ಸೆಲೆಬ್ರಿಟಿಗಳೆನ್ನಿಸಿಕೊಂಡವರ ಖಾಸಗೀ ಬದುಕಿನಲ್ಲಿ ಸುಂಟರಗಾಳಿ ಏಳೋದು ಹೊಸದೇನಲ್ಲ. ಅಲ್ಲಿ ಪ್ರೀತಿ ಮೂಡಿ, ಮದುವೆಯಾಗೋದು ಎಷ್ಟು ಸಹಜವೋ, ಒಂದಷ್ಟು ಕಾಲದ ಬಳಿಕ ಪರಸ್ಪರ ಮುಖ ನೋಡಲೂ ಹೇಸಿಕೆಯಾದಂತೆ ಎದ್ದು ಹೊರಡೋದೂ ಕೂಡಾ ಅಷ್ಟೇ ಮಾಮೂಲು. ಸಿನಿಮಾ, ಕಿರುತೆರೆ ಸೇರಿದಂತೆ ನಾನಾ ಕ್ಷೇತ್ರದಲ್ಲಿ ಒಂದಷ್ಟು ಹೆಸರು ಮಾಡುವವರು, ಕಷ್ಟದ ಬದುಕನ್ನು ಕಂಡವರಾಗಿರುತ್ತಾರೆ. ಅಂಥಾ ಪಾತಳಿಯಿಂದ ಬಂದ ಪ್ರತಿಯೊಬ್ಬರೂ ಬಂಧಗಳನ್ನು ಜತನದಿಂದ ಕಾಯ್ದುಕೊಳ್ಳೋ ಗುಣ ಹೊಂದಿರುತ್ತಾರೆ. ಅಂಥವರೂ ಕೂಡಾ ಬಣ್ಣಗಳ ಸಾಂಗತ್ಯ ಸಿಕ್ಕ ನಂತರಯಾಕೆ ಬದಲಾಗುತ್ತಾರೆ? ಯಾಕೆ ಅವರ ಖಾಸಗೀ ಬದುಕಿನ ಅಡಿಪಾಯವೇ ಸಡಿಲಗೊಂಡು ಅದುರುತ್ತದೆ? ಯಾಕೆ ಮತ್ತೆಂದೂ ಹತ್ತಿರಾಗಲು ಸಾಧ್ಯವಿಲ್ಲ ಎಂಬಂತೆ ಗಂಡ ಹೆಂಡಿರೇದೂರಾಗುತ್ತಾರೆ? ಆ ಜಗತ್ತಿನಲ್ಲೇಕೆ ವಿಚ್ಛೇದನಗಳು ಮಾಮೂಲೆಂಬಂತಾಗಿದೆ…?

ಹೀಗೆ ಪ್ರಶ್ನೆಗಳ ಸರಮಾಲೆ ಏಳಲು ಕಾರಣವಾಗಿರೋದು ಇತ್ತೀಚೆಗೆ ಸಿನಿಮಾ, ಕಿರುತೆರೆ ಮತ್ತು ಮಾಧ್ಯಮ ರಂಗದಿಂದ ಹೊರಬರುತ್ತಿರೋ ಆಘಾತಕರ ಸುದ್ದಿಗಳು. ಅಷ್ಟಕ್ಕೂ ಇಲ್ಲಿ ಆಗಾಗ ವಿಚ್ಛೇದನ ಪ್ರಕರಣಗಳು ಜರುಗುತ್ತಲೇ ಇರುತ್ತವೆ. ಸಿನಿಮಾಗಳಲ್ಲಿ ಬಾಂಧವ್ಯದ ಐಕಾನುಗಳಂತೆ ಬಿಂಬಿಸಿಕೊಂಡ ನಟ ನಟಿಯರ ಬದುಕಲ್ಲೂ ವಿಚ್ಛೇದನದ ಬಿರುಗಾಳಿ ಎದ್ದಿದೆ. ಅದಕ್ಕೆ ಇತ್ತೀಚಿನ ಸೇರ್ಪಡೆಯಂತಿದ್ದಾಕೆ ನಿರೂಪಕಿ ಜಾನ್ಹವಿ ಕಾರ್ತಿಕ್. ಖಾಸಗಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿದ್ದುಕೊಂಡು, ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದವರು ಜಾನ್ಹವಿ. ಹೀಗೆ ಯಶಸ್ಸಿನ ಅಲೆಯಲ್ಲಿದ್ದ ಜಾನ್ಹವಿ ಇತ್ತೀಚೆಗಷ್ಟೇ ತನ್ನ ಪತಿಯಿಂದ ದೂರಾಗೋ ನಿರ್ಧಾರ ಪ್ರಕಟಿಸುವ ಮೂಲಕ ಶಾಕ್ ಕೊಟ್ಟಿದ್ದರು.

ಪ್ರೇಕ್ಷಕರು ಅದನ್ನು ಅರಗಿಸಿಕೊಳ್ಳುವ ಮುನ್ನವೇ ಮತ್ತೋರ್ವ ಪ್ರತಿಭಾನ್ವಿತ ನಿರೂಪಕಿ ಚೈತ್ರಾ ವಾಸುದೇವನ್ ಕಡೆಯಿಂದೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಆಕೆಯೇ ಖುದ್ದಾಗಿ ಸೋಶಿಯಲ್ ಮೀಡಿಯಾ ಮೂಲಕ ತನ್ನ ಪತಿಯಿಂದ ದೂರಾಗೋ ವಿಚಾರವನ್ನ ಖಚಿತಪಡಿಸಿದ್ದಾರೆ. ಈ ಮೂಲಕ ಆರು ವರ್ಷಗಳ ದಾಂಪತ್ಯ ಜೀವನದಿಂದ ಚೈತ್ರಾ ಹೊರ ಬಂದಿದ್ದಾರೆ. ಗಮನಿಸಲೇ ಬೇಕಾದ ವಿಚಾರೆಂದರೆ, ಪರಸ್ಪರ ಪ್ರೀತಿಸುವ ಮೂಲಕವೇ ಚೈತ್ರಾ ಮತ್ತು ಸತ್ಯ ನಾಯ್ಡು ಮದುವೆಯಾಗಿದ್ದರು. ಒಂದಷ್ಟು ವರ್ಷಗಳ ನಂತರ ಎಲ್ಲವೂ ಸರಾಗವಾಗಿತ್ತಾದರೂ, ಚೈತ್ರಾ ಬಿಗ್‍ಬಾಸ್ ಮನೆಗೆ ಹೋಗಿ, ನಿರೂಪಕಿಯಾಗಿ ಬ್ಯುಸಿಯಾದ ನಂತರ ಖಾಸಗಿ ಬದುಕು ಛಿದ್ರಗೊಂಡಿತ್ತು.

ಹೀಗೆ ನಟಿಯರು, ನಿರೂಪಕಿಯರ ಖಾಸಗೀ ಜೀವನ ಕಂಪಿಸಿದಾಗೆಲ್ಲ, ಎಲ್ಲದಕ್ಕೂ ಆಕೆಯನ್ನೇ ಗುರಿ ಮಾಡುವ ಮನಃಸ್ಥಿತಿ ಈ ಸಮಾಜದಲ್ಲಿದೆ. ಇಂಥಾ ಸುದ್ದಿ ಕೇಳಿದಾಕ್ಷಣವೇ ಆಕೆಯ ನಡವಳಿಕೆಯ ಸುತ್ತ ಅನುಮಾನಗಳು ಮೂಡಿಕೊಳ್ಳುತ್ತವೆ. ಕ್ಯಾರೆಕ್ಟರಿನ ಬಗ್ಗೆ ರೂಮರುಗಳು ಹಬಿಕೊಳ್ಳುತ್ತವೆ. ಅನೈತಿ ಸಂಬಂಧದಂಥಾ ಕಲ್ಪನೆಗಳು ಗರಿಬಿಚ್ಚಿಕೊಳುತ್ತವೆ. ಆದರೆ, ಅದೆಲ್ಲದರ ಮರೆಯಲ್ಲಿ ಮತ್ತೊಂದು ಸತ್ಯ ತಣ್ಣಗೆ ನಗುತ್ತಿರುತ್ತದೆ. ಅದು ಪೊಸೆಸೆವ್‍ನೆಸ್ ಅನ್ನೋ ಮಾನಸಿಕ ವ್ಯಾಧಿ. ಅದು ಸದಾ ತನ್ನಿಷ್ಟದ ಜೀವವನ್ನು ಅವುಚಿಕೊಂಡಿರಬೇಕೆಂಬ ಮನಃಸ್ಥಿತಿ ಹೊಂದಿರೋ ಅಕ್ಷರಶಃ ಕರಡಿಯಂಥಾದ್ದು!

ಜಾನ್ಹವಿ ಕಾರ್ತಿಕ್ ಪ್ರಕರಣವನ್ನೇ ತೆಗೆದುಕೊಳ್ಳಿ; ಆಕೆ ಸಾಮಾನ್ಯ ಹುಡುಗಿಯಂತೆ ದಾಂಪತ್ಯಕ್ಕೆ ಕಾಲಿಟ್ಟು ಇತ್ತೀಚೆಗಷ್ಟೇ ನಿರೂಪಕಿಯಾಗಿ ಪ್ರಸಿದ್ಧಿ ಪಡೆದುಕೊಂಡಿದ್ದವರು. ಯಾವಾಗ ನಿರೂಪಕಿಯಾದರೋ, ಆ ಕ್ಷಣದಿಂದಲೇ ಜಾನ್ಹವಿ ಖ್ಯಾತಿಯ ಉತ್ತುಂಗಕ್ಕೇರಿದ್ದರು. ರೂಪ, ಪ್ರತಿಭೆ ಎಲ್ಲವೂ ಇದ್ದ ಆಕೆಗೆ ರಿಯಾಲಿಟಿ ಶೋಗಳ ಅವಕಾಶವೂ ತೆರೆದುಕೊಂಣಡಿತ್ತು. ಅದು ಹೇಳಿಕೇಳಿ ಸಾರ್ವಜನಿಕ ಬದುಕು. ಎಲ್ಲರೊಂದಿಗೂ ಬೆರೆಯಬೇಕಾಗುತ್ತೆ. ಲಿಂಗಬೇಧವಿಲ್ಲದೆ ಅಲ್ಲಿ ಸಲುಗೆ, ಗೆಳೆತನ ತಂತಾನೇ ಹಬ್ಬಿಕೊಳ್ಳುತ್ತೆ. ಇದೆಲ್ಲವನ್ನ ತನೇ ಖಾಸಗಿ ಬದುಕಿನಲ್ಲಿ ನಿಂತು ನೋಡೋ ಪತಿಯೆನ್ನಿಸಿಕೊಂಡವರ ಮನಃಸ್ಥಿತಿ ಯಾವ ಆಳಕ್ಕೂ ಇಳಿಯಬಹುದು. ತನ್ನವಳು ಬೇರ್ಯಾರೊಂದಿಗೂ ಸಲುಗೆ ಹೊಂದ ಬಾರದೆಂಬ ಪೊಸೆಸಿವ್‍ನೆಸ್, ಅನುಮಾನವಾಗಿ ಬದಲಾಗುತ್ತೆ ನೋಡಿ? ಅಲ್ಲಿಗೆ ಆ ಸಂಬಂಧ ಕೊನೆಯುಸಿರೆಳೆದಂತೆಯೇ.

ಇದು ಹೇಳಿಕೇಳಿ ಸೋಶಿಯಲ್ ಮೀಡಿಯಾಗಳ ಭರಾಟೆ ಜೋರಾಗಿರುವ ದಿನಮಾನ. ಅಲ್ಲಿ ರೂಮರುಗಳ ಕೊಚ್ಚೆ ನದಿಯಾಗಿ ಹರಿಯುತ್ತೆ. ಇಂಥಾ ಸೆಲೆಬ್ರಿಟಿಗಳ ನಡವಳಿಕೆಗಳೂ ಕೂಡಾ ಅಲ್ಲಿನ ಪ್ರಚಾರದ ಸರಕಾಗುತ್ತೆ. ಅರಿವರೊಂದಿಗಿನ ಅಫೇರುಗಳ ಕಲ್ಪಿತ ಕಥೆಗಳೂ ಗರಿಬಿಚ್ಚಿಕೊಳ್ಳೋದಿದೆ. ಮೊದಲೇ ಪೊಸೆಸಿವ್ ಕರಡಿಯನ್ನು ಮನಸೊಳಗೆ ಬಿಟ್ಟುಕೊಂಡ ಪತಿ ಕಣ್ಣಿಗೆ ಅಂಥಾದ್ದು ಕಂಡರೆ, ಅದು ಆ ದಿನದ ಜಗಳಕ್ಕೆ ಇಂಧನವಾದಂತೆಯೇ. ಬಹುಶಃ ಕಡಿದುಕೊಳ್ಳುವ ಸೆಲೆಬ್ರಿಟಿಗಳ ಸಂಬಂಧಗಳ ಹಿಂದೆ ಹೆಚ್ಚಾಗಿ ಇಂಥಾ ಸಿಲ್ಲಿ ಕಾರಣಗಳೇ ಇರುತ್ತವೆ. ಇನ್ನುಳಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಟಿಆರ್‍ಪಿಗೋಸ್ಕರ ಹದ್ದು ಮೀರಿ ವರ್ತಿಸಲಾಗುತ್ತೆ. ಜಾನ್ಹವಿ ಕೂಡಾ ಅಂಥಾದ್ದಕ್ಕೆ ಗುರಿಯಾಗಿದ್ದದ್ದು ಸತ್ಯ.

ಪೊಸೆಸಿವ್ ಸ್ಪರ್ಶವಿಲ್ಲದ ಸಂಬಂಧಗಳಿಲ್ಲ. ಅದು ಹಿತಮಿತವಾಗಿದ್ದರಷ್ಟೇ ದಾಂಪತ್ಯಕ್ಕೊಂದು ಮುದವಿರುತ್ತದೆ. ಅದು ಮೇರೆ ಮೀರಿದಾಗ ಗಾಢ ಪ್ರೇಮದ ಮರೆಯಲ್ಲಿ ಸಂಬಂಧಗಳ ಉಸಿರುಗಟ್ಟಿಸುತ್ತೆ. ಸೆಲೆಬ್ರಿಟಿಗಳ ಜಗತ್ತಿನಲ್ಲಿ ನಡೆಯೋ ಬಹುತೇಕ ವಿಚ್ಛೇಧನಗಳ ಹಿಂದೆ ಅಂಥಾದ್ದೇ ಕಿಸುರಿರುತ್ತದೆ. ಹಾಗಂತ, ಕಡಿಕೊಂಡ ಪ್ರತೀ ಸಂಬಂಧಗಳ ಹಿಂದೆಯೂ ಪೊಸೆಸಿವ್‍ನೆಸ್ ಮಾತ್ರವೇ ಕೆಲಸ ಮಾಡುತ್ತೆ ಅಂದುಕೊಳ್ಳುವಂತಿಲ್ಲ. ಅಲ್ಲಿ ಬಣ್ಣದ ಜಗತ್ತಿನ ಲಂಗು ಲಗಾಮಿಲ್ಲದ ಜೀವನಶಲಿ, ಸ್ವೇಚ್ಛಾಚಾರ, ಹಾದರಗಳ ಹಾಜರಿ ಇರೋದನ್ನೂ ತಳ್ಳಿ ಹಾಕುವಂತಿಲ್ಲ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!