ದೇನು ದುರಂತವೋ ಗೊತ್ತಿಲ್ಲ; ಕನ್ನಡ ಚಿತ್ರರಂಗದಲ್ಲಿ ಪ್ರಖರವಾಗಿ ಮಿಂಚಬಹುದಿದ್ದ ಅನೇಕರು ಏಕಾಏಕಿ ಮೂಲೆ ಸೇರಿ ಬಿಡುತ್ತಾರೆ. ಸಲೀಸಾಗಿ ನಟ ನಟಿಯರಾಗಿ ನೆಲೆ ಕಂಡುಕೊಳ್ಳೋ ಛಾತಿ ಇದ್ದವರೂ ಕೂಡಾ ನಾನಾ ಕಿಸುರುಗಳಿಂದ, ವೃತ್ತಿ ಬದುಕಿನ ಹಾದಿಯನ್ನು ಕೆಸರು ಮಾಡಿಕೊಳ್ಳುತ್ತಾರೆ. ಅಂಥವರ ಸಾಲಿನಲ್ಲಿಅನೇಕರಿದ್ದಾರಾದರೂ, ಸದ್ಯದ ಮಟ್ಟಿಗೆ ಪ್ರಸ್ತುತ ಅನ್ನಿಸೋದು ದೂದ್‍ಪೇಡ ದಿಗಂತನ ಹೆಸರು. ತೀರ್ಥಹಳ್ಳಿಯ ಹುಡುಗದಿಗಂತನಿಗೆ ನಾಯಕನಾಗಿ ನೆಲೆಗೊಳ್ಳುವ ಎಲ್ಲ ಅವಕಾಶಗಳಿದ್ದವು. ದುರಂತವೆಂದರೆ, ನಟನೆಗಿಂತಲೂ ನಿದ್ದೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದ ದಿಗಂತ ಬಹುಬೇಗನೆ ಸವಕಲಾಗಿ ಬಿಟ್ಟಿದ್ದ. ಆಗಾಗ ಕತ್ತು ಮುರಿದುಕೊಂಡು, ಕಣ್ಣಿಗೆ ಏಟು ಮಾಡಿಕೊಳ್ಳುವಂಥಾ ಯಡವಟ್ಟುಗಳ ಮೂಲಕ ಚಾಲ್ತಿಯಲ್ಲಿದ್ದ ದಿಗಂತನೀಗ ಎಡಗೈ ಪುರಾಣದ ಮೂಲಕ ಮತ್ತೆ ಹಾಜರಾಗಿದ್ದಾನೆ!


ಮಿಸ್ ಕ್ಯಾಲಿಫೋರ್ನಿಯಾ ಚಿತ್ರದ ಮೂಲಕ 2006ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದಿಗಂತ್, ಆ ಘಳಿಗೆಯಲ್ಲಿಯೇ ಅಪಾರ ಪ್ರಮಾಣದಲ್ಲಿ ಭರವಸೆ ಮೂಡಿಸಿದ್ದ. ನಟನಾಗಲು ಬೇಕಾದ ಎಲ್ಲ ಅರ್ಹತೆಗಳೂ ಇದ್ದಂತಿದ್ದ ಈತ ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲುತ್ತಾನೆಂಬಂಥಾ ನಂಬಿಕೆಯೂ ಮೊಳೆತುಕೊಂಡಿದ್ದದ್ದು ಸುಳ್ಳಲ್ಲ. ಆದರೆ, ಬರ ಬರುತ್ತಾ ಚುರುಕುತನವನ್ನು ಧಾಡಸೀ ಮನೋಭಾವದ ಕೈಗೊಪ್ಪಿಸಿದಂತಾಡಿದ ದಿಗಂತ್, ಇಷ್ಟವಾದಷ್ಟೇ ಬೇಗನೆ ರೇಜಿಗೆ ಹುಟ್ಟಿಸಲಾರಂಭಿಸಿದ್ದ. ಯಾವ ಸಿನಿಮಾದಲ್ಲಿ ನಟಿಸಿದರೂ ಒಂದೇ ತೆರನಾದ ಪಾತ್ರ, ನಟನೆಯ ಮೂಲಕ ಅಭಿಮಾನಿ ಬಳಗಕ್ಕೇ ಬೋರು ಹೊಡೆಸಲು ಶುರುವಿಟ್ಟುಕೊಂಡಿದ್ದ.


ಸಾಮಾನ್ಯವಾಗಿ, ಕಥೆ, ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಒಂದು ಅಸೀಮ ಶಿಸ್ತನ್ನು ರೂಢಿಸಿಕೊಳ್ಳದ ಯಾವ ನಟರೂ ಬರಖತ್ತಾದ ಉದಾಹರಣೆಗಳಿಲ್ಲ. ಅದು ಪ್ರತೀ ನಟ ನಟಿಯರಿಗೂ ಇರಲೇ ಬೇಕಾದ ಎಚ್ಚರ. ಆದರೆ, ಒಂದರ ಹಿಂದೊಂದರಂತೆ ಒಂದಷ್ಟು ಅವಕಾಶಗಳು ಸಿಗುತ್ತಲೇ ದಿಗಂತನ ಬುದ್ಧಿಗೆ ಅದೆಂಥಾದ್ದೋ ಭ್ರಾಂತು ಕವುಚಿಕೊಳ್ಳಲಾರಂಭಿಸಿತ್ತು. ಆತನ ಟ್ರೇಡ್ ಮಾರ್ಕಿನಂತಿದ್ದ ಅಶಿಸ್ತು ತಾಂಡವವಾಡಲಾರಂಭಿಸಿತ್ತು ಅನ್ನುವವರೂ ಇದ್ದಾರೆ. ಇಂಥಾ ಅವಲಕ್ಷಣಗಳಿರುವ ಕಡೆ ಅವಕಾಶಗಳು ಸುಳಿಯೋದು ಕಷ್ಟ. ಆದ್ದರಿಂದಲೇ, ಒಂದಷ್ಟು ಸಿನಿಮಾಗಳಾಚೆಗೂ ದಿಗಂತ ನಿರೀಕ್ಷಿತ ಮಟ್ಟಕ್ಕೆ ಬೆಳೆಯಲೇ ಇಲ್ಲ. ಕಡೇಗೆ ಐಂದ್ರಿತಾ ರೇಯನ್ನು ಮದುವೆಯಾಗಿ, ಲಕ್ಷಣವಾಗಿ ಸಂಸಾರ ಮಾಡಿಕೊಂಡಿದ್ದ ದಿಗಂತ್, ಆಗಾಗ ಸಿನಿಮಾಗಳಲ್ಲಿ ನಟಿಸಿದ್ದನಾದರೂ ಅವ್ಯಾವುವೂ ಹೇಳಿಕೊಳ್ಳುವ ಮಟ್ಟಕ್ಕೆ ಗೆಲುವು ದಾಖಲಿಸಲಿಲ್ಲ.


ಇಂಥಾ ದಿಗತ್ ಇದೀಗ ಅಪಘಾತಕ್ಕೆ ಎಡಗೈಯೇ ಕಾರಣ ಅಂತೊಂದು ಚಿತ್ರದ ಮೂಲಕ ಮತ್ತೆ ವಾಪಾಸಾಗಿದ್ದಾನೆ. ಈ ಹಿಂದೆ ಅಂಬಿ ನಿಂಗೆ ವಯಸಾಯ್ಸೋ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಗುರುದತ್ ಗಾಣಿಗ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಎಡಗೈ ಬಳಸುವವರ ಬದುಕಿನಲ್ಲಾಗುವ ಸೂಕ್ಷ್ಮ ಕಥಾನಕವನ್ನೊಳಗೊಂಡಿರುವ ಈ ಸಿನಿಮಾ ಬಗ್ಗೆ ಸದ್ಯಕ್ಕೆ ಒಂದಷ್ಟು ನಿರೀಕ್ಷೆಗಳಿವೆ. ಇದರಲ್ಲಿ ಭಿನ್ನವಾದೊಂದು ಪಾತ್ರದಲ್ಲಿ ದಿಗಂತ್ ನಟಿಸಿದ್ದಾನಂತೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಈ ಚಿತ್ರದ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಎಲ್ಲರೂ ಡಡ್ಬಿಂಗ್ ಮಾಡಿದರೂ ದಿಗಂತ ನಾಪತ್ತೆಯಾಗಿದ್ದಾನೆಂಬರ್ಥದಲ್ಲಿ ಚಿತ್ರ ತಂಡ ಪ್ರಚಾರ ನಡೆಸುತ್ತಿದೆ. ಅದೂ ಕೂಡಾ ಗಿಮಿಕ್ಕೆಂಬುದು ಎಂಥಾ ದಡ್ಡರಿಗೂ ಅರ್ಥವಾಗುತ್ತದೆ. ಇದೆಲ್ಲ ಏನೇ ಇರಲಿ; ದಿಗಂತ್ ಈ ಸಿನಿಮಾ ಮೂಲಕ ಮತ್ತೆ ಗೆಲ್ಲಲಿ. ಒಳ್ಳೊಳ್ಳೆ ಪಾತ್ರಗಳ ಮೂಲಕ ಕಾಲೂರಿ ನಿಲ್ಲುವಂತಾಗಲಿ…

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!