ಈವತ್ತಿಗೆ ಕನ್ನಡ ಕಿರುತೆ ಜಗತ್ತು ಪಕ್ಕಾ ಟಿಆರ್ಪಿ ಭೂಮಿಕೆಯಲ್ಲಿ ಕಾರ್ಯನಿರ್ವಹಿಸುತ್ತಾ ಪ್ರೇಕ್ಷಕ ವಲಯದಲ್ಲೊಂದು ರೇಜಿಗೆ ಮೂಡಿಕೊಳ್ಳುವಂತೆ ಮಾಡಿದೆ. ಅಲ್ಲಿ ಅದರದ್ದೇ ಆದ ಆರ್ಥಿಕ ಲೆಕ್ಕಾಚಾರಗಳಿದ್ದಾವೆ. ಇಂಥಾ ವಹಿವಾಟುಗಳ ಅಬ್ಬರದಲ್ಲಿ ಕ್ರಿಯೇಟಿವಿಟಿ ಎಂಬುದು ಹೆಚ್ಚೂಕಮ್ಮಿ ಕಳೆದೇ ಹೋಗಿದೆ. ಕಥೆಯ ಹುಟ್ಟೂ ಕೂಡಾ ವಾಹಿನಿ ಮಂದಿಯ ಕೈಯಲ್ಲಿ ಸಿಕ್ಕು ನರಳುವಂಥಾ ಸ್ಥಿತಿ ಕಿರುತೆರೆ ಜಗತ್ತನ್ನು ಮೆಲ್ಲಗೆ ಪ್ರೇಕ್ಷಕರಿಂದ ವಿಮುಖಗೊಳ್ಳುವಂತೆ ಮಾಡುತ್ತಿದೆ. ಕಾಸು ಕೊಟ್ಟ ಮಂದಿಯ ಕೈಯಲ್ಲಿ ರಿಮೋಟು ಇದೆಯಾದರೂ, ಯಾವ ಚಾನೆಲ್ಲು ಬದಲಾಯಿಸಿದರೂ ಮತ್ತದೇ ರೋಧನೆ. ಇಂಥಾ ಹೊತ್ತಿನಲ್ಲಿ ಕಿರುತೆರೆ ಪ್ರೇಕ್ಷಕರು ಹೊರಳಿಕೊಳ್ಳೋದು ದಶಕಗಳ ಹಿಂದಿನ ಧಾರಾವಾಹಿಗಳ ಜಮಾನದತ್ತ!
ಅಂಥಾ ಕಿರುತೆರೆ ಜಗತ್ತಿನ ಸುವರ್ಣ ಯುಗವೊಂದರ ಭಾಗವಾಗಿದ್ದುಕೊಂಡೇ, ಕಿರುತೆ ಪ್ರೇಕ್ಷಕರ ಅಭಿರುಚಿಯನ್ನು ಹೆಚ್ಚುವಂತೆ ಮಾಡಿದ್ದವರು ಟಿ.ಎನ್ ಸೀತಾರಾಮ್. ಮಾಯಾಮೃಗ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಸೀತಾರಾಮ್ ಅವರದ್ದು ಯಾವಾಗಲೂ ಭಿನ್ನ ಪಥ. ಈವತ್ತಿಗೂ ಅವರು ನಿರ್ದೇಶನ ಮಾಡಿದ ಧಾರಾವಾಹಿಗಳ ಟೈಟಲ್ ಸಾಂಗ್ ಅನ್ನು ಹುಡುಕಿ ಹುಡುಕಿ ಕೇಳುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಬಹುಶಃ ಅದು ಕನ್ನಡ ಕಿರುತೆರೆ ಜಗತ್ತಿನ ಪಾಲಿಗೆ ಎಂದಿಗೂ ಘಮ ಕಳೆದುಕೊಳ್ಳದ ಗಂಧವಿದ್ದಂತೆ. ಸೀತಾರಾಮ್ ನಿರ್ದೇಶನದ ಸೀರಿಯಲ್ಲುಗಳ ಟೈಟಲ್ ಸಾಂಗ್ ಕೇಳಿದರೇನೇ ತೊಂಬತ್ತರ ದಶಕದ ಆಚೀಚಿನ ಅನಿರ್ವಚನೀಯ ಅನುಭವವೊಂದು ಎದೆತುಂಬಿಕೊಳ್ಳುತ್ತೆ.
ಹೀಗೆ ಧಾರಾವಾಹಿ ನಿರ್ದೇಶನದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಟಿ.ಎನ್ ಸೀತಾರಾಮ್ ಇತ್ತೀಚಿನ ವರ್ಷಗಳಲ್ಲಿ ಕಿರುತೆರೆಯಿಂದ ದೂರ ಸರಿದಿದ್ದಾರೆ. ಇಂಥಾ ಘಳಿಗೆಯಲ್ಲಿ ಅವರು ಮರಳಿ ಬರಬೇಕೆಂಬ ನಿರೀಕ್ಷೆಯಿಟ್ಟುಕೊಂಡವರ ಸಂಖ್ಯೆ ದೊಡ್ಡದಿದೆ. ಅಂಥವರಿಗೆಲ್ಲ ಸಿಹಿ ಸುದ್ದಿಯೊಂದನ್ನು ಖುದ್ದು ಅವರೇ ಹಂಚಿಕೊಂಡಿದ್ದಾರೆ. ಜಗತ್ತಿನ ಕೆಲ ಅಪರೂಪದ ಕಾದಂಬರಿಗಳನ್ನು ದೃಶ್ಯೀಕರಿಸಿ, ಎಪಿಸೋಡುಗಳ ರೂಪದಲ್ಲಿ ಭೂಮಿಕಾಶ ಯೂಟ್ಯೂಬ್ ಚಾನೆಲ್ಲಿನಲ್ಲಿ ಬಿಡುಗಡೆಗೊಳಿಸೋದಾಗಿ ಹೇಳಿಕೊಂಡಿದ್ದಾರೆ. ಕಾದಂಬರಿ ಯಾವ ದೇಶದ್ದೇ ಆದರೂ ಅದನ್ನು ಈ ನೆಲದ ಸೊಗಡಿಗೆ ಒಗ್ಗಿಸಿ ಧಾರಾವಾಹಿಯಾಗಿ ಚಿತ್ರೀಕರಿಸೋದಾಗಿ ಸೀತಾರಾಮ್ ಅವರು ಹೇಳಿಕೊಂಡಿದ್ದಾರೆ. ಅಂತೂ ಅವರು ಕಿರುತೆರೆಯಿಂದ ಸದ್ಯಕ್ಕೆ ಅಂತರ ಕಾಯ್ದುಕೊಂಡಿದ್ದರೂ, ಯೂಟ್ಯೂಬ್ ಚಾನೆಲ್ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತೀರ್ಮಾನಿಸಿದಂತಿದೆ.