್ರಕಟಿಸಿದ್ದಾರೆ. ಅದರ ಜೊತೆಗೇ, `ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು’ ಎಂಬ ಬುದ್ಧನ ನುಡಿಯನ್ನೂ ಉಲ್ಲೇಖಿಸಿದ್ದಾರೆ. ದುನಿಯಾ ವಿಜಯ್ ತಳೆದಿರುವ ಈ ನಿಲುವಿಗೆ ವ್ಯಾಪಕ ಮೆಚ್ಚುಗೆಗಳೂ ವ್ಯಕ್ತವಾಗುತ್ತಿವೆ. ಜನ ಕಷ್ಟಪಟ್ಟು ದುಡಿದ ಕಾಸಿನಲ್ಲಿ ನಿಮ್ಮ ಸಿನಿಮಾ ನೋಡಿದ್ದಕ್ಕೂ ಆರ್ಥಕವಾಯ್ತೆಂಬಂತೆ ಅನೇಕರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅಂತೂ ವಿಜಯ್ ಬೆಂಬಲ ಜಸ್ಟೀಸ್ ಫಾರ್ ಸೌಜನ್ಯ ಎಂಬ ಹೋರಾಟಕ್ಕೆ ಒಂದಷ್ಟು ಕಸುವು ತುಂಬಿರೋದಂತೂ ಸತ್ಯ.

ಅದಾಗತಾನೇ ಪ್ರಥಮ ಪಿಯುಸಿ ಓದುತ್ತಿದ್ದ ಹದಿನೇಳರ ಹುಡುಗಿ ಸೌಜನ್ಯ. ಕಾಲೇಜಿಗೆ ಹೋಗಿ ಮನೆಗೆ ಮರಳುವ ಹಾದಿಯಲ್ಲೇ ದುರುಳರು ಆಕೆಯನ್ನು ಅತ್ಯಾಚಾರವೆಸಗಿ, ಭೀಕರವಾಗಿ ಕೊಲೆ ಮಾಡಿದ್ದರು. ದೈವೀಕ ನೆಲೆಯಲ್ಲಿ ರಾಜ್ಯಾದ್ಯಂತ ಭಕ್ತ ಗಣವನ್ನು ಹೊಂದಿರುವ, ಶ್ರದ್ಧಾ ಭಕ್ತಿಗೆ ಪಾತ್ರವಾಗಿರುವ ಕ್ಷೇತ್ರ ಧರ್ಮಸ್ಥಳ. ಊರಿಗೆಲ್ಲ ನ್ಯಾಯ ಒದಗಿಸೋ ಮಂಜುನಾಥನ ಸನ್ನಿಧಿಯಲ್ಲಿಯೇ ಇಂಥಾ ಘಟನೆ ನಡೆದರೆ, ಜನ ಅವಾಕ್ಕಾಗದಿರಲು ಸಾಧ್ಯವೇ? ಈ ಹಂತದಲ್ಲಿ ಅದ್ಯಾರೋ ಸಂತೋಷ್ ರಾವ್ ಎಂಬ ಪಾಪದ ಆಸಾಮಿಯನ್ನು ಈ ಕೇಸಿನಲ್ಲಿ ಫಿಟ್ ಮಾಡಲಾಗಿತ್ತು. ಹನ್ನೊಂದು ವರ್ಷಗಳ ರೌರವ ನರಕದ ನಂತರ ಕಡೆಗೂ ಆತನಿಗೆ ಮುಕ್ತಿ ಸಿಕ್ಕಿದೆ.

ಯಾವಾಗ ಈ ಕೇಸಿನಲ್ಲಿ ಸಂತೋಷ್ ರಾವ್‌ನನ್ನು ಬಲಿಪೀಠಕ್ಕೆ ಕರೆತರಲಾಯ್ತೋ, ಆ ಕ್ಷಣವೇ ಸೌಜನ್ಯಾಳನ್ನು ಹೆತ್ತವರು, ಹೋರಾಟಗಾರರು ಆತ ಆರೋಪಿ ಅಲ್ಲ ಅಂತ ನಿಖರವಾಗಿ ಹೇಳಿದ್ದರು. ಅವರೆಲ್ಲರ ನೇರ ಆರೋಪ ಅಚ್ಚ ಬಿಳುಪಿನ ಕಚ್ಚೆಪಂಚೆಯಲ್ಲಿ ಕಂಗೊಳಿಸುವ ಧರ್ಮಸ್ಥಳದ ಧರ್ಮಾಧಿಕಾರಿಯ ಸುತ್ತಲಿರುವವರ ಮೇಲಿತ್ತು. ಹನ್ನೊಂದು ವರ್ಷಗಳ ನಂತರ ಇದೀಗ ಮತ್ತೊಮ್ಮೆ ಆ ಪಟಾಲಮ್ಮು ಆರೋಪದ ಈಟಿಗೆ ಎದೆಕೊಡಬೇಕಾಗಿ ಬಂದಿದೆ. ದುರಂತವೆಂದರೆ, ಕೆಲ ಮಂದಿಗೆ ಸೌಜನ್ಯಾ ಎಂಬ ಪುಟ್ಟ ಹುಡುಗಿಯ ದಾರುಣ ಪ್ರಕರಣಕ್ಕೆ ನ್ಯಾಯ ಸಿಗಬೇಕೆಂಬುದಕ್ಕಿಂತ, ಧರ್ಮಸ್ಥಳದ ಘನgತೆಗೆ ಕುಂದುಂಟಾಗುತ್ತಿದೆ ಎಂಬುದೇ ದೊಡ್ಡ ತಲೆ ನೋವಾಗಿದೆ. ಈ ಸಂಬಂಧವಾಗಿ ಶುಭ್ರ ಪಂಚೆಯ ಫಟಿಂಗ ಪಡೆಯ ಪರವಾಗಿ ವಕಾಲತ್ತು ವಹಿಸುತ್ತಾ, ಸೌಜನ್ಯಾ ಪ್ರಕರಣದ ದಿಕ್ಕು ಬದಲಿಸುವ ಹುನ್ನಾರವೊಂದು ಚಾಲ್ತಿಯಲ್ಲಿದೆ.

ಅಷ್ಟಕ್ಕೂ ಇಲ್ಲಿ ಹೋರಾಟಕ್ಕಿಳಿದಿರುವವರೆಲ್ಲ ಸೌಜನ್ಯಾ ಅತ್ಯಾಚಾರ ಆರೋಪಿಗಳನ್ನು ಶಿಕ್ಷೆಗೊಳಪಡಿಸುವಂತೆ ಆರೋಪಿಸುತ್ತಿದ್ದಾರಷ್ಟೇ. ಆರಂಭಿಕವಾಗಿ ಹೋರಾಟಗಾರರು ಮತ್ತು ಸೌಜನ್ಯಾ ಹೆತ್ತವರು ಧರ್ಮಸ್ಥಳದ ಅಂತಃಪುರದತ್ತ ಬೊಟ್ಟು ಮಾಡಿದ್ದರಲ್ಲಾ? ಆ ಕಾರಣದಿಂದಷ್ಟೇ ಅವರನ್ನು ಹೋರಾಟಗಾರರು ಟಾರ್ಗೆಟ್ ಡುತ್ತಿದ್ದಾರೆ. ಅದು ಸಹಜವೂ ಹೌದು. ಈ ವಿಚಾರದಲ್ಲಿ ಯಾವ ತೋಲಾಂಡಿಗಳೇ ಆಗಿದ್ದರೂ ವಿಚಾರಣೆ ಎದುರಿಸಲೇ ಬೇಕು. ರಕ್ಕಸ ಆರೋಪಿಗಳು ಅದೆಂಥಾ ಪ್ರಭಾವಿಗಳಾದರೂ ಕಾನೂನಿನ ಕುಣಿಕೆಗೆ ಕೊರಳೊಡ್ಡಲೇ ಬೇಕು. ಒಂದು ವೇಳೆ ಇಂಥಾ ರಕ್ಕಸ ಪಡೆ ಮಂಜುನಾಥನ ಪ್ರಭೆಯಲ್ಲಿಯೇ ಇದ್ದಾರಾದರೆ, ನಿಜವಾದ ಆರೋಪಿಗಳು ಬಚಾವಾದರೆ ಖಂಡಿತವಾಗಿಯೂ ಆತ ದೇವರಾಗಲು ಸಾಧ್ಯವಿಲ್ಲ. ಆ ಕ್ಷೇತ್ರ ಧರ್ಮ ಕ್ಷೇತ್ರ ಅನ್ನಿಸಿಕೊಳ್ಳುವುದೂ ಇಲ್ಲ. ಇದೀಗ ದುನಿಯಾ ವಿಜಿ, ಸೌಜನ್ಯಾಗೆ ನ್ಯಾಯ ಸಿಗೋವರೆಗೂ ಧರ್ಮಸ್ಥಳಕ್ಕೆ ಹೋಗೋದಿಲ್ಲ ಎಂಬಂಥಾ ನಿಲುವಿಗೆ ಬಂದಿರೋದು ಸಮಯೋಚಿತ. ಈ ನೆಲದ ಪ್ರಜ್ಞಾವಂತರನೇಕರು ಈಗಾಗಲೇ ಆ ನಿಲುವು ತಳೆದಾಗಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!